Advertisement

ಮಾಂಸಭಕ್ಷಕ ಸಸ್ಯಗಳು!

06:00 AM Aug 09, 2018 | |

ಸಸ್ಯಗಳೇ ಮಾಂಸಾಹಾರಿಗಳಾದರೆ, ಅದನ್ನು ಸೇವಿಸುವ ಮನುಷ್ಯರನ್ನು ಸಸ್ಯಾಹಾರಿಗಳೆಂದು ಕರೆಯಬೇಕೋ, ಮಾಂಸಾಹಾರಿಗಳೆಂದು ಕರೆಯಬೇಕೋ? 

Advertisement

ನಮ್ಮಲ್ಲಿ ಸಸ್ಯಾಹಾರಿ ಮತ್ತು ಮಾಂಸಾಹಾರಿ ಎಂಬ ವಿಂಗಡನೆಯಿದೆ. ಹೋಟೆಲ್‌, ಸಭೆ ಸಮಾರಂಭಗಳಲ್ಲಿ ಇವೆರಡಕ್ಕೂ ಪ್ರತ್ಯೇಕ ಮೆನು ಅಥವಾ ಕೌಂಟರ್‌ ನೀಡಲಾಗುತ್ತದೆ. ಸಸ್ಯಗಳೇ ಮಾಂಸಾಹಾರಿಗಳಾದರೆ ಅದನ್ನು ಸೇವಿಸುವವರನ್ನು ಸಸ್ಯಾಹಾರಿಗಳೆಂದು ಕರೆಯಬೇಕೋ, ಮಾಂಸಾಹಾರಿಗಳೆಂದು ಕರೆಯಬೇಕೋ? ಈ ಪ್ರಶ್ನೆ ಬರುವುದಕ್ಕೆ ಕಾರಣ ಮಾಂಸಾಹಾರಿ ಸಸ್ಯಗಳು ನಿಜಕ್ಕೂ ಇರುವುದು. ಈ ಸಸ್ಯಗಳನ್ನು ಸದ್ಯದ ಮಟ್ಟಿಗೆ ಮನುಷ್ಯರು ಸೇವಿಸುವುದಿಲ್ಲವಾದ ಕಾರಣ ಮೇಲಿನ ಪ್ರಶ್ನೆಗೆ ಉತ್ತರಿಸುವ ಗೋಜಿಗೆ ಹೋಗಬೇಕಿಲ್ಲ.

ಇಬ್ಬನಿ ಗಿಡ (ಡ್ರಾಸೆರ)
ಇಬ್ಬನಿ ಗಿಡದ ಎಲೆಗಳ ಸುತ್ತಲೂ ತಂತಿಯಂಥ ಎಳೆಗಳು ಚಾಚಿಕೊಂಡಿದ್ದು, ಎಳೆಗಳ ತುದಿಯಲ್ಲಿ ದ್ರವರೂಪದ ಅಂಟು ಹನಿಯಿರುತ್ತದೆ. ಈ ಎಲೆಗಳು ಬಿಸಿಲಿನಲ್ಲಿ ಬಲುಸುಂದರವಾಗಿ ಹೊಳೆಯುತ್ತಿರುತ್ತವೆ. ಇಬ್ಬನಿಯ ಹನಿಯಂತೆ ಕಾಣುವ ಈ ಅಂಟನ್ನು ಮಕರಂದವೆಂದು ಭ್ರಮಿಸಿ ಕೀಟಗಳು ಕುಳಿತಾಗ ಅಂಟಿಕೊಳ್ಳುತ್ತವೆ. ಕೀಟಗಳು ಇದರಿಂದ ತಪ್ಪಿಸಿಕೊಳ್ಳಲು ಸಾಧ್ಯವೇ ಇಲ್ಲ. ಅಲ್ಲೇ ಬಂಧಿಯಾಗಿ ಇಬ್ಬನಿ ಗಿಡದ ಆಹಾರವಾಗುತ್ತದೆ.

ಹೂಜಿಗಿಡ
ಇದರ ಎಲೆಗಳು ನೋಡಲು ಕೊಳವೆಯಾಕಾರದ ಉದ್ದ ಕತ್ತಿನ ಮುಚ್ಚಳರುವ ಹೂಜಿಯಂತೆ ಕಾಣುತ್ತವೆ. ಈ ಸಸ್ಯವು ಹೂಜಿಯ ತೆರೆದ ಅಂಚಿನ ಆಸುಪಾಸಿನಿಂದ ಆಕರ್ಷಕ ದ್ರವ್ಯವನ್ನು ಹೊರಸೂಸುತ್ತದೆ. ಇದಕ್ಕೆ ಆಕರ್ಷಿತರಾಗಿ ಆ ದ್ರವವನ್ನು ಸವಿಯಲು ಬರುವ ಕೀಟಗಳು ಹೂಜಿಯಲ್ಲಿ ಸಿಕ್ಕಿಹಾಕಿಕೊಳ್ಳುತ್ತವೆ. ನಂತರ ಹೂಜಿ ತಂತಾನೇ ಮುಚ್ಚಿಕೊಂಡುಬಿಡುತ್ತದೆ. ಕಪ್ಪೆ ಹಾಗೂ ಹಲ್ಲಿಯನ್ನೂ ಜೀರ್ಣಿಸಿಕೊಳ್ಳುವ ಹೂಜಿ ಗಿಡಗಳಿವೆ. 

ನೊಣದ ಬೋನು (ವೀನಸ್‌ ಫ್ಲೈಟ್ರಾಪ್‌)
ಇದರ ಎಲೆಗಳು ಇಬ್ಟಾಗಗೊಂಡಂತಿದ್ದು, ಮಡಚಿಕೊಳ್ಳುವಂತಹ ವಿನ್ಯಾಸವನ್ನು ಹೊಂದಿರುತ್ತವೆ. ಪ್ರತಿ ಎಲೆಯ ಅಂಚಿನುದ್ದಕ್ಕೂ ಸೂಕ್ಷ್ಮ ಸಂವೇದಿ ತಂತುಗಳಿದ್ದು. ಕೀಟವೊಂದು ಈ ತಂತನ್ನು ಸ್ಪರ್ಶಿಸಿದಾಗ ಸಸ್ಯದಲ್ಲಿ ವಿದ್ಯುತ್‌ ವಿಸರ್ಜನೆಯಾಗಿ ಕ್ಷಣಾರ್ಧದಲ್ಲಿ ಎಲೆಗಳನ್ನು ಭದ್ರವಾಗಿ ಮಡಚಿಕೊಂಡು ಅದನ್ನು ಜೀರ್ಣಿಸಿಕೊಳ್ಳುತ್ತದೆ.

Advertisement

ಕೀಟಗಳನ್ನೇ ಏಕೆ ಹಿಡಿಯುತ್ತವೆ?
ಈ ಕೀಟಾಹಾರಿ ಸಸ್ಯಗಳು ಹೆಚ್ಚಾಗಿ ಜೌಗು ಪ್ರದೇಶಗಳಲ್ಲಿ ಕಂಡುಬರುತ್ತವೆ. ಆ ಪ್ರದೇಶದ ಮಣ್ಣಿನಲ್ಲಿ ಸಾರಜನಕ ಕಡಿಮೆ ಪ್ರಮಾಣದಲ್ಲಿರುವುದರಿಂದ ಮಾಂಸಾಹಾರಿ ಸಸ್ಯಗಳು ತಮ್ಮ ಪೋಷಣೆಗೆ ಅಗತ್ಯವಾದ ಸಾರಜನಕವನ್ನು ಪಡೆದುಕೊಳ್ಳಲು ಕೀಟಗಳನ್ನು ಭಕ್ಷಿಸುತ್ತವೆ. ದಕ್ಷಿಣ ಅಮೆರಿಕಾ, ಕ್ಯಾಲಿಫೋರ್ನಿಯಾ, ಕೆನಡಾ, ಆಸ್ಟ್ರೇಲಿಯಾಗಳಲ್ಲಿ ಮಾತ್ರ ಬೃಹತ್‌ ಪ್ರಮಾಣದಲ್ಲಿ ಕಂಡುಬರುವ ಈ ಸಸ್ಯಗಳ ಹಲವಾರು ಪ್ರಭೇಧಗಳು ಈಶಾನ್ಯ ಭಾರತದ ರಾಜ್ಯಗಳಲ್ಲೂ ಕಾಣುತ್ತವೆ. ಅಲಂಕಾರಿಕ ಸಸ್ಯಗಳನ್ನು ಬೆಳೆಸಿದಷ್ಟು ಸುಲಭವಾಗಿ ಇವುಗಳನ್ನು ಮನೆಯ ಕೈತೋಟಗಳಲ್ಲಿ ಬೆಳೆಸಲಾಗದು.

ಹರೀಶ್‌

Advertisement

Udayavani is now on Telegram. Click here to join our channel and stay updated with the latest news.

Next