Advertisement

Bantwala: ತುಂಬೆ ದೇವಸ್ಥಾನ ಕಳ್ಳತನ ಪ್ರಕರಣ: ಮೂವರು ಖದೀಮರ ಸೆರೆ

09:16 PM Nov 24, 2024 | Team Udayavani |

ಬಂಟ್ವಾಳ: ಗ್ರಾಮಾಂತರ ಪೊಲೀಸ್‌ ಠಾಣಾ ವ್ಯಾಪ್ತಿಯ ತುಂಬೆ ಗ್ರಾಮದ ತುಂಬೆ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ನಡೆದ ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ ಕುಖ್ಯಾತ ಕಳ್ಳರ ತಂಡವನ್ನು ಮಟ್ಟ ಹಾಕುವಲ್ಲಿ ಪೊಲೀಸರ ತಂಡ ಯಶಸ್ವಿಯಾಗಿದೆ.

Advertisement

ದಕ್ಷಿಣ ಕನ್ನಡ ಜಿಲ್ಲಾ ಪೊಲೀಸರ ವಿಶೇಷ ತನಿಖಾ ತಂಡ ಕಾರ್ಯಾಚರಣೆ ನಡೆಸಿ ಇರಾದಲ್ಲಿ ಮೂವರು ಆರೋಪಿಗಳನ್ನು ಬಂಧಿಸಿ 1.25 ಲಕ್ಷ ರೂ. ಮೌಲ್ಯದ ಆಭರಣಗಳು ಹಾಗೂ ಕೃತ್ಯಕ್ಕೆ ಬಳಸಿದ್ದ ಕಾರನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಕಾಸರಗೋಡಿನ ಚೆರ್ವತ್ತೂರು ಗ್ರಾಮದ ಪಿಲಾವಲಪ್ಪು, ಕೋತಂಕರ ನಿವಾಸಿ ಬಶೀರ್‌ ಕೆ ಪಿ. ಯಾನೆ ಆಕ್ರಿ ಬಶೀರ್‌ (44), ಕೇರಳದ ಕೊಲ್ಲಂ ಜಿಲ್ಲೆಯ ಆಲಪ್ಪಾಡ್‌ ನ ಪ್ರಕಾಶ್‌ ಬಾಬು ಯಾನೆ ಮಹಮ್ಮದ್‌ ನಿಯಾಜ್‌(46) ಹಾಗೂ ಬಂಟ್ವಾಳ ತಾಲೂಕಿನ ಪುದು ಗ್ರಾಮ ನಿವಾಸಿ ಎಫ್‌.ಜೆ.ಮಹಮ್ಮದ್‌ ಇಸ್ಮಾಯಿಲ್‌ ಬಂಧಿತ ಆರೋಪಿಗಳು.

ಇವರ ಪೈಕಿ ಬಶೀರ್‌ ಕೆ.ಪಿ. ಎಂಬಾತ ಕುಖ್ಯಾತ ಕಳ್ಳನಾಗಿದ್ದು, ಈತನ ವಿರುದ್ದ ಬೇರೆ ಬೇರೆ ಠಾಣೆಗಳಲ್ಲಿ ಸುಮಾರು 13 ಕಳ್ಳತನ ಪ್ರಕರಣಗಳು ದಾಖಲಾಗಿರುತ್ತದೆ. ಆರೋಪಿ ಪ್ರಕಾಶ್‌ ಬಾಬು ಯಾನೆ ಮಹಮ್ಮದ್‌ ನಿಯಾಝ್ ಎಂಬಾತನ ವಿರುದ್ಧ 3 ಕಳ್ಳತನ ಪ್ರಕರಣಗಳು ದಾಖಲಾಗಿರುತ್ತದೆ.
ಬಂಧಿತರಿಂದ 1.25 ಲಕ್ಷ ರೂ. ಮೌಲ್ಯದ ಬೆಳ್ಳಿಯ ಆಭರಣಗಳು ಹಾಗೂ ಕಾರನ್ನು ವಶಪಡಿಸಲಾಗಿದೆ.

ಡಿವಿಆರ್‌ ಕೂಡ ಹೊತ್ತೊಯ್ದಿದ್ದ ಆರೋಪಿಗಳು: 
ಆರೋಪಿಗಳು ನ. 4ರಂದು ದೇವಸ್ಥಾನದ ಮುಂಬಾಗಿಲ ಮೂಲಕ ಒಳ ನುಗ್ಗಿ ಕಳ್ಳತನ ನಡೆಸಿ ಸಿಸಿ ಕ್ಯಾಮರಾದ ಡಿವಿಆರ್‌ನ್ನು ಕೂಡ ಹೊತ್ತೂಯ್ದಿದ್ದರು. ಅದಕ್ಕೆ ಮುನ್ನಾದಿನ ಫರಂಗಿಪೇಟೆ ಸುಜೀರಿನ ಶ್ರೀ ರವಳನಾಥ ಮಂದಿರದಲ್ಲೂ ಕಳ್ಳತನ ನಡೆದಿತ್ತು. ಹೀಗಾಗಿ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ್ದ ಪೊಲೀಸ್‌ ಇಲಾಖೆ ವಿಶೇಷ ತಂಡ ರಚಿಸಿ ಕಾರ್ಯಾಚರಣೆಗೆ ಇಳಿದಿತ್ತು.

ದ.ಕ.ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಯತೀಶ್‌ ಎನ್‌. ಹಾಗೂ ಹೆಚ್ಚುವರಿ ಪೊಲೀಸ್‌ ಅಧೀಕ್ಷಕ ರಾಜೇಂದ್ರ ಡಿ.ಎಸ್‌.ಮಾರ್ಗದರ್ಶನದಲ್ಲಿ ಬಂಟ್ವಾಳ ಡಿವೈಎಸ್ಪಿ ಎಸ್‌.ವಿಜಯಪ್ರಸಾದ್‌ ಅವರ ನೇತೃತ್ವದ ಬಂಟ್ವಾಳ ಗ್ರಾಮಾಂತರ ಪೊಲೀಸ್‌ ಠಾಣಾ ಇನ್ಸ್‌ಪೆಕ್ಟರ್‌ ಶಿವಕುಮಾರ ಬಿ., ಪಿಎಸ್‌ಐಗಳಾದ ನಂದಕುಮಾರ್‌, ಹರೀಶ್‌ ಎಂ, ಲೋಲಾಕ್ಷ ಹಾಗೂ ಸಿಬಂದಿಗಳಾದ ಉದಯ ರೈ, ಪ್ರವೀಣ್‌ ಎಂ, ಅದ್ರಾಮ, ಹರಿಶ್ಚಂದ್ರ, ನಝೀರ್‌ , ಕೃಷ್ಣ ನಾಯ್ಕ, ಸಂತೋಷ್‌, ರಾಹುಲ್‌ ರಾವ್‌, ಅಶೋಕ್‌, ವಿವೇಕ್‌ ಕೆ, ಕುಮಾರ್‌ಎಚ್‌.ಕೆ, ಬಸವರಾಜ್‌, ರಮ್‌ಜಾನ್‌, ಕುಮಾರ, ಮಹಾಂತೇಶ್‌, ಜಿಲ್ಲಾ ಗಣಕಯಂತ್ರ ವಿಭಾಗದ ಸಂಪತ್‌, ದಿವಾಕರ ಒಳಗೊಂಡ ತಂಡ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿತ್ತು.

Advertisement
Advertisement

Udayavani is now on Telegram. Click here to join our channel and stay updated with the latest news.

Next