Advertisement
ಈ ಪಾನೀಯವನ್ನು 6ರಿಂದ 18 ವರ್ಷದೊಳಗಿನ ಎಲ್ಲರೂ ಕುಡಿಯ ಬಹುದಾಗಿದ್ದು, ಇದರ ಜಾಹೀರಾತಿನಲ್ಲಿ ಕೇವಲ ಪುರುಷ ಕ್ರಿಕೆಟಿಗರೂ ಮಾತ್ರ ಇಲ್ಲಿವರೆಗೂ ಕಾಣಿಸಿಕೊಂಡಿದ್ದರು. ಅದಕ್ಕೆ ಕಾರಣ ಮಹಿಳಾ ಕ್ರಿಕೆಟ್ ಬಗ್ಗೆ, ಅದರ ಆಟಗಾರ್ತಿಯರ ಬಗ್ಗೆ ಜನರಿಗೆ ಪರಿಚಯ ಇಲ್ಲದೆ ಇರುವುದೇ ಆಗಿತ್ತು. ಆದರೆ ಈಗ ಕಾಲ ಬದಲಾಗಿದೆ. ವನಿತಾ ಕ್ರಿಕೆಟ್ ಭಾರತದಲ್ಲಿ ಜನಪ್ರಿಯತೆಯನ್ನು ಪಡೆಯುತ್ತಿದೆ. ಬೂಸ್ಟ್ ಇಸ್ ದ ಸೀಕ್ರೆಟ್ ಆಪ್ ಮೈ ಎನರ್ಜಿ ಎಂದು ಮಹಿಳಾ ಆಟಗಾರ್ತಿಯರು ಹೇಳುವ ಸಮಯ ಬಂದಿದೆ. ಹೌದು. ಬೂಸ್ಟ್‌ನ ಹೊಸ ಬ್ರ್ಯಾಂಡ್ ಅಂಬಾಸಿಡರ್ ಭಾರತದ ಮಹಿಳಾ ಕ್ರಿಕೆಟರ್. ಅವರೇ ಭಾರತ ಮಹಿಳಾ ಕ್ರಿಕೆಟ್ ತಂಡದ ನಾಯಕಿ ಹರ್ಮನ್‌ಪ್ರೀತ್ ಕೌರ್.
Related Articles
Advertisement
2012ರ ಏಪ್ಯಾ ಕಪ್‌ನಲ್ಲಿ ಮಿಥಾಲಿ ರಾಜ್ ಮತ್ತು ಜೂಲನ್ ಗೋಸ್ವಾಮಿ ಗಾಯಾಳಾಗಿ ತಂಡದಿಂದ ಹೊರಗುಳಿದ ಕಾರಣ ಕೌರ್‌ಗೆ ನಾಯಕಿಯಾಗುವ ಅವಕಾಶ ಒದಗುತ್ತದೆ. ಈ ಅವಕಾಶವನ್ನು ಎರಡೂ ಕೈಗಳಿಂದ ಚಾಚಿಕೊಳ್ಳುವ ಕೌರ್ ತಂಡವನ್ನು ಯಶಸ್ವಿಯಾಗಿ ಮುನ್ನಡೆಸುತ್ತಾರೆ. ಅಲ್ಲದೇ ಪೈನಲ್‌ನಲ್ಲಿ ಪಾಕಿಸ್ಥಾನದ ಎದುರು ಕೇವಲ 81 ರನ್‌ಗಳನ್ನು ಡಿಫೆಂಡ್ ಮಾಡಿಕೊಂಡು ಕಪ್ ಎತ್ತುವಲ್ಲಿ ಪ್ರಮುಖ ಪಾತ್ರ ವಹಿಸುತ್ತಾರೆ. 2013ರ ಪ್ರವಾಸಿ ಬಾಂಗ್ಲಾದೇಶದ ವಿರುದ್ಧದ ಏಕದಿನ ಸರಣಿಯಲ್ಲಿ ತಂಡವನ್ನು ಮುನ್ನಡೆಸುವ ಅವಕಾಶವೂ ಕೌರ್‌ಗೆ ಒಲಿಯುತ್ತದೆ. 2014ರಲ್ಲಿ ಇಂಗ್ಲೆಂಡ್‌ನ ವಿರುದ್ಧ ಕೌರ್ ಟೆಸ್ಟ್ ಪದಾರ್ಪಣೆ ಮಾಡುತ್ತಾರೆ.
2016ರಲ್ಲಿ ವನಿತಾ ಬಿಗ್ ಬ್ಯಾಶ್ ಲೀಗ್‌ನಲ್ಲಿ ಸಿಡ್ನಿ ಥಂಡರ್ಸ್ ಪರ ಆಡುವ ಅವಕಾಶ ಪಡೆಯುವ ಕೌರ್ ಈ ಸಾಧನೆ ಮಾಡಿದ ಭಾರತದ ಮೊದಲ ಕ್ರಿಕೆಟರ್ ಎನ್ನುವ ಹೆಗ್ಗಳಿಕೆಗೆ ಪಾತ್ರರಾಗುತ್ತಾರೆ. ಪ್ರಸ್ತುತ ಮೂರು ಮಾದರಿಯಲ್ಲಿಯೂ ಭಾರತವನ್ನು ಮುನ್ನಡೆಸುತ್ತಿರುವ ಕೌರ್ ತಂಡದ ಅದೆಷ್ಟೋ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ. ವನಿತಾ ಪ್ರೀಮಿಯರ್ ಲೀಗ್‌ನ ಮೊದಲ ಆವೃತ್ತಿಯಲ್ಲಿ ಮುಂಬೈ ಇಂಡಿಯನ್ಸ್ ನಾಯಕಿಯಾಗಿ ಕೌರ್ ತಂಡವನ್ನು ಯಶಸ್ವಿಯಾಗಿ ಮುನ್ನೆಡೆಸಿ ಚೊಚ್ಚಲ ಡಬ್ಲ್ಯುಪಿಎಲ್ ಕಪ್ ಎತ್ತಿ ದಾಖಲೆ ಬರೆದಿದ್ದಾರೆ.
ತಮ್ಮ ಸುದೀರ್ಘ ಕ್ರಿಕೆಟ್ ಪಯಣದಲ್ಲಿ 124 ಏಕದಿನ ಪಂದ್ಯಗಳನ್ನಾಡಿರುವ ಕೌರ್ 5 ಶತಕ, 17 ಅರ್ಧ ಶತಕ ಸಹಿತ 3,322 ರನ್ ಕಲೆಹಾಕಿದ್ದು, 31 ವಿಕೆಟ್ ಪಡೆದಿದ್ದಾರೆ. 171 ಏಕದಿನದಲ್ಲಿ ಇವರು ಗಳಿಸಿದ ವೈಯಕ್ತಿಕ ಗರಿಷ್ಠ ಮೊತ್ತ. ಅದು ಬಂದಿದ್ದು ಬಲಿಷ್ಠ ಆಸ್ಟ್ರೇಲಿಯಾದ ವಿರುದ್ಧ. 150 ಟಿ20 ಪಂದ್ಯಗಳನ್ನಾಡಿರುವ ಅವರು 1 ಶತಕ, 9 ಅರ್ಧ ಶತಕ, 32 ವಿಕೆಟ್ ಸಹಿತ 3,058 ರನ್ ರಾಶಿಹಾಕಿದ್ದಾರೆ. ನ್ಯೂಜಿಲ್ಯಾಂಡ್ ವಿರುದ್ಧದ ಪಂದ್ಯದಲ್ಲಿ 103 ರನ್ ಗಳಿಸಿದ ಕೌರ್ ಟಿ20ಯಲ್ಲಿ ಶತಕ ಸಾಧಿಸಿದ ಭಾರತದ ಮೊದಲ ವನಿತಾ ಆಟಗಾರ್ತಿ ಎನಿಸಿಕೊಂಡಿದ್ದಾರೆ. ಇಲ್ಲಿಯವರೆಗೂ ಕೌರ್ ಆಡಿದ್ದು ಕೇವಲ 3 ಟೆಸ್ಟ್ ಪಂದ್ಯಗಳಷ್ಟೇ. ಇದರಲ್ಲಿ ಅವರು 9 ವಿಕೆಟ್ ಸಹಿತ 38 ರನ್ ಗಳಿಸಿದ್ದಾರೆ.
ಕೌರ್ 171 ನಾಟ್ ಔಟ್
ಅದು 2017ರ ಏಕದಿನ ವಿಶ್ವಕಪ್ ಸೆಮಿಫೈನಲ್. ಲೀಗ್ ಹಂತದಲ್ಲಿ ಉತ್ತಮ ಪ್ರದರ್ಶನ ನೀಡುವ ಮೂಲಕ ಭಾರತ ಸೆಮಿಫೈನಲ್ ಪ್ರವೇಶಿಸಿತ್ತು. ಎದುರಾಳಿ ಬಲಿಷ್ಠ ಆಸ್ಟ್ರೇಲಿಯಾ. ಮಳೆಯಿಂದ ಪಂದ್ಯವನ್ನು 42 ಓವರ್‌ಗೆ ಸೀಮಿತಗೊಳಿಸಲಾಗುತ್ತದೆ. ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಳ್ಳುವ ಭಾರತ ಬಹಳ ಬೇಗ ತನ್ನ ಆರಂಭಿಕ ಆಟಗಾರ್ತಿಯರನ್ನು ಕಳೆದುಕೊಳ್ಳುತ್ತದೆ. ನಾಲ್ಕನೇ ಕ್ರಮಾಂಕದಲ್ಲಿ ಬ್ಯಾಟ್ ಹಿಡಿದು ಬಂದ ಹರ್ಮನ್‌ಪ್ರೀತ್ ಕೌರ್ ನಾಯಕಿ ಮಿಥಾಲಿ ರಾಜ್ ರೊಂದಿಗೆ ಸೇರಿ ನಿಧಾನವಾಗಿ ಇನ್ನಿಂಗ್ಸ್ ಬೆಳೆಸಲು ಪ್ರಾರಂಭಿಸುತ್ತಾರೆ. ತಂಡದ ಮೊತ್ತ 101 ಆಗಿರುವಾಗ ಮಿಥಾಲಿ ವಿಕೆಟ್ ಪತನವಾಗಿ ದೀಪ್ತಿ ಶರ್ಮ ಕ್ರೀಸಿಗೆ ಬರುತ್ತಾರೆ. ಇತ್ತ ಕೌರ್ ತಂಡಕ್ಕೆ ಉತ್ತಮ ಮೊತ್ತ ಒಟ್ಟುಗೂಡಿಸುವ ಸಲುವಾಗಿ ಆಕ್ರಮಣಕಾರಿ ಆಟಕ್ಕೆ ಮುಂದಾಗುತ್ತಾರೆ. 42 ಓವರ್ ಮುಕ್ತಾಯದಲ್ಲಿ ಭಾರತದ ಮೊತ್ತ 284ಕ್ಕೆ 4. ಇದರಲ್ಲಿ ಕೌರ್ ಒಬ್ಬರ ಕೊಡುಗೆ 171. ಈ ಅಜೇಯ ಆಟ 20 ಬೌಂಡರಿ ಹಾಗೂ 7 ಸಿಕ್ಸರ್‌ಗಳನ್ನು ಒಳಗೊಂಡಿತ್ತು. ಇದು ಕೌರ್ ವೃತ್ತಿ ಬದುಕಿನ ಅವಿಸ್ಮರಣೀಯ ಇನ್ನಿಂಗ್ಸ್ ಎಂದೇ ಹೇಳಬಹುದಾಗಿದೆ. ಈ ಪಂದ್ಯವನ್ನು 36 ರನ್‌ಗಳಿಂದ ಜಯಿಸಿ ಭಾರತ ಫೈನಲ್‌ಗೆ ಲಗ್ಗೆ ಇಡುತ್ತದೆ.
ಭಾರತದ ಪರ ಏಕದಿನದಲ್ಲಿ ಅತೀ ಹೆಚ್ಚು ಅಂಕ ಗಳಿಸಿದವರ ಯಾದಿಯಲ್ಲಿ ದ್ವಿತೀಯ ಸ್ಥಾನದಲ್ಲಿಯೂ, ಟಿ20ಯಲ್ಲಿ ಪ್ರಥಮ ಸ್ಥಾನದಲ್ಲಿ ಇರುವ ಈ ಅರ್ಜುನ ಪ್ರಶಸ್ತಿ ವಿಜೇತೆ ನಿಜಕ್ಕೂ ಯುವ ಆಟಗಾರರಿಗೆ ದೊಡ್ಢ ಸ್ಫೂರ್ತಿ. ಭಾರತ ತಂಡಕ್ಕೆ ಅವರ ಕೊಡುಗೆ ಇನ್ನಷ್ಟು ಸಲ್ಲಲಿ, ಭಾರತಕ್ಕೆ ಅವರು ಮೊದಲ ವಿಶ್ವಕಪ್ ತಂದು ಕೊಡಲಿ ಎನ್ನುವುದೇ ಕ್ರಿಕೆಟ್ ಅಭಿಮಾನಿಗಳ ಹಾರೈಕೆ.
ಸುಶ್ಮಿತಾ ನೇರಳಕಟ್ಟೆ