ಹೊಳಲ್ಕೆರೆ(ಚಿತ್ರದುರ್ಗ): ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ವೋಟ್‌ಬ್ಯಾಂಕ್ ರಾಜಕಾರಣಕ್ಕಾಗಿ ಹಿಂದೂ ವಿರೋಧಿ ನೀತಿ ಆಡಳಿತ ನಡೆಸುತ್ತಿದೆ ಎಂದು ಆರೋಪಿಸಿರುವ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ, ಈ ಸರ್ಕಾರವನ್ನು ಅಧಿಕಾರದಿಂದ ತೊಲಗಿಸಿ ಬಿ.ಎಸ್.ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರ್ಕಾರವನ್ನು ಅಧಿಕಾರಕ್ಕೆ ತರಲು ಕಾರ್ಯಕರ್ತರು ಸನ್ನದ್ಧ ರಾಗುವಂತೆ ಕರೆ ನೀಡಿದರು.
ರಾಜ್ಯ ಬಿಜೆಪಿ ಹಮ್ಮಿಕೊಂಡಿರುವ ಪರಿವರ್ತನಾ ಯಾತ್ರೆ ಅಂಗವಾಗಿ ಹೊಳಲ್ಕೆರೆಯಲ್ಲಿ ಬುಧವಾರ ನಡೆದ ಬೃಹತ್ ಸಮಾವೇಶದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ರಾಜ್ಯದಲ್ಲಿ ಆರ್‌ಎಸ್‌ಎಸ್, ಬಿಜೆಪಿ ಕಾರ್ಯಕರ್ತರ ಹತ್ಯೆಗಳು ನಡೆಯುತ್ತಿದ್ದು, ಇದರಲ್ಲಿ ಶಾಮೀಲಾಗಿರುವ ದೇಶವಿರೋಧಿ ಸಂಘಟನೆಗಳ ವಿರುದ್ಧ ಕ್ರಮ ಕೈಗೊಳ್ಳುತ್ತಿಲ್ಲ. ಎಸ್‌ಡಿಪಿಐ ನಂತಹ ದೇಶದ್ರೋಹಿ ಮತ್ತು ಮೂಲಭೂತವಾದಿ ಸಂಘಟನೆಗಳ ಕಾರ್ಯಕರ್ತರ ಮೇಲಿನ ಮೊಕದ್ದಮೆಗಳನ್ನು ಕಾಂಗ್ರೆಸ್ ಸರ್ಕಾರ ವಾಪಸ್ ಪಡೆಯುತ್ತಿದೆ ಎಂದು ವಾಗ್ಧಾಳಿ ನಡೆಸಿದರು.
ಭಾಗವತ ಸಪ್ತಾಹದಂತೆ ಭ್ರಷ್ಟಾಚಾರದ ಪಟ್ಟಿ: ರಾಜ್ಯ ಸರ್ಕಾರದ ಭ್ರಷ್ಟಾಚಾರಗಳ ಕುರಿತು ಒಂದೊಂದೇ ಉದಾಹರಣೆಗಳನ್ನು ನೀಡಿದ ಅಮಿತ್ ಶಾ, ಭ್ರಷ್ಟಾಚಾರದ ಕುರಿತು ದೊಡ್ಡ ಪಟ್ಟಿಯೇ ನಮ್ಮ ಬಳಿ ಇದೆ. ಇದನ್ನು ಪೂರ್ಣ ಓದಬೇಕಾದರೆ ಭಾಗವತ ಸಪ್ತಾಹದಂತೆ ಒಂದು ವಾರ ಬೇಕಾಗುತ್ತದೆ. ಈ ಭ್ರಷ್ಟಾಚಾರವು ರಾಜ್ಯದ ಪ್ರಗತಿಯನ್ನು ಸಂಪೂರ್ಣ ಕುಂಠಿತಗೊಳಿಸಿದ್ದು, ಅಭಿವೃ ಮತ್ತು ಜನರ ನಡುವಿನ ಸಂಪರ್ಕವನ್ನೇ ಕಡಿದು ಹಾಕಿದೆ ಎಂದರು.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಹ್ಯಾಬ್ಲೋಟ್ ವಾಚ್ ಕುರಿತು ಪ್ರಸ್ತಾಪಿಸಿದ ಅವರು,ಯಾವುದೇ ಪ್ರತಿಫಲಾಪೇಕ್ಷೆ ಇಲ್ಲದೆ ಯಾರಿಗಾದರೂ ವ್ಯಕ್ತಿಯೊಬ್ಬರು 70 ಲಕ್ಷ ರೂ. ಮೌಲ್ಯದ ಕೈಗಡಿಯಾರ ಉಚಿತವಾಗಿ ಉಡುಗೊರೆ ಕೊಡುತ್ತಾರೆ ಎಂದರೆ ನಂಬಲು ಸಾಧ್ಯವೇ ಎಂದು ಪ್ರಶ್ನಿಸಿದರಲ್ಲದೆ, ಜನರ ತೆರಿಗೆ ಹಣವನ್ನು ಉದ್ಯಮಿಗಳಿಗೆ ನೀಡಿದ್ದಕ್ಕಾಗಿಯೇ ಈ ಉಡುಗೊರೆ ಬಂದಿದೆ ಎಂದು ಆರೋಪಿಸಿದರು.
ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ, ರಾಜ್ಯ ಬಿಜೆಪಿ ಉಸ್ತುವಾರಿ ಮುರಳೀಧರರಾವ್, ಸಹ ಉಸ್ತುವಾರಿ ಪುರಂದೇಶ್ವರಿ, ರಾಜ್ಯ ಚುನಾವಣಾ ಉಸ್ತುವಾರಿ ಪ್ರಕಾಶ್ ಜಾವಡೇಕರ್, ವಿಧಾನಸಭೆ ಪ್ರತಿಪಕ್ಷ ನಾಯಕ ಜಗದೀಶ ಶೆಟ್ಟರ್, ವಿಧಾನ ಪರಿಷತ್ ಪ್ರತಿಪಕ್ಷ ನಾಯಕ ಕೆ.ಎಸ್.ಈಶ್ವರಪ್ಪ, ಶಾಸಕರಾದ ಅರವಿಂದ ಲಿಂಬಾವಳಿ, ಸಿ.ಟಿ.ರವಿ,ಗೋವಿಂದ ಕಾರಜೋಳ, ಮಾಜಿ ಶಾಸಕ ಎಂ.ಚಂದ್ರಪ್ಪ ಸೇರಿ ಹಲವರು ಪಾಲ್ಗೊಂಡಿದ್ದರು.
ಅಧಿಕಾರ ಕೊನೆಯಾಗಿ ಬಿಜೆಪಿ ರಾಜ್ಯದಲ್ಲಿ ಆಡಳಿತ ನಡೆಸಲಿದೆ. ಈ ಸಂದರ್ಭದಲ್ಲಿ ಹಿಂದೂ ಕಾರ್ಯಕರ್ತರ ಹತ್ಯೆಯಲ್ಲಿ ಶಾಮಿಲಾಗಿರುವವರು ಜೈಲಿಗೆ ಹೋಗಲಿದ್ದಾರೆ.
– ಅಮಿತ್ ಶಾ,
ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ
ಇಂದು ಮೋದಿ ಭೇಟಿ
ಪ್ರಧಾನಿ ಮೋದಿ ಮತ್ತು ಅಮಿತ್ ಶಾ ಗುರುವಾರ ನವದೆಹಲಿಯಲ್ಲಿ ಪಕ್ಷದ ನಾಯಕರನ್ನು ಭೇಟಿಯಾಗಲಿದ್ದಾರೆ. ಕರ್ನಾಟಕದಲ್ಲಿ ಶೀಘ್ರವೇ ಚುನಾವಣೆ ನಡೆಯಲಿರುವ ಹಿನ್ನೆಲೆಯಲ್ಲಿ ಈ ಸಭೆ ಮಹತ್ವ ಪಡೆದಿದೆ. ಸದ್ಯ ಕಾಂಗ್ರೆಸ್ ಆಡಳಿತ ಇರುವ ರಾಜ್ಯದಲ್ಲಿ ಯಾವ ರೀತಿ ಪ್ರಚಾರಕ್ಕೆ ತಂತ್ರ ರೂಪಿಸಬೇಕು ಎಂಬ ಬಗ್ಗೆ
ಚರ್ಚೆಯಾಗುವ ಸಾಧ್ಯತೆಗಳಿವೆ. ಇದರ ಜತೆಗೆ ತ್ರಿಪುರಾ ಮತ್ತು ಮೇಘಾಲಯ ಚುನಾವಣೆ ಬಗ್ಗೆಯೂ ವಿಚಾರ
ವಿನಿಮಯ ನಡೆಯುವ ಸಾಧ್ಯತೆ ಇದೆ.