ಬೆಂಗಳೂರು: ಜೀವ ಬೆದರಿಕೆ ಹಾಕಿದ ರೌಡಿಶೀಟರ್ಗಳ ವಿರುದ್ಧ ದೂರು ನೀಡಿದ ಉದ್ಯಮಿ ಮನೆಗೆ ನೋಟಿಸ್ ಕೊಡುವ ನೆಪದಲ್ಲಿ ಅಪ್ರಾಪ್ತೆಯ ಫೋಟೋ ಮತ್ತು ವಿಡಿಯೋ ತೆಗೆದು ಬೆದರಿಕೆ ಹಾಕಿದ ಪ್ರಕರಣ ಸಂಬಂಧ ರಾಜ್ಯ ಮಾನವ ಹಕ್ಕುಗಳ ಆಯೋಗ ಈಶಾನ್ಯ ವಿಭಾಗದ ಡಿಸಿಪಿಗೆ ವರದಿ ನೀಡುವಂತೆ ನೋಟಿಸ್ ಜಾರಿ ಮಾಡಿದೆ.
ಪ್ರಕರಣ ಸಂಬಂಧ ನಾಲ್ಕು ವಾರಗಳಲ್ಲಿ ಘಟನೆಗೆ ಸಂಬಂಧಿಸಿದ ವರದಿ ನೀಡುವಂತೆ ನೋಟಿಸ್ನಲ್ಲಿ ಉಲ್ಲೇಖೀಸಲಾಗಿದೆ. ಜತೆಗೆ ವಿಚಾರಣೆಯನ್ನು ಜ.7ಕ್ಕೆ ಮುಂದೂಡಿದೆ. ಅಲ್ಲದೆ, ಠಾಣಾಧಿಕಾರಿ ಶಿವಸ್ವಾಮಿ ಮತ್ತು ಕಾನ್ಸ್ಟೇಬಲ್ ರಫೀಕ್, ಹೋಮ್ಗಾರ್ಡ್ ಸುಂದರಾ ಶಿಂಧೆಗೂ ಘಟನೆಗೆ ವಿವರ ಕೇಳಿ ನೋಟಿಸ್ ನೀಡಿದೆ.
ಖಾಲಿ ನಿವೇಶನಕ್ಕೆ ಅತಿಕ್ರಮ ಪ್ರವೇಶಿಸಿ ಜೀವಬೆದರಿಕೆವೊಡ್ಡಿರು ವುದಾಗಿ ಆರೋಪಿಸಿ ಶೇಖರ್ ಹಾಗೂ ಇತರರ ವಿರುದ್ಧ ಕಳೆದ ಅ.24ರಂದು ಉದ್ಯಮಿ ಶಶಾಂಕ್ ಎಂಬವರು ವಿದ್ಯಾರಣ್ಯ ಪುರ ಠಾಣೆಯಲ್ಲಿ ದೂರು ನೀಡಿದ್ದರು. ಈ ಸಂಬಂಧ ಎಫ್ಐಆರ್ ದಾಖಲಿಸಿಕೊಂಡಿದ್ದ ಪೊಲೀಸರು ಹೆಚ್ಚಿನ ಮಾಹಿತಿ ಕೇಳಿ ನೋಟಿಸ್ ಕೊಡಲು ಉದ್ಯಮಿ ಮನೆಗೆ ಹೋಗಿದ್ದರು. ಆದರೆ, ಸಂಬಂಧಿಯೊಬ್ಬರು ಮೃತಪಟ್ಟ ಹಿನ್ನೆಲೆಯಲ್ಲಿ ಶಶಾಂಕ್ ಊರಿಗೆ ಹೋಗಿದ್ದರು. ಹೀಗಾಗಿ ಮನೆಯ ಲ್ಲಿದ್ದ ಶಶಾಂಕ್ ಸಹೋದರನ 15 ವರ್ಷದ ಪುತ್ರಿಗೆ ನೋಟಿಸ್ ಕೊಡಲು ಮುಂದಾಗಿದ್ದರು. ಆಕೆ ಈ ಬಗ್ಗೆ ನನಗೆ ಗೊತ್ತಿಲ್ಲ ಎಂದಾಗ, ಮನೆ ಮುಂದೆ ನೋಟಿಸ್ ಅಂಟಿಸಿದ್ದಾರೆ. ಅಲ್ಲದೆ, ಈ ನೋಟಿಸ್ ಅಂಟಿಸಿದ ಬಗ್ಗೆ ಸಾಕ್ಷ್ಯಕ್ಕಾಗಿ ಬಾಲಕಿಯನ್ನು ನಿಲ್ಲಿಸಿಕೊಂಡು ಫೋಟೋ ಮತ್ತು ವಿಡಿಯೋ ತೆಗೆದುಕೊಂಡಿದ್ದರು. ಬಳಿಕ ಬಾಲಕಿಗೆ ಬೆದರಿಕೆ ಹಾಕಿದ್ದಾರೆ. ಅದರಿಂದ ಆಕೆಗೆ ಜ್ವರ ಕಾಣಿಸಿಕೊಂಡಿತ್ತು. ಈ ರೀತಿ ದೌರ್ಜನ್ಯ ಎಸಗಿರುವ ಪೊಲೀಸರ ವಿರುದ್ಧ ಕಾನೂನು ಕ್ರಮಕೈಗೊಳ್ಳುವಂತೆ ಶಶಾಂಕ್ ಮಾನವ ಹಕ್ಕುಗಳ ಆಯೋಗಕ್ಕೆ ದೂರು ಸಲ್ಲಿಸಿ ದ್ದರು. ಆಯೋಗವು 4 ವಾರಗಳಲ್ಲಿ ವರದಿ ನೀಡುವಂತೆ ಡಿಸಿಪಿಗೆ ನಿರ್ದೇಶಿಸಿದೆ.