ನವದೆಹಲಿ: 2022 ರಲ್ಲಿ ಆಡಳಿತಾರೂಢ ಬಿಜೆಪಿಗೆ ಪಕ್ಷಾಂತರ ಮಾಡಿದ ಕಾಂಗ್ರೆಸ್‌ನ ಎಂಟು ಶಾಸಕರ ವಿರುದ್ಧದ ಅನರ್ಹತೆ ಅರ್ಜಿಯನ್ನು ತಿರಸ್ಕರಿಸಿದ ಗೋವಾ ವಿಧಾನಸಭಾ ಸ್ಪೀಕರ್ ಅವರ ನಿರ್ಧಾರವನ್ನು ಪ್ರಶ್ನಿಸಿ ಸಲ್ಲಿಸಲಾದ ಅರ್ಜಿಯನ್ನು ಪರಿಗಣಿಸಲು ಸುಪ್ರೀಂ ಕೋರ್ಟ್ ಶುಕ್ರವಾರ(ಡಿ13) ನಿರಾಕರಿಸಿದೆ.
“ಇದು ಮೊದಲ ಮೇಲ್ಮನವಿ ನ್ಯಾಯಾಲಯವಾಗುವುದಿಲ್ಲ” ಎಂದು ಗಮನಿಸಿದ ಮುಖ್ಯ ನ್ಯಾಯಮೂರ್ತಿ ಸಂಜೀವ್ ಖನ್ನಾ ಮತ್ತು ನ್ಯಾಯಮೂರ್ತಿ ಸಂಜಯ್ ಕುಮಾರ್ ಅವರನ್ನೊಳಗೊಂಡ ಪೀಠವು, ಬಾಂಬೆ ಹೈಕೋರ್ಟ್‌ನ ಗೋವಾ ಪೀಠಕ್ಕೆ ತೆರಳಿ ಸ್ಪೀಕರ್ ನಿರ್ಧಾರವನ್ನು ಪ್ರಶ್ನಿಸಲು ಕಾಂಗ್ರೆಸ್ ನಾಯಕ ಮತ್ತು ಅರ್ಜಿದಾರ ಗಿರೀಶ್ ಚೋಡಣಕರ್ ಅವರಿಗೆ ಸೂಚನೆ ನೀಡಿತು.
ಚೋಡಣಕರ್ ಪರ ವಾದ ಮಂಡಿಸಿದ ಹಿರಿಯ ವಕೀಲ ಅಭಿಷೇಕ್ ಮನು ಸಿಂಘ್ವಿ, ಗೋವಾ ವಿಧಾನಸಭಾ ಸ್ಪೀಕರ್ ರಮೇಶ್ ತಾವಡ್ಕರ್ ಅವರು ಪಕ್ಷಾಂತರಗೊಂಡಿರುವ ಕಾಂಗ್ರೆಸ್ ಶಾಸಕರ ಅನರ್ಹತೆಯ ಮನವಿಯನ್ನು ನಿರ್ಧರಿಸಲು 720 ದಿನಗಳನ್ನು ತೆಗೆದುಕೊಂಡರು. ಅಸೆಂಬ್ಲಿ ಅವಧಿಯು ಮುಕ್ತಾಯಗೊಳ್ಳುತ್ತಿದ್ದಂತೆ ಅನರ್ಹಗೊಳಿಸುವಿಕೆ ಪರಿಣಾಮಕಾರಿ ಅಲ್ಲ ಎಂದು ವಾದಿಸಿದರು.
“ನೀವು ಆರ್ಟಿಕಲ್ 136 ರ ಅಡಿಯಲ್ಲಿ ಸ್ಪೀಕರ್ ಆದೇಶದ ವಿರುದ್ಧ ಬಂದಿದ್ದೀರಿ, ಅದು ಹೇಗೆ ಸಾಧ್ಯ? …ನೀವು ಹೈಕೋರ್ಟ್ ನಲ್ಲಿ ರಿಟ್ ಅರ್ಜಿ ಸಲ್ಲಿಸಬೇಕು. ನಾವು ಆರ್ಟಿಕಲ್ 136 ಮನವಿಯನ್ನು ಪರಿಗಣಿಸಲು ಸಾಧ್ಯವಿಲ್ಲ. ನಾವು ಮೊದಲ ಮೇಲ್ಮನವಿ ನ್ಯಾಯಾಲಯವಾಗುವುದಿಲ್ಲ, ” ಎಂದು ಸಿಜೆಐ ಹೇಳಿದರು.
ಬಿಜೆಪಿ ಸೇರ್ಪಡೆಯಾಗಿದ್ದ ಶಾಸಕರಾದ ದಿಗಂಬರ್ ಕಾಮತ್, ಅಲೆಕ್ಸೊ ಸಿಕ್ವೇರಾ, ಸಂಕಲ್ಪ್ ಅಮೋನ್ಕರ್, ಮೈಕೆಲ್ ಲೋಬೋ, ಡೆಲಿಲಾ ಲೋಬೋ, ಕೇದಾರ್ ನಾಯ್ಕ್, ರುಡಾಲ್ಫ್ ಫರ್ನಾಂಡಿಸ್ ಮತ್ತು ರಾಜೇಶ್ ಫಲ್ದೇಸಾಯಿ ವಿರುದ್ಧ ಗೋವಾದ ಮಾಜಿ ಕಾಂಗ್ರೆಸ್ ಮುಖ್ಯಸ್ಥ ಚೋಡ ಣಕರ್ ಅವರು ಅನರ್ಹತೆ ಅರ್ಜಿ ಸಲ್ಲಿಸಿದ್ದರು.