Advertisement

Vaccines: ವಯಸ್ಕರಿಗೆ ಲಸಿಕೆಗಳು

03:45 PM Nov 10, 2024 | Team Udayavani |

ಪ್ರತೀ ಮಕ್ಕಳಿಗೆ ರಾಷ್ಟ್ರೀಯ ಲಸಿಕಾಕರಣ ಕಾರ್ಯಕ್ರಮದಡಿಯಲ್ಲಿ ಸುಮಾರು 12 ಸಾಂಕ್ರಾಮಿಕ ರೋಗಗಳನ್ನು ತಡೆಯಲು ಲಸಿಕೆಗಳನ್ನು ದೇಶಾದ್ಯಂತ ನೀಡಲಾಗುತ್ತಿದೆ. ಈ ಲಸಿಕೆಗಳು ಲಸಿಕೆ ಪಡೆದವರಲ್ಲಿ ಸಂಬಂಧಿಸಿದ ಕಾಯಿಲೆ ಗಂಭೀರ ರೂಪದಲ್ಲಿ ಬಾರದಂತೆ ತಡೆಯುತ್ತದೆ. ಆದರೆ ಹಲವು ವರ್ಷಗಳ ಬಳಿಕ ಲಸಿಕೆ ಪಡೆದವರಲ್ಲಿ ಈ ಲಸಿಕೆಗಳ ರಕ್ಷಣೆ ಕ್ರಮೇಣವಾಗಿ ಕಡಿಮೆಯಾಗುತ್ತದೆ. ಬಾಲ್ಯ ದಲ್ಲಿ ಲಸಿಕೆಗಳನ್ನು ಪಡೆಯುವುದು ಸಾಮಾನ್ಯ ವಾಗಿದ್ದರೂ ವಯಸ್ಕರಿಗೆ, ಮುಖ್ಯವಾಗಿ ಹೆಚ್ಚಿನ ರೋಗಗಳ ಅಪಾಯ ಹೊಂದಿದವರಿಗೆ, ರೋಗ ಪ್ರತಿಬಂಧಕ ಶಕ್ತ ಕಡಿಮೆ ಇರುವವರಿಗೆ ವಿವಿಧ ಕಾಯಿಲೆಗಳಿಂದ ರಕ್ಷಿಸಲು ಲಸಿಕೆಗಳು ಪುನಃ ನಿರ್ಣಾಯಕ ಪಾತ್ರ ವಹಿಸುತ್ತದೆ.

Advertisement

ಯಾವುದೇ ವ್ಯಕ್ತಿಗೆ 19 ವರ್ಷಗಳ ಅನಂತರ ರೋಗ ಬಾರದಂತೆ ನೀಡುವ ಲಸಿಕೆಗಳಿಗೆ ವಯಸ್ಕರ ಲಸಿಕಾಕರಣ ಎಂದು ಕರೆಯುತ್ತಾರೆ. ತಜ್ಞರು ಶಿಫಾರಸು ಮಾಡಿದ ಲಸಿಕೆಗಳನ್ನು ತೆಗೆದು ಕೊಳ್ಳುವುದರಿಂದ ವಯಸ್ಕರು ತಮ್ಮನ್ನು ತಾವು ಕೆಲವು ಕಾಯಿಲೆಗಳಿಂದ, ಅವುಗಳ ಗಂಭೀರ ಪರಿಣಾಮಗಳಿಂದ ರಕ್ಷಿಸಿಕೊಳ್ಳಬಹುದು. ಆರೋಗ್ಯ ರಕ್ಷಣೆ ಮತ್ತು ರೋಗ ತಡೆಗಟ್ಟುವಿಕೆ ಯಲ್ಲಿ ಲಸಿಕೆಗಳ ಮಹತ್ವದ ಬಗ್ಗೆ ಜಾಗೃತಿ ಮೂಡಿಸಲು ಪ್ರತೀ ವರ್ಷ ನವೆಂಬರ್‌ ವಯಸ್ಕ ರಿಗೆ ಲಸಿಕೆಗಳು 10ರಂದು ವಿಶ್ವ ಲಸಿಕಾ ದಿನವೆಂದು ಆಚರಿಸಲಾಗುತ್ತದೆ.

ವಯಸ್ಕರು ತೆಗೆದುಕೊಳ್ಳಬಹುದಾದ ಲಸಿಕೆಗಳು ಫ್ಲೂ/ಇನ್‌ಫ್ಲುಯೆಂಜಾ ಲಸಿಕೆ

ಇನ್‌ಫ್ಲುಯೆಂಜಾವನ್ನು ಸಾಮಾನ್ಯವಾಗಿ ಫ್ಲೂ ಎಂದು ಕರೆಯುತ್ತಾರೆ. ಇದು ವಯಸ್ಕರಲ್ಲಿ ಅದರಲ್ಲಿಯೂ ಮುಖ್ಯವಾಗಿ ಇತರ ಸಹ ಕಾಯಿಲೆ ಹೊಂದಿದವರಲ್ಲಿ ತೀವ್ರವಾದ ತೊಡಕುಗಳನ್ನು ಉಂಟುಮಾಡಬಹುದು. ಇನ್‌ಫ್ಲುಯೆಂಜಾ ಲಸಿಕೆಯನ್ನು ಸಾಮಾನ್ಯವಾಗಿ ವಯಸ್ಸಾದವರು, ಗರ್ಭಿಣಿಯರು, ಆರೋಗ್ಯ ಕಾರ್ಯಕರ್ತರು ಮತ್ತು ದೀರ್ಘ‌ಕಾಲದ ಆನಾರೋಗ್ಯದಿಂದ ಬಳಲುತ್ತಿರುವವರು ವರ್ಷಕ್ಕೊಮ್ಮೆ ತೆಗೆದುಕೊಳ್ಳಬಹುದಾಗಿದೆ. ಇದನ್ನು ಇಂಟ್ರಾಮಸ್ಕಾಲರ್‌ ಅಂದರೆ ಸ್ನಾಯುವಿನೊಳಗೆ ಇಂಜೆಕ್ಷನ್‌ ಅಥವಾ ಮೂಗಿನ ಸಿಂಪರಣೆ ರೂಪದಲ್ಲಿ ನೀಡಲಾಗುತ್ತದೆ. ಪ್ರತೀ ಡೋಸ್‌ಗೆ 1,500-2,500 ರೂ. ವೆಚ್ಚವಾಗುತ್ತದೆ.

ಹ್ಯೂಮನ್‌ ಪ್ಯಾಪಿಲೋಮ ವೈರಸ್‌ (ಎಚ್‌ಪಿವಿ) ಲಸಿಕೆ

Advertisement

ಇದು ಪ್ಯಾಪಿಲೋಮ ಎಂಬ ವೈರಸ್‌ ಸಂಬಂಧಿಸಿದ ಗರ್ಭಕಂಠದ ಕ್ಯಾನ್ಸರ್‌ ವಿರುದ್ಧ ರಕ್ಷಣೆ ನೀಡುತ್ತದೆ. ಇದರಲ್ಲಿ ಎರಡು ತರಹದ ಲಸಿಕೆಗಳು ಲಭ್ಯವಿವೆ – ಕ್ವಾಡ್ರಾವೇಲೆಂಟ್‌ (ಎಚ್‌ಪಿವಿ ವಿಧಗಳು 6, 11, 16 ಮತ್ತು 18) ಮತ್ತು ದ್ವಿ-ವ್ಯಾಲೆಂಟ್‌ (ಎಚ್‌ಪಿವಿ ಪ್ರಕಾರಗಳು 16 ಮತ್ತು 18). ಲೈಂಗಿಕ ಚಟುವ ಟಿಕೆ ಪ್ರಾರಂಭವಾಗುವ ಮೊದಲು, ಅಂದರೆ ಎಚ್‌ಪಿವಿ ಸೋಂಕಿಗೆ ಒಡ್ಡಿಕೊಳ್ಳುವ ಮೊದಲು ಎರಡೂ ಲಸಿಕೆಗಳನ್ನು ಮಹಿಳೆಯರಿಗೆ ನೀಡಬಹುದು. 26 ವರ್ಷದವರೆಗೆ ಎಲ್ಲ ಮಹಿಳೆಯರಿಗೆ ಈ ಲಸಿಕೆ ನೀಡಬಹುದು. 15 ಅಥವಾ ಅದಕ್ಕಿಂತ ಹೆಚ್ಚಿನ ವಯಸ್ಸಿನ ವ್ಯಕ್ತಿಗಳಲ್ಲಿ 0, 1 ಮತ್ತು 6 ತಿಂಗಳುಗಳಲ್ಲಿ 3 ಡೋಸ್‌ಗಳನ್ನು ತೆಗೆದುಕೊಳ್ಳಬೇಕು. ಆರಂಭಿಕ ಲಸಿಕೆ ಸಮಯದಲ್ಲಿ 9-14 ವರ್ಷ ವಯಸ್ಸಾಗಿದ್ದರೆ ಒಂದು ಹೆಚ್ಚುವರಿ ಡೋಸ್‌ ತೆಗೆದುಕೊಳ್ಳಬಹುದು. 27-45 ವರ್ಷ ವಯಸ್ಸಿನ ಜನರಲ್ಲಿ 2 ಅಥವಾ 3 ಡೋಸ್‌ ಮತ್ತು ಕಡಿಮೆ ರೋಗನಿರೋಧಕ ಶಕ್ತಿ ಹೊಂದಿರುವವರಲ್ಲಿ 3 ಡೋಸ್‌ ಲಸಿಕೆಯನ್ನು ತೆಗೆದುಕೊಳ್ಳಬಹುದು. ಇದನ್ನು ಇಂಟ್ರಾಮಸ್ಕಾಲರ್‌ ಇಂಜೆಕ್ಷನ್‌ ಆಗಿ ನೀಡಲಾಗುತ್ತದೆ ಮತ್ತು ಪ್ರತೀ ಡೋಸ್‌ ಗೆ ಸುಮಾರು 2,500 – 4,000 ರೂ. ವೆಚ್ಚವಾಗುತ್ತದೆ. ಲಸಿಕೆ ದೀರ್ಘಾವಧಿಯ ರಕ್ಷಣೆ ನೀಡುತ್ತದೆ ಮತ್ತು ಬೂಸ್ಟರ್‌ ಡೋಸ್‌ ಸಾಮಾನ್ಯವಾಗಿ ಅಗತ್ಯವಿಲ್ಲ.

ನ್ಯುಮೋಕೊಕಲ್‌ ಲಸಿಕೆ

ಈ ಲಸಿಕೆಯು ನ್ಯುಮೋನಿಯಾ ಮತ್ತು ಮೆದುಳಿನ ಜ್ವರ ಕಾಯಿಲೆಯಿಂದ ರಕ್ಷಿಸುತ್ತದೆ. ಇದರಲ್ಲಿ ಎರಡು ವಿಧಗಳಿವೆ- PCV13 (Prevnar 13), PPSV23 (Pneumovax 23). PCV13. ಅನ್ನು ಎಲ್ಲ ಮಕ್ಕಳು ಮತ್ತು ಅಪಾಯದಲ್ಲಿರುವ ವಯಸ್ಕರಿಗೆ, ಪಿಪಿಎಸ್‌ವಿ23 ಅನ್ನು 65+ ವರ್ಷ ವಯಸ್ಕರಿಗೆ ಅಥವಾ ಕಿರಿಯ ವಯಸ್ಸಿನ ನಿರ್ದಿಷ್ಟ ಆರೋಗ್ಯ ಪರಿಸ್ಥಿತಿಗಳನ್ನು (ಡಯಾಬಿಟಿಸ್‌, ಹೃದಯ ರೋಗಗಳನ್ನು) ಹೊಂದಿರುವ ಜನರಿಗೆ ನೀಡಬಹುದು. ಇದನ್ನು ಇಂಟ್ರಾಮಸ್ಕಾಲರ್‌ ಅಥವಾ ಸಬ್‌ಕುಟೇನಿಯಸ್‌ ಅಂದರೆ ಚರ್ಮ ದಡಿಯ ಇಂಜೆಕ್ಷನ್‌ ಆಗಿ ನೀಡಲಾಗುತ್ತದೆ. ಪಿಸಿವಿ 13 ಲಸಿಕೆಯನ್ನು ಮೊದಲು ನೀಡಲಾ ಗುತ್ತದೆ ಮತ್ತು ಅನಂತರ ಪಿಪಿಎಸ್‌ವಿ23 ಅನ್ನು ನೀಡಲಾಗುತ್ತದೆ. ಸಾಮಾನ್ಯವಾಗಿ 2 ತಿಂಗಳ ಅನಂತರ ಮತ್ತು ಕೆಲವು ಸಂದರ್ಭಗಳಲ್ಲಿ 1 ವರ್ಷದ ಅನಂತರ. ಇದರ ಬೆಲೆ ಸುಮಾರು 2,000 – 4,500 ರೂ. ಪಿಸಿವಿ13 ಅನ್ನು ಒಮ್ಮೆ ಮಾತ್ರ ನೀಡಲಾಗುತ್ತದೆ. ಪಿಪಿಎಸ್‌ವಿ 23ಗೆ ಕೆಲವು ಸಂದರ್ಭಗಳಲ್ಲಿ 5 ವರ್ಷಗಳ ಅನಂತರ ಒಂದು ಬೂಸ್ಟರ್‌ ಡೋಸ್‌ ಬೇಕಾಗಬಹುದು.

ಹೆಪಟೈಟಿಸ್‌ ಬಿ ಲಸಿಕೆ

ಈ ಲಸಿಕೆ ಹೆಪಟೈಟಿಸ್‌ ಬಿ ವೈರಸ್‌ (ಎಚ್‌ಬಿವಿ) ಸೋಂಕಿನಿಂದ ರಕ್ಷಿಸುತ್ತದೆ. ಈ ಸೋಂಕು ಲಿವರ್‌ ಕ್ಯಾನ್ಸರ್‌ನಂತಹ ಕಾಯಿಲೆಗೆ ಕಾರಣವಾಗಬಹುದು. ಎಲ್ಲ ಶಿಶುಗಳು, ಲಸಿಕೆ ಹಾಕದ ಮಕ್ಕಳು ಮತ್ತು ಈ ರೋಗದ ಅಪಾ ಯದಲ್ಲಿರುವ ವಯಸ್ಕರು ಲಸಿಕೆಯನ್ನು 3 ಬಾರಿ ಹಾಕಿಸಿಕೊಳ್ಳಬೇಕು. ಇದನ್ನು ಇಂಟ್ರಾಮಸ್ಕಾಲರ್‌ ಇಂಜೆಕ್ಷನ್‌ ಆಗಿ ನೀಡಲಾಗುತ್ತದೆ ಮತ್ತು ಪ್ರತೀ ಡೋಸ್‌ಗೆ ಬೆಲೆ ಸುಮಾರು 100-900 ರೂ. ಎಲ್ಲ ಡೋಸ್‌ ಪೂರ್ಣಗೊಳಿಸಿದ ಅನಂತರ ಇದು ದೀರ್ಘಾವಧಿ ರಕ್ಷಣೆಯನ್ನು ಒದಗಿಸು ತ್ತದೆ. ಹೆಚ್ಚಿನ ಅಪಾಯದ ಜನರನ್ನು ಹೊರತು ಪಡಿಸಿ ಬೂಸ್ಟರ್‌ ಡೋಸ್‌ಗಳು ಸಾಮಾನ್ಯವಾಗಿ ಅಗತ್ಯವಿಲ್ಲ.

-ಮುಂದಿನ ವಾರಕ್ಕೆ

-ಡಾ| ಅಕ್ಷತಾ ಆರ್‌.,

ಅಸಿಸ್ಟೆಂಟ್‌ ಪ್ರೊಫೆಸರ್‌,

ಮಣಿಪಾಲ್‌ ಸೆಂಟರ್‌ ಫಾರ್‌ ಇನ್‌ಫೆಕ್ಷಿಯಸ್‌ ಡಿಸೀಸಸ್‌,

ಕೆಎಂಸಿ ಮಣಿಪಾಲ

-ಡಾ| ಸ್ನೇಹಾ ಡಿ. ಮಲ್ಯ

ಅಸೋಸಿಯೇಟ್‌ ಪ್ರೊಫೆಸರ್‌

ಡಾ| ಅಶ್ವಿ‌ನಿ ಕುಮಾರ್‌ ಗೋಪಾಡಿ

ಪ್ರೊಫೆಸರ್‌ ಮತ್ತು ಮುಖ್ಯಸ್ಥರು

ಸಮುದಾಯ ವೈದ್ಯಕೀಯ ವಿಭಾಗ,

ಕೆಎಂಸಿ ಮಣಿಪಾಲ

(ಈ ಲೇಖನದಲ್ಲಿರುವ ವಿಚಾರಗಳ ಬಗ್ಗೆ ಹೆಚ್ಚಿನ ಮಾಹಿತಿಗಳಿಗಾಗಿ ಸಂಪರ್ಕಿಸಿ: ಮುಖ್ಯಸ್ಥರು, ಇನ್‌ಫೆಕ್ಷಿಯಸ್‌ ಡಿಸೀಸಸ್‌ ವಿಭಾಗ, ಕೆಎಂಸಿ, ಮಂಗಳೂರು)

Advertisement

Udayavani is now on Telegram. Click here to join our channel and stay updated with the latest news.

Next