Advertisement

ಆಧುನಿಕ ಕೃಷಿ ಮಾಹಿತಿಗೆ ಕೃಷಿ ಮೇಳಕ್ಕೆ ಬನ್ನಿ

12:11 PM Jan 21, 2017 | |

ತಿ.ನರಸೀಪುರ: ಪಟ್ಟಣದಲ್ಲಿ  ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆ ಹಾಗೂ ವಿವಿಧ ಸಂಘ ಸಂಸ್ಥೆಗಳ ಸಹಕಾರದೊಂದಿಗೆ ಮೊದಲ ಬಾರಿಗೆ ಶನಿವಾರ ಹಾಗೂ ಭಾನುವಾರ ತಾಲೂಕು ಮಟ್ಟದ ಕೃಷಿ ಉತ್ಸವ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ.

Advertisement

ಮೈಸೂರು ಮುಖ್ಯರಸ್ತೆಯ ತಿರುಮಕೂಡಲು ಬಳಿ ಸುಮಾರು 6 ಎಕರೆ ಪ್ರದೇಶದಲ್ಲಿ ಕೃಷಿ ಉತ್ಸವಕ್ಕೆ ಸಕಲ ಸಿದ್ಧತೆಗಳು ಭರದಿಂದ ಸಾಗುತ್ತಿವೆ. ಎರಡು ದಿನಗಳ ಕಾಲ ನಡೆವ ಕೃಷಿ ಉತ್ಸವದಲ್ಲಿ ಆಧುನಿಕ ಕೃಷಿ ಬೇಸಾಯ ಪದ್ಧತಿ, ತಾಂತ್ರಿಕತೆ, ಉಪಕರಣ ಕುರಿತು ಗ್ರಾಮೀಣ ಪ್ರದೇಶದ ರೈತರು ಹಾಗೂ ಮಹಿಳಾ ಸ್ವಸಹಾಯದ ಸಂಘದ ಮಹಿಳೆಯರಿಗೆ ಅರಿವು ಮೂಡಿಸುವ ನಿಟ್ಟಿನಲ್ಲಿ ಕಾರ್ಯಕ್ರಮವನ್ನು ರೂಪುಗೊಳಿಸಲಾಗಿದೆ.

100 ಮಳಿಗೆಗಳಲ್ಲಿ ವಸ್ತು ಪ್ರದರ್ಶನ: ಹೈನುಗಾರಿಕೆ, ರೇಷ್ಮೆ ಬೆಳೆ ಹಾಗೂ ವಿವಿಧ ಕೃಷಿಯ ಬೇಸಾಯದ ಬಗ್ಗೆ ರೈತರಿಗೆ ಮಾಹಿತಿ ನೀಡಲು ಕೃಷಿ ಮೇಳದಲ್ಲಿ 100 ಮಳಿಗೆಗಳನ್ನು ತೆರೆದು ವಸ್ತು ಪ್ರದರ್ಶನ ಏರ್ಪಡಿಸಲಾಗಿದೆ. ರಾಸುಗಳ ಪ್ರದರ್ಶನ ಮಾರಾಟವನ್ನು ಕೂಡ ಆಯೋಜಿಸಲಾಗಿದೆ. ಸುಮಾರು 100 ಜೊತೆ ರಾಸುಗಳು ತಂಗಲು ಶಾಮಿಯಾನ ವ್ಯವಸ್ಥೆ ಮಾಡಲಾಗಿದ್ದು, ರಾಸುಗಳಿಗೆ ಬೇಕಾದ ಮೇವು, ಕುಡಿಯುವ ನೀರಿನ ವ್ಯವಸ್ಥೆ ಸೇರಿದಂತೆ ಉತ್ಸವದಲ್ಲಿ ಭಾಗವಹಿಸುವ ಜನರಿಗೆ ಅಗತ್ಯ ಮೂಲಸೌಕರ್ಯವನ್ನು ಕಲ್ಪಿಸಲಾಗಿದೆ. 

25 ಸಾವಿರ ಮಂದಿ ನಿರೀಕ್ಷೆ: ಎರಡು ದಿನಗಳ ಕಾಲ ನಡೆವ ಕಾರ್ಯಕ್ರಮದಲ್ಲಿ  ರೈತ ಮಹಿಳೆಯರು, ಸ್ವಸಹಾಯ ಸಂಘದ ಸದಸ್ಯರು ಹಾಗೂ ರೈತರು ಸೇರಿದಂತೆ ಅಂದಾಜು 25 ಸಾವಿರ ಕ್ಕೂ ಹೆಚ್ಚು ಜನರು ಸೇರುವ ನೀರಿಕ್ಷೆ ಇದೆ. ಬಂದಂತಹ ಜನರಿಗೆ ಮಧ್ಯಾಹ್ನ  ಭೋಜನ ವ್ಯವಸ್ಥೆ ಕಲ್ಪಿಸಲಾಗಿದೆ.

ಕೃಷಿ ವಿಚಾರಗೋಷ್ಠಿಗಳು: ಕೃಷಿ ಉತ್ಸವ ಕಾರ್ಯಕ್ರಮದಲ್ಲಿ ಕೃಷಿಯಲ್ಲಿ ನೆಲ ಜಲ ಸಂರಕ್ಷಣೆ ಮಹತ್ವ, ಪ್ರತಿಕೂಲ ಪರಿಸ್ಥಿತಿಯಲ್ಲಿ ಪಶುಸಂಗೋಪನಾ ಸಾಧ್ಯತೆಗಳು, ಮಹಿಳಾ ಸಬಲೀಕರಣಕ್ಕೆ ಇರುವ ಪೂರಕ ಸೌವಲತ್ತುಗಳು, ಧಾರಣೆ ಕುಸಿತಕ್ಕೆ ಮಿಶ್ರ ಬೇಸಾಯ ಪರಿಹಾರವೇ, ಕೃಷಿಯಲ್ಲಿ ಖರ್ಚುವೆಚ್ಚಗಳ ನಿಯಂತ್ರಣ ಹಾಗೂ ಯಂತ್ರೊಫ‌ಕರಣಗಳ ಬಳಕೆ, ಸುಧಾರಿತ ಭತ್ತ, ಕಬ್ಬು ಬೇಸಾಯದ ವಿಧಾನದ ಪ್ರಯೋಜನದ ಬಗ್ಗೆ ವಿಚಾರಗೊಷ್ಠಿಗಳನ್ನು ಆಯೋಜಿಸಲಾಗಿದೆ.

Advertisement

ತಾಲೂಕಿನಲ್ಲಿ ಹೆಚ್ಚಾಗಿ ಬೆಳೆವ ಕಬ್ಬು, ಹಲ್ಲಿನ ಜೋಳ, ಶೇಂಗಾ, ಬಾಳೆ ಫ‌ಸಲುಗಳಿಂದ ವಿಶೇಷ ಕುಟೀರಗಳನ್ನು ನಿರ್ಮಿಸಲಾಗುತ್ತಿದೆ. ಕೃಷಿ ಉತ್ಸವ ಮೊದಲ ದಿನದ ಕಾರ್ಯಕ್ರಮವನ್ನು ಧರ್ಮಸ್ಥಳ ಧರ್ಮಾಧಿಕಾರಿ ಡಾ.ವೀರೇಂದ್ರ ಹೆಗ್ಡೆ ಉದ್ಘಾಟಿಸಲಿದ್ದಾರೆ. ದಿವ್ಯ ಸಾನ್ನಿಧ್ಯವನ್ನು ವಾಟಾಳು ಸಿದ್ದಲಿಂಗಶಿವಚಾರ್ಯ ಸ್ವಾಮೀಜಿ, ಅಧ್ಯಕ್ಷತೆ ಲೋಕೋಪಯೋಗಿ ಸಚಿವ ಡಾ.ಎಚ್‌.ಸಿ.ಮಹದೇವಪ್ಪ , ಸಂಸದ ಆರ್‌. ಧ್ರುವನಾರಾಯಣ್‌, ವಿಧಾನ ಪರಿಷತ್‌ ಸದಸ್ಯ ಆರ್‌.ಧರ್ಮಸೇನ, ಜಿಪಂ ಅಧ್ಯಕ್ಷೆ ನಯೀಮಸುಲ್ತಾನ್‌, ಉಪಾಧ್ಯಕ್ಷ ಕೈಯಂಬಳ್ಳಿ ಜಿ.ನಟರಾಜು  ಸೇರಿದಂತೆ ಹಲವು ಗಣ್ಯರು ಹಾಗೂ ವಿವಿಧ ಸಂಘ ಸಂಸ್ಥೆಗಳ ಪದಾಧಿಕಾರಿಗಳು ಭಾಗವಹಿಸಲಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next