Advertisement
ನಿಟ್ಟೆ ಗ್ರಾಮದ ಪರಪಾಡಿಯಿಂದ ಬಾರಾಡಿ ಚಿಲಿಂಬಿ (ಅಕ್ಷರಾಪುರ) ಈ ಕಡೆಗೆ ತೆರಳುವ ರಸ್ತೆ ಸಂಪೂರ್ಣ ಹದಗೆಟ್ಟಿತು. 2020ರಲ್ಲಿ ಸುಮಾರು 5 ಕೋ.ರೂ. ವೆಚ್ಚದಲ್ಲಿ 4.20.ಕಿ.ಮೀ. ಉದ್ದದ ಕಾಂಕ್ರೀಟ್ ರಸ್ತೆಯನ್ನು ಇಲ್ಲಿ ನಿರ್ಮಿಸಲಾಗಿದೆ. ಅತ್ತ ಮತ್ತೂಂದು ಬದಿಯಲ್ಲಿ ಪರಪಾಡಿ ಸೇತುವೆಯ ಸಮೀಪದ ವರೆಗೆ ಕಾಂಕ್ರೀಟ್ ರಸ್ತೆ ಕೂಡ ಮಾಡಲಾಗಿದೆ. ಆದರೆ ಪರಪಾಡಿ ಸೇತುವೆ ಸಂಪರ್ಕಿಸುವ ಎರಡೂ ಬದಿಯಲ್ಲಿ ಸುಮಾರು ನೂರು ಮೀಟರ್ ಉದ್ದದ ರಸ್ತೆಯನ್ನು ಇನ್ನೂ ಕಾಂಕ್ರೀಟ್ ಅಥವಾ ಡಾಮರೀಕರಣಗೊಳಿಸಿಲ್ಲ. ಇದರಿಂದಾಗಿ ವಾಹನ ಸಂಚಾರದ ವೇಳೆ ಸವಾರರು, ಪಾದಚಾರಿಗಳು ಇಲ್ಲಿ ನಾನಾ ಸಮಸ್ಯೆ ಎದುರಿಸುತ್ತಿದ್ದಾರೆ.
ಪರಪಾಡಿಯ ಸೇತುಯ ಬಳಿ ತಿರುವಿನಿಂದ ಕೂಡಿದೆ. ಎರಡೂ ಬದಿಯಲ್ಲಿ ಇಳಿಜಾರಿನಿಂದ ಕೂಡಿದ ರಸ್ತೆಯಾಗಿದ್ದು ಕಾಂಕ್ರೀಟ್‌ನಿಂದ ಕೂಡಿದ ಸುಂದರ ರಸ್ತೆಯಲ್ಲಿ ವೇಗವಾಗಿ ಸಾಗಿ ಬರುವ ವಾಹನ ಸವಾರರು ಸೇತುವೆ ಬಳಿ ಬರುತ್ತಿದ್ದಂತೆ ಹೊಂಡ ಗುಂಡಿಯಿಂದ ಕೂಡಿದ ರಸ್ತೆಯಿಂದ ಸಮಸ್ಯೆಯನ್ನು ಎದುರಿಸುವಂತಾಗಿದೆ. ಈಗಾಗಲೇ ಸಾಕಷ್ಟು ಬೈಕ್ ಸವಾರರು ಬಿದ್ದು ಗಾಯಗೊಂಡ ಘಟನೆಗಳು ಇಲ್ಲಿ ನಡೆದಿದೆ. ಎರಡೂ ಬದಿಯಲ್ಲಿ ರಸ್ತೆಯ ಕಾಮಗಾರಿ ನಡೆಸಿ ಸುಮಾರು 100 ಮೀ.ನಷ್ಟು ಮಾತ್ರ ಯಾಕಾಗಿ ಬಾಕಿ ಇಟ್ಟರು ಎನ್ನುವುದು ಗ್ರಾಮಸ್ಥರ ಪ್ರಶ್ನೆಯಾಗಿದೆ. ಸೇತುವೆಯೂ ಶಿಥಿಲಾವಸ್ಥೆಗೆ
ಪರಪಾಡಿಯಲ್ಲಿ ಹರಿಯುವ ಶಾಂಭವಿ ನದಿಯನ್ನು ದಾಟಿಕೊಂಡು ಹೋಗಲು ಪರಪಾಡಿ ಸೇತುವೆ ಅತ್ಯಂತ ಪ್ರಯೋಜನಕಾರಿಯಾಗಿದೆ. ಚಿಲಿಂಬಿ, ಬಾರಾಡಿ, ಪೆಲತ ಕಟ್ಟೆ, ಹೀಗೆ ಅನೇಕ ಗ್ರಾಮೀಣ ಭಾಗದ ಜನ ನಿತ್ಯ ಈ ಸೇತುವೆಯಲ್ಲೇ ಸಂಚಾರ ನಡೆಸುತ್ತಾರೆ. ಕಳೆದ ಹಲವು ದಶಕದ ಹಿಂದೆ ನಿರ್ಮಾಣಗೊಂಡ ಈ ಸೇತುವೆ ಇದೀಗ ಸಂಪೂರ್ಣ ಶಿಥಿಲ ವ್ಯವಸ್ಥೆಯಲ್ಲಿದೆ. ಸೇತುವೆಯ ತಳದಲ್ಲಿ ಹಾಗೂ ಮೇಲ್ಭಾಗದಲ್ಲಿ ಅಲ್ಲಲ್ಲಿ ಸಿಮೆಂಟ್ ಸ್ಲ್ಯಾಬ್‌ಗಳು ಎದ್ದು ಕಬ್ಬಿಣದ ರಾಡುಗಳು ಗೋಚರಿಸುತ್ತಿದೆ. ಅಲ್ಲದೆ ಸೇತುವೆಯ ಮೇಲ್ಭಾಗದಲ್ಲಿ ಸೇತುವೆಯುದ್ದಕ್ಕೂ ಅಲ್ಲಲ್ಲಿ ಗುಂಡಿಗಳು ನಿರ್ಮಾಣವಾಗಿದೆ. ತಡೆಗೋಡೆಯೂ ವಾಹನದ ಆರ್ಭಟಕ್ಕೆ ಅಲ್ಲಲ್ಲಿ ಕಿತ್ತು ಹೋಗುತ್ತಿದೆ. ಅಪಾಯಕಾರಿಯಾಗಿರುವ ಸೇತುವೆ ದುರಸ್ತಿ ಕಾರ್ಯವೂ ನಡೆಯಬೇಕಾಗಿದೆ ಎಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.
Related Articles
ಈ ಭಾಗದಲ್ಲಿ ಬಹುತೇಕ ಕಲ್ಲು ಕೋರೆಗಳು ಹಾಗೂ ಕ್ರಷರ್‌ಗಳು ಕಾರ್ಯಾಚರಿಸುತ್ತಿದ್ದು ಪರಪಾಡಿ ಸೇತುವೆಯನ್ನು ದಾಟಿಕೊಂಡು ನಿತ್ಯ ನೂರಾರು ಘನ ವಾಹನಗಳು ಸಾಗುತ್ತವೆೆ. ಶಿಥಿಲ ವ್ಯವಸ್ಥೆಯಲ್ಲಿರುವ ಸೇತುವೆಯೂ ಕುಸಿಯುವ ಭೀತಿ ಎದುರಾಗಿದೆ. ಅತ್ಯಲ್ಪ ದೂರದ ಈ ರಸ್ತೆಯ ಕಾಮಗಾರಿ ಯಾವಾಗ ನಡೆಯುತ್ತದೆ ಎಂದು ಸ್ಥಳೀಯರು ಪ್ರಶ್ನಿಸುತ್ತಿದ್ದಾರೆ. ರಸ್ತೆ ನಿರ್ಮಾಣವಾಗಿ ಹಲವು ವರ್ಷಗಳು ಸಂದರೂ ಬಾಕಿ ಉಳಿದಿರುವ ರಸ್ತೆಯ ಕಾಮಗಾರಿ ನಡೆಸುವ ಬಗ್ಗೆ ಸಂಬಂಧಪಟ್ಟವರು ಮನಸ್ಸು ಮಾಡುತಿಲ್ಲ ಎನ್ನುತ್ತಿದ್ದಾರೆ ಸ್ಥಳಿಯ ನಿವಾಸಿಗಳು.
Advertisement
ಕಾಮಗಾರಿ ಪೂರ್ಣಗೊಳಿಸಿಸೇತುವೆಯ ಎರಡೂ ಬದಿಯಲ್ಲಿ ರಸ್ತೆಯ ಕಾಮಗಾರಿ ನಡೆದಿಲ್ಲ. ಹೀಗಾಗಿ ದ್ವಿಚಕ್ರ ವಾಹನ ಸವಾರರು ನಿತ್ಯ ಸಮಸ್ಯೆಯನ್ನು ಎದುರಿಸುವಂತಾಗಿದೆ. ಕೂಡಲೇ ಸಂಬಂಧಪಟ್ಟ ಅಧಿಕಾರಿಗಳು ಎಚ್ಚೆತ್ತು ರಸ್ತೆಯ ಕಾಮಗಾರಿ ಪೂರ್ಣಗೊಳ್ಳುವಂತೆ ಕ್ರಮ ಕೈಗೊಳ್ಳ ಬೇಕಾಗಿದೆ.
-ಸುಪ್ರಿಯಾ, ಸಂದೀಪ್, ಸ್ಥಳೀಯರು