ಮಂಡ್ಯ: ಮಗನ ಚುನಾವಣೆಗಾಗಿ ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಅವರು ವಿವಿಧ ಕಂಪೆನಿಗಳಿಂದ ಸಾವಿರಾರು ಕೋಟಿ ರೂ. ಪಡೆದಿರುವ ಮಾಹಿತಿ ಇದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎನ್. ಚಲುವರಾಯಸ್ವಾಮಿ ಸುದ್ದಿಗಾರರಿಗೆ ತಿಳಿಸಿದರು.
ಚನ್ನಪಟ್ಟಣ ಉಪಚುನಾವಣೆಯಲ್ಲಿ ಎಷ್ಟು ಖರ್ಚಾಗಿದೆ ಗೊತ್ತಾ? ಜೆಡಿಎಸ್-ಬಿಜೆಪಿಯವರನ್ನೇ ಕೇಳ ಬೇಕು. ಅವರ ಜತೆ ನಾವು ಓಡಲು ಆಗಲಿಲ್ಲ. ನಮ್ಮ ಬಳಿ ಹಣ ಇಲ್ಲ; ಗ್ಯಾರಂಟಿ ಕೊಟ್ಟಿದ್ದೇವೆ ಕೈ ಹಿಡಿಯಿರಿ ಎಂದು ಜನರ ಬಳಿ ಹೋಗಿದ್ದೇವೆ. ದುಡ್ಡಿನಲ್ಲಿ ಅವರ ಜತೆ ಹೋರಾಡಲು ನಮಗೆ ಆಗಲಿಲ್ಲ ಎಂದರು.
ಕೇಂದ್ರ ಸಚಿವ ಕುಮಾರಸ್ವಾಮಿ ಅವರಿಗೆ ಕಡತಗಳ ಮೇಲೆ ಬೇರೆ ಸಮಯದಲ್ಲಿ ಹಣ ಸಿಗುತ್ತದೋ, ಇಲ್ಲವೋ ಗೊತ್ತಿಲ್ಲ. ಮಗನ ಚುನಾವಣೆ…ಮಗನ ಚುನಾವಣೆ… ಎಂದು ಸಾಕಷ್ಟು ಕಂಪೆನಿಗಳ ಮೂಲಕ ಸಾವಿರಾರು ಕೋಟಿ ರೂ. ಗಿಫ್ಟ್ ಪಡೆದಿರುವುದು ಮಾತ್ರ ಸತ್ಯ ಎಂದು ಹೇಳಿದರು.
ಜೋಶಿಗೆ ತಾಕತ್ ಜಾಸ್ತಿ; ನಮಗೆ ಕಡಿಮೆ: ಸಚಿವ
ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಅವರಿಗೆ ತಾಕತ್ ಜಾಸ್ತಿ ಇದೆ. ನಮಗೆ ಸ್ವಲ್ಪ ಕಡಿಮೆ. ಮೊದಲು ಅವರು ಹೇಳಿರುವುದಕ್ಕೆಲ್ಲ ಸಾಕ್ಷಿ ಬಿಡುಗಡೆ ಮಾಡಲಿ ಎಂದು ಸಚಿವ ಚಲುವರಾಯಸ್ವಾಮಿ ಸವಾಲು ಹಾಕಿದರು.
ಸುದ್ದಿಗಾರರ ಜತೆ ಮಾತನಾಡಿ, ಕೋಟಿ ರೂ. ಆಫರ್ ಆರೋಪಕ್ಕೆ ತಾಕತ್ ಇದ್ದರೆ ಸಾಕ್ಷಿ ಬಿಡುಗಡೆ ಮಾಡಲಿ ಎಂಬ ಪ್ರಹ್ಲಾದ್ ಜೋಶಿ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ಮೊದಲು ಅವರು ಹೇಳಿರುವುದಕ್ಕೆಲ್ಲ ಸಾಕ್ಷಿ ಬಿಡುಗಡೆ ಮಾಡಲಿ. ತಾಕತ್ ಕಡಿಮೆ ಇರೋ ನಾವು ನಿಧಾನವಾಗಿ ಬಿಡುಗಡೆ ಮಾಡುತ್ತೇವೆ ಎಂದು ತಿರುಗೇಟು ನೀಡಿದರು.