Advertisement

ಕಾಮಗಾರಿ ಅವ್ಯವಹಾರ, ಎಂಬಿ ಪುಸ್ತಕ ತಿದ್ದುಪಡಿ, ಗ್ರಾಮಸ್ಥರ ಆಕ್ರೋಶ

11:21 PM Jul 07, 2019 | Sriram |

ಸಿದ್ದಾಪುರ: ಪಂಚಾಯತ್‌ ರಾಜ್‌ ಇಲಾಖೆಯ ಇಂಜಿನಿಯರ್‌ ವಿವಿಧ ಕಾಮಗಾರಿಗಳ ಎಂಬಿ (ಅಳತೆ ಪುಸ್ತಕ) ಪುಸ್ತಕ ತಿದ್ದಿದ್ದಾರೆ. ಅಲ್ಲದೆ ಬಹುತೇಕ ಕಾಮಗಾರಿ ಅವೈಜ್ಞಾನಿಕವಾಗಿದ್ದು, ಅವ್ಯವಹಾರ ನಡೆದಿದೆ ಎನ್ನುವ ಗ್ರಾಮಸ್ಥರ ಆರೋಪಕ್ಕೆ ಗ್ರಾಮಸ್ಥರ, ಜನಪ್ರತಿನಿಧಿಗಳ ಹಾಗೂ ಅಧಿಕಾರಿಗಳ ನಡುವೆ ಮಾತಿನ ಚಕಮಕಿ ಸಿದ್ದಾಪುರ ಗ್ರಾಮಸಭೆಯಲ್ಲಿ ನಡೆಯಿತು.

Advertisement

ಪಂ. ಸಭಾಂಗಣದಲ್ಲಿ ನಡೆದ ಗ್ರಾ. ಪಂ.ನ 2019-20ರ ಸಾಲಿನ ಪ್ರಥಮ ಗ್ರಾಮಸಭೆಯಲ್ಲಿ ಗ್ರಾಮಸ್ಥರಿಂದ ಹಾಗೂ ಸದಸ್ಯರಿಂದ ಪಂಚಾಯತ್‌ ಎಂಬಿ ಪುಸ್ತಕ ತಿದ್ದಲಾಗಿದೆ ಎನ್ನುವ ಆರೋಪ ಕೇಳಿಬಂದು ಗದ್ದಲ ಏರ್ಪಟ್ಟು, ಎಂಜಿನಿಯರ್‌ ವಿರುದ್ದ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು ಎಂಬ ಕೂಗು ಕೇಳಿಬಂತು.

ಗ್ರಾಮಸ್ಥರಾದ ಸುದರ್ಶನ್‌ ಶೆಟ್ಟಿ ಅವರು ತಿದ್ದಲಾದ ಎಂಬಿ ಪ್ರತಿಯನ್ನು ಸಭೆಗೆ ತೋರಿಸಿ, ಪಂಚಾಯತ್‌ ರಾಜ್‌ ಇಲಾಖೆಯಿಂದ ನಡೆದ ವಿವಿಧ ಕಾಮಗಾರಿಗಳಲ್ಲಿ ಅವ್ಯವಹಾರ ನಡೆದಿದೆ. ಇಲಾಖೆಯ ಇಂಜಿನಿಯರ್‌ ಕೇಶವ ಗೌಡ ಅವರು ಎಂಬಿ ಪುಸ್ತಕದಲ್ಲಿ ಬರೆದಿರುವುದನ್ನು ತಿದ್ದಿರುವುದು ಸ್ಪಷ್ಟವಾಗಿ ಕಾಣುತ್ತಿದೆ. ಕಾಮಗಾರಿಯ ಆಯವ್ಯಯ ಸೂಚಿಸುವ ಪುಸ್ತಕ ತಿದ್ದುವಂತಿಲ್ಲ. ಆದರೂ ಸಹ ಕಾಮಗಾರಿಯ ಮೊತ್ತ ತಿದ್ದಿರುವುದು ಅವ್ಯವಹಾರ ನಡೆದಿದೆ ಎನ್ನುವುದಕ್ಕೆ ಪುರಾವೆಯಂತಿದೆ. ಈ ಕೃತ್ಯವೆಸಗಿದ ಅಧಿಕಾರಿಯ ವಿರುದ್ದ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು. ಇದಕ್ಕೆ ಗ್ರಾ. ಪಂ. ಸದಸ್ಯ ಮಂಜುನಾಥ ಕುಲಾಲ ಅವರು ಕೂಡ ಧ್ವನಿಗೂಡಿಸಿ, ಕಾಮಗಾರಿಯಲ್ಲಿ ಅವ್ಯವಹಾರ ನಡೆದಿದೆ. ಆದ್ದರಿಂದ ಎಂಬಿ ಪುಸ್ತಕವನ್ನು ತಿದ್ದಿದ್ದಾರೆ ಎಂದು ಆರೋಪಿಸಿದರು.

ಮಧ್ಯೆ ಪ್ರವೇಶಿಸಿದ ಜಿ. ಪಂ. ಸದಸ್ಯ ರೋಹಿತ್‌ಕುಮಾರ ಶೆಟ್ಟಿ ಅವರು ಪಂಚಾಯತ್‌ರಾಜ್‌ ಎಂಜಿನಿಯರ್‌ ಕೇಶವ ಗೌಡ ಅವರನ್ನು ತರಾಟೆಗೆ ತೆಗೆದುಕೊಂಡರು. ಸಿದ್ದಾಪುರ ಗ್ರಾ.ಪಂ. ವಿವಿಧ ಕಾಮಗಾರಿಗಳ ಎಂಬಿ ಪುಸ್ತಕ ತಿದ್ದಿರುವ ಕುರಿತು ತನಿಖೆ ನಡೆಸಿ ಅವರ ಮೇಲೆ ಕಾನೂನು ಕ್ರಮಕೈಗೊಳ್ಳುವುದಕ್ಕೆ ಅಗತ್ಯವಿರುವಂತೆ ಜಿ.ಪಂ. ಸಭೆಯಲ್ಲಿ ನಿರ್ಣಯ ಕೈಗೊಳ್ಳುವ ಭರವಸೆ ನೀಡಿದ ನಂತರ ಪ್ರಕರಣ ತಿಳಿಯಾಯಿತು.

ಬೋರ್ಡ್‌ ಅಳವಡಿಸಿ
ಗ್ರಾಮ ಪಂಚಾಯತ್‌ ವ್ಯಾಪ್ತಿಯಲ್ಲಿ ಹಾದುಹೋಗುವ ಬಹುತೇಕ ರಸ್ತೆಗಳು ಅರಣ್ಯ ಪ್ರದೇಶದ ವ್ಯಾಪ್ತಿಯಲ್ಲಿವೆ. ಅಲ್ಲದೆ ಅರಣ್ಯ ಇಲಾಖೆ ತಡೆಬೇಲಿ ನಿರ್ಮಿಸಿಲ್ಲ. ಪ್ರಾಣಿಗಳು ರಸ್ತೆಯನ್ನು ಆಗಾಗ್ಗೆ ಹಾದು ಹೋಗುತ್ತಿರುತ್ತವೆ. ರಸ್ತೆಯ ಮೇಲೆ ವಾಹನ ಸಂಚರಿಸುವಾಗ ಪ್ರಾಣಿಗಳು ಬಂದು ವಾಹನದ ಮೇಲೆ ಬಿದ್ದರೂ ಸಹ ವಾಹನ ಸವಾರರ ಮೇಲೆ ಪ್ರಕರಣ ದಾಖಲಿಸುವುದು ಯಾವ ನ್ಯಾಯ? ಎಂದು ಗ್ರಾಮಸ್ಥರಾದ ಹರ್ಷ ಅವರು ಪ್ರಶ್ನಿಸಿದಾಗ ಅರಣ್ಯ ಪ್ರದೇಶದ ವ್ಯಾಪ್ತಿಯಲ್ಲಿ ವಾಹನ ಸಂಚಾರಕ್ಕೆ ವೇಗದ ಮಿತಿ 40 ಕಿ.ಮೀ ಆಗಿದೆ ಎಂದು ಅರಣ್ಯ ಇಲಾಖೆ ಅಧಿಕಾರಿಗಳು ಉತ್ತರಿಸಿದರು. ಈ ಕುರಿತು ಎಲ್ಲಿಯೂ ನೀವು ಬೋರ್ಡ್‌ ಅಳವಡಿಸಿಲ್ಲ ಎಂದು ಗ್ರಾಮಸ್ಥರು ಆರೋಪಿಸಿದಾಗ ಬೋರ್ಡ್‌ ಅಳವಡಿಸಲು ಕ್ರಮ ಕೈಗೊಳ್ಳಲಾಗುತ್ತಿದೆ ಎಂದರು.

Advertisement

ಸಿದ್ದಾಪುರ ಪೇಟೆಯಲ್ಲಿರುವ ಅಂಗನವಾಡಿ ಕೇಂದ್ರದಲ್ಲಿ ಮಕ್ಕಳ ಸಂಖ್ಯೆ ಅಧಿಕವಾಗಿದೆ. ಅವರಿಗೆ ಕುಳಿತುಕೊಳ್ಳಲು ಸಾಧ್ಯವಿಲ್ಲದ ಪರಿಸ್ಥಿತಿ ನಿರ್ಮಾಣವಾಗಿದ್ದರೂ ಇಲಾಖೆಯಿಂದ ಯಾವುದೇ ಕ್ರಮಕೈಗೊಂಡಿಲ್ಲ ಎಂದು ಗ್ರಾಮಸ್ಥರು ಆಕ್ಷೇಪಿಸಿದರು. ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಮೇಲ್ವಿಚಾರಕಿ ಲಲಿತಾ ಅವರು ಪ್ರತಿಕ್ರಿಯಿಸಿ, 2009-10ನೇ ಸಾಲಿನಲ್ಲಿ ಅಂಗನವಾಡಿ ಕಟ್ಟಡ ನಿರ್ಮಾಣವಾಗಿದೆ. ಹೊಸ ಕಟ್ಟಡ ತೆರೆಯಲು ಅವಕಾಶವಿಲ್ಲ. ಮಕ್ಕಳ ಬೇಡಿಕೆಗೆ ಅನುಗುಣವಾಗಿ ಅಂಗನವಾಡಿ ಕೇಂದ್ರ ತೆರೆಯಲು ಅವಕಾಶ ಕಲ್ಪಿಸಬೇಕು ಎಂದು ನಿರ್ಣಯ ಮಾಡಿ ಕಳುಹಿಸಿದರೆ ಮುಂದಿನ ಕ್ರಮ ಕೈಗೊಳ್ಳಬಹುದು ಎಂದರು.

ಸಮಸ್ಯೆ ಹಾಗೂ ಬೇಡಿಕೆಗಳು
ಭಾಗ್ಯಲಕ್ಷ್ಮೀ ಯೋಜನೆಗೆ ಅಳಿಯಕಟ್ಟು ತೊಡಕು, ಕುಡಿಯುವ ನೀರಿನ ಸಮಸ್ಯೆ, ಕಾಡುಪ್ರಾಣಿಗಳ ಸಮಸ್ಯೆ, ಮೆಸ್ಕಾಂ ಇಲಾಖೆಯ ಕಾರ್ಯವೈಖರಿಯ ಬಗ್ಗೆ ಅಸಮಾಧಾನ, ರಸ್ತೆ ಬದಿಯ ಅಪಾಯಕಾರಿ ಮರ ತೆರವುಗೊಳ್ಳಿಸುವ ಬಗ್ಗೆ, ಸಂತೆ ಮಾರ್ಕೆಟ್ ಅವ್ಯವಸ್ಥೆ ಹಾಗೂ ಸ್ವಚ್ಛಗೊಳಿಸದ ಬಗ್ಗೆ, ಮುಖ್ಯರಸ್ತೆಯಿಂದ ಸೂರಾಲು ಪರಿಶಿಷ್ಟ ಜಾತಿ ಮನೆಗಳಿಗೆ ಹೋಗುವ ಪೈಪ್‌ಲೈನ್‌ ಕಳಪೆ ಕಾಮಗಾರಿಯ ಬಗ್ಗೆ, ಸಿದ್ದಾಪುರ ಪೇಟೆಯ ನೀರು ವಡ್ಡರಕೆರೆ ಹೋಗುವ ಚರಂಡಿಗೆ 3 ಲಕ್ಷರೂ. ವೆಚ್ಚದ ಕಾಮಗಾರಿಯಲ್ಲಿ ಅವ್ಯವಹಾರದ ಬಗ್ಗೆ ಚರ್ಚೆ ನಡೆಯಿತು.

ಕುಡಿಯುವ ನೀರಿಗಾಗಿ 7 ಲಕ್ಷ ರೂ.ಖರ್ಚು ಮಾಡಿದ್ದೀರಿ, ಜನರಿಗೆ 3-4 ದಿನಗಳಿಗೊಮ್ಮೆ 200 ಲೀ. ಮಾತ್ರ ನೀರು ಕೊಟ್ಟಿದ್ದೀರಿ, ಸಿದ್ದಾಪುರ ಬಸ್‌ ನಿಲ್ದಾಣದಲ್ಲಿ ಖಾಸಗಿ ಬಸ್‌ ನಿಲ್ಲಿಸುತ್ತಿರುವ ಬಗ್ಗೆ, ಬೆಂಗಳೂರಿಗೆ ತೆರಳುವ ಬಸ್‌ಗಳು ಬಸ್‌ ನಿಲ್ದಾಣಕ್ಕೆ ಹೋಗದೆ ಮುಖ್ಯರಸ್ತೆಯಲ್ಲಿ ನಿಂತು ಪ್ರಯಾಣಿಕರನ್ನು ಹತ್ತಿಸುವುದರಿಂದ ಸಾರ್ವಜನಿಕರಿಗೆ ಆಗುವ ತೊಂದರೆ, ಬೀದಿದೀಪದ ಸಮಸ್ಯೆ, ಡೀಮ್ಡ್ ಫಾರೆಸ್ಟ್‌ ಹೀಗೆ ಮುಂತಾದ ಸಮಸ್ಯೆ ಬಗ್ಗೆ ಗ್ರಾಮಸ್ಥರಾದ ಭಾಸ್ಕರ್‌ ಶೆಟ್ಟಿ, ನಾಗರಾಜ, ಭುಜಂಗ ಶೆಟ್ಟಿ, ನಾಗರಾಜ ಭಟ್, ಹರ್ಷ, ಭಾಸ್ಕರ, ಶೇಖರ ಕೊಟ್ಯಾನ್‌ ಮುಂತಾದವರು ಸಭೆಯ ಗಮನಕ್ಕೆ ತಂದರು.

ಸಿದ್ದಾಪುರ ಪ್ರೌಢಶಾಲೆಯ ಮುಖ್ಯ ಶಿಕ್ಷಕ ಶೈಲೇಂದ್ರನಾಥ ಮಾರ್ಗದರ್ಶಿ ಅಧಿಕಾರಿಯಾಗಿ ಭಾಗವಹಿಸಿ, ಇಲಾಖೆಯ ಮಾಹಿತಿ ನೀಡಿದ್ದರು.

ಗ್ರಾ. ಪಂ. ಅಧ್ಯಕ್ಷೆ ಸರೋಜಿನಿ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು.ಉಪಾಧ್ಯಕ್ಷ ಭರತ್‌ ಕಾಮತ್‌, ಸದಸ್ಯರಾದ ಕೆ. ಸತೀಶ ಕುಮಾರ ಶೆಟ್ಟಿ ಕಡ್ರಿ, ಪ್ರದೀಪ ಹೆಗ್ಡೆ, ಶೇಖರ ಕುಲಾಲ, ವೈ. ಸದಾನಂದ ಶೆಟ್ಟಿ, ಮಂಜುನಾಥ ಕುಲಾಲ, ಗೋಪಾಲ ಶೆಟ್ಟಿ, ಕೃಷ್ಣ ಪೂಜಾರಿ, ರೂಪಾ, ಜ್ಯೋತಿ ಶೆಟ್ಟಿ, ನೇತ್ರಾವತಿ, ಮಾಲತಿ, ಜಲಜಾ ಪೂಜಾರಿ, ಪ್ರೇಮಾ, ಜಲಜಾ ಶೆಟ್ಟಿ, ಸಿದ್ದಾಪುರ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ| ದೀಕ್ಷಾ, ತೋಟಗಾರಿಕೆ ಇಲಾಖೆಯ ಉಮೇಶ್‌, ಅರಣ್ಯ ಇಲಾಖೆಯ ಹರೀಶ್‌, ಕೃಷಿ ಇಲಾಖೆಯ ರಘುರಾಮ ಶೆಟ್ಟಿ, ಗ್ರಾಮಲೆಕ್ಕಿಗ ಚಂದ್ರಶೇಖರಮೂರ್ತಿ, ಮಹಿಳಾ ಮತ್ತು ಶಿಶು ಕಲ್ಯಾಣ ಇಲಾಖೆಯ ಮೇಲ್ವಿಚಾರಕಿ ಲಲಿತಾ, ಪಂಚಾಯತ್‌ರಾಜ್‌ ಇಲಾಖೆಯ ಎಂಜಿನಿಯರ್‌ ಕೇಶವ ಗೌಡ, ಪಶು ಸಂಗೋಪನೆ ಇಲಾಖೆಯ ಸಂಪನ್ನ ಶೆಟ್ಟಿ, ಪೊಲೀಸ್‌ ಇಲಾಖೆ ಮತ್ತಿತರರು ಉಪಸ್ಥಿತರಿದ್ದರು.

ಅಭಿವೃದ್ಧಿ ಅಧಿಕಾರಿ ಸತೀಶ ನಾಯ್ಕ ಅವರು ಸ್ವಾಗತಿಸಿದರು. ಕಾರ್ಯದರ್ಶಿ ರವೀಂದ್ರನಾಥ ರಾವ್‌ ಕಾರ್ಯಕ್ರಮ ನಿರೂಪಿಸಿದರು.

ಪಿಡಿಒ ತರಾಟೆ
ಎಂಬಿ ಪುಸ್ತಕ ಕಾಪಿ ಗ್ರಾಮಸ್ಥರ ಕೈಗೆ ಹೇಗೆ ಹೋಗಿದೆ. ಗ್ರಾಮಸ್ಥರು ಮಾಹಿತಿ ಹಕ್ಕು ಅಡಿಯಲ್ಲಿ ಕೇಳಿದರೆ ಮಾತ್ರ ಎಂಬಿ ಪ್ರತಿಯನ್ನು ಕೊಡಬಹುದು. ಮಾಹಿತಿ ಹಕ್ಕು ಅಡಿಯಲ್ಲಿ ಗ್ರಾಮಸ್ಥರು ಕೇಳದೆ ಹೇಗೆ ಕೊಟ್ಟಿದ್ದೀರಿ ಎಂದು ರೋಹಿತ್‌ಕುಮಾರ ಶೆಟ್ಟಿ ಅವರು ಪಂಚಾಯತ್‌ ಅಭಿವೃದ್ಧಿ ಅಧಿಕಾರಿ ಸತೀಶ ನಾಯ್ಕ ಅವರನ್ನು ತರಾಟೆಗೆ ತೆಗೆದುಕೊಂಡರು.

Advertisement

Udayavani is now on Telegram. Click here to join our channel and stay updated with the latest news.

Next