Advertisement
ಹೀಗಾಗಿ ಬಿಜೆಪಿಯ ಸರ್ಕಾರ ಉರುಳಿಸುವ ಪ್ರಯತ್ನಕ್ಕೆ ತಿರುಗೇಟು ನೀಡಲು ನಿರ್ಧರಿಸಿದ್ದ ಜೆಡಿಎಸ್‌ಗೆ ಆತಂಕ ಕಾಣಿಸಿಕೊಂಡಿದ್ದು, ಸರ್ಕಾರ ಉರುಳುವ ಪರಿಸ್ಥಿತಿ ಉದ್ಭವಿಸಿದರೆ ತನ್ನ ಶಾಸಕರು ಬಿಜೆಪಿಯತ್ತ ಹೋಗದಂತೆ ನೋಡಿಕೊಳ್ಳಲು ಗಮನಹರಿಸಬೇಕಾದ ಪರಿಸ್ಥಿತಿ ಬಂದಿದೆ.
Related Articles
Advertisement
ಈ ಕಾರಣಕ್ಕಾಗಿಯೇ ಬಿಜೆಪಿಯ ಐವರು ಶಾಸಕರು ರಾಜೀನಾಮೆ ಕೊಟ್ಟು ನಮ್ಮೊಂದಿಗೆ ಬರಲು ಸಿದ್ಧರಾಗಿದ್ದಾರೆ. ಬಿಜೆಪಿಯವರು ಸರ್ಕಾರ ಉರುಳಿಸುವ ಪ್ರಯತ್ನ ಮಾಡಿದರೆ ಅದನ್ನು ಉಳಿಸಿಕೊಳ್ಳುವುದು ಹೇಗೆ ಎಂಬುದು ನಮಗೆ ಗೊತ್ತು ಎಂದು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಆದಿಯಾಗಿ ಜೆಡಿಎಸ್ ನಾಯಕರು ಹೇಳಿಕೆ ನೀಡಿದ್ದರು.
ಆದರೆ, ಕಾಂಗ್ರೆಸ್‌ನ ಸಚಿವ ರಮೇಶ್ ಜಾರಕಿಹೊಳಿ ಮತ್ತು ಅವರ ಸಹೋದರ ಸತೀಶ್ ಜಾರಕಿಹೊಳಿ ಪ್ರಕರಣದಿಂದಾಗಿ ಕಾಂಗ್ರೆಸ್‌ನ ಹಲವು ಶಾಸಕರು ರಾಜೀನಾಮೆ ಕೊಡಲಿದ್ದಾರೆ. ಸಮ್ಮಿಶ್ರ ಸರ್ಕಾರ ಉರುಳಿ ಬಿಜೆಪಿ ಸರ್ಕಾರ ರಚನೆಯಾಗಲಿದೆ ಎಂಬ ಊಹಾಪೋಹಗಳು ಎದ್ದಿವೆ. ಇದಾದ ಬಳಿಕ ಜೆಡಿಎಸ್ ಜತೆ ನಿಕಟ ಸಂಪರ್ಕದಲ್ಲಿದ್ದ ಬಿಜೆಪಿಯ ಇಬ್ಬರು ಶಾಸಕರು ದೂರ ಸರಿದಿದ್ದು, ಜೆಡಿಎಸ್ ನಾಯಕರ ಸಂಪರ್ಕಕ್ಕೆ ಸಿಗುತ್ತಿಲ್ಲ. ಅಲ್ಲದೆ, ಬಿಜೆಪಿ ನಾಯಕರನ್ನು ಭೇಟಿಯಾಗಿ ನಾವು ಜೆಡಿಎಸ್ ಜತೆ ಹೋಗುತ್ತೇವೆ ಎಂಬುದು ಸುಳ್ಳು. ಬಿಜೆಪಿ ಜತೆಗೇ ಇರುತ್ತೇವೆ ಎಂದು ಸ್ಪಷ್ಟಪಡಿಸಿದ್ದಾರೆ. ಹೀಗಾಗಿ ಬಿಜೆಪಿ ಶಾಸಕರನ್ನು ಸೆಳೆದುಕೊಳ್ಳುವ ಜೆಡಿಎಸ್ ಪ್ರಯತ್ನಕ್ಕೆ ತೀವ್ರ ಹಿನ್ನಡೆ ಉಂಟಾಗಿದೆ.
ಶಾಸಕರಿಗೆ ನಿಗಮ-ಮಂಡಳಿ ಅಧ್ಯಕ್ಷ ಸ್ಥಾನಈ ಮಧ್ಯೆ ಪಕ್ಷದ ಶಾಸಕರು ಆಪರೇಷನ್ ಕಮಲಕ್ಕೆ ಬಲಿಯಾಗದಂತೆ ನೋಡಿಕೊಳ್ಳಲು ಮಂತ್ರಿ ಸ್ಥಾನ ಸಿಗದೇ ಇರುವ ಎಲ್ಲಾ ಶಾಸಕರಿಗೂ ಪ್ರಮುಖ ನಿಗಮ-ಮಂಡಳಿಗಳ ಅಧ್ಯಕ್ಷ ಸ್ಥಾನ ಕಲ್ಪಿಸುವ ಭರವಸೆಯನ್ನು ಜೆಡಿಎಸ್ ನಾಯಕರು ನೀಡಿದ್ದಾರೆ. ಸೆಪ್ಟೆಂಬರ್ ಅಂತ್ಯದೊಳಗೆ ಸಚಿವ ಸಂಪುಟ ವಿಸ್ತರಣೆಯಾಗಲಿದ್ದು, ಪಕ್ಷಕ್ಕೆ ಲಭ್ಯವಾಗಿರುವ ಸಚಿವ ಸ್ಥಾನಗಳ ಪೈಕಿ ಖಾಲಿ ಇರುವ ಒಂದು ಸ್ಥಾನವನ್ನು ಭರ್ತಿ ಮಾಡಲಾಗುವುದು. ಇದಾದ ಬಳಿಕ 37 ಶಾಸಕರ ಪೈಕಿ 11 ಮಂದಿಗೆ ಅಧಿಕಾರ ಸಿಕ್ಕಂತಾಗುತ್ತದೆ. ಉಳಿದ 26 ಶಾಸಕರಿಗೆ ಪಕ್ಷಕ್ಕೆ ಲಭ್ಯವಾಗುವ ನಿಗಮ-ಮಂಡಳಿಗಳ ಪೈಕಿ ಪ್ರಮುಖ ಅಂದರೆ ಲಾಭದಾಯಕ ಮತ್ತು ಹೆಚ್ಚು ಅನುದಾನ ಲಭ್ಯವಾಗುವ ನಿಗಮ-ಮಂಡಳಿಗಳ ಅಧ್ಯಕ್ಷ ಸ್ಥಾನ ನೀಡಲಾಗುವುದು ಎಂಬ ಭರವಸೆಯನ್ನು ಜೆಡಿಎಸ್ ವರಿಷ್ಠ ದೇವೇಗೌಡ ಹಾಗೂ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ನೀಡಿದ್ದಾರೆ ಎಂದು ತಿಳಿದುಬಂದಿದೆ. ಇದೀಗ ಕಾಂಗ್ರೆಸ್ ಶಾಸಕರಿಂದ ರಾಜೀನಾಮೆ ಕೊಡಿಸಿ ಸರ್ಕಾರ ಉರುಳಿಸುವ ಪ್ರಯತ್ನಕ್ಕೆ ಮುಂದಾಗಿರುವ ಬಿಜೆಪಿ ಸಂಖ್ಯಾಬಲದ ಸಮಸ್ಯೆ ಎದುರಾದರೆ ಜೆಡಿಎಸ್ ಶಾಸಕರಿಗೂ ಗಾಳ ಹಾಕುವ ಸಾಧ್ಯತೆ ಇದೆ. ಈ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕೆ ಕ್ರಮವಾಗಿ ಜೆಡಿಎಸ್ ಈ ಕ್ರಮ ಕೈಗೊಳ್ಳುತ್ತಿದೆ ಎಂದು ತಿಳಿದುಬಂದಿದೆ.