Advertisement

Mangaluru: ಸೇತುವೆ ಮೇಲೆ ಸಂಚಾರ ನಿರ್ಬಂಧದಿಂದ ಕಂಗೆಟ್ಟ ನಾಗರಿಕರು

01:29 PM Oct 18, 2024 | Team Udayavani |

ಮಹಾನಗರ: ಬಹಳಷ್ಟು ನಾಗರಿಕರು ಸಂಚರಿಸುವ ಪ್ರಮುಖ ಸೇತುವೆಯಾದ ಪೊಳಲಿ ಸೇತುವೆಯಲ್ಲಿ ಶಾಲಾ ಮಕ್ಕಳ ಬಸ್‌, ಪ್ರಯಾಣಿಕರ ಬಸ್‌ ಸಾಗಾಟ ನಿರ್ಬಂಧಿಸಿರುವುದು ಸ್ಥಳೀಯರಿಗೆ ತೀವ್ರ ಸಮಸ್ಯೆ ತಂದೊಡ್ಡಿದೆ.

Advertisement

ಜಿಲ್ಲೆಯ 4 ಸೇತುವೆಗಳು ಕ್ಷೀಣವಾಗಿರುವುದರಿಂದ ಅವುಗಳ ರಿಪೇರಿಯಾಗುವವರೆಗೂ ಘನ ವಾಹನ ಸಂಚಾರ ನಿರ್ಬಂಧಿಸುವ ಸರಕಾರದ ನಿರ್ದೇಶನ ದಂತೆ ಪೊಳಲಿ ಸೇತುವೆಯಲ್ಲೂ ಘನ ವಾಹನ ಸಂಚಾರ ನಿರ್ಬಂಧಿಸಲಾಗಿದೆ.

ಇದರ ನಡುವೆಯೇ ವಿಧಾನ ಪರಿಷತ್‌ ಉಪಚುನಾವಣೆ ಘೋಷಣೆಯಾಗಿದ್ದು, ಅದರ ನೀತಿ ಸಂಹಿತೆಯೂ ಇರುವ ಕಾರಣ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಸೇರಿ ಕ್ರಮ ಕೈಗೊಳ್ಳುವುದಕ್ಕೂ ಅಡ್ಡಿಯಾಗಿದೆ. ನೀತಿ ಸಂಹಿತೆ ಮುಗಿದ ಬಳಿಕ ಬಂಟ್ವಾಳ, ಮಂಗಳೂರು ಉತ್ತರ ಇಬ್ಬರು ಶಾಸಕರು ಜಿಲ್ಲಾಧಿಕಾರಿಯವರೊಂದಿಗೆ ಚರ್ಚಿಸಿ ಕ್ರಮ ಕೈಗೊಳ್ಳುವ ನಿರೀಕ್ಷೆ ಇದೆ.

ತಾತ್ಕಾಲಿಕ ಸೇತುವೆಗೆ ಯೋಜನೆ
ಸೇತುವೆ ರಿಪೇರಿಯಾಗುವ ವರೆಗೂ ನಾಗರಿಕರ ವಾಹನ ಸಂಚಾರಕ್ಕೆ ಪೂರಕವಾಗಿ ತಾತ್ಕಾಲಿಕ ಸೇತುವೆ ರಚಿಸಬೇಕು ಎನ್ನುವ ಆಗ್ರಹ ಸ್ಥಳೀಯರದ್ದು, ಅದಕ್ಕಾಗಿ ಬುಧವಾರ ಲೋಕೋಪಯೋಗಿ ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿದ್ದು, ಪರ್ಯಾಯ ಮಾರ್ಗದ ಬಗ್ಗೆ ಅಂದಾಜು ಪಟ್ಟಿ ಸಿದ್ಧಪಡಿಸುವ ಸಾಧ್ಯತೆ ಇದೆ.

ವರದಿ ನೋಡಿ ಮುಂದಿನ ಕ್ರಮ
ನಮ್ಮ ಅಧಿಕಾರಿಗಳು ಪೊಳಲಿಗೆ ಭೇಟಿ ನೀಡಿದ್ದಾರೆ. ಲೋಕೋಪಯೋಗಿ ಇಲಾಖೆಯವರು ಪರ್ಯಾಯ ಮಾರ್ಗದ ಬಗ್ಗೆ ವಿಮರ್ಶೆ ಮಾಡಿದ್ದು, ಏನು ಮಾಡಬಹುದು ಎಂಬ ಬಗ್ಗೆ ವರದಿ ಕೊಡಲಿದ್ದಾರೆ. ಚುನಾವಣೆ ಇರುವ ಕಾರಣ ಸಭೆ ಮಾಡಲಾಗುತ್ತಿಲ್ಲ. ಅವರ ವರದಿ ನೋಡಿಕೊಂಡು ಏನು ಮಾಡಬಹುದೋ ಅದನ್ನು ಮಾಡುತ್ತೇವೆ.
-ಮುಲ್ಲೈ ಮುಗಿಲನ್‌, ಜಿಲ್ಲಾಧಿಕಾರಿ, ದ.ಕ.

Advertisement

ಸಾರ್ವಜನಿಕರಿಗೆ ತೊಂದರೆ
ಸಾರ್ವಜನಿಕರು, ಶಾಲಾ ಮಕ್ಕಳಿಗೆ ತೊಂದರೆಯಾಗಿದೆ, ಕೇವಲ ಶಾಲಾ ಮಕ್ಕಳು, ಪ್ರಯಾಣಿಕರ ಬಸ್‌ ಮಾತ್ರ ನಿರ್ಬಂಧಿಸಿದ್ದು ಯಾಕೆ? ಉಳಿದೆಲ್ಲಾ ವಾಹನಗಳೂ ಸಂಚರಿಸುತ್ತಿವೆ ಎನ್ನು ವುದು ಸ್ಥಳೀಯರ ಆಕ್ಷೇಪ. ಪೊಳಲಿ ಸೇತುವೆ ಎರಡೂ ಬದಿಗಳಲ್ಲಿ ಕಬ್ಬಿಣದ ತೊಲೆಗಳನ್ನು ಹಾಕಿದ್ದು ಸರಿಯಲ್ಲ.
-ಬಾಲಕೃಷ್ಣ ರಾವ್‌ ನೂಯಿ, ನಾಗರಿಕರು, ಅಡ್ಡೂರು

ಮುಂದೆ ಮೇ ತಿಂಗಳ ವರೆಗೆ ತಾತ್ಕಾಲಿಕ ರಸ್ತೆಯನ್ನು ಈಗಿನ ಸೇತುವೆಯ ಕೆಳಭಾಗದಲ್ಲಿ ನಿರ್ಮಿಸುವುದಕ್ಕೆ ಸಾಧ್ಯವಿದೆ, ಮಣ್ಣು ಕಲ್ಲು ಹಾಕಿ, ಮಧ್ಯೆ ಮೋರಿಯನ್ನೂ ನಿರ್ಮಿಸಿ ಮಾರ್ಗ ನಿರ್ಮಿಸಿದರೆ ನೀರೂ ಸರಾಗವಾಗಿ ಹರಿಯಬಹುದು, ಆ ವೇಳೆಗೆ ರಿಪೇರಿ ಪೂರ್ಣಗೊಳಿಸಬಹುದು ಎನ್ನುತ್ತಾರೆ ಪೊಳಲಿ ಅಡ್ಡೂರು ಫಲ್ಗುಣಿ ಸೇತುವೆ ಹೋರಾಟ ಸಮಿತಿಯ ಅಧ್ಯಕ್ಷ ವೆಂಕಟೇಶ್‌ ನಾವಡ ಪೊಳಲಿ.

ಸದ್ಯ ಘನ ವಾಹನ ಸಂಚಾರ ಸ್ಥಗಿತಗೊಂಡಿರುವುದು ಸಮಸ್ಯೆಯಾಗಿದೆ, ಶಾಸಕ ರಾಜೇಶ್‌ ನಾೖಕ್‌ ಉಳಿಪ್ಪಾಡಿ ಅವರು ಸ್ವಂತ ಹಣ ಹಾಕಿ ಟೆಂಪೊವೊಂದನ್ನು ನೀಡಿದ್ದು ಚಾಲಕ, ಡೀಸೆಲ್‌ ವೆಚ್ಚವನ್ನೂ ನೀಡುತ್ತಿದ್ದಾರೆ. ಇದು ಅಡ್ಡೂರು ಪೊಳಲಿ ಮಧ್ಯೆ ಸಂಚರಿಸುವ ಜನರಿಗೆ ತುಸು ನೆರವಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next