ಮುಂಬಯಿ : ಅಂತಾರಾಷ್ಟ್ರೀಯ ಕಚ್ಚಾ ತೈಲ ಬೆಲೆಯಲ್ಲಿ ಸ್ವಲ್ಪಮಟ್ಟಿನ ಇಳಿಕೆ, ದೇಶಿಯ ಹೂಡಿಕೆ ಸಂಸ್ಥೆಗಳಿಂದ ಮುಂಚೂಣಿ ಶೇರುಗಳ ಖರೀದಿ, ಡಾಲರ್ ಎದುರು ರೂಪಾಯಿ ಚೇತರಿಕೆಯೇ ಮೊದಲಾದ ಧನಾತ್ಮಕ ಕಾರಣಗಳಿಗಾಗಿ ಮುಂಬಯಿ ಶೇರು ಪೇಟೆ ಇಂದು ಬುಧವಾರದ ಆರಂಭಿಕ ವಹಿವಾಟಿನಲ್ಲಿ 444 ಅಂಕಗಳ ಭರ್ಜರಿ ಏರಿಕೆಯನ್ನು ದಾಖಲಿಸಿ 34,000 ಅಂಕಗಳ ಮನೋ ಪ್ರಾಬಲ್ಯದ ಮಟ್ಟವನ್ನು ಪುನರ್ ಸಾಧಿಸಿತು.
ಕಳೆದ ನಾಲ್ಕು ದಿನಗಳ ನಿರಂತರ ಸೋಲಿನ ಹಾದಿಯಲ್ಲಿ ಸೆನ್ಸೆಕ್ಸ್ ಒಟ್ಟು 1,315 ಅಂಕಗಳ ನಷ್ಟಕ್ಕೆ ಗುರಿಯಾಗಿತ್ತು.
ಇಂದು ಬೆಳಗ್ಗೆ 10.40ರ ವೇಳೆಗೆ ಸೆನ್ಸೆಕ್ಸ್ 207.09 ಅಂಕಗಳ ಮುನ್ನಡೆಯನ್ನು ಕಾಯ್ದುಕೊಂಡು 34,054.32 ಅಂಕಗಳ ಮಟ್ಟದಲ್ಲೂ ರಾಷ್ಟ್ರೀಯ ಶೇರು ಮಾರುಕಟ್ಟೆಯ ನಿಫ್ಟಿ ಸೂಚ್ಯಂಕ 62.70 ಅಂಕಗಳ ಏರಿಕೆಯನ್ನು ಕಾಯ್ದುಕೊಂಡು 10,209.50 ಅಂಕಗಳ ಮಟ್ಟದಲ್ಲೂ ವ್ಯವಹಾರ ನಿರತವಾಗಿದ್ದವು.
ಡಾಲರ್ ಎದುರು ರೂಪಾಯಿ ಇಂದು ಬುಧವಾರದ ಆರಂಭಿಕ ವಹಿವಾಟಿನಲ್ಲಿ 42 ಪೈಸೆಗಳ ಚೇತರಿಕೆಯನ್ನು ಕಂಡು 73.15 ರೂ. ಮಟ್ಟಕ್ಕೆ ತಲುಪುವ ಮೂಲಕ ಶೇರು ಮಾರುಕಟ್ಟೆಗೆ ಚೈತನ್ಯ ತುಂಬಿತು.
ಇಂದಿನ ಬೆಳಗ್ಗಿನ ವಹಿವಾಟಿನಲ್ಲಿ ಬಜಾಜ್ ಫಿನಾನ್ಸ, ಎಚ್ ಡಿ ಎಫ್ ಸಿ ಬ್ಯಾಂಕ್ ರಿಲಯನ್ಸ್, ಐಸಿಐಸಿಐ ಬ್ಯಾಂಕ್, ಎಸ್‌ಬಿಐ ಶೇರುಗಳು ಅತ್ಯಂತ ಕ್ರಿಯಾಶೀಲವಾಗಿದ್ದವು.
ಟಾಪ್ ಗೇನರ್‌ಗಳು : ಬಜಾಜ್ ಫಿನಾನ್ಸ್, ಬಿಪಿಸಿಎಲ್, ಐಓಸಿ, ಹಿಂಡಾಲ್ಕೋ, ಎಚ್‌ಪಿಸಿಎಲ್; ಟಾಪ್ ಲೂಸರ್‌ಗಳ : ಟೆಕ್ ಮಹೀಂದ್ರ, ಬಜಾಜ್ ಫಿನ್ ಸರ್ವ್, ಸನ್ ಫಾರ್ಮಾ, ವಿಪ್ರೋ, ಡಾ. ರೆಡ್ಡೀಸ್ ಲ್ಯಾಬ್ .