ಮಂಗಳೂರು: ಜಾನುವಾರುಗಳ ಚರ್ಮಗಂಟು ರೋಗದ ಹಿನ್ನೆಲೆಯಲ್ಲಿ ದಕ್ಷಿಣ ಕನ್ನಡ ಜಿಲ್ಲೆಗೆ 20,000 ಲಸಿಕೆ ಹಂಚಿಕೆಯಾಗಿದೆ.
ಬೆಂಗಳೂರಿನಿಂದ ಸೋಮವಾರ ಸರಬರಾಜು ಆಗಲಿದ್ದು, ಮಂಗಳವಾರದಿಂದ ವಿತರಣೆ ನಡೆಯಲಿದೆ.
ಮೊದಲ ಶಂಕಿತ ಚರ್ಮಗಂಟು ರೋಗ ಕಾಣಿಸಿಕೊಂಡ ಬಂಟ್ವಾಳ ತಾಲೂಕಿನ ಬಿಳಿಯೂರು ಸುತ್ತಲಿನ ಸುಮಾರು 5 ಕಿ.ಮೀ. ವ್ಯಾಪ್ತಿಯಲ್ಲಿ ಮತ್ತು ಕೆಲವೊಂದು ಗೋ ಶಾಲೆಗಳಲ್ಲಿ ಮೊದಲನೇ ಹಂತದಲ್ಲಿ ಲಸಿಕೆ ಹಂಚಿಕೆ ನಡೆಯಲಿದೆ. ಇದಾದ ಕೆಲವೇ ದಿನಗಳಲ್ಲಿ ಮತ್ತಷ್ಟು ಡೋಸ್ ಲಸಿಕೆ ಜಿಲ್ಲೆಗೆ ಸರಬರಾಜಾಗುವ ಸಾಧ್ಯತೆ ಇದೆ.
ಪಶುಪಾಲನ ಇಲಾಖೆ. ದ.ಕ. ಜಿಲ್ಲೆಯ ಉಪನಿರ್ದೇಶಕ ಅರುಣ್ ಕುಮಾರ್ “ಉದಯವಾಣಿ’ಗೆ ಪ್ರತಿಕ್ರಿಯಿಸಿ,”ಈ ಕಾಯಿಲೆಯು ಮನುಷ್ಯರಿಗಾಗಲಿ, ನಾಯಿ ಮತ್ತಿತರ ಪ್ರಾಣಿಗಳಿಗಾಗಲಿ ಹರಡುವುದಿಲ್ಲ.
ಬಾಧಿತ ಹಸುವಿನ ಹಾಲನ್ನು ಕುಡಿಯುವುದರಿಂದಲೂ ರೋಗ ಬರುವುದಿಲ್ಲ. ದ.ಕ. ಜಿಲ್ಲೆಯಲ್ಲಿ ಈವರೆಗೆ ಯಾವುದೇ ಜಾನುವಾರುಗಳಿಗೆ ಚರ್ಮ ಗಂಟು ರೋಗ ದೃಢಪಟ್ಟಿಲ್ಲ. ಚರ್ಮಗಂಟು ರೋಗ ಶಂಕಿತ ಪ್ರಕರಣದಲ್ಲಿ ಬಿಳಿಯೂರಿನಲ್ಲಿ ದನವೊಂದು ಸಾವನ್ನಪ್ಪಿದ್ದು, ಆ ದನದ ಗುಳ್ಳೆಗಳ ದ್ರವವನ್ನು ಬೆಂಗಳೂರಿನ ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ. ಇನ್ನೂ ವರದಿ ಬಂದಿಲ್ಲ’ ಎಂದಿದ್ದಾರೆ.