Advertisement
ನಗರದ ಜಿಪಂ ಸಭಾಂಗಣದಲ್ಲಿ ಬುಧವಾರ ತಮ್ಮ ಅಧ್ಯಕ್ಷತೆಯಲ್ಲಿ ನಡೆದ ಜಿಲ್ಲಾ ಮಟ್ಟದ ವಿವಿಧ ಇಲಾಖೆಗಳ ಪ್ರಗತಿ ಪರಿಶೀಲನೆ ನಡೆಸಿದರು. ಮೊದಲಿಗೆ ಜಿಲ್ಲೆಯಲ್ಲಿ ಮಳೆ ಹಾಗೂ ಬಿತ್ತನೆ ಪ್ರಮಾಣದ ಬಗ್ಗೆ ಮಾಹಿತಿ ಪಡೆದ ಅವರು, ಜಿಲ್ಲೆಯಲ್ಲಿ ಕಳೆದ ವರ್ಷಕ್ಕಿಂತ ಈ ವರ್ಷ ಉತ್ತಮ ಮಳೆಯಾದರೂ ಬಿತ್ತನೆ ಪ್ರಮಾಣ ಕುಂಠಿತಗೊಂಡಿರುವ ಬಗ್ಗೆ ಕಳವಳ ವ್ಯಕ್ತಪಡಿಸಿದರು.
Related Articles
Advertisement
ಶಾಲಾ ಕೊಠಡಿಗಳನ್ನು ದುರಸ್ತಿ: ಮಳೆಗಾಲ ಶುರುವಾಗುವುದರಿಂದ ಜಿಲ್ಲೆಯಲ್ಲಿ ಶಾಲಾ ಕೊಠಡಿಗಳನ್ನು ದುರಸ್ಥಿಗೊಳಿಸಬೇಕು. ಪ್ರತಿ ಶಾಲೆಯಲ್ಲಿ ಆಟದ ಮೈದಾನ ಅಭಿವೃದ್ದಿ ಆಗಬೇಕು, ನರೇಗಾದಡಿ ಕಾಂಪೌಂಡ್‌ಗಳನ್ನು ನಿರ್ಮಿಸಬೇಕು. ಮಕ್ಕಳ ಆಟಗಳಿಗೆ ವಿಶೇಷ ಆದ್ಯತೆ ಕೊಡಬೇಕು. ಮಕ್ಕಳಿಗೆ ಇಷ್ಟವಾಗುವ ಆಟಗಳನ್ನು ಶಾಲೆಗಳಲ್ಲಿ ಆಡಿಸಬೇಕೆಂದ ಅವರು, ಕನಿಷ್ಠ ತಿಂಗಳಿಗೊಮ್ಮೆ ಮಕ್ಕಳಿಗೆ ಕಥೆ, ಕವನ ಮತ್ತಿತರ ಸಾಂಸ್ಕೃತಿಕ,
ಸಾಹಿತ್ಯಕವಾಗಿ ವಿವಿಧ ಸ್ಪರ್ಧೆಗಳನ್ನು ಆಯೋಜಿಸಿ ವಿಜೇತರಿಗೆ ಬಹುಮಾನ ನೀಡಬೇಕು. ಮಕ್ಕಳ ಕೈಯಲ್ಲಿ ಪರಿಸರ ಸಂರಕ್ಷಣೆಗೆ ಪೂರಕವಾಗಿ ಸೀಡ್‌ಬಾಲ್‌ಗಳನ್ನು ಸಿದ್ದಪಡಿಸಿ ಗುಡ್ಡುಗಾಡು, ಬಯಲು ಪ್ರದೇಶಗಳಲ್ಲಿ ಪಸರಿಸುವಂತೆ ನಾಗಾಂಬಿಕಾದೇವಿ ಸೂಚಿಸಿದರು. ಸಾಧ್ಯವಾದರೆ ಡ್ರೋನ್ ಬಳಸಿ ಸೀಡ್‌ಬಾಲ್ ಬಿತ್ತನೆ ಮಾಡುವಂತೆ ಅರಣ್ಯ ಇಲಾಖೆ ಅಧಿಕಾರಿಗಳಿಗೆ ತಿಳಿಸಿದರು.
ಹಾಸ್ಟಲ್ ಮಕ್ಕಳಿಗೆ ಶಿಸ್ತು ಕಲಿಸಿ: ಹಾಸ್ಟಲ್‌ಗಳ ಕಾರ್ಯಾರಂಭದ ಕುರಿತು ವಿದ್ಯಾರ್ಥಿಗಳಿಗೆ ಒದಗಿಸಲಾಗಿರುವ ಮೂಲ ಸೌಕರ್ಯಗಳ ಬಗ್ಗೆ ಮಾಹಿತಿ ಪಡೆದ ಅವರು, ಹಾಸ್ಟಲ್‌ಗಳಲ್ಲಿ ಸ್ವಚ್ಛತೆಗೆ ಹೆಚ್ಚು ಆದ್ಯತೆ ಕೊಡಬೇಕು. ವಿದ್ಯಾರ್ಥಿಗಳಲ್ಲಿ ಶಿಸ್ತು ಕಲಿಸಲು ಒತ್ತಡ ಹಾಕಬೇಕು. ಶೌಚಾಲಯ, ಸ್ನಾನದ ಗೃಹಗಳು, ಕೈ ತೊಳೆಯುವ ಸ್ಥಳಗಳಲ್ಲಿ ಲೀಕೇಜ್ ಹೆಚ್ಚಿರುತ್ತದೆ.
ಈ ಬಗ್ಗೆ ಸೂಕ್ತ ನಿಗಾ ವಹಿಸಬೇಕು. ಮಕ್ಕಳಿಗೆ ಗುಣಮಟ್ಟದ ಆಹಾರ, ಪರಿಕರಗಳನ್ನು ಒದಗಿಸಬೇಕೆಂದರು. ಆಧಾರ್ ನೊಂದಣಿ ವಿಳಂಬವಾಗದಂತೆ ನೋಡಿಕೊಂಡು ಶೀಘ್ರವಾಗಿ ವಿದ್ಯಾರ್ಥಿಗಳಗೆ ವಿದ್ಯಾರ್ಥಿ ವೇತನ ದೊರೆಯುವಂತೆ ಮಾಡಿ. ಕೂಡಲೇ ಆದಾರ್ ಲಿಂಗ್ ಮಾಡಿಸಿ, ಇಲ್ಲ ಆಧಾರ್ ನೊಂದಣಿಗೆ ಕೊಟ್ಟಿದ್ದರೂ ಲಿಂಕ್ ಮಾಡದ ಬ್ಯಾಂಕ್‌ಗಳ ಬಗ್ಗೆ ಮಾಹಿತಿ ಕೊಡಿ ಕ್ರಮ ವಹಿಸುತ್ತೇವೆ ಎಂದರು.
ತಪ್ಪು ಮಾಹಿತಿ ಕೊಟ್ಟ ಅಧಿಕಾರಿಗೆ ನೋಟಿಸ್: ಉಸ್ತುವಾರಿ ಕಾರ್ಯದರ್ಶಿಗಳ ಸಭೆಯಲ್ಲಿ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಉಪ ನಿರ್ದೇಶಕರು ಸಭೆಯಲ್ಲಿ ಸಿಎಂ ಅನಿಲ ವಿತರಣೆ ಕಾರ್ಯಕ್ರಮದ ಸಂಬಂಧ ತಾಳೆಯಾಗದಂತೆ ಅಂಕಿ, ಅಂಶ ನೀಡಿದ್ದಕ್ಕೆ ತೀವ್ರ ಗರಂ ಆದ ಉಸ್ತುವಾರಿ ಕಾರ್ಯದರ್ಶಿಗೆ ನೋಟಿಸ್ ಜಾರಿ ಮಾಡುವಂತೆ ಸೂಚಿಸಿದರು. ಅಧಿಕಾರಿಗಳು ಸಭೆಗೆ ಸೂಕ್ತ ಮಾಹಿತಿಯೊಂದಿಗೆ ಬರಬೇಕೆಂದರು. ಆಧಾರ್ ನೊಂದಣಿ ವಿಳಂಬ ಆಗದಂತೆ ಪ್ರತಿ ತಾಲೂಕು ಕಚೇರಿಯಲ್ಲಿ ಹಾಗೂ ಡೀಸಿ ಕಚೇರಿಯಲ್ಲಿ ಆಧಾರ್ ನೊಂದಣಿ ಕಚೇರಿ ತೆರೆಯುವಂತೆ ಸಭೆಯಲ್ಲಿದ್ದ ಅಧಿಕಾರಿಗಳಿಗೆ ತಾಕೀತು ಮಾಡಿದರು.
ಮೇವು ಕಿಟ್‌ಗೆ ಬೇಡಿಕೆ ಜಾಸ್ತಿ: ಜಿಲ್ಲಾ ಪಶು ಸಂಗೋಪನಾ ಇಲಾಖೆ ಉಪ ನಿರ್ದೇಶಕ ಡಾ.ನಾಗರಾಜ್, ಜಿಲ್ಲೆಯಲ್ಲಿ ಮೇವಿನ ಕೊರತೆ ಕೆಲವು ಕಡೆ ಇದೆ. ಆದರೂ ಜಿಲ್ಲಾಡಳಿತ ಇದುವರೆಗೂ 110 ಟನ್ ಮೇವು ಪೂರೈಕೆ ಮಾಡಲಾಗಿದೆ. ಆದರೆ, ಮೇವು ಕಿಟ್‌ಗೆ ಜಿಲ್ಲಾದ್ಯಂತ ಹೆಚ್ಚು ಬೇಡಿಕೆ ಇದ್ದು, ಇಲಾಖೆಯಿಂದ ಪೂರೈಕೆಯಾಗಿಲ್ಲ ಎಂದರು. ಪ್ರತಿ ತಾಲೂಕಿಗೆ 10 ಸಾವಿರದಂತೆ ಒಟ್ಟು 60 ಸಾವಿರ ಮೇವು ಕಿಟ್‌ಗೆ ಬೇಡಿಕೆ ಇದೆ ಎಂದರು.
ಸಭೆಯಲ್ಲಿ ಪ್ರಭಾರಿ ಜಿಲ್ಲಾಧಿಕಾರಿಗಳಾದ ಜಿಪಂ ಸಿಇಒ ಗುರುದತ್ ಹೆಗಡೆ, ಅಪರ ಜಿಲ್ಲಾಧಿಕಾರಿ ಆರತಿ ಆನಂದ್ ಸೇರಿದಂತೆ ಜಿಲ್ಲಾ ಮಟ್ಟದ ವಿವಿಧ ಇಲಾಖೆಗಳ ಅಧಿಕಾರಿಗಳು ಉಸ್ತುವಾರಿ ಕಾರ್ಯದರ್ಶಿಗಳು ನಡೆಸಿದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಭಾಗವಹಿಸಿದ್ದರು.
ಕಲ್ಯಾಣಿಗಳ ಸ್ವಚ್ಛತೆ – ಜಿಲ್ಲಾಡಳಿತಕ್ಕೆ ಮೆಚ್ಚುಗೆ: ಜಿಲ್ಲಾದ್ಯಂತ ಜಿಲ್ಲಾಡಳಿತ ವಿಶೇಷ ಮುತುವರ್ಜಿ ವಹಿಸಿ 100 ಕ್ಕೂ ಹೆಚ್ಚು ಕಲ್ಯಾಣಿಗಳ ಸ್ವಚ್ಛತೆಗೊಳಿಸಿ ಸಂರಕ್ಷಣೆ ಮಾಡಿರುವುದನ್ನು ಪ್ರಾತ್ಯಕ್ಷಿಕೆ ಮೂಲಕ ನೋಡಿದ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ನಾಗಾಂಬಿಕಾದೇವಿ ಜಿಲ್ಲಾಡಳಿತ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು.
ಪುನಶ್ಚೇತನಗೊಳಿಸಿರುವ ಕಲ್ಯಾಣಿಗಳ ಸುತ್ತಲೂ ಹೂವು ಗಿಡದ ಜೊತೆಗೆ ಅಲಂಕಾರಿಕ ಗಿಡಗಳನ್ನು ಬೆಳೆಸಿ ಗಾರ್ಡನ್ ಬೆಳೆಸಬೇಕು. ಜನ ನಿತ್ಯ ವಾಯು ವಿಹಾರಕ್ಕೆ ಹೋಗುವ ರೀತಿಯಲ್ಲಿ ಕಲ್ಯಾಣಿಗಳನ್ನು ಅಭಿವೃದ್ದಿಸಬೇಕು. ಜನರಲ್ಲಿ ಸ್ವಚ್ಛತೆ, ಸಮುದಾಯದ ಆಸ್ತಿಪಾಸ್ತಿಗಳ ಸಂರಕ್ಷಣೆ ಬಗ್ಗೆ ಅರಿವು ಮೂಡಿಸಲು ನಮ್ಮೂರು ನಮ್ಮ ಕೆಲಸ ನಾಮಫಲಕಗಳನ್ನು ಅಳವಡಿಸುವಂತೆ ಸೂಚಿಸಿ ಕಲ್ಯಾಣಿಗಳ ಸುತ್ತಲೂ ತಡೆಗೋಡೆಗಳನ್ನು ನಿರ್ಮಿಸುವಂತೆ ಸೂಚಿಸಿದರು.
ಸಾಮಾಜಿಕ ಭದ್ರತಾ ಕಾರ್ಯಕ್ರಮ ವಿಳಂಬಕ್ಕೆ ಕಿಡಿ: ರಾಷ್ಟ್ರೀಯ ಕುಟುಂಬ ಯೋಜನೆ, ವಿಧವಾ ವೇತನ, ಸಂಧ್ಯಾ ಸುರಕ್ಷಾ ಯೋಜನೆ ಮತ್ತಿತರ ಸಾಮಾಜಿಕ ಭದ್ರತಾ ಯೋಜನೆಗಳ ಕಾರ್ಯಕ್ರಮಗಳ ಅನುಷ್ಠಾನದಲ್ಲಿ ವಿಳಂಬ, ಬೇಜವಾಬ್ದಾರಿ ತೋರುತ್ತಿರುವ ಕಂದಾಯ ಅಧಿಕಾರಿಗಳ ವಿರುದ್ಧ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ನಾಗಾಂಬಿಕಾದೇವಿ ಅಸಮಾಧಾನ ವ್ಯಕ್ತಪಡಿಸಿದರು. ಅನುಷ್ಠಾನದಲ್ಲಿ ನಿರ್ಲಕ್ಷ್ಯ ತೋರುವ ಅಧಿಕಾರಿಗಳ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳುವುದಾಗಿ ಎಚ್ಚರಿಸಿದರು.
ಜಿಲ್ಲಾದ್ಯಂತ ಆರ್‌ಟಿಸಿ ತಿದ್ದುಪಡಿ ಪ್ರಕರಣ ಪ್ರಗತಿ ಕುಂಠಿತ ಬಗ್ಗೆಯು ಉಸ್ತುವಾರಿ ಕಾರ್ಯದರ್ಶಿ ಸಭೆಯಲ್ಲಿದ್ದ ತಹಶೀಲ್ದಾರ್‌ರನ್ನು ತೀವ್ರ ತರಾಟೆಗೆ ತೆಗೆದುಕೊಂಡರು. ಬಾಕಿ ಇರುವ ಆರ್‌ಟಿಸಿ ತಿದ್ದುಪಡಿ, ಪಡಿತರ ಚೀಟಿ ಶವ ಸಂಸ್ಕಾರ ಯೋಜನೆಯಡಿ ಬಾಕಿ ಇರುವ ಪರಿಹಾರ ವಿತರಿಸುವ ಕಡತಗಳನ್ನು ಶೀಘ್ರ ವಿಲೇವಾರಿ ಮಾಡಬೇಕೆಂದು ಜಿಲ್ಲಾಡಳಿತಕ್ಕೆ ತಾಕೀತು ಮಾಡಿದರು. ಯಾರು ಸರಿಯಾಗಿ ಕೆಲಸ ಮಾಡಲ್ಲ ಅವರ ಬಗ್ಗೆ ನನಗೆ ರಿರ್ಪೋಟ್ ಮಾಡಿ ಎಂದರು.
ಜಿಲ್ಲೆಯಲ್ಲಿ ರೇಷ್ಮೆ ಮೇಳ ಆಯೋಜಿಸಿ: ಜಿಲ್ಲೆಯಲ್ಲಿ ಮಾವು ಮೇಳ ಆಯೋಜಿಸಿ ಯಶಸ್ವಿಗೊಂಡಿದ್ದನ್ನು ಸಭೆಯಲ್ಲಿ ತೋಟಗಾರಿಕಾ ಅಧಿಕಾರಿಗಳು ಉಸ್ತುವಾರಿ ಕಾರ್ಯದರ್ಶಿಗಳ ಗಮನಕ್ಕೆ ತಂದರು. ಈ ವೇಳೆ ಮಾತನಾಡಿದ ಜಿಲ್ಲಾ ಕಾರ್ಯದರ್ಶಿ ನಾಗಾಂಬಿಕಾದೇವಿ, ಜಿಲ್ಲೆಯಲ್ಲಿ ರೇಷ್ಮೆ ಕೃಷಿ ಪ್ರಧಾನವಾದದು. ಆದುದರಿಂದ ಜಿಲ್ಲೆಯಲ್ಲಿ ಮಾವು ಮೇಳದಂತೆ ರೇಷ್ಮೆ ಮೇಳ ಆಯೋಜಿಸಿ ರೇಷ್ಮೆಯಿಂದ ಉತ್ಪಾದಿಸುವ ರೇಷ್ಮೆ ಸೀರೆ ಸೇರಿದಂತೆ ಮತ್ತಿತರ ಕರಕುಶಲ ಉತ್ಪನ್ನಗಳ ಪ್ರದರ್ಶನ ನಡೆಸುವ ಮೂಲಕ ರೈತರಿಗೆ ಸೂಕ್ತ ಮಾರುಕಟ್ಟೆ ಒದಗಿಸುವಂತೆ ರೇಷ್ಮೆ ಕೃಷಿ ಅಧಿಕಾರಿಗಳಿಗೆ ಸೂಚಿಸಿದರು. ರೇಷ್ಮೆ ಕೃಷಿ ಜಿಲ್ಲೆಯಲ್ಲಿ ಇನ್ನಷ್ಟು ವಿಸ್ತರಿಸಬೇಕು ಎಂದರು.