ಮುಂಬೈ: ಬೃಹನ್ ಮುಂಬೈ ಮಹಾನಗರ ಪಾಲಿಕೆಯ ಮೇಯರ್ ಪಟ್ಟಕ್ಕೆ ಶಿವಸೇನೆ ಅಭ್ಯರ್ಥಿಯನ್ನು ಘೋಷಿಸಿದ ಕೆಲವೇ ಹೊತ್ತಿನಲ್ಲಿ, ಬಿಜೆಪಿ ಪಕ್ಷದಿಂದ ಯಾವುದೇ ಅಭ್ಯರ್ಥಿಯನ್ನು ಮೇಯರ್ ಸ್ಥಾನಕ್ಕೆ ಕಣಕ್ಕಿಳಿಸುವುದಿಲ್ಲ ಎಂದು ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಶನಿವಾರ ಘೋಷಿಸಿದ್ದಾರೆ.
ಬೃಹನ್ಮುಂಬೈ ಮಹಾನಗರ ಪಾಲಿಕೆಯ ಮೇಯರ್, ಉಪಮೇಯರ್ ಸ್ಥಾನಕ್ಕೆ ನಾವು ಯಾವುದೇ ಅಭ್ಯರ್ಥಿಗಳನ್ನು ಕಣಕ್ಕಿಳಿಸುವುದಿಲ್ಲ ಎಂದು ಹೇಳಿದ ಫಡ್ನವೀಸ್, ನಾವು ಆಡಳಿತಾರೂಢ(ಶಿವಸೇನೆ) ಪಕ್ಷಕ್ಕೆ ಬೆಂಬಲ ನೀಡುವುದಾಗಿ ಹೇಳಿದರು. ಆದರೆ ಯಾವುದೇ ಕಾರಣಕ್ಕೂ ಪಾರದರ್ಶಕತೆ ವಿಚಾರದಲ್ಲಿ ಯಾವುದೇ ರಾಜಿ ಇಲ್ಲ ಎಂದು ಸ್ಪಷ್ಟಪಡಿಸಿದರು.
ಬಿಎಂಸಿ ಮೇಯರ್, ಉಪಮೇಯರ್ ಸ್ಥಾನಕ್ಕಾಗಿ ಶಿವಸೇನೆ ತನ್ನ ಅಭ್ಯರ್ಥಿಗಳನ್ನು ಘೋಷಿಸಿತ್ತು. ವಿಶ್ವನಾಥ್ ಮಹಾದೇಶ್ವರ್ ಮೇಯರ್ ಸ್ಥಾನಕ್ಕೆ ಹಾಗೂ ಹರೇಶ್ವರ್ ವೊರ್ಲಿಕರ್ ಉಪಮೇಯರ್ ಸ್ಥಾನಕ್ಕೆ ಅಭ್ಯರ್ಥಿಗಳು ಎಂದು ಪ್ರಕಟಿಸಿತ್ತು.
ಇತ್ತೀಚೆಗೆ ಬೃಹನ್ ಮುಂಬೈ ಮಹಾನಗರ ಪಾಲಿಕೆಗೆ ನಡೆದ ಜಿದ್ದಾಜಿದ್ದಿನ ಚುನಾವಣೆಯಲ್ಲಿ ಅತಂತ್ರ ಫಲಿತಾಂಶ ಹೊರಬಿದ್ದಿತ್ತು. 84 ಸ್ಥಾನಗಳನ್ನು ಪಡೆದ ಶಿವಸೇನೆ ದೊಡ್ಡ ಪಕ್ಷವಾಗಿ ಹೊರಹೊಮ್ಮಿದ್ದರೆ,
ಬಿಜೆಪಿ 82 ಸ್ಥಾನ ಪಡೆದು 2ನೇ ಸ್ಥಾನದಲ್ಲಿತ್ತು. ಆದರೆ 227 ಸದಸ್ಯ ಬಲದ ಬಿಎಂಸಿಯಲ್ಲಿ ಅಧಿಕಾರದ ಚುಕ್ಕಾಣಿ ಹಿಡಿಯಲು 114 ಸ್ಥಾನದ ಅಗತ್ಯವಿದೆ. ಇದೀಗ ಅನಿವಾರ್ಯವಾಗಿ ಶಿವಸೇನೆ ಬಿಜೆಪಿ ಜೊತೆ ಕೈಜೋಡಿಸುವ ಮೂಲಕ ಮಹಾನಗರ ಪಾಲಿಕೆಯ ಆಡಳಿತ ಚುಕ್ಕಾಣಿ ಹಿಡಿಯಬೇಕಾಗಿದೆ.