Advertisement

ಜನವರಿಯಲ್ಲಿ ಕೋಸ್ಟಲ್‌ವುಡ್‌ ಸೆಂಚುರಿ ಸಡಗರ 

12:39 PM Nov 29, 2018 | Team Udayavani |

ಕೋಸ್ಟಲ್‌ವುಡ್‌ 100ರ ಸಡಗರದಲ್ಲಿದೆ. ಆದರೆ ಆ ಸಂಭ್ರಮ ಕೋಸ್ಟಲ್‌ವುಡ್‌ ಅಂಗಳದಲ್ಲಿ ಕಾಣುತ್ತಿಲ್ಲ. 100ರ ಗೌಜಿ ಯಾಕಿಲ್ಲ? ಎಂದು ‘ಕುಡ್ಲ ಟಾಕೀಸ್‌’ ಮೂಲಕ ಕಳೆದ ವಾರ ಕೇಳಲಾಗಿತ್ತು. ಇದಕ್ಕೆ ಸದ್ಯ ಒಂದು ಗುಡ್‌ ನ್ಯೂಸ್‌ ಬಂದಿದೆ. 100 ಸಿನೆಮಾದ ಸಂಭ್ರಮ ಜನವರಿಯಲ್ಲಿ ನಡೆಯಲಿದೆಯಂತೆ!ಮಂಗಳೂರು ನೆಹರೂ ಮೈದಾನಿನಲ್ಲಿ ಇದಕ್ಕಾಗಿ ಅದ್ದೂರಿ ಕಾರ್ಯಕ್ರಮ ಆಯೋಜನೆಗೆ ಪ್ಲ್ಯಾನ್‌ ಒಂದು ರೆಡಿಯಾಗಿದೆ.

Advertisement

ಕೋಸ್ಟಲ್‌ವುಡ್‌ ಕಲಾವಿದರ ಮತ್ತು ತಂತ್ರಜ್ಞರ ಒಕ್ಕೂಟ ಈ ಅದ್ದೂರಿ ಕಾರ್ಯಕ್ರಮ ಸಂಘಟಿಸಲು ಮುಂದೆ ಬಂದಿದೆ. ದಿನಪೂರ್ತಿ ಮೈದಾನಿನಲ್ಲಿ 100ರ ಸಡಗರವನ್ನು ವಿವಿಧ ಆಯಾಮಗಳಲ್ಲಿ ಮಾಡಲು ಉದ್ದೇಶಿಸಲಾಗಿದೆ. 100 ಸಿನೆಮಾಗಳು ನಡೆದು ಬಂದ ಹಾದಿಯನ್ನು ಪುನರ್‌ ಮನನ ಮಾಡುವ ಕಾರ್ಯಕ್ರಮ ಇದಾಗಲಿದೆ. ಕಲಾವಿದರ ಹಾಗೂ ತಂತ್ರಜ್ಞರ ಸಾಂಸ್ಕೃತಿಕ ಒಕ್ಕೂಟದ ಅಧ್ಯಕ್ಷ ಪಮ್ಮಿ ಕೊಡಿಯಾಲ್‌ಬೈಲ್‌ ಅವರ ನೇತೃತ್ವದಲ್ಲಿ ಕಾರ್ಯಕ್ರಮ ಸಂಯೋಜಿಸಲಾಗಿದೆ. ಕಾರ್ಯಕ್ರಮದ ಉದ್ಘಾಟನೆಗೆ ಮುಖ್ಯಮಂತ್ರಿಯವರನ್ನು ಬರಮಾಡಿಕೊಳ್ಳಬೇಕು ಎಂಬುದು ಸಂಘಟಕರ ಯೋಚನೆ. ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ| ಡಿ.ವೀರೇಂದ್ರ ಹೆಗ್ಗಡೆ ಅವರನ್ನು ಕೂಡ ಕಾರ್ಯಕ್ರಮಕ್ಕೆ ಆಹ್ವಾನಿಸಬೇಕು ಎಂಬ ಮಾತುಕತೆ ನಡೆಯುತ್ತಿದೆ.

ಇತ್ತೀಚೆಗೆ ಮಂಗಳೂರಿನ ಖಾಸಗಿ ಹೊಟೇಲ್‌ನಲ್ಲಿ ಈ ಸಂಬಂಧ ಪೂರ್ವಭಾವಿ ಸಭೆಯೊಂದನ್ನು ಆಯೋಜಿಸಲಾಗಿತ್ತು. 100ರ ಸಡಗರದ ಕಾರ್ಯಕ್ರಮ ಹೇಗಿರಬೇಕು? ಯಾರೆಲ್ಲ ಆ ಕಾರ್ಯಕ್ರಮದಲ್ಲಿ ಭಾಗವಹಿಸಬೇಕು? ಎಂಬೆಲ್ಲ ವಿಚಾರದ ಬಗ್ಗೆ ಪ್ರಾಥಮಿಕ ಮಾತುಕತೆ ನಡೆಸಲಾಗಿದೆ. ತುಳು ಸಿನೆಮಾರಂಗದ ಪ್ರಮುಖರು ಈ ಸಭೆಯಲ್ಲಿ ಭಾಗವಹಿಸಿದ್ದರು. ಮುಂದೆ ಇನ್ನೊಂದು ಸುತ್ತಿನ ಸಭೆ ನಡೆಯಲಿದೆ.

ಅಂತೂ, 100ರ ಸಿನೆಮಾದ ಸಡಗರದಲ್ಲಿರುವ ಈ ಸಂದರ್ಭದಲ್ಲಿ ತುಳು ಸಿನೆಮಾ ರಂಗ ಎದೆಯುಬ್ಬಿಸಿ ಸಂಭ್ರಮಿಸಬೇಕಾಗಿತ್ತು. ಆದರೆ, 100 ಸಿನೆಮಾ ಬಂದಿದ್ದರೂ ಆ ಸಂಭ್ರಮ ಇಲ್ಲಿ ಸದ್ಯಕ್ಕೆ ಕಾಣುತ್ತಿರಲಿಲ್ಲ. ಆದರೆ, ಈಗಿನ ಮಾಹಿತಿಯ ಪ್ರಕಾರ 100ರ ಸಡಗರ ಜನವರಿಯಲ್ಲಿಯಾದರೂ ಆಗಲಿದೆ ಎಂಬುದು ಸದ್ಯಕ್ಕೆ ಕೋಸ್ಟಲ್‌ವುಡ್‌ ಸಮಾಧಾನ ಪಡುವ ಸಂಗತಿ!

ಕಾರ್ಯಕ್ರಮಕ್ಕೆ ಸ್ಯಾಂಡಲ್‌ ವುಡ್‌ ಪ್ರಮುಖರು!
ತುಳು ಸಿನೆಮಾವು ಪ್ರಾದೇಶಿಕ ಭಾಷಾ ನೆಲೆಗಟ್ಟಿನಲ್ಲಿ ಇರುವುದರಿಂದ ಪ್ರಾದೇಶಿಕ ಸಿನೆಮಾದ ಪ್ರಮುಖರನ್ನು ಈ ಕಾರ್ಯಕ್ರಮಕ್ಕೆ ಕರೆಸುವ ಬಗ್ಗೆ ಹಾಗೂ ಸ್ಯಾಂಡಲ್‌ವುಡ್‌ನ‌ ಪ್ರಮುಖರನ್ನು ಕೂಡ ಕಾರ್ಯಕ್ರಮಕ್ಕೆ ಆಹ್ವಾನಿಸುವ ಬಗ್ಗೆ ಮಾತುಕತೆ ನಡೆಯುತ್ತಿದೆ. 100 ಸಿನೆಮಾದ 100 ಜನರನ್ನು (ನಿರ್ಮಾಪಕ/ನಿರ್ದೇಶಕ/ಕಲಾವಿದ/ ತಂತ್ರಜ್ಞ/ಹಂಚಿಕೆದಾರ) ಸಮ್ಮಾನಿಸಲು ಲೆಕ್ಕಾಚಾರ ಕೂಡ ಸದ್ಯ ನಡೆಯುತ್ತಿದೆ. ಜನರೊಂದಿಗೆ ತುಳು ಸಿನೆಮಾ ನಿರ್ದೇಶಕರ/ ನಿರ್ಮಾಪಕರ ಸಂವಾದ/ ಕಲಾವಿದರ ಮಾತುಕತೆ/ ಹಿರಿಯ ನಿರ್ದೇಶಕರ ಮಾತುಕತೆ ಕೂಡ ಇದೇ ಸಂದರ್ಭ ನಡೆಯಲಿದೆ. ರಾತ್ರಿ ಅದ್ದೂರಿಯ ಸಾಂಸ್ಕೃತಿಕ ಕಾರ್ಯಕಲಾಪಗಳು ನಡೆಯಲಿವೆ. ಸಾವಿರಾರು ಜನರು ಈ ಕಾರ್ಯಕ್ರಮದಲ್ಲಿ ಭಾಗವಹಿಸುವ ನಿರೀಕ್ಷೆಯೂ ಇದೆ ಎಂದು ಸದ್ಯಕ್ಕೆ ದೊರಕಿರುವ ಮಾಹಿತಿ.

Advertisement
Advertisement

Udayavani is now on Telegram. Click here to join our channel and stay updated with the latest news.

Next