Advertisement

ಈಡೇರದ ಕಾವ್ರಾಡಿ-ಸೌಕೂರು ಸಂಪರ್ಕ ಸೇತುವೆ

06:00 AM Jul 31, 2018 | Team Udayavani |

ಕಾವ್ರಾಡಿ: ಒಂದು ಕಿ.ಮೀ. ದೂರದ ಸೌಕೂರಿಗೆ ಸೇತುವೆಯೊಂದಿಲ್ಲದೆ ಸುಮಾರು 8 ಕಿ.ಮೀ. ದೂರಕ್ಕೆ ಸಂಚರಿಸಬೇಕಾದ ಅನಿವಾರ್ಯತೆ ಕ್ರಾವಾಡಿ ಜನರದ್ದು. ದಶಕಗಳಿಗೂ ಹೆಚ್ಚು ಕಾಲದಿಂದ ಕುಬ್ಜಾ ನದಿಗೆ ಕಾವ್ರಾಡಿ- ಸೌಕೂರು ಸಂಪರ್ಕ ಸೇತುವೆಯಿಲ್ಲದೆ ಸುತ್ತು ಬಳಸಿ ಸಂಚಾರಿಸುವ ಪಡಿಪಾಟಿಲು ಈ ಭಾಗದ ಜನರದ್ದು.
 
ಸಾರ್ಕಲ್‌ ಮೂಲಕ  ಸೌಕೂರಿಗೆ
ಕಾವ್ರಾಡಿಯಿಂದ ಸೌಕೂರಿಗೆ ದೂಪದಕಟ್ಟೆ – ಕಂಡ್ಲೂರು- ಮರಾಶಿ ಮಾರ್ಗ ಹಾಗೂ ನೇರಳಕಟ್ಟೆ- ಮಾವಿನಕಟ್ಟೆಯಾಗಿ ಎರಡು ಮಾರ್ಗಗಳಿವೆ. ಆದರೆ ಇವರೆಡು ಕೂಡ ಸೌಕೂರು ದೇವಸ್ಥಾನಕ್ಕೆ ನೇರವಾಗಿ ಸಂಪರ್ಕಿಸುವುದಿಲ್ಲ. ಈ ಮಾರ್ಗವಾಗಿ ಸುಮಾರು 8 ಕಿ.ಮೀ. ದೂರಕ್ಕೆ ಸಂಚಾರಿಸಬೇಕಾಗಿದೆ. ಆದರೆ ಕಾವ್ರಾಡಿಯಿಂದ ಸಾರ್ಕಲ್‌ ಮೂಲಕವಾಗಿ ಸೌಕೂರಿಗೆ ಕೇವಲ 1 ಕಿ.ಮೀ. ದೂರವಿದ್ದು, ಸೇತುವೆಯಿಲ್ಲದೆ ಸಮಸ್ಯೆಯಾಗಿದೆ. 

Advertisement

ಬೇಡಿಕೆಗೂ ಸಿಗದ ಮನ್ನಣೆ
ಸೌಕೂರು- ಕಾವ್ರಾಡಿ ಸಂಪರ್ಕ ಸೇತುವೆಗೆ ಹಲವು ವರ್ಷಗಳಿಂದ ಬೇಡಿಕೆಯಿದೆ. ಹಿಂದಿನ ಶಾಸಕ ಗೋಪಾಲ ಪೂಜಾರಿ ಅವರಿಗೂ ಈ ಬಗ್ಗೆ ಮನವಿ ಸಲ್ಲಿಸಲಾಗಿತ್ತು.  ಈಗಿನ ಬೈಂದೂರು ಶಾಸಕ ಬಿ.ಎಂ. ಸುಕುಮಾರ್‌ ಶೆಟ್ಟಿ ಅವರಿಗೂ ಸೇತುವೆ ಬೇಡಿಕೆ ಕುರಿತಂತೆ ಇಲ್ಲಿನ ಜನರೆಲ್ಲ ಭೇಟಿಯಾಗಿ ಅಹವಾಲು ಸಲ್ಲಿಸಿದ್ದರು. 

ಕುಂದಾಪುರಕ್ಕೂ ಹತ್ತಿರ
ಸಾರ್ಕಲ್‌ ಬಳಿ ಸೇತುವೆಯಾದರೆ ಕಾವ್ರಾಡಿ, ಪಡುವಾಲೂ¤ರು ಭಾಗದ ಜನರಿಗೆ ಸೌಕೂರು ಆಗಿ ನೇರಳಕಟ್ಟೆ, ಮಾವಿನಕಟ್ಟೆ ಮೂಲಕವಾಗಿ ಕುಂದಾಪುರಕ್ಕೂ ತೆರಳಲು ಹತ್ತಿರದ ಮಾರ್ಗವಾಗಿದೆ. ಇಲ್ಲದಿದ್ದರೆ ಕಾವ್ರಾಡಿ, ಪಡುವಾಲೂ¤ರು ಜನ ಕಂಡ್ಲೂರು, ಬಸ್ರೂರು ಮೂಲಕವಾಗಿ ಸಾಗಿ ಬರಬೇಕಿದೆ. 

ಮಳೆಗಾಲದಲ್ಲಿ ಸಂಪರ್ಕವೇ ಇಲ್ಲ
ವೈಶಾಖದಲ್ಲಿ ಇಲ್ಲಿನ ಜನರು ಈ ಹೊಳೆಗೆ ಸಾರ್ಕಲ್‌ ಬಳಿ ಅಡಿಕೆ ಮರದ ಕಾಲು ಸಂಕ ನಿರ್ಮಿಸಿ ಆ ಮೂಲಕ ಕಾವ್ರಾಡಿ, ಸಾರ್ಕಲ್‌ನಿಂದ ಸೌಕೂರಿಗೆ ನಡೆದುಕೊಂಡು ಹೋಗುತ್ತಾರೆ. ಆದರೆ ಮಳೆಗಾಲದಲ್ಲಿ ಹೊಳೆ ತುಂಬಿ ಹರಿಯುತ್ತಿರುವುದರಿಂದ ಕಾಲು ಸಂಕ ನಿರ್ಮಿಸಲು ಅಸಾಧ್ಯವಾಗಿದೆ. ಮಳೆಗಾಲದಲ್ಲಿ ಈ ಮಾರ್ಗವಾಗಿ ಸಂಪರ್ಕವೇ ಇಲ್ಲ.

ಸೇತುವೆ ನಿರ್ಮಿಸಲು ಪ್ರಯತ್ನಿಸಲಿ
ಕಾವ್ರಾಡಿ – ಸೌಕೂರು ಸಂಪರ್ಕ ಸೇತುವೆಯಾದರೆ ನಮಗೆ ಸೌಕೂರು, ದೇವಸ್ಥಾನಕ್ಕೆ ತೆರಳಲು, ಕುಂದಾಪುರಕ್ಕೂ ಹೋಗಲು ಇದು ಹತ್ತಿರದ ಮಾರ್ಗವಾಗಿದೆ. ಸೇತುವೆಯಿಲ್ಲದೆ ಸುತ್ತು ಬಳಸಿ ತೆರಳಬೇಕಾಗಿದೆ. ಇನ್ನಾದರೂ ಸೇತುವೆ ನಿರ್ಮಿಸಲು ಸರಕಾರ ಪ್ರಯತ್ನಿಸಲಿ. 
– ಸುಧಾಕರ, ಸಾರ್ಕಲ್‌ ನಿವಾಸಿ

Advertisement

ಸಚಿವರಿಗೆ ಪ್ರಸ್ತಾವನೆ ಸಲ್ಲಿಕೆ
ಸೌಕೂರು- ಕಾವ್ರಾಡಿ ಸಂಪರ್ಕ ಸೇತುವೆಗೆ ಲೋಕೋಪಯೋಗಿ ಸಚಿವ ಎಚ್‌. ಡಿ. ರೇವಣ್ಣ ಅವರನ್ನೇ ಬೆಂಗಳೂರಿನಲ್ಲಿ ಸ್ವತಃ ಭೇಟಿಯಾಗಿ ಪ್ರಸ್ತಾವನೆ ಸಲ್ಲಿಸಲಾಗಿದೆ. ಮಂಜೂರು ಮಾಡುವ ಭರವಸೆಯಿದೆ. ಅಲ್ಲಿನ ಜನರ ಹಲವು ವರ್ಷಗಳ ಬೇಡಿಕೆ ಈಡೇರಿಕೆಗೆ ಎಲ್ಲ ರೀತಿಯ ಪ್ರಯತ್ನಗಳನ್ನು ಮಾಡಲಾಗುವುದು. 
– ಬಿ.ಎಂ. ಸುಕುಮಾರ್‌ ಶೆಟ್ಟಿ, ಬೈಂದೂರು ಶಾಸಕರು

ಶಾಸಕರಿಂದ ಸೇತುವೆ ಭರವಸೆ
ಹಲವು ವರ್ಷಗಳಿಂದ ಸೇತುವೆ ಬೇಡಿಕೆಯಿದೆ. ಈಗಿನ ಹಾಗೂ ಹಿಂದಿನ ಶಾಸಕರೆಲ್ಲರಿಗೂ ಸೇತುವೆ ಕುರಿತಂತೆ ಬೇಡಿಕೆ ಸಲ್ಲಿಸಿದ್ದೇವೆ. ಸಾರ್ಕಲ್‌ ಬಳಿ ಜಾಗದ ಸಮಸ್ಯೆಯಿದ್ದು, ಅದು ಸರಿಯಾದರೆ ಸೇತುವೆ ನಿರ್ಮಾಣಕ್ಕೆ ಪ್ರಯತ್ನಿಸಲಾಗುವುದು ಎಂದು ಈಗಿನ ಶಾಸಕರು ಭರವಸೆ ನೀಡಿದ್ದಾರೆ. 
ಪ್ರಕಾಶ್ಚಂದ್ರ ಶೆಟ್ಟಿ,  
ಕಾವ್ರಾಡಿ ನಿವಾಸಿ

– ಪ್ರಶಾಂತ್‌ ಪಾದೆ

Advertisement

Udayavani is now on Telegram. Click here to join our channel and stay updated with the latest news.

Next