Advertisement

Mangaluru: ಎಲೆ ಚುಕ್ಕಿ ರೋಗ ಬಾಧಿತ ಅಡಿಕೆ ಕೃಷಿಕರಿಗೆ ನೆರವು: ಕೇಂದ್ರಕ್ಕೆ ಮನವಿ

10:55 AM Nov 08, 2024 | Team Udayavani |

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಅಡಿಕೆ ಬೆಳೆಗಾರರು ಎಲೆ ಚುಕ್ಕಿ ರೋಗ ಬಾಧೆಯಿಂದ ತೀವ್ರವಾಗಿ ತತ್ತರಿಸಿದ್ದು ಕೇಂದ್ರ ಸರಕಾರ ತತ್‌ಕ್ಷಣವೇ ರೋಗ ನಿಯಂತ್ರಣಕ್ಕೆ ಅಗತ್ಯ ಕ್ರಮ ಕೈಗೊಳ್ಳುವಂತೆ ಸಂಸದ ಕ್ಯಾ| ಬ್ರಿಜೇಶ್‌ ಚೌಟ ಅವರು ಕೇಂದ್ರ ಕೃಷಿ ಸಚಿವ ಶಿವರಾಜ್‌ ಸಿಂಗ್‌ ಚೌಹಾಣ್‌ಗೆ ಮನವಿ ಮಾಡಿದ್ದಾರೆ.

Advertisement

ಈ ಬಾರಿ ದಕ್ಷಿಣ ಕನ್ನಡದಲ್ಲಿ ಅಡಿಕೆ ಬೆಳೆಗೆ ಎಲೆ ಚುಕ್ಕಿ ರೋಗ ವ್ಯಾಪಕವಾಗಿ ಕಾಡುತ್ತಿದ್ದು, ಅಡಿಕೆ ಬೆಳೆಯನ್ನೇ ನಂಬಿರುವ ಲಕ್ಷಾಂತರ ಕೃಷಿಕರು ಆರ್ಥಿಕವಾಗಿ ಸಂಕಷ್ಟಕ್ಕೆ ಒಳಗಾಗಿದ್ದಾರೆ. ಈ ರೋಗಬಾಧೆಯಿಂದ ಅಡಿಕೆ ಬೆಳೆಗಾರರನ್ನು ರಕ್ಷಿಸಬೇಕಾದರೆ ಕೇಂದ್ರ ಸರಕಾರ ಕೂಡಲೇ ಎಲೆ ಚುಕ್ಕಿ ರೋಗವನ್ನು ಗಂಭೀರವಾಗಿ ಪರಿಗಣಿಸಿ ಈ ರೋಗದ ಬಗ್ಗೆ ರೈತರು ಹಾಗೂ ಕೃಷಿ ವಿಸ್ತರಣೆ ವಲಯದವರಿಗೆ ಸೂಕ್ತ ತರಬೇತಿ, ಮಾರ್ಗದರ್ಶನ ನೀಡಬೇಕು. ಆ ಮೂಲಕ ಎಲೆ ಚುಕ್ಕಿ ರೋಗವನ್ನು ಪರಿಣಾಮಕಾರಿಯಾಗಿ ತಡೆಯಲು ಕೀಟನಾಶಕ ಸಿಂಪಡಣೆ, ಜಾಗೃತಿ ಮತ್ತು ಇತರ ಕಾರ್ಯ-ಯೋಜನೆಯನ್ನು ಅನುಷ್ಠಾನಕ್ಕೆ ತರಬೇಕು. ಇದರಿಂದ ಕರಾವಳಿ ಭಾಗದ ಅಡಿಕೆ ಕೃಷಿಕರು ಹಾಗೂ ಅಡಿಕೆ ಉದ್ಯಮವನ್ನು ಎಲೆ ಚುಕ್ಕಿ ರೋಗಬಾಧೆ ಸಮಸ್ಯೆಯಿಂದ ಪಾರು ಮಾಡಬಹುದು ಎಂದು ಸಂಸದರು ಸಲಹೆ ನೀಡಿದ್ದಾರೆ.

ಕಾಫಿ ಬೆಳೆಗೆ ಉತ್ತೇಜನಕ್ಕೂ ಮನವಿ
ದಕ್ಷಿಣ ಕನ್ನಡದಲ್ಲಿ ಕಾಫಿ ಬೆಳೆಗೆ ಪೂರಕ ವಾತವಾರಣವಿದ್ದು, ಕಾಫಿ ಬೆಳೆಯನ್ನು ಸಾಂಪ್ರದಾಯಿಕ ಬೆಳೆಯಾಗಿ ಪ್ರೋತ್ಸಾಹಿಸುವುದಕ್ಕೆ ದಕ್ಷಿಣ ಕನ್ನಡ ಜಿಲ್ಲೆಯಲ್ಲೂ ಕಾಫಿ ಬೋರ್ಡ್‌ ಮೂಲಕ ಅಗತ್ಯ ಕ್ರಮ ಕೈಗೊಳ್ಳುವಂತೆ ಕೋರಿ ಸಂಸದರು ಕೇಂದ್ರ ವಾಣಿಜ್ಯ ಮತ್ತು ಕೈಗಾರಿಕೆಗಳ ಸಚಿವ ಪಿಯುಷ್‌ ಗೋಯೆಲ್‌ಗ‌ೂ ಪ್ರತ್ಯೇಕ ಪತ್ರ ಬರೆದಿದ್ದಾರೆ.

ದ.ಕ.ದಲ್ಲಿ ಅಡಿಕೆಗೆ ಪರ್ಯಾಯ ವಾಣಿಜ್ಯ ಬೆಳೆಯಾಗಿ ಕಾಫಿ ಬೆಳೆಯಲು ಪೂರಕ ಹವಾಗುಣ ಇದೆ. ಚಿಕ್ಕಮಗಳೂರು, ಕೊಡಗು ಸಹಿತ ಮಲೆನಾಡಿನಂತೆ ದ.ಕ.ದಲ್ಲೂ ಕಾಫಿಯನ್ನು ಸಾಂಪ್ರದಾಯಿಕ ಬೆಳೆಯಾಗಿ ಬೆಳೆಯುವುದಕ್ಕೆ ಪೂರಕ ಪರಿಸರ ವ್ಯವಸ್ಥೆ ಇದೆ. ಈ ಹಿನ್ನೆಲೆಯಲ್ಲಿ ಈ ಭಾಗದಲ್ಲಿ ಕಾಫಿ ಮಂಡಳಿ ಮೂಲಕ ಕಾಫಿ ಬೆಳೆಗಾರರಿಗೆ ತಾಂತ್ರಿಕ ನೆರವು, ತರಬೇತಿ ಹಾಗೂ ಮಾರುಕಟ್ಟೆ ಲಭ್ಯತೆಗೆ ಬೇಕಾಗುವ ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.

ಇದನ್ನೂ ಓದಿ: ಪಿಂಚಣಿದಾರರ ಡಿಜಿಟಲ್‌ ಲೈಫ್‌ ಸರ್ಟಿಫಿಕೆಟ್‌: ಅಂಚೆ ಕಚೇರಿಯಿಂದ ಮನೆ ಬಾಗಿಲಲ್ಲೇ ಸೇವೆ

Advertisement
Advertisement

Udayavani is now on Telegram. Click here to join our channel and stay updated with the latest news.

Next