Advertisement

ಸವಾಲು ಎದುರಿಸಲು ಪತ್ತೇದಾರಿ ಸಂಸ್ಥೆ ನೆರವು : ಕೇಂದ್ರ ಸಚಿವ ಅಮಿತ್‌ ಶಾ

08:46 PM Dec 31, 2022 | Team Udayavani |

ದೇವನಹಳ್ಳಿ: ಭಯೋತ್ಪಾದನೆ, ಗಡಿ ವ್ಯಾಜ್ಯಗಳು ಸೇರಿದಂತೆ ದೇಶದ ಹಲವು ಸವಾಲುಗಳಿಗೆ ಸಮಂಜಸ ಪರಿಹಾರ ಕಂಡುಕೊಳ್ಳುವುದು. ದೇಶದ ಮಹಾನಗರಗಳ ಕಾನೂನು ಮತ್ತು ಸುವ್ಯವಸ್ಥೆ ಬಲಪಡಿಸುವುದು ಸೇರಿದಂತೆ ಎಲ್ಲ ಪೊಲೀಸ್‌ ವಿವಿಧ ದಳಗಳ ನಡುವೆ ಸಮನ್ವಯ ಸಾಧಿಸಿ, ಸಂವಾದ ನಡೆಸಿ ಭದ್ರತೆ ಹೆಚ್ಚಿಸಲು ಪೊಲೀಸ್‌ ಸಂಶೋಧನಾ ಮತ್ತು ಅಭಿವೃದ್ಧಿ ಸಂಸ್ಥೆಯ ಕೇಂದ್ರ ಗುಪ್ತಚರ ಸಂಸ್ಥೆಯ ತರಬೇತಿ ಶಾಲೆಯು ಮಹತ್ವದ ವೇದಿಕೆ ಆಗಲಿದೆ ಎಂದು ಕೇಂದ್ರ ಗೃಹ ಸಚಿವ ಅಮಿತ್‌ ಶಾ ತಿಳಿಸಿದರು.

Advertisement

ತಾಲೂಕಿನ ಆವತಿ ಗ್ರಾಮದಲ್ಲಿ ಕೇಂದ್ರೀಯ ಪತ್ತೇದಾರಿ ತರಬೇತಿ ಶಾಲೆಯ ಕಟ್ಟಡದ ಶಂಕುಸ್ಥಾಪನೆ ನೆರವೇರಿಸಿ, ಬಳಿಕ ಅನಂತ ವಿದ್ಯಾನಿಕೇತನ ಶಾಲೆ ಆವರಣದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಭಾರತ ಟಿಬೆಟ್‌ ಗಡಿ ರಕ್ಷಣಾ ದಳ ಬೆಂಗಳೂರು ವಿಭಾಗದ ವಿವಿಧ ಕಟ್ಟಡಗಳನ್ನು ವರ್ಚುವಲ್‌ ವೇದಿಕೆ ಮೂಲಕ ಉದ್ಘಾಟಿಸಿ ಅವ ರು ಮಾತನಾಡಿದರು.
ಭಾರತದಂತಹ ದೊಡ್ಡ ದೇಶದಲ್ಲಿ ಹಲವು ಸಂಸ್ಕೃತಿ, ಆಚರಣೆಗಳಿವೆ. ಅದಕ್ಕೆ ಅನುಗುಣವಾಗಿ ದೇಶದ ಆಂತರಿಕ ಕಾನೂನು ಮತ್ತು ಸುವ್ಯವಸ್ಥೆ ವಿಷಯವನ್ನು ಸಂವಿಧಾನದ ರಾಜ್ಯಪಟ್ಟಿಯಲ್ಲಿರಿಸಲಾಗಿದೆ. ಕಾಲಾಂತರದಲ್ಲಿ ಹೆಚ್ಚಿದ ಭಯೋತ್ಪಾದನೆ, ಆತಂಕವಾದ, ಗಡಿ ವಿವಾದಗಳು ಹೊಸ ಸವಾಲುಗಳನ್ನು ಒಡ್ಡಿವೆ. ದೇಶದ ಮಹಾನಗರಗಳಲ್ಲಿ ಬಹ ಭಾಷಿಕರು ನೆಲೆಸುತ್ತಿದ್ದಾರೆ. ಬರುವ ದಿನಗಳಲ್ಲಿ ಅಲ್ಲಿನ ಪೊಲೀಸ್‌ ಕಾರ್ಯವೈಖರಿಗೆ ಅದು ಸವಾಲಾಗುತ್ತದೆ. ಮಹಾನಗರಗಳ ಸುರಕ್ಷತೆಗೂ ಸಂಶೋಧನೆ, ಅಧ್ಯಯನಗಳು ಇಲ್ಲಿ ನಡೆಯಲಿವೆ ಎಂದರು.

ದೇಶದ ಪೊಲೀಸ್‌ ವ್ಯವಸ್ಥೆಗೆ ಪ್ರಯೋಜನಕಾರಿ:
ಕೇಂದ್ರೀಯ ಗುಪ್ತಚರ ತರಬೇತಿ ಸಂಸ್ಥೆಯ ಕಟ್ಟಡಕ್ಕೆ ರಾಜ್ಯ ಸರ್ಕಾರ ಉತ್ತಮ ಪರಿಸರದಲ್ಲಿ ನಿವೇಶನ ಒದಗಿಸಿದೆ. ಮುಂಬರುವ ದಿನಗಳಲ್ಲಿ ಬಹಳ ದೇಶದ ಪೊಲೀಸ್‌ ವ್ಯವಸ್ಥೆಗೆ ಬಹಳ ಪ್ರಯೋಜನಕಾರಿ ಆಗಲಿದೆ. ವಿವಿಧ ಪೊಲೀಸ್‌ ದಳಗಳನ್ನು ಬಲಪಡಿಸಲು ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆಗೆ ಹೆಚ್ಚು ಪ್ರೋತ್ಸಾಹ ನೀಡಲಾಗುತ್ತಿದೆ. ಸಮಾಜವು ಚಲನಶೀಲವಾಗಿರುತ್ತದೆ. ಅದರ ವಿಚಾರ, ಗಮನ, ಧೋರಣೆ, ಸ್ವರೂಪಗಳು ಹಾಗೂ ಪಥ ಬದಲಾಗುತ್ತಿರುತ್ತವೆ. ಅದಕ್ಕೆ ಅನುಗುಣವಾಗಿ ಪೊಲೀಸ್‌ ಬಲಗಳೂ ಕೂಡ ಬದಲಾವಣೆಗಳನ್ನು ಅಳವಡಿಸಿಕೊಳ್ಳದಿದ್ದರೆ ಅಪ್ರಸ್ತುತವಾಗುತ್ತವೆ. ಸಂಶೋಧನೆ ಆಧರಿಸಿ, ಸುರಕ್ಷತಾ ತಂತ್ರಗಳು, ರಣನೀತಿ ರೂಪಿಸಿಕೊಳ್ಳುವುದು ಮಹತ್ವ ಪೂರ್ಣವಾಗಿರುತ್ತದೆ. ವಿವಿಧ ಪೊಲೀಸ್‌ ಸಂಸ್ಥೆಗಳ ನಡುವೆ ಸಹಯೋಗ ತರುವುದು ಮಹತ್ವಪೂರ್ಣ ಕಾರ್ಯವಾಗಿದೆ. ಹೊಸ ಕಲಿಕೆ, ಸವಾಲುಗಳ ವಿನಿಮಯದೊಂದಿಗೆ ಎಲ್ಲ ಪೊಲೀಸ್‌ ದಳ ಪರಿಪೂರ್ಣವಾಗಲು ಸಾಧ್ಯ ಎಂದರು.

ಪೊಲೀಸರಿಗೆ ಪತ್ತೇದಾರಿ ತರಬೇತಿ ಕೋರ್ಸ್‌
ಬ್ಯೂರೋ ಆಫ್ ಪೊಲೀಸ್‌ ರೀಸರ್ಚ್‌ ಅಂಡ್‌ ಡೆವಲಪ್‌ಮೆಂಟ್‌ (ಬಿಪಿಆರ್‌ಡಿ)ಸಂಸ್ಥೆಯಡಿ ಕಾರ್ಯನಿರ್ವಹಿಸುವ ಕೇಂದ್ರಿಯ ಪತ್ತೇದಾರಿ ತರಬೇತಿ ಸಂಸ್ಥೆಯನ್ನು ಅರ್ಬನ್‌ ಪೊಲೀಸಿಂಗ್‌(ಸ್ಮಾರ್ಟ್‌ ಸಿಟಿ ಪೊಲೀಸಿಂಗ್‌) ಹಾಗೂ ಬ್ಲಾಕ್‌ ಚೈನ್‌ ತಂತ್ರಜ್ಞಾನದ ಉತೃRಷ್ಟ ಕೇಂದ್ರವನ್ನಾಗಿ ಅಭಿವೃದ್ಧಿಪಡಿಸಲಾಗುವುದು. ಈ ಕೇಂದ್ರದಲ್ಲಿ ಎಲ್ಲಾ ರಾಜ್ಯಗಳು, ಕೇಂದ್ರಾಡಳಿತ ಪ್ರದೇಶಗಳು, ಸಿಪಿಒಗಳು ಹಾಗೂ ಸಿಎಪಿಎಫ್ಗಳ ಪೊಲೀಸ್‌ ಅಧಿಕಾರಿಗಳಿಗೆ ತರಬೇತಿ ಕೋರ್ಸ್‌ಗಳನ್ನು ನೀಡಲಾಗುವುದು. ಪೊಲೀಸ್‌ ಅಧಿಕಾರಿಗಳ ತನಿಖಾ ಗುಣಮಟ್ಟವನ್ನು ಸುಧಾರಿಸುವುದು ಈ ಕೇಂದ್ರದ ಪ್ರಮುಖ ಉದ್ದೇಶವಾಗಿದೆ. ದೇವನಹಳ್ಳಿ ತಾಲೂಕಿನ ಆವತಿ ಗ್ರಾಮದಲ್ಲಿ ಈ ಕೇಂದ್ರಕ್ಕಾಗಿ ರಾಜ್ಯ ಸರ್ಕಾರ 35 ಎಕರೆ ಭೂಮಿಯನ್ನು ಒದಗಿಸಿದೆ ಎಂದು ಶಾ ತಿಳಿಸಿದರು.

ಈ ವೇಳೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಕೇಂದ್ರ ಸಚಿವ ಪ್ರಹ್ಲಾದ ಜೋಷಿ, ರಾಜ್ಯದ ಗೃಹ ಸಚಿವ ಆರಗ ಜ್ಞಾನೇಂದ್ರ , ಆರೋಗ್ಯ ಸಚಿವ ಡಾ.ಕೆ.ಸುಧಾಕರ್‌, ಪೊಲೀಸ್‌ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆಯ ಮಹಾನಿರ್ದೇಶಕ ಬಾಲಾಜಿ ಶ್ರೀವಾಸ್ತವ, ಜಿಲ್ಲಾ ಬಿಜೆಪಿ ಅಧ್ಯಕ್ಷ ಎ.ವಿ. ನಾರಾಯಣಸ್ವಾಮಿ, ಅನಂತ ವಿದ್ಯಾನಿಕೇತನ ಶಾಲೆಯ ಸಂಸ್ಥಾಪಕ ಕಾರ್ಯದರ್ಶಿ ಕೆಂಪೇಗೌಡ, ಭಾರತ ಟಿಬೇಟ್‌ ಗಡಿ ಪೊಲೀಸ್‌ ದಳದ ಮಹಾನಿರ್ದೇಶಕ ಅನೀಶ್‌ ದಯಾಳ್‌, ಹೆಚ್ಚುವರಿ ಮಹಾನಿರ್ದೇಶಕ ನೀರಜ್‌ ಸಿನ್ಹಾ, ಜಿಲ್ಲಾಧಿಕಾರಿ ಆರ್‌.ಲತಾ ಹಾಗೂ ಮತ್ತಿತರರು ಇದ್ದರು.

Advertisement

ಕುಟುಂಬದ ಜತೆ ಇರಲು ಯೋಧರಿಗೆ ವ್ಯವಸ್ಥೆ
ದೇಶದ ಗಡಿರಕ್ಷಣೆಗೆ ಹಗಲಿರುಳು ದುಡಿಯುತ್ತಿರುವ ಸೈನಿಕರು ತಮ್ಮ ಕುಟುಂಬಗಳೊಂದಿಗೆ ನೆಮ್ಮದಿಯ ಬದುಕು ನಡೆಸುವಂತಾಗಲು ಗಡಿ ಸುರûಾ ದಳಗಳ ಕೇಂದ್ರ ಸ್ಥಾನಗಳಲ್ಲಿ ವಸತಿ ನಿರ್ಮಾಣ ಮಾಡಲು ಪ್ರಧಾನ ಮಂತ್ರಿ ನರೇಂದ್ರ ಮೋದಿ ಆದ್ಯತೆ ನೀಡಿದ್ದಾರೆ. ಇ-ಆವಾಸ್‌ ಪೋರ್ಟಲ್‌ ಮೂಲಕ ವಸತಿ ಸೌಕರ್ಯಗಳ ಸುಧಾರಣೆಯಾಗುತ್ತಿವೆ. ದೇಶದ ಗಡಿ ಸುರಕ್ಷಾ ದಳಗಳಲ್ಲಿಯೇ ಐಟಿಬಿಪಿಯು ಬಹಳ ದುರ್ಗಮ ಮತ್ತು ವಿಷಮ ವಾತಾವರಣದಲ್ಲಿ ಉತ್ಕೃಷ್ಟ ದೇಶಭಕ್ತಿಯೊಂದಿಗೆ ಕಾರ್ಯನಿರ್ವಹಿಸುತ್ತಿದೆ. ಭಾರತದ ಒಂದಿಂಚೂ ಜಮೀನು ಅತಿಕ್ರಮಣವಾಗದಂತೆ ಎಚ್ಚರಿಕೆಯ ದೇಶ ಸೇವೆ ಮಾಡುತ್ತಿದ್ದಾರೆ. ಆಯುಷ್ಮಾನ್‌ ಆರೋಗ್ಯ ಯೋಜನೆ ಮೂಲಕ ಸೈನಿಕರ ಮತ್ತು ಅವರ ಕುಟುಂಬದ ಆರೋಗ್ಯ ಸೇವೆಗಳ ಗುಣಮಟ್ಟ ಹೆಚ್ಚಿಸಲಾಗಿದೆ ಎಂದು ಕೇಂದ್ರ ಗೃಹ ಸಚಿವ ಅಮಿತ್‌ ಶಾ ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next