ಲಂಡನ್: ಸಶಸ್ತ್ರ ಪಡೆಗಳ ದತ್ತಿ ಸಂಸ್ಥೆ ರಾಯಲ್ ಬ್ರಿಟಿಷ್ ಲೀಜನ್(ಆರ್‌ಬಿಎಲ್)ನ ವಾರ್ಷಿಕ “ಪಾಪ್ಪಿ ಅಪೀಲ್’ ಅಂಗವಾಗಿ ದೇಣಿಗೆ ಸಂಗ್ರಹಿಸುವ ಕಾರ್ಯಕ್ಕೆ ಸ್ವತಃ ಬ್ರಿಟನ್ ಪ್ರಧಾನಿ ರಿಷಿ ಸುನಕ್ ಅವರೇ ಇಳಿದಿದ್ದಾರೆ.
ವೆಸ್ಟ್‌ಮಿನ್‌ಸ್ಟರ್‌ನ ರೈಲ್ವೆ ಸುರಂಗದಲ್ಲಿ ಬ್ರಿಟಿಷ್ ಸೇನೆಯ ಯೋಧರೊಂದಿಗೆ ಗಸಗಸೆ ಹೂವುಗಳ ಬಾಕ್ಸ್‌ಗಳನ್ನು ಮಾರಾಟ ಮಾಡುತ್ತಿರುವ ಪ್ರಧಾನಿಯನ್ನು ಕಂಡು, ಅಲ್ಲಿದ್ದ ಪ್ರಯಾಣಿಕರು ದಂಗಾಗಿದ್ದಾರೆ.
ಬೆಳಗ್ಗೆ 8 ಗಂಟೆಗೆ ರೈಲು ನಿಲ್ದಾಣಕ್ಕೆ ಆಗಮಿಸಿದವರಿಗೆ ಅಚ್ಚರಿಯೋ ಅಚ್ಚರಿ. ಪ್ರಧಾನಿ ರಿಷಿ ಸುನಕ್ ಗಸಗಸೆ ಹೂವುಗಳ ಟ್ರೇಗಳನ್ನು ಕೈಯ್ಯಲ್ಲಿ ಹಿಡಿದುಕೊಂಡು, ಮಾರಾಟ ಮಾಡುತ್ತಿದ್ದರು. ಹಲವರು ಸುನಕ್‌ರಿಂದ ಹೂವುಗಳನ್ನು ಖರೀದಿಸಿ, ಸಾಮಾಜಿಕ ಜಾಲತಾಣಗಳಲ್ಲಿ ಫೋಟೋ, ವಿಡಿಯೋಗಳನ್ನು ಹಂಚಿಕೊಂಡಿದ್ದಾರೆ.
ಬೆಳಗ್ಗಿನ ಜನ ದಟ್ಟಣೆಯ ಅವಧಿಯಲ್ಲೂ ದೇಣಿಗೆ ಸಂಗ್ರಹ ಕಾರ್ಯದಲ್ಲಿ ನಮ್ಮ ಜತೆ ಕೈಜೋಡಿಸಿದ ರಿಷಿ ಸುನಕ್ ಅವರು ವಿಶಾಲ ಹೃದಯಿ ಎಂದು ಆರ್‌ಬಿಎಲ್ ಹೇಳಿದೆ.