ಮೈಸೂರು: ಸಾಂಸ್ಕೃತಿಕ ನಗರಿ ಮೈಸೂರಿನೆಲ್ಲೆಡೆ ಮುಸ್ಲಿಂ ಬಾಂಧವರ ಪವಿತ್ರ ರಂಜಾನ್ ಹಬ್ಬವನ್ನು ಸಡಗರ, ಸಂಭ್ರಮದಿಂದ ಆಚರಣೆ ಮಾಡುವ ಜತೆಗೆ ನಗರದ ವಿವಿಧ ಕಡೆಗಳಲ್ಲಿ ಸಾಮೂಹಿಕ ಪ್ರಾರ್ಥನೆ ನೆರವೇರಿಸಿದರು. ಹಬ್ಬದ ಹಿನ್ನೆಲೆ ಸಾವಿರಾರು ಮುಸ್ಲಿಂ ಬಾಂಧವರು ಸೋಮವಾರ ಬೆಳಗ್ಗೆ ತಿಲಕ್‌ನಗರದ ಪಾರೂಕಿಯ ದಂತ ವೈದ್ಯಕೀಯ ಕಾಲೇಜು ಸಮೀಪದ ಈದ್ಗಾ ಮೈದಾನದಲ್ಲಿ ಸಾಮೂಹಿಕ ಪ್ರಾರ್ಥನೆಗೆ ಒಂದುಗೂಡಿದರು.
ಬಳಿಕ ಧರ್ಮಗುರುಗಳಾದ ಹಜರತ್ ಮೌಲಾನಾ ಮೊಹಮ್ಮದ್ ಉಸ್ಮಾನ್ ಷರೀಫ್ ಅವರ ಸಾನಿಧ್ಯದಲ್ಲಿ ಮೈಸೂರು ನಗರ, ಜಿಲ್ಲೆ ಸೇರಿದಂತೆ ಇನ್ನಿತರ ಕಡೆಗಳಿಂದ ಆಗಮಿಸಿದ್ದ ಸಾವಿರಾರು ಮಂದಿ ಸಾಮೂಹಿಕ ಪ್ರಾರ್ಥನೆ ಸಲ್ಲಿಸಿದರು. ಇದೇ ವೇಳೆ ಕುರಾನ್ ಪಠಣ ಮಾಡಿದ ಧರ್ಮಗುರುಗಳು, ನಾಡಿನ ಜನತೆಗೆ ಸುಖ, ಶಾಂತಿ, ನೆಮ್ಮದಿ ದೊರೆಯಲೆಂದು ಹಾರೈಸಿ, ಪವಿತ್ರ ರಂಜಾನ್‌ಹಬ್ಬದ ಸಂದೇಶ ನೀಡಿದರು.
ಶುಭಾಶಯ ವಿನಿಮಯ: ಸಾಮೂಹಿಕ ಪ್ರಾರ್ಥನೆಯಲ್ಲಿ ಪಾಲ್ಗೊಳ್ಳುವ ಸಲುವಾಗಿ ಮುಂಜಾನೆಯೇ ಮುಸಲ್ಮಾನರು ತಮ್ಮ ಕುಟುಂಬ ಸದಸ್ಯರು, ಸ್ನೇಹಿತರು, ಸಂಬಂಧಿಕರೊಂದಿಗೆ ಈದ್ಗಾ ಮೈದಾನಕ್ಕೆ ಆಗಮಿಸಿದ್ದರು. ಹಬ್ಬದ ಹಿನ್ನೆಲೆ ಮಕ್ಕಳು ಹೊಸ ಬಟ್ಟೆ ಧರಿಸಿ ಸಂಭ್ರಮಿಸಿದರೆ, ಹಿರಿಯರು ಬಿಳಿಯ ಬಣ್ಣದ ಜುಬ್ಟಾ, ಪೈಜಾಮ ಧರಿಸಿದ್ದರು. ಪ್ರಾರ್ಥನೆ ಬಳಿಕ ಬಡವ, ಶ್ರೀಮಂತ ಎಂಬ ಭೇದವಿಲ್ಲದೆ ಒಬ್ಬರನ್ನೊಬ್ಬರು ತಬ್ಬಿಕೊಂಡು ಈದ್ ಮುಬಾರಕ್ ಶುಭಾಶಯ ವಿನಿಮಯ ಮಾಡಿ, ಸಿಹಿ ತಿಂದು ಸಂಭ್ರಮಿಸಿದರು.
ಹಲವೆಡೆಗಳಲ್ಲಿ ಪ್ರಾರ್ಥನೆ: ರಂಜಾನ್ ಅಂಗವಾಗಿ ತಿಲಕ್‌ನಗರದ ಈದ್ಗಾ ಮೈದಾನ ಸೇರಿದಂತೆ ವಿವಿಧ ಕಡೆಗಳಲ್ಲೂ ಸಾಮೂಹಿಕ ಪ್ರಾರ್ಥನೆ ನಡೆಯಿತು. ಅದರಂತೆ ರಾಜೀವ್‌ನಗರ 3ನೇ ಹಂತದ ಈದ್ಗಾ ಮೈದಾನ, ಗೌಸಿಯಾ ನಗರದ ಈದ್ಗಾ ಮೈದಾನಗಳಲ್ಲಿ ಮುಸ್ಲಿಂ ಬಾಂಧವರು ಸಾಮೂಹಿಕವಾಗಿ ನಮಾಜ್ ಮಾಡಿದರು. ಅಲ್ಲದೆ ನಗರದ ಹಲವು ಮಸೀದಿಗಳಲ್ಲೂ ರಂಜಾನ್ ಅಂಗವಾಗಿ ವಿಶೇಷ ಪ್ರಾರ್ಥನೆ ನಡೆಯಿತು. ಸಾಮೂಹಿಕ ಪ್ರಾರ್ಥನೆ ಹಿನ್ನೆಲೆ ತಿಲಕ್‌ನಗರದ ಈದ್ಗಾ ಮೈದಾನದಲ್ಲಿ ಹೆಚ್ಚಿನ ಪೊಲೀಸ್ ಬಂದೋಬಸ್ತ್ ಕಲ್ಪಿಸಲಾಗಿತ್ತು.
ಹಲವು ಗಣ್ಯರ ಭಾಗಿ: ರಂಜಾನ್ ಹಬ್ಬದ ಅಂಗವಾಗಿ ನಡೆದ ಸಾಮೂಹಿಕ ಪ್ರಾರ್ಥನೆಯಲ್ಲಿ ಹಲವು ಗಣ್ಯರು ಭಾಗವಹಿಸಿದ್ದರು. ಸಚಿವರಾದ ತನ್ವೀರ್ ಸೇs…, ಡಾ.ಎಚ್.ಸಿ.ಮಹದೇವಪ್ಪ, ಶಾಸಕ ವಾಸು, ಜಿಲ್ಲಾಧಿಕಾರಿ ಡಿ.ರಂದೀಪ್, ಹಲವು ಪಾಲಿಕೆ ಸದಸ್ಯರು ಸೇರಿದಂತೆ ಇನ್ನಿತರರು ಪಾಲ್ಗೊಂಡು ಮುಸ್ಲಿಂ ಬಾಂಧವರಿಗೆ ರಂಜಾನ್ ಶುಭಾಶಯ ಕೋರಿದರು.