Advertisement

Davanagere: ಅಸೆಂಬ್ಲಿ ಅಧಿವೇಶನಕ್ಕೆ ಮೊದಲು ಸಿದ್ದರಾಮಯ್ಯ ರಾಜೀನಾಮೆ: ಆರ್.ಅಶೋಕ್

06:02 PM Nov 12, 2024 | Team Udayavani |

ದಾವಣಗೆರೆ: ಮುಂದಿನ ವಿಧಾನಸಭಾ ಅಧಿವೇಶನ ಪ್ರಾರಂಭವಾಗುವುದರ ಒಳಗೆ ಮುಖ್ಯಮಂತ್ರಿ ಸಿದ್ದರಾಮಯ್ಯ (CM Siddaramaiah) ರಾಜೀನಾಮೆ ನೀಡುವರು ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಆರ್. ಅಶೋಕ್ (R.Ashok) ಭವಿಷ್ಯ ನುಡಿದರು.

Advertisement

ಮಂಗಳವಾರ (ನ.11) ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯ ಸರ್ಕಾರ ಬಹಳ ದಿನ ಉಳಿಯುವುದೇ ಇಲ್ಲ ಎಂಬ ಗ್ಯಾರಂಟಿ ಸ್ವತಃ ಸಿದ್ದರಾಮಯ್ಯ ಅವರಿಗೇ ಇದೆ. ಹಾಗಾಗಿ ಮುಂದಿನ ಅಧಿವೇಶನ ಪ್ರಾರಂಭವಾಗುವ ಒಳಗಾಗಿ ಸಿದ್ದರಾಮಯ್ಯ ರಾಜೀನಾಮೆ ನೀಡುವರು ಎಂದರು.

ರಾಜ್ಯ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ 16 ತಿಂಗಳಲ್ಲಿ ಮುಡಾ, ವಾಲ್ಮೀಕಿ, ಕಾರ್ಮಿಕ ಇಲಾಖೆ ಈಗ ಲಿಕ್ಕರ್ ಸೇರಿದಂತೆ 16 ಬ್ರಹ್ಮಾಂಡ ಭ್ರಷ್ಟಾಚಾರಗಳಲ್ಲಿ ಮುಳುಗಿದೆ. ಮುಂದಿನ ಅಧಿವೇಶನದಲ್ಲಿ ಸರ್ಕಾರದ ಎಲ್ಲ ಭ್ರಷ್ಟಾಚಾರ, ಹಗರಣಗಳನ್ನು ಪ್ರಸ್ತಾಪ ಮಾಡಲಾಗುವುದು. ಎಲ್ಲ ಹಗರಣಗಳನ್ನೂ ಬಟಾಬಯಲು ಮಾಡಲಾಗುವುದು ಎಂದು ಎಚ್ಚರಿಸಿದರು.

ಮುಖ್ಯಮಂತ್ರಿ ಸಿದ್ದರಾಮಯ್ಯ ಅಲ್ಪಸಂಖ್ಯಾತರ ತುಷ್ಟೀಕರಣದ ಪರಮಾವಧಿ ತಲುಪಿದ್ದಾರೆ. ಈಗ ಗುತ್ತಿಗೆಯಲ್ಲಿ ಅಲ್ಪಸಂಖ್ಯಾತರಿಗೆ ವಿಶೇಷವಾಗಿ ಮುಸ್ಲಿಂರಿಗೆ ಶೇ. 4 ರಷ್ಟು ಮೀಸಲಾತಿ ಎನ್ನುತ್ತಿದ್ದಾರೆ. ಸಿದ್ದರಾಮಯ್ಯ ಅವರ ಬುದ್ಧಿ ಮತ್ತು ಡಿಎನ್‌ಎಯಲ್ಲೇ ಬರೀ ಟಿಪ್ಪು ಸುಲ್ತಾನ್ ಇದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಮುಡಾ ಹಗರಣ ಬಯಲಿಗೆ ಬಂದ ನಂತರ ಸಿದ್ದರಾಮಯ್ಯ ಅವರಿಗೆ ಹೆದರಿಕೆ, ಭಯ ಜಾಸ್ತಿಯಾಗಿದೆ. ಇನ್ನು ಇಡಿ ಪ್ರವೇಶದ ನಂತರ ಇನ್ನೂ ಭಯ, ಹೆದರಿಕೆ ಹೆಚ್ಚಾಗಿದೆ. ಅದಕ್ಕಾಗಿಯೇ ಈಗ ಅವರು ನಾಮ, ಬೊಟ್ಟು ಇಟ್ಟುಕೊಳ್ಳುವುದು, ದೇವರ ಮೊರೆ ಹೋಗುವುದು ಜಾಸ್ತಿ ಆಗುವುದು. ಈಗಂತೂ ಯಾರೂ ನಾಮ, ಬೊಟ್ಟು ಇಡದೇ ಹೋದರೂ ಅವರೇ ಇಟ್ಟುಕೊಳ್ಳುತ್ತಿದ್ದಾರೆ ಎಂದು ವ್ಯಂಗ್ಯವಾಡಿದರು.

Advertisement

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹಾಳಾಗಿರುವುದು, ಕೆಟ್ಟಿರುವುದೇ ಅವರ ಹಿಂಬಾಲಕರಿಂದ. ಮುಡಾ ಪ್ರಕರಣದಲ್ಲಿ ಅವರಾಗಿಯೇ 14 ನಿವೇಶನಕ್ಕೆ 62 ಕೋಟಿ ಆಗುತ್ತದೆ ಎಂದು ಹೇಳಿದ್ದಾರೆ. ಅವರು ಹೇಳುವವರೆಗೂ ನಾವು ಲಕ್ಷದ ಲೆಕ್ಕದಲ್ಲೇ ಇದ್ದೆವು. ಸಿದ್ದರಾಮಯ್ಯ ನನ್ನದು ತೆರೆದ ಪುಸ್ತಕ ಎಂದೇ ಹೇಳುತ್ತಿದ್ದರು. ಈಗ ಪುಸ್ತಕ ತೆರೆದರೇ ಬರೀ 14 ಸೈಟ್, 62 ಕೋಟಿ ಎಂದೇ ಕಾಣುತ್ತದೆ. ಅವರೇ 62 ಕೋಟಿ ಎಂದು ಹೇಳಿ ಬೋನಿನಲ್ಲಿ ಸಿಕ್ಕಿಬಿದ್ದಿದ್ದಾರೆ ಎಂದು ತಿಳಿಸಿದರು.

ಕಾಂಗ್ರೆಸ್ ಸರ್ಕಾರ ಹಗರಣಗಳಲ್ಲೇ ಮುಳುಗಿರುವ ಸರ್ಕಾರ. ಉಸಿರಾಡಲಿಕ್ಕೂ ಆಗುತ್ತಿಲ್ಲ. ಹಾಗಾಗಿ ಬೇರೆಯವರ ಬಗ್ಗೆ ಆಪಾದನೆ ಮಾಡುತ್ತಿದೆ. ದೇಶ, ರಾಜ್ಯವನ್ನ 50-60 ವರ್ಷಗಳ ಕಾಲ ಆಡಳಿತ ನಡೆಸಿರುವ ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿನ ಎಲ್ಲಾ ಹಗರಣ, ಭ್ರಷ್ಟಾಚಾರ ಬಯಲು ಮಾಡಿದರೆ ಕಾಂಗ್ರೆಸಿನವರು ಯಾರೂ ಸಹ ಮನೆ ಬಿಟ್ಟು ಹೊರಗಡೆ ಬರದಂತಹ ಸ್ಥಿತಿ ನಿರ್ಮಾಣವಾಗಲಿದೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next