Advertisement

ಪಟಾಕಿ ಸಿಡಿಸುವ ವೇಳೆ ಮುನ್ನೆಚ್ಚರಿಕೆ ಅಗತ್ಯ; ಏನೇನು ಮಾಡಬೇಕು? ಇಲ್ಲಿದೆ ಮಾಹಿತಿ…

11:13 PM Oct 23, 2022 | Team Udayavani |

ಬೆಂಗಳೂರು: ಇಂದಿನಿಂದ ಮೂರು ದಿನ ಎಲ್ಲೆಡೆ ಬೆಳಕಿನ ಹಬ್ಬದ ಸಡಗರ. ಕಳೆದ ಎರಡು ವರ್ಷಗಳಿಂದ ಕಾಣಿಸದ ಸಂಭ್ರಮ ಈ ವರ್ಷ ಎಲ್ಲೆಡೆ ಕಾಣಿಸಲಾರಂಭಿಸಿದೆ.

Advertisement

ಮಕ್ಕಳು-ಹಿರಿಯರೆನ್ನದೆ ಎಲ್ಲ ವಯೋಮಾನದವರೂ ಮನೆಯ ಅಂಗಳ, ತಾರಸಿ ಏರಿ ಪಟಾಕಿ ಸುಡುವ ಮೂಲಕ ಹಬ್ಬವನ್ನು ಭಾರಿ ಸದ್ದು ಗದ್ದಲದೊಂದಿಗೆ ದೀಪಾವಳಿ ಆಚರಿಸಿ ಸಂಭ್ರಮಿಸುತ್ತಾರೆ. ಪಟಾಕಿ ಸಿಡಿಸುವ ವೇಳೆ ಆಗುವ ಅನನುಕೂಲ ಮತ್ತು ದುರಂತದ ಬಗ್ಗೆ ಹಿಂದಿ ನಿಂದಲೂ ಜಾಗೃತಿ ಮೂಡಿಸುವ ಕೆಲಸ ಮಾಡುತ್ತಲೇ ಬರಲಾಗಿದೆ. ಅಜಾಗ ರೂಕತೆಯಿಂದ ಪಟಾಕಿ ಸಿಡಿಸಿ ಬದುಕನ್ನು ಕತ್ತಲೆಗೆ ತಳ್ಳಿಕೊಳ್ಳ ಬಾರದು.

ವೈದ್ಯರ ಸಲಹೆಗಳೇನು?: ಪಟಾಕಿ ಸಿಡಿಸುವಾಗ ಕಿವಿಗೆ ಹತ್ತಿ ಹಾಗೂ ಮೂಗಿಗೆ ಮಾಸ್ಕ್ ಹಾಕಿಕೊಳ್ಳಿ. ಗುಣಮಟ್ಟದ ಹಾಗೂ ಪರವಾನಿಗೆ ಹೊಂದಿದವರಿಂದಲೇ ಪಟಾಕಿ ಖರೀದಿಸಿ.

ಹಸುರು ಪಟಾಕಿ ಯಿಂದಲೂ ಕಣ್ಣು ಹಾಗೂ ಪರಿಸರಕ್ಕೆ ಹಾನಿಯಿದೆ ಎಂಬುದನ್ನು ತಳ್ಳಿ ಹಾಕು ವಂತಿಲ್ಲ. ಪಟಾಕಿಗಳನ್ನು ಸುರಕ್ಷಿತವಾಗಿ ಸಂಗ್ರಹಿಸಿ, ಎಚ್ಚರಿಕೆಯಿಂದ ನಿಭಾಯಿಸಬೇಕು. ಪಟಾಕಿ ಸಿಡಿಸುವಾಗ ಕನ್ನಡಕ ಧರಿಸುವುದು ಒಳ್ಳೆಯದು. ಪಟಾಕಿ ಹೊಗೆಯಿಂದ ಶ್ವಾಸಕೋಶಗಳಿಗೆ ತೊಂದರೆಯಾಗುವ ಸಾಧ್ಯತೆಗಳಿರುತ್ತವೆ. ಭಾರೀ ಸದ್ದು ಮಾಡುವ ಪಟಾಕಿಗಳಿಂದ ದೂರ ಸರಿಯಿರಿ. ಕಿವಿಯ ತಮಟೆಗೆ ಹಾನಿಯಾಗುವ ಸಾಧ್ಯತೆ ಹೆಚ್ಚಾಗಿರುತ್ತದೆ. ಪಟಾಕಿ ಸಿಡಿಯುವಾಗ ಬಿಡುಗಡೆಯಾಗುವ ರಾಸಾಯನಿಕಗಳು ಅಲರ್ಜಿ, ಉಸಿರಾಟದ ತೊಂದರೆ ಉಂಟು ಮಾಡಬಹುದು ಎಂದು ಮಿಂಟೋ ಕಣ್ಣಿನ ಆಸ್ಪತ್ರೆಯ ನಿರ್ದೇಶಕಿ ಡಾ| ಸುಜಾತಾ ರಾಥೋಡ್‌ “ಉದಯವಾಣಿ’ ಮೂಲಕ ಸಾರ್ವಜನಿಕರು ವಹಿಸಬೇಕಾದ ಮುಂಜಾಗ್ರತೆ ಬಗ್ಗೆ ತಿಳಿಸಿದ್ದಾರೆ.

ಅನಾರೋಗ್ಯಕ್ಕೀಡಾದವರು ಪಟಾಕಿಯಿಂದ ದೂರ ಇರಿ: ಹಸುರು ಪಟಾಕಿಯ ಹೊಗೆಗಳು ತಂಪು ವಾತಾವರಣದಲ್ಲಿ ಕೆಲ ದಿನಗಳ ಕಾಲ ಹಾಗೆಯೇ ಇರುತ್ತದೆ. ಬಳಿಕ ಅದು ಗಾಳಿಯಲ್ಲಿ ಸೇರಿ ಉಸಿರಾಡುವ ವೇಳೆ ನಮ್ಮ ದೇಹಕ್ಕೆ ಹೋಗಿ ಅನಾರೋಗ್ಯಕ್ಕೀಡುಮಾಡುವ ಸಾಧ್ಯತೆಗಳಿರುತ್ತದೆ. ಅನಾರೋಗ್ಯ ಕ್ಕೊಳಗಾದವರು ಪಟಾಕಿಯಿಂದ ದೂರ ಇರುವುದು ಒಳಿತು ಎಂದು ಇಂದಿರಾಗಾಂಧಿ ಮಕ್ಕಳ ಆರೋಗ್ಯ ಸಂಸ್ಥೆಯ ವೈದ್ಯ ಡಾ| ಎನ್‌. ನಿಜಗುಣ “ಉದಯವಾಣಿ’ಗೆ ತಿಳಿಸಿದ್ದಾರೆ.

Advertisement

ಪಟಾಕಿ ಕಣ್ಣಿಗೆ ಸಿಡಿದರೆ ತತ್‌ಕ್ಷಣವೇ ಕಣ್ಣು ಉಜ್ಜಬಾರದು. ಕಣ್ಣಿನ ಸೂಕ್ಷ್ಮ ಭಾಗಕ್ಕೆ ಪಟಾಕಿ ರಾಸಾಯನಿಕಗಳು ಹಾನಿ ಉಂಟು ಮಾಡಬಹುದು. ಶುದ್ಧ ನೀರಿನಿಂದ ಮೊದಲು ಕಣ್ಣುಗಳನ್ನು ತೊಳೆದು ಹತ್ತಿಬಟ್ಟೆಯನ್ನು ಕಣ್ಣಿನ ಮೇಲಿಟ್ಟು ಆಸ್ಪತ್ರೆಗೆ ಕರೆತರಬೇಕು.
– ಡಾ| ಸುಜಾತಾ ರಾಥೋಡ್‌, ನಿರ್ದೇಶಕಿ, ಮಿಂಟೋ ಕಣ್ಣಿನ ಆಸ್ಪತ್ರೆ. ಬೆಂಗಳೂರು

ಪಟಾಕಿ ಸಿಡಿಸುವ ವೇಳೆ ಕಣ್ಣು, ಕಿವಿ, ಚರ್ಮಗಳಂತಹ ಸೂಕ್ಷ್ಮ ಅಂಗಾಂಗ ಗಳ ಮೇಲೆ ನಿಗಾ ವಹಿಸಬೇಕು. ಮುಖಕ್ಕೆ ಬೆಂಕಿ ತಗಲಿ ಚರ್ಮ ಸುಟ್ಟು ಹೋದರೆ ಚೇತರಿಸಿಕೊಳ್ಳಲು ಹಲವು ಸಮಯ ಬೇಕಾಗುತ್ತದೆ. ಹೆಚ್ಚು ಹೊಗೆ ಬರುವ ಪಟಾಕಿ ಬಳಕೆ ಕಡಿಮೆ ಮಾಡಿದರೆ ಉತ್ತಮ.
– ಡಾ|ಎನ್‌. ನಿಜಗುಣ, ವೈದ್ಯರು, ಇಂದಿರಾಗಾಂಧಿ
ಮಕ್ಕಳ ಆರೋಗ್ಯ ಸಂಸ್ಥೆ.

ಏನೇನು ಮಾಡಬೇಕು?
-ಪಟಾಕಿ ಸಿಡಿಸುವ ಬಗ್ಗೆ ಮಕ್ಕಳಿಗೆ ಸೂಕ್ತ ಸಲಹೆ ಮತ್ತು ಸೂಚನೆ ನೀಡಿ.
-ಸುಟ್ಟ ಪಟಾಕಿಗಳನ್ನು ಮತ್ತೆ ಸುಡಬೇಡಿ.
-ಪಟಾಕಿ ಸಿಡಿಸುವ ವೇಳೆ ಪ್ರಥಮ ಚಿಕಿತ್ಸೆ ಪೆಟ್ಟಿಗೆಯನ್ನು ನಿಮ್ಮ ಬಳಿ ಇಟ್ಟುಕೊಳ್ಳಿ.
-ಪಟಾಕಿ ಸಿಡಿಸುವಾಗ ಉದ್ದನೆಯ ಕಡ್ಡಿ ಬಳಸಿ.
-ಜನದಟ್ಟಣೆಯ ಪ್ರದೇಶ, ಪಟಾಕಿ ಅಂಗಡಿಗಳ ಮುಂದೆ, ಆಸ್ಪತ್ರೆಗಳ ಬಳಿ, ವೃದ್ಧಾಶ್ರಮಗಳು, ಪೆಟ್ರೋಲ್‌ ಬಂಕ್‌ ಬಳಿ ಪಟಾಕಿ ಸಿಡಿಸಬೇಡಿ.
-ಅಸ್ತಮಾ, ಅಲರ್ಜಿ ಇರುವವರು ಪಟಾಕಿಯಿಂದ ದೂರವಿದ್ದರೆ ಉತ್ತಮ.
-ಪಟಾಕಿಯನ್ನು ಕೈಯಲ್ಲಿ ಹಿಡಿದು ಸುಡಬೇಡಿ.
-ಪಟಾಕಿ ಸಿಡಿಸುವಾಗ ವಾಹನಗಳಿಂದ ದೂರವಿರಿ.
-ಪಾದರಕ್ಷೆ ತೊಟ್ಟು, ಕನ್ನಡಕ ಧರಿಸಿ ಪಟಾಕಿ ಹಚ್ಚಿ.
-ಪಟಾಕಿ ಹಚ್ಚುವ ಮುನ್ನ ಒಂದು ಬಕೆಟ್‌ ನೀರು ಜತೆಗಿರಲಿ. ನೈಲಾನ್‌, ಪಾಲಿಸ್ಟರ್‌, ಸಿಲ್ಕ್ ಬಟ್ಟೆಗಳಿಂದ ದೂರವಿರಿ.
-ಮನೆಯ ಹಿರಿಯರು ಮಕ್ಕಳನ್ನು ಅವರಿಷ್ಟದಂತೆ ಪಟಾಕಿ ಸಿಡಿಸಲು ಬಿಡಬೇಡಿ.
-ಮಕ್ಕಳ ವಯಸ್ಸಿಗೆ ತಕ್ಕದಾದ ಪಟಾಕಿಗಳನ್ನೇ ಖರೀದಿಸಿ ತನ್ನಿ. ಭಾರಿ ಶಬ್ದದ ಪಟಾಕಿ ಬೇಡ.
-ಹೂಕುಂಡಗಳಿಗೆ ಬೆಂಕಿ ಹಚ್ಚುವಾಗ ಅಂತರ ಕಾಪಾಡಿ. ಎಲ್ಲೋ ಗಮನಹರಿಸಿ ಪಟಾಕಿ ಹಚ್ಚದಿರಿ.
-ರಾಕೆಟ್‌ ಬಿಡುವಾಗ ಬಾಟಲಿ ಉಪಯೋಗಿಸಿ ಆಕಾಶದ ಕಡೆಗೆ ಚಿಮ್ಮುವಂತೆ ನೋಡಿಕೊಳ್ಳಿ.
-ಪಟಾಕಿಯ ಹೊಗೆಯಲ್ಲಿ ಹೆಚ್ಚು ಹೊತ್ತು ಇರಬೇಡಿ.
-ಪಟಾಕಿಯನ್ನು ಕೈಯ್ಯಲ್ಲಿಡಿದು ಬೆಂಕಿ ಹಚ್ಚುವ, ಬೇರೆಯವರ ಮೇಲೆ ಎಸೆಯಬೇಡಿ.
-ಪಟಾಕಿ ಸಿಡಿಯಲಿಲ್ಲವೆಂದು ಅದರ ಮೇಲಿನ ಪೇಪರ್‌ ಸುಲಿದು ಬೆಂಕಿ ಹಚ್ಚಬೇಡಿ.
-ಆರಿ ಹೋದ ಪಟಾಕಿ ಅಥವಾ ಸರಿಯಾಗಿ ಬೆಂಕಿ ಹಚ್ಚಿಕೊಳ್ಳದ ಪಟಾಕಿ ಮತ್ತೆ ಹಚ್ಚುವ ಪ್ರಯತ್ನ ಬೇಡ.
-ಐಎಸ್‌ಐ ಗುರುತಿರುವ ಪಟಾಕಿ ಮಾತ್ರ ಖರೀದಿಸಿ.
-ಪಟಾಕಿ ಬಾಕ್ಸ್‌ ಮೇಲಿನ ಎಚ್ಚರಿಕೆಗಳನ್ನು ಗಮನಿಸಿ.
-ರಾಕೆಟ್‌ನಂತಹ ಪಟಾಕಿಗಳನ್ನು ಗುಡಿಸಲುಗಳು ಮತ್ತು ಮನೆಗಳಿಂದ ದೂರದಲ್ಲಿ ಬಳಸಿ.
-ದೇಹಕ್ಕೆ ಪಟಾಕಿ ಕಿಡಿ ತಾಗದಂತೆ ಎಚ್ಚರಿಕೆ ವಹಿಸಿ.
-ಪಟಾಕಿ ಹಚ್ಚಿದ ಕೈಯನ್ನು ತೊಳೆದು ಆಹಾರ ಸೇವಿಸಿ.

Advertisement

Udayavani is now on Telegram. Click here to join our channel and stay updated with the latest news.

Next