ಬೈಕಂಪಾಡಿ: ರಾಜ್ಯದ ಎರಡನೆಯ ಅತೀ ದೊಡ್ಡ ಕೈಗಾರಿಕಾ ವಲಯ ಇರುವ ಬೈಕಂಪಾಡಿ ಜಂಕ್ಷನ್, ಕೈಗಾರಿಕಾ ರಸ್ತೆ ಮುಂಭಾಗ ಬಸ್ ನಿಲ್ದಾಣವಿಲ್ಲದೆ ಕಾರ್ಮಿಕರು ಬಸ್‌ಗಾಗಿ ತಾಸುಗಟ್ಟಲೆ ನಿಂತೇ ಕಾಯಬೇಕಾದ ಸ್ಥಿತಿಯಿದೆ.
ರಾಷ್ಟ್ರೀಯ ಹೆದ್ದಾರಿ ಆದ ಬಳಿಕ ಇಲ್ಲಿ ಸುಸಜ್ಜಿತ ಬಸ್ ನಿಲ್ದಾಣ ನಿರ್ಮಾಣ ಮಾಡುವಲ್ಲಿ ಸಂಪೂರ್ಣ ಎಡವಿದೆ. ಮಂಗಳೂರು ಮಹಾನಗರ ಪಾಲಿಕೆಯೂ ಸ್ಥಳಾವಕಾಶದ ಕೊರತೆಯಿಂದ ಬಸ್ ನಿಲ್ದಾಣ ನಿರ್ಮಾಣಕ್ಕೆ ಮುಂದಾಗಿಲ್ಲ. ಮಳೆ, ಬಿಸಿಲಿಗೆ ರಸ್ತೆ ಬದಿ ಕಾಯುತ್ತಾ ನಿಲ್ಲುವ ಕಾರ್ಮಿಕ ಬವಣೆಗೆ ಇದುವರೆಗೆ ಯಾವುದೇ ಸ್ಪಂದನೆ ದೊರಕಿಲ್ಲ.
ಹೀಗಾಗಿ ಎಲ್ಲೆಂದರಲ್ಲಿ ಬಸ್‌ಗಳನ್ನು ದಿಢೀರ್ ಆಗಿ ನಿಲ್ಲಿಸಲಾಗುತ್ತಿದ್ದು, ಇತರ ವಾಹನ ಚಾಲಕರಿಗೂ ಇದರಿಂದ ಗೊಂದಲವಾಗುತ್ತಿದೆ. ಬೈಕಂಪಾಡಿ ಜಂಕ್ಷನ್ ಹಾಗೂ ಕೈಗಾರಿಕಾ ಪ್ರಾಂಗಣಕ್ಕೆ ಹೋಗುವ ದೀಪಕ್ ಪೆಟ್ರೋಲ್ ಬಂಕ್ ಮುಂಭಾಗ ಒಟ್ಟು ಎರಡು ಸುಸಜ್ಜಿತ ಬಸ್ ನಿಲ್ದಾಣ, ಕುಡಿಯುವ ನೀರಿನ ಸೌಲಭ್ಯ ಅಗತ್ಯವಿದೆ.
ಈ ಭಾಗದಲ್ಲಿ ಕೈಗಾರಿಕಾ ಪ್ರಾಂಗಣ ಹಾಗೂ ಸುತ್ತಮುತ್ತ ಲಾರಿಗಳ ಚಾಲಕರ ಸಮೂಹ ನಿತ್ಯವೂ ಇದ್ದು ಸೂಕ್ತ ಸಾರ್ವಜನಿಕ ಶೌಚಾಲಯದ ಕೊರತೆಯೂ ಕಾಡುತ್ತಿದೆ. ಬಹಿರ್ದೆಸೆಗಾಗಿ ಇಲ್ಲಿನ ರೈಲು ಹಳಿಯ ಸುತ್ತಮುತ್ತ ಇರುವ ಪೊದೆಗಂಟಿಗಳನ್ನು ಅವಲಂಬಿಸಬೇಕಾಗಿದೆ. ಬೈಕಂಪಾಡಿ ಜಂಕ್ಷನ್ ನಲ್ಲಿ ನವಮಂಗಳೂರು ಬಂದರಿನ 30 ಸೆಂಟ್ಸ್ ಜಾಗವಿದ್ದು ಇಲ್ಲಿ ಬಸ್ ನಿಲ್ದಾಣ ನಿರ್ಮಾಣಕ್ಕೆ ಅವಕಾಶವಿದೆ. ಈ ಜಾಗವನ್ನು ಸಮತಟ್ಟುಗೊಳಿಸಿ ಮಂಗಳೂರು ಮಹಾನಗರ ಪಾಲಿಕೆ ಬಸ್ ನಿಲ್ದಾಣವನ್ನ ನಿರ್ಮಿಸಬಹುದಾಗಿದೆ. ಬಂದರು ಈಗಾಗಲೇ ಬಸ್ ನಿಲ್ದಾಣಕ್ಕೆ ಈ ಜಾಗವನ್ನು ಮೀಸಲಿರಿಸಿದೆ.
ಬೈಕಂಪಾಡಿ ಜಂಕ್ಷನ್‌ನಲ್ಲಿ ಸರ್ವಿಸ್ ರಸ್ತೆ ಇಲ್ಲ . ಹೀಗಾಗಿ ಜನರು ಹೆದ್ದಾರಿ ಬದಿಯೇ ನಡೆದಾಡುವಂಥಾಗಿದ್ದು ದಿನನಿತ್ಯ ಸಣ್ಣಪುಟ್ಟ ಅಪಘಾತಗಳ ಸರಮಾಲೆ ನಡೆಯುತ್ತಿದೆ. ಪಾದಾಚಾರಿ ದಾಟುವಿಕೆ, ಮಳೆ, ಗಾಳಿಗೆ ರಕ್ಷಣೆಯನ್ನು ಒದಗಿಸುವಂತಹ ಬಸ್ ನಿಲ್ದಾಣ ನಿರ್ಮಿಸುವ ಬಗ್ಗೆ ಸಾರ್ವಜನಿಕರ ಬೇಡಿಕೆಯಿದೆ. ಈ ಬಗ್ಗೆ ಶಾಸಕರು ಹಾಗೂ ಆಯುಕ್ತರಲ್ಲಿ ಚರ್ಚಿಸುತ್ತೇನೆ. –
ಸುಮಿತ್ರ ಕರಿಯ, ಸ್ಥಳೀಯ ಮನಪಾ ಸದಸ್ಯರು