ಅದು ಗಣೇಶ ದೇವಾಲಯ. ಮದುಮಗಳೊಬ್ಬಳನ್ನು ಅಲಂಕರಿಸಿದ ಬಣ್ಣದ ಬುಟ್ಟಿಯೊಂದರಲ್ಲಿ ಕೂರಿಸಿ ಹೊತ್ತು ತರಲಾಯಿತು. ಅಲ್ಲಿ ಮದುವೆ ಶಾಸ್ತ್ರಕ್ಕೆ ತಯಾರಿ ನಡೆಯುತ್ತಿತ್ತು. ಗಂಡಿನ ಕಡೆಯವರು ರೆಡಿಯಾಗಿದ್ದರು. ಹೆಣ್ಣು ಬರುತ್ತಿದ್ದಂತೆಯೇ ಶಾಸ್ತ್ರಕ್ಕೆ ಅಣಿಯಾದರು. ಆ ಶಾಸ್ತ್ರ ಮುಗಿಯುತ್ತಿದ್ದಂತೆಯೇ ಅತ್ತ ನಿರ್ದೇಶಕರು ಕಟ್ ಇಟ್ ಅಂದರು. ಇತ್ತ ಪತ್ರಕರ್ತರು ಮಾತುಕತೆಗೆ ರೆಡಿಯಾದರು.
ಇದು ಕಂಡು ಬಂದದ್ದು, “ಗರ’ ಚಿತ್ರದ ಚಿತ್ರೀಕರಣದಲ್ಲಿ. ಅಂದು ನಿರ್ದೇಶಕ ಮುರಳಿ ಕೃಷ್ಣ ಮದುವೆ ದೃಶ್ಯವನ್ನು ಸೆರೆಹಿಡಿಯುತ್ತಿದ್ದರು. ಆ ವೇಳೆ, ಪತ್ರಕರ್ತರು ಆ ಸೆಟ್‌ಗೆ ಭೇಟಿ ಕೊಟ್ಟಾಗ, ಆ ಸೀನ್ ಮುಗಿಸಿ, ಪತ್ರಕರ್ತರ ಮುಂದೆ ತಂಡದ ಜತೆ ಬಂದು ಕುಳಿತರು ಮುರಳಿಕೃಷ್ಣ.
ಮುರಳಿಕೃಷ್ಣ ಅವರು ಆರ್.ಕೆ. ನಾರಾಯಣ್ ಅವರ ಕಿರುಕತೆಯನ್ನು ತೆಗೆದುಕೊಂಡು “ಗರ’ ಚಿತ್ರ ಮಾಡುತ್ತಿದ್ದಾರೆ. ಈಗಾಗಲೇ ಸದ್ದಿಲ್ಲದೆಯೇ ಕೊಪ್ಪ, ಬೆಂಗಳೂರು ಸೇರಿದಂತೆ ಇತರೆಡೆ ಚಿತ್ರೀಕರಿಸಿದ್ದಾರೆ. ಈ ಸಿನಿಮಾವನ್ನು ನಿರ್ದೇಶಿಸುವುದರ ಜತೆಗೆ ನಿರ್ಮಾಣದಲ್ಲೂ ತೊಡಗಿರುವ ಮುರಳಿಕೃಷ್ಣ, ಚಿತ್ರದ ವಿಶೇಷ ಪಾತ್ರಕ್ಕಾಗಿ ಬಾಲಿವುಡ್ ನಟ ಜಾನಿ ಲಿವರ್ ಅವರನ್ನು ಕರೆತಂದಿದ್ದಾಗಿ ಹೇಳಿಕೊಂಡರು. ಕನ್ನಡದ ಹಾಸ್ಯ ನಟ ಸಾಧು ಕೋಕಿಲ ಅವರ ಸಹೋದರರಾಗಿ ಜಾನಿ ಲಿವರ್ ಕಾಣಿಸಿಕೊಳ್ಳುತ್ತಿದ್ದಾರೆ. ಸದ್ಯಕ್ಕೆ ಆ ಭಾಗದ ಚಿತ್ರೀಕರಣ ಆಗಬೇಕಿದೆ. ಉಳಿದಂತೆ ಸ್ಟಾರ್ ನಟರನ್ನು ಬಳಸಿಕೊಂಡು ಒಂದು ಹಾಡನ್ನು ಚಿತ್ರೀಕರಿಸುವ ಯೋಚನೆಯೂ ಇದೆ. ಅಕ್ಟೋಬರ್‌ನಲ್ಲಿ ಚಿತ್ರವನ್ನು ಬಿಡುಗಡೆ ಮಾಡಲು ತಯಾರಿ ಮಾಡಿಕೊಳ್ಳುತ್ತಿರುವುದಾಗಿ ಹೇಳಿದರು ಅವರು.
ಇನ್ನು, ಅಂದಿನ ಹೈಲೆಟ್ ಹಿರಿಯ ಕಲಾವಿದೆ ರೂಪಾದೇವಿ. “ಈ ಹಿಂದೆ ಶಾಂತರಾಂರವರ ಸಾಕಷ್ಟು ಚಿತ್ರಗಳಲ್ಲಿ ಅಭಿನಯಿಸಿದ್ದೇನೆ. ಇಂದು ಅವರ ಸಹೋದರ ಮುರಳಿಕೃಷ್ಣ ಅವರ ನಿರ್ದೇಶನದಲ್ಲಿ ನಟಿಸುತ್ತಿರುವುದು ಖುಷಿ ತಂದಿದೆ’ ಅಂತ ನೆನಪು ಮೆಲುಕು ಹಾಕಿದರು. ರಾಮಕೃಷ್ಣ ಅವರು ಈ ಚಿತ್ರದಲ್ಲಿ ಹೀರೋ ತಂದೆಯ ಪಾತ್ರದಲ್ಲಿ ನಟಿಸುತ್ತಿದ್ದಾರೆ. ನಿರ್ದೇಶಕರ ಕೆಲಸವನ್ನು ಗುಣಗಾನ ಮಾಡಿದ ರಾಮಕೃಷ್ಣ, ಇದೊಂದು ಹೊಸ ಬಗೆಯ ಕಥೆ ಅಂದರು. ರೆಹಮಾನ್ ಅವರಿಲ್ಲಿ ಮದುಮಗನ ಗೆಳೆಯರಾಗಿ ಕಾಣಿಸಿಕೊಳ್ಳುತ್ತಿದ್ದಾರಂತೆ. ಆವಂತಿಕ ಮೋಹನ್ ಮತ್ತು ಆರ್ಯನ್ ಅಂದು ಒಳ್ಳೆಯ ಪಾತ್ರ ಸಿಕ್ಕಿದ್ದಕ್ಕೆ ಖುಷಿ ಹೊರಹಾಕಿದರು. ನಟಿ ನೇಹಾ ಪಾಟೀಲ್ ತಮ್ಮ ಪಾತ್ರದ ಗುಟ್ಟು ಬಿಟ್ಟುಕೊಡಲಿಲ್ಲ. ಉಳಿದಂತೆ ಅಂದು ಪದ್ಮಜಾ ರಾವ್, ಮಿಮಿಕ್ರಿ ದಯಾನಂದ್, ರಮೇಶ್ ಭಟ್, ಶ್ರೀಕಾಂತ್ ಹೆಬ್ಳೀಕರ್ ಇದ್ದರು.