ಮುಂಬೈ: ಹೂಡಿಕೆದಾರರ ಕಳವಳ ಮತ್ತು ಜಾಗತಿಕ ಬೆಳವಣಿಗೆಯ ಪರಿಣಾಮ ಗುರುವಾರ (ನ.28) ಬಾಂಬೆ ಷೇರುಪೇಟೆ ಸಂವೇದಿ(Bombay Stock Market) ಸೂಚ್ಯಂಕ ಸೆನ್ಸೆ*ಕ್ಸ್ 1,000ಕ್ಕೂ ಅಧಿಕ ಅಂಕಗಳ ಕುಸಿತದೊಂದಿಗೆ ವಹಿವಾಟು ಮುಂದುವರಿದಿದೆ.
ಷೇರುಪೇಟೆಯ ಸಂವೇದಿ ಸೂಚ್ಯಂಕ 1038.82 ಅಂಕ ಕುಸಿತ ಕಂಡಿದ್ದು, 79,198.26 ಅಂಕಗಳ ಮಟ್ಟಕ್ಕೆ ಇಳಿಕೆಯಾಗಿ ವಹಿವಾಟು ಮುಂದುವರಿಸಿದೆ. ಅದೇ ರೀತಿ ನಿಫ್ಟಿ 299.65 ಅಂಕ ಕುಸಿದಿದ್ದು, 23,975.25 ಅಂಕಗಳ ಮಟ್ಟ ತಲುಪಿದೆ.
ಜಾಗತಿಕ ಬೆಳವಣಿಗೆ ಅನಿಶ್ಚಿತವಾಗಿದ್ದು, ಅಮೆರಿಕದ ಬಡ್ಡಿದರ ಕಡಿತದ ನಿರ್ಧಾರದ ಕಳವಳ ರಫ್ತುಗಳ ಮೇಲೆ ಹೆಚ್ಚು ಅವಲಂಬಿತವಾಗಿರುವ ಪರಿಣಾಮ ಐಟಿ ಮತ್ತು ಫಾರ್ಮಾ ವಲಯದ ಷೇರುಗಳ ಮೇಲೆ ಬೀರಿರುವುದಾಗಿ ಚಾಯ್ಸ್ ಬ್ರೋಕಿಂಗ್ ತಿಳಿಸಿದೆ.
ಸಂವೇದಿ ಸೂಚ್ಯಂಕ ಭಾರೀ ಕುಸಿದ ಪರಿಣಾಮ ಇನ್ಫೋಸಿಸ್, ಮಹೀಂದ್ರ&ಮಹೀಂದ್ರ, ಟೆಕ್ ಮಹೀಂದ್ರ, ಎಚ್ ಸಿಎಲ್ ಟೆಕ್ನಾಲಜೀಸ್, ಟೈಟಾನ್ ಕಂಪನಿ ಷೇರುಗಳು ಭಾರೀ ನಷ್ಟ ಕಂಡಿದೆ.
ಮತ್ತೊಂದೆಡೆ ಅದಾನಿ ಎಂಟರ್ ಪ್ರೈಸಸ್, ಎಚ್ ಡಿಎಫ್ ಸಿ ಲೈಫ್, ಎಸ್ ಬಿಐ, ಕೋಲ್ ಇಂಡಿಯಾ, ಎಸ್ ಬಿಐ ಲೈಫ್ ಇನ್ಸೂರೆನ್ಸ್ ಷೇರುಗಳು ಲಾಭಗಳಿಸಿದೆ. ಆಯಿಲ್ & ಗ್ಯಾಸ್, ಪಿಎಸ್ ಯು ಬ್ಯಾಂಕ್ ಷೇರು ಅಲ್ಪ ನಷ್ಟ ಕಂಡಿದೆ.