ಚನ್ನರಾಯಪಟ್ಟಣ: ಸಮಾಜದಲ್ಲಿ ಶಾಂತಿ ಹಾಗೂ ನೆಮ್ಮದಿ ನೆಲೆಸಬೇಕಾದರೆ ಅಹಿಂಸಾ ಮಾರ್ಗದಿಂದ ಮಾತ್ರ ಸಾಧ್ಯ ಎನ್ನುವುದನ್ನು ಮನುಕುಲಕ್ಕೆ ಸಾರಿದವರು ಜೈನರು ಎಂದು ಉಡುಪಿ ಪೇಜಾವರ ಮಠದ ಶ್ರೀ ವಿಶ್ವಪ್ರಸನ್ನತೀರ್ಥ ಶ್ರೀಪಾದರು ತಿಳಿಸಿದರು.
ಶ್ರವಬೆಳಗೊಳದಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾತ ನಾಡಿ, ಅಹಿಂಸಾ ವ್ರತ ಪಾಲನೆ ಮಾಡಿದರೆ ಸಾಲದು, ಅದನ್ನು ವಿಶ್ವಕ್ಕೆ ಸಾರಬೇಕು ಎಂದು ಸಾಕಷ್ಟು ಮಂದಿ ತ್ಯಾಗಿಗಳು ವಿಶ್ವ ಪರ್ಯಟನೆ ಮಾಡುತ್ತಿದ್ದಾರೆ. ಅಹಿಂಸೆ ಎಂದರೆ ಕಾರ್ಯದಿಂದ, ಮಾತಿನಿಂದಲೂ ಯಾರನ್ನೂ ಹಿಂಸೆ ಮಾಡಬಾರದು. ಆಗ ಮಾತ್ರ ಶಾಂತಿ ನೆಲೆಸಲಿದೆ. ನಮ್ಮ ನಡೆ- ನುಡಿ ಸಮಾಜಕ್ಕೆ ಆದರ್ಶವಾಗಿರಬೇಕು ಹೊರತು, ಒಂದು ಜಾತಿಗೆ ಆದರ್ಶವಾಗಿದ್ದು, ಮತ್ತೂಂದು ಜಾತಿಗೆ ನೋವು ಉಂಟು ಮಾಡುವಂತೆ ಇರಬಾರದು ಎಂದರು.
ಪೇಜಾವರ ಮಠದ ಈ ಹಿಂದಿನ ಶ್ರೀಗಳು ಹಾಗೂ ಜೈನ ಮಠದ ಈ ಹಿಂದಿನ ಶ್ರೀಗಳ ಸಂಬಂಧ ಉತ್ತಮವಾಗಿತ್ತು. ಅವರು ನಡೆದ ಹಾದಿಯಲ್ಲಿ ನಾವು ಸಾಗೋಣ. ಯಾವ ಸಮಯದಲ್ಲಿ ಬೇಕಾದರು ಪೇಜಾವರ ಮಠ ಜೈನ ಮಠದ ಆಗು ಹೋಗುಗಳಿಗೆ ಜತೆಯಾಗಿ ನಿಲ್ಲುತ್ತದೆ ಎಂದರು.
ಹೋಲಿಕೆ ಸಾಧ್ಯವಿಲ್ಲ
ತುಮಕೂರಿನ ಸಿದ್ಧಗಂಗಾ ಮಠದ ಪೀಠಾಧ್ಯಕ್ಷ ಶ್ರೀ ಸಿದ್ದಲಿಂಗ ಮಹಾಸ್ವಾಮೀಜಿ ಮಾತನಾಡಿ, ದೊಡ್ಡ ನಗರಗಳಲ್ಲಿ ಮಠಗಳನ್ನು ಮಾಡಿ ಸಮಾಜದ ಏಳಿಗೆಗೆ ಶ್ರಮಿಸುವುದಲ್ಲ, ಪುಟ್ಟ ಗ್ರಾಮದಲ್ಲಿಯೂ ಮಠವನ್ನು ಹೊಂದಿ ಸಮಾಜದ ಏಳಿಗೆ ಶ್ರಮಿಸಬಹುದು ಎನ್ನುವುದನ್ನು ಜೈನ ಮಠ ನಿರೂಪಿಸಿದೆ. ಜೈನ ಧರ್ಮದ ಕೀರ್ತಿಯನ್ನು ಬಹು ಎತ್ತರಕ್ಕೆ ಬೆಳೆಸಿದ ಚಾರುಶ್ರೀಗಳು ತಮ್ಮ ಜೀವಿತಾವಧಿಯನ್ನು ಪುಟ್ಟ ಗ್ರಾಮದಲ್ಲಿನ ಮಠದಲ್ಲಿ ಕಳೆದಿದ್ದಾರೆ. ಚಾರುಶ್ರೀಗಳಿಗೆ ಚಾರುಶ್ರೀಗಳೇ ಸಾಟಿ ಅವರನ್ನು ಇತರರಿಗೆ ಹೋಲಿಕೆ ಮಾಡಲು ಸಾಧ್ಯವಿಲ್ಲ ಎಂದರು.
ಕಾರ್ಕಳದ ಲಲಿತಕೀರ್ತಿ ಭಟ್ಟಾರಕ ಸ್ವಾಮೀಜಿ, ಕನಕಗಿರಿಯ ಭುವನಕೀರ್ತಿ ಭಟ್ಟಾರಕ ಸ್ವಾಮೀಜಿ, ಅರಹಂತಗಿರಿಯ ಧವಲಕೀರ್ತಿ ಭಟ್ಟರಕ ಸ್ವಾಮೀಜಿ, ಕಂಬದಹಳ್ಳಿಯ ಭಾನುಕೀರ್ತಿ ಭಟ್ಟಾರಕ ಸ್ವಾಮೀಜಿ, ಮೂಡುಬಿದಿರೆಯ ಭಟ್ಟಾರಕ ಚಾರುಕೀರ್ತಿ ಸ್ವಾಮೀಜಿ, ತಮಿಳುನಾಡಿನ ಮೇಲ್ ಚಿತ್ತಮೂರಿನ ಭಟ್ಟಾರಕ ಸ್ವಾಮೀಜಿ, ವರೂರಿನ ಧರ್ಮಸೇನ ಭಟ್ಟಾರಕ ಸ್ವಾಮೀಜಿ, ಹೊಂಬುಜದ ದೇವೇಂದ್ರ ಭಟ್ಟಾರಕ ಸ್ವಾಮೀಜಿ, ಸೋಂದಾದ ಭಟ್ಟಾಕಲಂಕ ಭಟ್ಟಾರಕ ಸ್ವಾಮೀಜಿ, ನರಸಿಂಹರಾಜಪುರದ ಲಕ್ಷ್ಮೀಸೇನಾ ಭಟ್ಟಾರಕ ಸ್ವಾಮೀಜಿ, ಲಕ್ಕವಳ್ಳಿಯ ವೃಷಭಸೇನಾ ಭಟ್ಟಾರಕ ಸ್ವಾಮೀಜಿ, ನಾಂದಣಿಯ ಜಿನಸೇನ ಭಟ್ಟಾರಕ ಸ್ವಾಮೀಜಿ, ಆರತಿಪುರದ ಸಿದ್ಧಾಂತಕೀರ್ತಿ ಭಟ್ಟಾರಕ ಸ್ವಾಮೀಜಿ, ಮಹಾರಾಷ್ಟ್ರ ರಾಜ್ಯದ ಕೊಲ್ಹಾಪುರದ ಲಕ್ಷ್ಮೀಸೇನ ಭಟ್ಟಾರಕ ಸ್ವಾಮೀಜಿ, ವಿಚಾರಪಟ್ಟ ಕ್ಷುಲ್ಲಕಶ್ರೀ ಪ್ರಮೆಯಸಾಗರ ಸ್ವಾಮೀಜಿ, ರಾಜ್ಯಸಭಾ ಸದಸ್ಯರಾಗಿರುವ ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ| ಡಿ. ವೀರೇಂದ್ರ ಹೆಗ್ಗಡೆ ಉಪಸ್ಥಿತ ರಿದ್ದರು.