ವಿಜಯಪುರ: ಮಾಜಿ ಉಪಮುಖ್ಯಮಂತ್ರಿ ಕೆ.ಎಸ್.ಈಶ್ವರಪ್ಪ ಹಾಗೂ ವಿವಿಧ ಮಠಾಧೀಶರು ಶನಿವಾರ ಹೊಸದಾಗಿ “ಕ್ರಾಂತಿವೀರ ಬ್ರಿಗೇಡ್” ಘೋಷಿಸಿದರು. ವಿಜಯಪುರ ತಾಲೂಕಿನ ಮಖಣಾಪುರ ಸೋಮನಾಥ ಸ್ವಾಮೀಜಿ ಅವರನ್ನು ಬ್ರಿಗೇಡ್‌ನ ಅಧ್ಯಕ್ಷರನ್ನಾಗಿ ಆಯ್ಕೆ ಮಾಡಲಾಗಿದೆ. ಹಿಂದುಳಿದ ಮತ್ತು ದಲಿತರು ಸೇರಿ ಸಕಲ ಹಿಂದೂ ಧರ್ಮ ಸಮಾಜದ ಸಂಘಟನೆ ಮಾಡಬೇಕು ಎಂಬುವುದು ಎಲ್ಲ ಸ್ವಾಮೀಜಿಗಳ ಉದ್ದೇಶವಾಗಿದೆ. ಈ ಬ್ರಿಗೇಡ್ ಸ್ಥಾಪನೆಯು ಕಾಂತ್ರಿಕಾರಿ ನಿರ್ಧಾರ. ಬಸವನ ಬಾಗೇವಾಡಿಯಲ್ಲಿ ಫೆಬ್ರವರಿ 4ರ ರಥಸಪ್ತಮಿ ದಿನದಂದು ಇದರ ಉದ್ಘಾಟನೆ ನಡೆಯಲಿದೆ ಎಂದು ಈಶ್ವರಪ್ಪ ತಿಳಿಸಿದರು.
ಅರಕೇರಿಯ ಅಮೋಘ ಸಿದ್ದೇಶ್ವರ ಮಠದಲ್ಲಿ ನಡೆದ ಮಹತ್ವದ ಸಭೆಯಲ್ಲಿ “ಕ್ರಾಂತಿವೀರ” ಹೆಸರಲ್ಲಿ ಬ್ರಿಗೇಡ್ ಸ್ಥಾಪನೆಗೆ ತೀರ್ಮಾನಿಸಲಾಗಿದೆ. ನಂತರ ಸ್ವಾಮೀಜಿಗಳೊಂದಿಗೆ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಈಶ್ವರಪ್ಪ, ಬ್ರಿಗೇಡ್ ಸಂಬಂಧ ಇದು ಮೂರನೇ ಸಭೆಯಾಗಿದೆ. ಈ ಸಭೆಯಲ್ಲಿ ಸುಮಾರು 50 ಸ್ವಾಮೀಜಿಗಳು ಸೇರಿದ್ದರು. ತಕ್ಷಣದಿಂದಲೇ ರಾಜ್ಯದಲ್ಲಿ ಪ್ರವಾಸ ಮಾಡಲಾಗುತ್ತದೆ. ಫೆ.4ರಂದು ಎಲ್ಲ ಸಮಾಜದ ಸ್ವಾಮಿಗಳ ಪಾದತೊಳೆದು ಪೂಜೆ ಮಾಡುವ ಮೂಲಕ ಬ್ರಿಗೇಡ್ ಉದ್ಘಾಟಿಸಲಾಗುತ್ತದೆ. ಬಸವೇಶ್ವರರ ಹುಟ್ಟಿದ ನಾಡು ಬಸವನಬಾಗೇವಾಡಿಯಲ್ಲಿ ಈ ಹಿಂದೂ ಸಂಘಟನೆಯ ಕಾರ್ಯಕ್ರಮ ಆರಂಭವಾಗಲಿದೆ. ಎಲ್ಲ ಸಮಾಜಗಳ ಸ್ವಾಮೀಜಿಗಳು ಹಾಗೂ ಭಕ್ತರು ಪಾಲ್ಗೊಳ್ಳುವರು. ನಿರೀಕ್ಷೆಗೂ ಮೀರಿದ ಬೆಂಬಲ ಸಿಗುವ ವಿಶ್ವಾಸ ಇದೆ ಎಂದರು.
ಸಾಮಾಜಿಕ ಮತ್ತು ಧಾರ್ಮಿಕವಾಗಿ ಹೆಚ್ಚಿನ ಒತ್ತು ನೀಡುವುದು ಮತ್ತು ಬಡವರಿಗೆ, ಹಿಂದುಳಿದವರಿಗೆ, ದೀನ ದಲಿತರು ಹಾಗೂ ದೇಶಕ್ಕೆ ಸಮಸ್ಯೆ ಎದುರಾದಾಗ ಏನು? ಮಾಡಬೇಕು ಎಂಬುವುದು ಬ್ರಿಗೇಡ್ ಮೂಲಕ ಸಾಮೂಹಿಕ ಪರಿಹಾರ ಕಂಡುಹಿಡಿಯುವ ತೀರ್ಮಾನ ಮಾಡಲಾಗುವುದು. ಈಗ ಉದಾಹರಣೆಗೆ ದೇವಸ್ಥಾನ, ಮಠಮಾನ್ಯಗಳಿಗೆ ವಕ್ಫ್ ನೋಟಿಸ್ ನೀಡಲಾಗಿದೆ. ಇಂತಹ ಸಂದರ್ಭದಲ್ಲಿ ಏನು ಮಾಡಬೇಕು ಎಂಬುವುದು ಕುಳಿತು ಚರ್ಚೆ ಮಾಡಿ ಹೊರಾಟದ ರೂಪರೇಷೆ ರೂಪಿಸಲಾಗುವುದು. ಜತೆಗೆ ಈ ಹಿಂದೆ ದೊಡ್ಡ-ದೊಡ್ಡ ಸಮಾಜದ ಮಠಗಳಿಗೆ ಒಳ್ಳೆಯ ಅನುದಾನ ಬಂದಿದೆ. ಆದರೆ, ಸಣ್ಣ-ಸಣ್ಣ ಮಠಗಳು ಸರ್ಕಾರದ ಗಮನಕ್ಕೆ ಬಂದಿಲ್ಲ. ಇಂತವರ ಸಂಘಟನೆ ಮಾಡಿ ಮಠಗಳ ಅಭಿವೃದ್ಧಿಗೆ ತೀರ್ಮಾನ ಮಾಡಲಾಗುವುದು. ರಾಷ್ಟ್ರೀಯ ವಿಚಾರ ಬಂದ ಸಂದರ್ಭದಲ್ಲೂ ಕುಳಿತು ಚರ್ಚಿಸಲಾಗುವುದು. ದೇಶ, ಧರ್ಮದ ಬಗ್ಗೆ ಆಸಕ್ತಿ ಇರುವವರು ಈ ಬ್ರಿಗೇಡ್‌ಗೆ ಸೇರಬಹುದು. ಇದರಲ್ಲಿ ಯಾವುದೇ ರಾಜಕೀಯ ಪಕ್ಷದ ಉದ್ಭವವಾಗಲ್ಲ. ಸಾಧು-ಸಂತರ ಮಾರ್ಗದರ್ಶಕ ಮಂಡಳಿ ರಚನೆ ಮಾಡಲಾಗಿದೆ. ಮುಂಬರುವ ದಿನಗಳಲ್ಲಿ ಬ್ರಿಗೇಡ್ ಸಮಿತಿ ಘೋಷಿಸಲಾಗುವುದು. ಈ ಬ್ರಿಗೇಡ್‌ಗೂ, ರಾಜಕಾರಣಕ್ಕೂ ಸಂಬಂಧವಿಲ್ಲ. ಇದು ರಾಜಕೀಯ ಮುಕ್ತ ಬ್ರಿಗೇಡ್. ಈ ಬ್ರಿಗೇಡ್ ನನ್ನ ಕಂಟ್ರೋಲ್‌ನಲ್ಲಿಲ್ಲ ಎಂದು ಈಶ್ವರಪ್ಪ ಹೇಳಿದರು.