ನಂದೂರ್ಬಾರ್ : ‘ಪ್ರಧಾನಿ ಮೋದಿ ಅವರು ತನ್ನ ಜೀವನದಲ್ಲಿ ಎಂದಿಗೂ ಸಂವಿಧಾನ ಪುಸ್ತಕವನ್ನು ಓದಿಲ್ಲ, ಅದರಲ್ಲಿ ಏನಿದೆ ಎಂದು ಅವರಿಗೆ ತಿಳಿದಿಲ್ಲ.ಆ ಕಾರಣಕ್ಕಾಗಿಯೇ ಕಾಂಗ್ರೆಸ್ ನಾಯಕರು ಪ್ರದರ್ಶಿಸುತ್ತಿರುವ ಕೆಂಪು ಸಂವಿಧಾನ ಪುಸ್ತಕ ಖಾಲಿ ಪುಟಗಳನ್ನು ಒಳಗೊಂಡಿದೆ ಎಂದು ಹೇಳುತ್ತಿದ್ದಾರೆ’ ಎಂದು ಲೋಕಸಭೆಯ ವಿಪಕ್ಷ ನಾಯಕ ರಾಹುಲ್ ಗಾಂಧಿ ಗುರುವಾರ(ನ14) ತೀವ್ರ ವಾಗ್ದಾಳಿ ನಡೆಸಿದ್ದಾರೆ.
ಮಹಾರಾಷ್ಟ್ರದ ನಂದೂರ್ಬಾರ್ನಲ್ಲಿ ನಡೆದ ರ್ಯಾಲಿಯಲ್ಲಿ ಮಾತನಾಡಿದ ರಾಹುಲ್ ಗಾಂಧಿ ”ಬಿಜೆಪಿಯು ಸಂವಿಧಾನ ಮತ್ತು ಭಾರತದ ರಾಷ್ಟ್ರೀಯ ಗೌರವಗಳನ್ನು ಅಗೌರವಗೊಳಿಸುತ್ತಿದೆ. ಸಂವಿಧಾನವು ಭಾರತದ ಆತ್ಮವನ್ನು ಒಳಗೊಂಡಿದೆ ಮತ್ತು ರಾಷ್ಟ್ರೀಯ ಪ್ರತಿಮೆಗಳಾದ ಬಿರ್ಸಾ ಮುಂಡಾ, ಡಾ.ಬಿ.ಆರ್. ಅಂಬೇಡ್ಕರ್ ಮತ್ತು ಮಹಾತ್ಮ ಗಾಂಧಿಯವರು ರೂಪಿಸಿದ ತತ್ವಗಳನ್ನು ಒಳಗೊಂಡಿದೆ” ಎಂದರು.
ಪುಸ್ತಕದ ಕೆಂಪು ಬಣ್ಣಕ್ಕೆ ಬಿಜೆಪಿ ಆಕ್ಷೇಪ ವ್ಯಕ್ತಪಡಿಸಿದೆ. ಬಣ್ಣ ಕೆಂಪು ಅಥವಾ ನೀಲಿಯೋ ಎಂದು ನಾವು ಹೆದರುವುದಿಲ್ಲ. ನಾವು ಸಂವಿಧಾನವನ್ನು ಸಂರಕ್ಷಿಸಲು ಬದ್ಧರಾಗಿದ್ದೇವೆ. ಅದಕ್ಕಾಗಿ ನಮ್ಮ ಪ್ರಾಣ ತ್ಯಾಗ ಮಾಡಲೂ ಸಿದ್ಧರಿದ್ದೇವೆ” ಎಂದು ರಾಹುಲ್ ಗಾಂಧಿ ಗುಡುಗಿದರು.
ಕೇಂದ್ರ ಸರಕಾರ ನಿರ್ಧಾರ ತೆಗೆದುಕೊಳ್ಳುವಲ್ಲಿ ಆದಿವಾಸಿಗಳು, ದಲಿತರು ಮತ್ತು ಹಿಂದುಳಿದ ವರ್ಗಗಳನ್ನು ಸೇರಿಸಬೇಕು. ಸರ್ಕಾರವನ್ನು ನಡೆಸುತ್ತಿರುವ 90 ಅಧಿಕಾರಿಗಳಲ್ಲಿ ಒಬ್ಬರೇ ಆದಿವಾಸಿ ಸಮುದಾಯದವರಿದ್ದಾರೆ” ಎಂದು ರಾಹುಲ್ ಹೇಳಿದರು.ಆದಿವಾಸಿಗಳನ್ನು “ವನವಾಸಿ” ಎಂದು ಉಲ್ಲೇಖಿಸುವ ಬಿಜೆಪಿಯ ಪರಿಭಾಷೆಯನ್ನು ಟೀಕಿಸಿ, ಇದು ಮೂಲಭೂತ ಹಕ್ಕುಗಳಿಲ್ಲದೆ ಅವರನ್ನು ಕಾಡಿನಲ್ಲಿ ನಿರ್ಬಂಧಿಸುವ ಬಯಕೆಯನ್ನು ಪ್ರತಿಬಿಂಬಿಸುತ್ತದೆ ಎಂದರು.”ಆದಿವಾಸಿಗಳು ದೇಶದ ಮೊದಲ ಮಾಲಕರು ಮತ್ತು ಜಲ, ಕಾಡು ಮತ್ತು ಜಮೀನಿನ ಮೇಲೆ ಮೊದಲ ಹಕ್ಕನ್ನು ಹೊಂದಿದ್ದಾರೆ” ಎಂದು ರಾಹುಲ್ ಪ್ರತಿಪಾದಿಸಿದರು.