ಹುಣಸೂರು: ಹುಣಸೂರು ವಿಧಾನಸಭಾ ಕ್ಷೇತ್ರದ ಉಪ ಚುನಾವಣೆಗೆ ಒಟ್ಟಾರೆ 21 ಅಭ್ಯರ್ಥಿಗಳಿಂದ 31 ನಾಮಪತ್ರಗಳು ಸಲ್ಲಿಕೆಯಾಗಿವೆ. ನಾಮಪತ್ರ ಸಲ್ಲಿಸಲು ಅಂತಿಮ ದಿನವಾದ ಸೋಮವಾರ ಒಂದೇ ದಿನ ಬಿಜೆಪಿ ಅಭ್ಯರ್ಥಿ ಎಚ್.ವಿಶ್ವನಾಥ್, ಬಿಎಸ್‌ಪಿ ಅಭ್ಯರ್ಥಿ ಇಮ್ತಿಯಾಜ್ ಅಹಮದ್, ಎಸ್‌ಡಿಪಿಐನ ಎಸ್.ಪುಟ್ಟನಂಜಯ್ಯ, ಮಜಾಜ್ ಅಹಮದ್ ಸೇರಿದಂತೆ ಒಟ್ಟು 10 ಮಂದಿ ತಮ್ಮ ಉಮೇದುವಾರಿಕೆ ಸಲ್ಲಿಸಿದರು.
ಮೆರವಣಿಗೆ: ಬಿಜೆಪಿ ಅಭ್ಯರ್ಥಿ ಎಚ್.ವಿಶ್ವನಾಥ್, ಬಿಎಸ್‌ಪಿ ಅಭ್ಯರ್ಥಿ ಎಸ್‌ಡಿಪಿಐ ಅಭ್ಯರ್ಥಿ ಎಸ್.ಪುಟ್ಟನಂಜಯ್ಯ, ಬಿಎಸ್‌ಪಿ ಅಭ್ಯರ್ಥಿ ಇಮ್ತಿಯಾಜ್ ಅಹಮದ್ ತಮ್ಮ ಬೆಂಬಲಿಗರೊಂದಿಗೆ ಮೆರವಣಿಗೆ ಮೂಲಕ ಬಂದು ನಾಮಪತ್ರಸಲ್ಲಿಸಿದರು. ಉಳಿದವರು ನೇರವಾಗಿ ತಾಲೂಕು ಕಚೇರಿಗೆಗೆ ಆಗಮಿಸಿ ಚುನಾವಣಾಧಿಕಾರಿ ಎಸ್.ಪೂವಿತಾ ಅವರಿಗೆ ತಮ್ಮ ಉಮೇದುವಾರಿಕೆ ಸಲ್ಲಿಸಿದರು.
ವಿಶ್ವನಾಥ್ 2 ಬಾರಿ ನಾಮಪತ್ರ: ಬಿಜೆಪಿ ಬಹಿರಂಗ ಸಭೆಯ ಮಧ್ಯದಲ್ಲೇ ತೆರಳಿದ ಅಭ್ಯರ್ಥಿ ವಿಶ್ವನಾಥ್ ನಾಮಪತ್ರ ಸಲ್ಲಿಸಿ, ಸಭೆಗೆ ಮರಳಿದರು. ನಂತರ ಮಧ್ಯಾಹ್ನ 2ಗಂಟೆಯ ವೇಳೆಗೆ ನಗರಸಭಾ ಮೈದಾನದಿಂದ ತೆರೆದ ವಾಹನದಲ್ಲಿ ಸಚಿವ ಶ್ರೀರಾಮುಲು, ಸಂಸದ ಪ್ರತಾಪಸಿಂಹ, ಶಾಸಕ ಅಪ್ಪಚ್ಚು ರಂಜನ್, ಯೋಜನಾ ಆಯೋಗದ ಉಪಾಧ್ಯಕ್ಷ ಬಿ.ಜೆ.ಪುಟ್ಟಸ್ವಾಮಿ, ಮಾಜಿ ಶಾಸಕರಾದ ಸಿ.ಪಿ.ಯೋಗೀಶ್ವರ್,
ಬಸವರಾಜು, ಜಿಲ್ಲಾಧ್ಯಕ್ಷ ಶಿವಣ್ಣ, ತಾಲೂಕು ಅಧ್ಯಕ್ಷ ಯೋಗಾನಂದ ಕುಮಾರ್, ಕೌಲನಹಳ್ಳಿ ಸೋಮಶೇಖರ್, ಮುಖಂಡರು ಹಾಗೂ ಅಪಾರ ಕಾರ್ಯಕರ್ತರೊಂದಿಗೆ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ನಡೆಸಲಾಯಿತು. ಬಳಿಕ ಎಚ್.ವಿಶ್ವನಾಥ್ ಅವರು, ಸಚಿವ ಶ್ರೀರಾಮುಲು, ಸಂಸದ ಪ್ರತಾಪಸಿಂಹ, ಶಾಸಕ ಅಪ್ಪಚ್ಚು ರಂಜನ್, ಜಿಲ್ಲಾಧ್ಯಕ್ಷ ಶಿವಣ್ಣಜೊತೆೆ ತೆರಳಿ ಮತ್ತೂಮ್ಮೆ ಚುನಾವಣಾಧಿಕಾರಿಗೆ ನಾಮಪತ್ರ ಸಲ್ಲಿಸಿದರು.
ಎಸ್‌ಡಿಪಿಐ: ನಗರದ ಕೋರ್ಟ್ ವೃತ್ತದಿಂದ ಎಸ್‌ಡಿಪಿಐ ಅಭ್ಯರ್ಥಿ ಎಸ್.ಪುಟ್ಟನಂಜಯ್ಯ, ರಾಜ್ಯಾಧ್ಯಕ್ಷ ಮಹಮದ್ ಇಲಿಯಾಸ್ ತುಂಬೆ, ಮಡಿಕೇರಿ ಜಿಲ್ಲಾಧ್ಯಕ್ಷ ಅಬುಬುಕರ್, ರಾಜ್ಯ ಕಾರ್ಯದರ್ಶಿ ಅಜರ್, ಪ್ರಧಾನ ಕಾರ್ಯದರ್ಶಿ ಕುಮಾರಸ್ವಾಮಿ, ಜಿಲ್ಲಾಧ್ಯಕ್ಷ ಯೋನಸ್, ತಾಲೂಕು ಅಧ್ಯಕ್ಷ ಅಕ್ಮಲ್ ಸೇರಿದಂತೆ ಸಾವಿರಕ್ಕೂ ಹೆಚ್ಚು ಕಾರ್ಯಕರ್ತರೊಡಗೂಡಿ ಮೆರವಣಿಗೆಯಲ್ಲಿ ತಾಲೂಕು ಕಚೇರಿಗೆ ತೆರಳಿ ನಾಮಪತ್ರ ಸಲ್ಲಿಸಿದರು.
ಬಿಎಸ್‌ಪಿ: ನಗರದ ಕಲ್ಪತರು ವೃತ್ತದಿಂದ ಬಿಎಸ್‌ಪಿ ಅಭ್ಯರ್ಥಿ ಇಮ್ತಿಯಾಜ್ ಅಹಮದ್ ಜಿಲ್ಲಾ ಕಾರ್ಯದರ್ಶಿ ಪ್ರಸನ್ನ, ತಾಲೂಕು ಅಧ್ಯಕ್ಷ ಭರತ್‌ಕುಮಾರ್ ಮತ್ತಿತರರೊಂದಿಗೆ ಪ್ರಮುಖ ವೃತ್ತಗಳಲ್ಲಿ ಪಟಾಕಿ ಸಿಡಿಸುತ್ತಾ ಮೆರವಣಿಗೆಯಲ್ಲಿ ತೆರಳಿ ಚುನಾವಣಾಧಿಕಾರಿಗಳಿಗೆ ನಾಮಪತ್ರ ಸಲ್ಲಿಸಿದರು. ಹುಣಸೂರು ನಗರದಲ್ಲಿ ಒಂದೇದಿನ ವಿವಿಧ ಪಕ್ಷಗಳವರು, ಪಕ್ಷೇತರರು ನಾಮಪತ್ರಸಲ್ಲಿಕೆಯಿಂದಾಗಿ ಜನರಿಂದ ತುಂಬಿ ಹೋಗಿತ್ತು.
ಅಭ್ಯರ್ಥಿ ಹೆಸರು ಪಕ್ಷ
ಎಚ್.ಪಿ.ಮಂಜುನಾಥ್ ಕಾಂಗ್ರೆಸ್
ಎಚ್.ವಿಶ್ವನಾಥ್ ಬಿಜೆಪಿ
ದೇವರಹಳ್ಳಿ ಸೋಮಶೇಖರ್ ಜೆಡಿಎಸ್
ಇಮ್ತಿಯಾಜ್ ಅಹಮದ್ ಬಿಎಸ್‌ಪಿ
ತಿಮ್ಮಾಬೋವಿ ಕೆಆರ್‌ಎಸ್
ಸಿ.ಪಿ.ದಿವಾಕರ್ ಉತ್ತಮ ಪ್ರಜಾಕೀಯ
ಎಸ್.ಜಗದೀಶ್ ಕೆಜೆಪಿ
ಎಸ್.ಪುಟ್ಟನಂಜಯ್ಯ, ಮಜಾಜ್ ಅಹಮದ್ ಎಸ್‌ಡಿಪಿಐ
ಪಕ್ಷೇತರ ಅಭ್ಯರ್ಥಿಗಳು
ಸತ್ಯನಾರಾಯಣ್
ವೆಂಕಟೇಶ್ ಡಿ.ನಾಯಕ್
ಉಮೇಶ
ರೇವಣ್ಣ
ಪ್ರೇಮಕುಮಾರ್
ಜೆ.ಎನ್.ಹರೀಶ
ದೇವರಾಜ್
ಕರಿಯಪ್ಪ
ಶಬ್ಬೀರ್ ಅಹಮದ್‌ಖಾನ್
ಸುಬ್ಬಯ್ಯ
ಯಡಿಯೂರಪ್ಪ
ಗುರುಲಿಂಗಯ್ಯ