Advertisement

Lockdown Days: ಲಾಕ್‌ಡೌನ್‌ ಎಂಬ ದಪ್ಪಕ್ಷರದಲ್ಲಿ ಬರೆದ ಇತಿಹಾಸ!

01:15 PM Nov 19, 2024 | Team Udayavani |

ದಿನ ಎಷ್ಟು ಬೇಗ ಹೋಗ್ತಾ ಇದೆ ಅಲ್ವಾ. ಬೆಳಗೆದ್ದು ಹೊರಡೋ ಮುಂಚೆ ಗಡಿಯಾರ ನೋಡಿದರೆ ಯಾವಾಗಲೂ ತಡ ಎಂದೇ ಅನಿಸುವುದು. ಎದ್ದು ಕೂಡಲೇ ಹೊರಡೋದು ಬಿಟ್ಟು ಬೇರೇನಕ್ಕೂ ಸಮಯ ಉಳಿಯುವುದೇ ಇಲ್ಲ.

Advertisement

ಮನೆ ಬಿಟ್ಟು ಕೆಲಸಕ್ಕೆ ಹೋದ ಮೇಲೆ ಸಂಜೆಯಾಗಿ ಬಿಡುತ್ತದೆ ಎಂದೇ ಚಿಂತೆ. ಕೆಲಸದ ಮಧ್ಯೆ ಸಮಯ ಹೋದದ್ದೇ ಗೊತ್ತಾಗುವುದಿಲ್ಲ. ರಜೆಯ ದಿನವಂತೂ ಕೇಳೋದೇ ಬೇಡ. ಎರಡು ನಿಮಿಷ ಮೊಬೈಲ್‌ ಹಿಡಿದು ಕುಳಿತರೆ ಮುಗಿತು ಕಥೆ. ಬೆಳಗ್ಗೆ ಹೋಗಿ ಮದ್ಯಾಹ್ನವಾದರೂ ತಿಳಿಯುವುದೇ ಇಲ್ಲ.

ಡಿಸ್ಪ್ಲೇನಲ್ಲೇ ಸಮಯ ಇದ್ದರೂ ನೋಡಲು ನೆನಪೇ ಆಗುವುದಿಲ್ಲ. ಪ್ರತಿಯೊಂದು ಸೆಕೆಂಡುಗಳೂ ವರ್ಷವನ್ನು ಹತ್ತಿರ ಕರೆಯುತ್ತಂತೆ. ಹೌದು ನಿಜ. ಕೆಲಸದ ಒತ್ತಡದಿಂದ ಜನ ದಾಟಿ ಬಂದ ದಿನಗಳನ್ನು ತಿರುಗಿ ನೋಡುವುದನ್ನು ಮರೆತಿದ್ದಾರೆ. ನಾವು ಕೊರೊನಾ ಸಾಂಕ್ರಾಮಿಕ ಪರಿಚಯಿಸಿದ ಲಾಕ್‌ಡೌನ್‌ ದಿನಗಳನ್ನು ಕಂಡು ಐದು ವರ್ಷಗಳಾಗಿವೆ.

ಚೀನದಲ್ಲಿ 2019ರ ಅಂತ್ಯದ ವೇಳೆಗೆ ಕಾಣಿಸಿಕೊಂಡ ಕೊರೊನಾ ಇಡೀ ಜಗತ್ತನ್ನು ಕೇವಲ ಆರು ತಿಂಗಳ ಒಳಗಾಗಿ ಆಕ್ರಮಿಸಿತು. ಆ ದಿನಗಳನ್ನು ಒಮ್ಮೆ ಮೆಲುಕು ಹಾಕಿ ನೋಡಿ. ಪೊಲೀಸರು ಕೈದಿಯನ್ನು ಬಂದಿಸಿ ಲಾಕಪ್‌ನಲ್ಲಿ ಹಾಕಿ ಎಂದು ಹೇಳುವ ಪದವನ್ನು ಕೇಳಿದ್ದ ನಾವು ಲಾಕ್‌ಡೌನ್‌ ಎಂಬ ಪದವನ್ನು ಕೇಳುವಂತಾಯಿತು. ಎರಡು ಪದದ ವ್ಯತ್ಯಾಸ ದೊಡ್ಡದೇನಲ್ಲ ಬಿಡಿ. ಒಬ್ಬನನ್ನು ಸೆರೆ ಹಿಡಿದು ಹಾಕಿದರೆ ಲಾಕಪ್‌. ಇಡೀ ಊರನ್ನೇ ಸೆರೆ ಹಿಡಿದರೆ ಲಾಕ್‌ಡೌನ್‌. ಏನೇ ಇರಲಿ, ಆದರೆ ಆ ದಿನಗಳು ಮಾತ್ರ ಅದ್ಭುತ. ಉದ್ಯೋಗಕ್ಕೆಂದು ಊರು ಬಿಟ್ಟ ಅಣ್ಣಂದಿರು ಮತ್ತೆ ಬಂದು ಅದೇ ಅಂಗಳದಲ್ಲಿ ಹರಟೆ ಹೊಡೆಯುತ್ತಾ, ಇಷ್ಟವಿಲ್ಲದಿದ್ದರೂ ಕಷ್ಟದಿಂದ ಮಾಸ್ಕ್ ಹಾಕುತ್ತಾ, ಬೆಳಗ್ಗೆ ಬೇಗ ಎದ್ದು ಅಂಗಡಿಗೆ ಹೋಗಿ ಸಾಮಾನು ತರುತ್ತಿದ್ದ ದಿನಗಳವು.

ಜನರನ್ನು ಕೊರೊನಾ ಎಷ್ಟು ಬದಲಿಸಿತು ಎಂದರೆ ಅಂಗಡಿಯಲ್ಲಿ ತನಿಗಿಷ್ಟವಾದ ವಸ್ತುವನ್ನೇ ಕೊಡಬೇಕು ಎಂದು ಹೌಹಾರುತ್ತಿದ್ದ ಜನರೆಲ್ಲಾ “ಯಾವದಾದರೇನು ಬೇಗ ಕೊಡಪ್ಪ ಪೊಲೀಸ್‌ ಬರೋ ಮುಂಚೆ ಮನೆಗೆ ಹೋಗ್ತೀನೆ’ ಎಂದು ಪರಿತಪಿಸುತ್ತಿದ್ದರು. ಹೊಟ್ಟೆಗೆ ಹಿಟ್ಟಿಲ್ಲ ಅಂದಾಗ ಪಿಜ್ಜಾ ಬರ್ಗರ್‌ ಎಲ್ಲ ಅನ್ನ ಸಾರಾಗಿ ಬದಲಾಯಿತು. ಗದ್ದೆ ಮಣ್ಣನ್ನು ಛೀ ಗಲೀಜು ಎಂದವರೆಲ್ಲ ಉಳುಮೆ ಮಾಡಲು ಶುರು ಮಾಡಿದರು. ಶಾಲೆ – ಕಾಲೇಜಿಗೆ ಹೋಗುವ ಹುಡುಗರೆಲ್ಲಾ ಒಟ್ಟು ಸೇರಿ ಆನ್‌ಲೈನ್‌ ಕ್ಲಾಸ್‌ನ ಸ್ಪೀಕರ್‌ ಆಫ್ ಮಾಡಿ ಆಡಲು ಶುರು ಮಾಡಿ 2009-10ರ ಇಂಟರ್ನೆಟ್‌ ಇಲ್ಲದ ದಿನಗಳನ್ನು ಮತ್ತೆ ತಂದರು.

Advertisement

ನೆರೆಹೊರೆಯ ಮನೆ ಆಂಟಿಯರೆಲ್ಲ ನೋಡಿದ ಅದೇ ಧಾರಾವಾಹಿಯನ್ನು ಮತ್ತೂಮ್ಮೆ ಶುರುವಿನಿಂದ ನೋಡಲು ಶುರು ಮಾಡಿದರು. 60ರ ಹರೆಯದ ಕೆಲವು ಮುದುಕರು ಸಂಜೆ ಹೊತ್ತು ಗುಡ್ಡಕ್ಕೆ ಹೋಗಿ ಗೇರುಹಣ್ಣು ತಂದು ಕಳ್ಳ ಬಟ್ಟಿ ಮಾಡಿ ಮನೆ ಹೆಂಗಸರ ಬಾಯಿಂದ ಬಯಿಸಿಕೊಂಡಿದ್ದು ಕೂಡ ಇದೆ. ಇನ್ನು ಹೇಳಲು ಸಾವಿರ ಇದೆ ಆ ದಿನಗಳ ಬಗ್ಗೆ. ಎಲ್ಲ ಹೇಳುತ್ತಾ ಕುಳಿತರೆ ನಿಮಗೆ ಡಿಸ್ಪ್ಲೇ ತುದಿಯ ಸಮಯ ನೋಡಲು ಮರೆಯಬಹುದು. ನಾನು ಸೀದಾ ಉಪಸಂಹಾರಕ್ಕೆ ಬರುತ್ತೇನೆ.

ಯಾರೂ ಊಹಿಸದೇ ಇದ್ದ ಆ ದಿನಗಳು. ಎಷ್ಟೋ ಮಂದಿ ಪ್ರಾಣ ಕಳೆದುಕೊಂಡರು, ಎಷ್ಟೋ ಹೊಸ ಬದಲಾವಣೆಗಳು. ಕೊರೊನಾ ಕಳೆದು ಐದು ವರ್ಷಗಳಾದರೂ ಈಗಲೂ ಲಾಕ್‌ಡೌನ್‌ ದಿನಗಳು ಕಣ್ಣ ಮುಂದೆ ಒಮ್ಮೆ ಹಾದು ಹೋಗುತ್ತವೆ. ಸಮಯ ವೇಗವಾಗಿ ಓಡುತ್ತಿದೆ. ಜೀವನ ಸಣ್ಣದಾಗುತ್ತಿದೆ. ನಿನ್ನೆ ಹುಟ್ಟಿದ ಮಗು ಶಾಲೆಗೆ ಹೋಗುವುದನ್ನು ನೋಡಲು ಹೆಚ್ಚು ಕಾಯಬೇಕಾಗಿಲ್ಲ. ಹಾಗಾಗಿ ಇರುವ ಜೀವನ ಆನಂದದಿಂದ ಬಾಳೋಣ.

ಲಾಕ್‌ಡೌನ್‌ನಲ್ಲಿ ಎಲ್ಲರೂ ಜತೆಯಾಗಿ ಆಡಿದ್ದನ್ನು ಮರೆಯದಿರೋಣ. ನಮ್ಮೂರಿನ ಸಂಪರ್ಕದಲ್ಲಿರೋಣ. ನೆರೆಹೊರೆಯ ಸಂಬಂಧ ಎಷ್ಟು ಚಂದ ಎನ್ನುವುದನ್ನು ಲಾಕ್‌ಡೌನ್‌ನಲ್ಲಿ ಕಲಿತಿದ್ದೇವೆ. ಸಮಯ ವೇಗವಾಗಿ ಬದಲಾಗುತ್ತಿದೆ ಹೌದು. ಆದರೆ ನಮ್ಮ ನೆನಪುಗಳಲ್ಲ. ಮುಂದಿನ ಪೀಳಿಗೆಗೆ ನಮ್ಮ ಬಾಲ್ಯವನ್ನು ತಿಳಿಸಲು ಮೊಬೈಲ್‌ ಫೋನಿನಲ್ಲಿ ರೆಕಾರ್ಡ್‌ ಮಾಡಿ ಇಟ್ಟುಕೊಂಡಿಲ್ಲ.

ಆದರೆ ಲಾಕ್‌ಡೌನ್‌ನಲ್ಲಿ ಅದೇ ಹಿಂದಿನ ದಿನಗಳನ್ನು ಗಡ್ಡ ಮೀಸೆಯೊಂದಿಗೆ ರೆಕಾರ್ಡ್‌ ಮಾಡಿದ್ದೇವೆ. ಇವು ಮುಂದೊಂದು ದಿನ ನಮ್ಮ ಮಕ್ಕಳಿಗೆ ಲಾಕ್‌ಡೌನ್‌ ಬಂದರೆ ಜೀವನೋಪಾಯ ಹೇಳಿ ಕೊಡಲಿದೆ. ಎಲ್ಲರೂ ಇದನ್ನು ಅನುಸರಿಸಿದರೆ ಇವೆಲ್ಲವೂ ಮುಂದಿನ ಹೊಸ ಪೀಳಿಗೆಗೆ ದಪ್ಪಕ್ಷರಗಳಲ್ಲಿ ಬರೆದ ಇತಿಹಾಸ ಎನ್ನುವುದರಲ್ಲಿ ಅನುಮಾನವಿಲ್ಲ.

- ದೀಪಕ್‌

ಮಂಗಳೂರು

Advertisement

Udayavani is now on Telegram. Click here to join our channel and stay updated with the latest news.

Next