Advertisement
ಕಾಂಗ್ರೆಸ್ ಮೇಲೆ ಒಲವು, ಬಿಜೆಪಿ ಮೇಲೆ ಮುನಿಸು ಎನ್ನುವಂತೆ ನಿಮ್ಮ ವರ್ತನೆ ಬಿಂಬಿತ ಆಗುತ್ತಲೇ ಇರುವುದೇಕೆ?ನಾನು ಕಾಂಗ್ರೆಸ್ ಬಿಟ್ಟು ಬಿಜೆಪಿಗೆ ಬಂದು ಸರಕಾರ ರಚನೆಯಾಗಿ, ಸಚಿವನಾಗಿದ್ದಾಗ ಯಾವುದೇ ಸಮಸ್ಯೆಗಳಿರಲಿಲ್ಲ. ಸರಕಾರದ ಅವಧಿ ಮುಗಿದು 2023ರಲ್ಲಿ ಚುನಾವಣೆ ನಡೆ ದಾಗ ಬಿಜೆಪಿಯ ಕೆಲವು ಆಕಾಂಕ್ಷಿಗಳು ನನ್ನನ್ನು ಸೋಲಿಸಲು ಜೆಡಿಎಸ್, ಕಾಂಗ್ರೆಸ್ ಜತೆ ಕೈ ಜೋಡಿಸಿದ್ದರು. ಸಾಕ್ಷ್ಯಾಧಾರ ಸಮೇತ ಪಕ್ಷದ ನಾಯಕರಿಗೆ ತಿಳಿಸಿದ್ದೆ. ತಲೆಕೆಡಿಸಿಕೊಳ್ಳಬೇಡಿ, ನಿಮ್ಮ ಕೆಲಸ ಮಾಡಿಕೊಂಡು ಹೋಗಿ ಎಂದಿದ್ದರು. ಸ್ಪರ್ಧಿಸಿ, ಗೆದ್ದೆ. ವಿರೋಧಿಗಳು ನನಗೆ ಅಭಿನಂದನಾ ಸಮಾರಂಭ ಇಟ್ಟುಕೊಂಡಾಗ ನೇರವಾಗಿ ಮಾತನಾಡಿದ್ದೆ. ಕುರುಬ ಸಮುದಾಯಕ್ಕೆ ಸಂಬಂಧಿಸಿದ ಮಠದ ಕಾರ್ಯಕ್ರಮದಲ್ಲಿ ಸಿಎಂ ವೇದಿಕೆ ಹಂಚಿಕೊಂಡಿದ್ದನ್ನು ಅಪಪ್ರಚಾರ ಮಾಡಿದರು. ಅದೇ ವೇದಿಕೆಯಲ್ಲಿ ಕೆ.ಎಸ್. ಈಶ್ವರಪ್ಪ ಕೂಡ ಇದ್ದರು. ತಪ್ಪೇನಿತ್ತು? ಬೆಂಗಳೂರು ಜಿಲ್ಲಾ ಉಸ್ತುವಾರಿ ಸಚಿವರೂ ಆದ ಡಿಸಿಎಂ ನನ್ನ ಕ್ಷೇತ್ರದಲ್ಲಿನ ಕೆಂಪೇಗೌಡ ಬಡಾವಣೆಗೆ ಭೇಟಿ ನೀಡಿದಾಗ ಸ್ಥಳದಲ್ಲಿದ್ದೆ. ಡಿಸಿಎಂ ಜತೆ ಗುರುತಿಸಿಕೊಂಡಿದ್ದೇನೆ. ಬಿಜೆಪಿ ಬಿಡುತ್ತೇನೆ ಎಂದು ಅಪಪ್ರಚಾರ ಮಾಡಿದರು. ಇದಕ್ಕೆ ನಾನೇನು ಹೇಳಲಿ?
ಪಕ್ಷ ಅಥವಾ ಸಂಘ ಪರಿವಾರ ನನ್ನನ್ನು ಎಂದಿಗೂ ಕಡೆಗಣಿಸಿಲ್ಲ. ನನಗೆ ಸಿಗಬೇಕಾದ ಗೌರವ ಸಿಕ್ಕಿದೆ. ಅಲ್ಲೆಲ್ಲೂ ನನಗೆ ಸಮಸ್ಯೆಯೇ ಇಲ್ಲ. ಪಕ್ಷದಲ್ಲಿನ ಕೆಲವರು ಸ್ಥಳೀಯವಾಗಿ ಸಹಕರಿಸುತ್ತಿಲ್ಲ. ನಾನು ಆಯೋಜಿಸುವ ಕಾರ್ಯಕ್ರಮ ಅಥವಾ ನಾನು ಭಾಗಿಯಾದ ಕಾರ್ಯಕ್ರಮವನ್ನು ಬಹಿಷ್ಕರಿಸುತ್ತಾರೆ. ನನ್ನ ವಿರುದ್ಧ ಚುನಾವಣೆಯಲ್ಲಿ ಕೆಲಸ ಮಾಡಿದ ಒಂದಿಬ್ಬರನ್ನು ಅಮಾನತು ಮಾಡಲಾಯಿತು. ನಾನೇನು ಕೇಳಿರಲಿಲ್ಲ. ಈಗ ಅದೇ ವ್ಯಕ್ತಿಗಳನ್ನು ಮತ್ತೆ ಪಕ್ಷಕ್ಕೆ ಕರೆದುಕೊಳ್ಳಲಾಗಿದೆ. ನನ್ನನ್ನು ಕೇಳದೆ ಅಮಾನತು ಆದೇಶ ಸಹ ವಾಪಸ್ ಪಡೆಯಲಾಗಿದೆ. ಶಾಸಕನಿಗೆ ಕೊಡಬೇಕಾದ ಗೌರವ ಕೊಡಲಿಲ್ಲ. ಪಕ್ಷ ವಿರೋಧಿ ಚಟುವಟಿಕೆ ಮಾಡಿದವರಿಗೆ ಮನ್ನಣೆ ಕೊಟ್ಟರು. ಅವರ ವಿರುದ್ಧ ಕ್ರಮ ಜರುಗಿಸಲಿಲ್ಲ. ಅಂತಹವರಿಗೆ ಮಣೆ ಹಾಕಿದರೆ ಬೇಸರ ಆಗುವುದಿಲ್ಲವೇ? ಇಷ್ಟೆಲ್ಲಾ ಆದ ಮೇಲೆ ಅಲ್ಲಿದ್ದು ಏನು ಮಾಡಲಿ. ಅದಕ್ಕೆ ಅಸಮಾಧಾನ ಆಗಿ, ಪಕ್ಷದ ಯಾವುದೇ ಚಟುವಟಿಕೆಯಲ್ಲೂ ಭಾಗಿಯಾಗುತ್ತಿಲ್ಲ ಅಷ್ಟೆ. ಲೋಕಸಭೆ ಚುನಾವಣೆಯಲ್ಲಿ ಮೈತ್ರಿ ಅಭ್ಯರ್ಥಿ ಪರ ಕೆಲಸ ಮಾಡುವುದಿಲ್ಲವೇ?
ಮೈತ್ರಿಗೆ ನನ್ನ ಸಮಾಧಾನ ಇಲ್ಲ. ಇದು ನನ್ನ 6ನೇ ಚುನಾವಣೆ. 4 ಚುನಾವಣೆಗಳಲ್ಲಿ ಜೆಡಿಎಸ್ ನನ್ನ ವಿರುದ್ಧ ಅಪಪ್ರಚಾರ, ಸುಳ್ಳು ಹೇಳಿದ್ದೇ ಹೆಚ್ಚು. ನನ್ನನ್ನು ಗುರಿ ಮಾಡಿಕೊಂಡು ಬಂದದ್ದೇ ಹೆಚ್ಚು. ಕ್ಷೇತ್ರದಲ್ಲಿ ನನ್ನ ವಿರುದ್ಧ ಕಾಂಗ್ರೆಸ್ ಅಭ್ಯರ್ಥಿ ಇಲ್ಲ. ಜೆಡಿಎಸ್ ನೇರ ವಿರೋಧಿ. ಹೀಗಿರುವಾಗ ಹೊಂದಾಣಿಕೆ ಹೇಗೆ ಸಾಧ್ಯ? ಕಾಂಗ್ರೆಸ್‌ನಲ್ಲಿದ್ದಾಗ ಜೆಡಿಎಸ್ ಮೈತ್ರಿಗೆ ಪಕ್ಷ ಹೇಳಿದ್ದರಿಂದ ಒಪ್ಪಿದ್ದೆವು. ಆದರೆ ಸರಿ ಬರಲಿಲ್ಲ. ಸಮ್ಮಿಶ್ರ ಸರಕಾರದಲ್ಲಿ ಸರಿಯಾಗಿ ಸ್ಪಂದಿಸದ್ದರಿಂದಲೇ ಬಿಜೆಪಿಗೆ ಬಂದದ್ದು. ಇಷ್ಟೆಲ್ಲಾ ಆದ ಬಳಿಕ ಜೆಡಿಎಸ್ ಜತೆ ಹೇಗೆ ಕೆಲಸ ಮಾಡುವುದು? ಈ ಬಗ್ಗೆ ಪಕ್ಷದ ಸಂಘಟನ ಕಾರ್ಯದರ್ಶಿ, ಅಂದಿನ ಅಧ್ಯಕ್ಷ ನಳಿನ್ ಕುಮಾರ್ ಕಟೀಲು, ವಿಪಕ್ಷ ನಾಯಕ ಅಶೋಕ ಎಲ್ಲರಿಗೂ ಹೇಳಿದ್ದೆ. ಸರಿಪಡಿಸುವ ಕೆಲಸ ಮಾಡಿಲ್ಲ. ಮನಸ್ಸಿಗೆ ಬೇಜಾರಾಗಿ ಪಕ್ಷದ ಕಾರ್ಯಕ್ರಮಗಳಿಂದ ದೂರ ಉಳಿದಿದ್ದೇನೆ. ಬಿಜೆಪಿ ಕಾರ್ಯಕಾರಿಣಿಗೆ ನನ್ನನ್ನು ಕರೆದಿಲ್ಲ. ಈ ಬಗ್ಗೆ ಮಾತುಕತೆಗೆಂದು ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ, ಪಕ್ಷದ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಅವರೊಂದಿಗೆ ನಿಗದಿಯಾಗಿದ್ದ ಸಭೆ ಸದ್ಯಕ್ಕೆ ಮುಂದೂಡಿಕೆಯಾಗಿದೆ. ಸಭೆಯಲ್ಲಿ ಏನು ಚರ್ಚೆಯಾಗುತ್ತದೆಯೋ ನೋಡಬೇಕಿದೆ.
Related Articles
ಯಾವುದೇ ಕಾರಣಕ್ಕೂ ಅಡ್ಡಮತದಾನ ಮಾಡುವುದಿಲ್ಲ. ಆ ಮಟ್ಟಕ್ಕೆ ಪಕ್ಷದ ವಿರುದ್ಧ ಹೋಗುವಂಥದ್ದೇನೂ ನಾನು ಮಾಡಿಲ್ಲ. ರಾಜ್ಯಸಭೆ ಚುನಾವಣೆಯಲ್ಲಿ ಬಿಜೆಪಿಗೇ ನನ್ನ ಮತ ಇರಲಿದೆ. ಕಾಂಗ್ರೆಸ್ ಬಿಟ್ಟಾಗ ಬಿಜೆಪಿಗೆ ನನ್ನ ಆವಶ್ಯಕತೆ ಇತ್ತು. ಆದರೀಗ ಬಿಜೆಪಿ ಬಿಟ್ಟರೆ ಕಾಂಗ್ರೆಸ್‌ಗೆ ನನ್ನ ಆವಶ್ಯಕತೆ ಏನಿದೆ? ಅಲ್ಲೇ 135 ಮಂದಿ ಕಿತ್ತಾಡುತ್ತಿದ್ದಾರೆ. ಜೆಡಿಎಸ್ ಜತೆಗಿನ ಹೊಂದಾಣಿಕೆಗೆ ಅಸಮಾಧಾನ ಇರುವುದು ನಿಜ. ಬಿಜೆಪಿಯಲ್ಲಿ ಎಲ್ಲರೂ ಆರಾಮವಾಗಿಲ್ಲ. ಮೈತ್ರಿಗೆ ಎಲ್ಲರದ್ದೂ ವಿರೋಧ ಇದೆ ಎಂದಲ್ಲ. ನಾನಷ್ಟೇ ಅಲ್ಲ, ಅನೇಕರ ವಿರೋಧವಿದೆ. ಬಿಜೆಪಿಯಲ್ಲಿ ಕೆಲವು ನಾಯಕರಿಗೆ ಅಸಮಾಧಾನ ಇದೆ. ಪ್ರತಿಯೊಂದಕ್ಕೂ ಕುಮಾರಸ್ವಾಮಿ ಮನೆಗೆ ಹೋಗುವುದು ಯಾರಿಗೂ ಇಷ್ಟ ಆಗುತ್ತಿಲ್ಲ. ಗೃಹ ಸಚಿವ ಅಮಿತ್ ಶಾ ಅವರು ಹೇಳಿದ ಅನಂತ ರವೂ ಭೇಟಿ ಮಾಡುತ್ತಲೇ ಇದ್ದಾರೆ. ಶಿಕ್ಷಕರ ಕ್ಷೇತ್ರದ ಉಪಚುನಾವಣೆಯೇ ಬೇರೆ, ರಾಜ್ಯಸಭೆ, ಲೋಕಸಭೆಗಳ ವಿಷಯವೇ ಬೇರೆ. ಇನ್ನೂ ಸಮಯವಿದೆ. ಪಕ್ಷ ಹೇಳಿದಂತೆ ಕೇಳುತ್ತೇನೆ.
Advertisement
ಶಿಕ್ಷಕರ ಕ್ಷೇತ್ರದ ಮೈತ್ರಿ ಅಭ್ಯರ್ಥಿ ವಿರುದ್ಧ ಕೆಲಸ ಮಾಡಿದ ಆರೋಪ ಕೇಳಿಬರುತ್ತಿರುವುದಕ್ಕೆ ಕಾರಣವೇನು?ನಾನು ಮೈತ್ರಿ ಅಭ್ಯರ್ಥಿ ವಿರುದ್ಧವೂ ಕೆಲಸ ಮಾಡಿಲ್ಲ, ಪರವೂ ಕೆಲಸ ಮಾಡಿಲ್ಲ. ಹಾಗೆಯೇ ಕಾಂಗ್ರೆಸ್ ಅಭ್ಯರ್ಥಿ ಪರವೂ ಪ್ರಚಾರ ಮಾಡಿಲ್ಲ. ಮೈತ್ರಿ ಅಭ್ಯರ್ಥಿಯಾಗಿ ಜೆಡಿಎಸ್‌ನ ರಂಗ ನಾಥ್‌ನನ್ನು ಅಂತಿಮಗೊಳಿಸಿದ ವಿಚಾರವೇ ನನಗೆ ಗೊತ್ತಿಲ್ಲ. ಅಭ್ಯರ್ಥಿಯಾಗಲೀ, ಜೆಡಿಎಸ್ ಆಗಲೀ ನನ್ನನ್ನು ಸಂಪರ್ಕಿಸಿಲ್ಲ, ಪ್ರಚಾರ ಮಾಡ ಬೇಕೆಂದು ಕೇಳಿಲ್ಲ. ಎಲ್ಲಕ್ಕಿಂತ ಮಿಗಿಲಾಗಿ ರಂಗನಾಥ್ ನನ್ನ ವಿರುದ್ಧ ಕೆಲಸ ಮಾಡಿದಾತ. ಆತನ ಪರ ನಾನೇಕೆ ಕೆಲಸ ಮಾಡಲಿ? ಕಾಂಗ್ರೆಸ್ ಅಭ್ಯರ್ಥಿ ಪುಟ್ಟಣ್ಣ ನನ್ನ ಕಚೇರಿಗೆ ಬಂದಿದ್ದರು. ಈ ವೇಳೆ ಮತಪ್ರಚಾರ ಮಾಡಿದರು. ನನ್ನ ಕ್ಷೇತ್ರದಲ್ಲೂ 950 ಶಿಕ್ಷಕರ ಮತವಿದೆ. ನಾನಂತೂ ಪುಟ್ಟಣ್ಣಗೆ ಮತ ಹಾಕಿ ಎಂದು ಎಲ್ಲಿಯೂ ಹೇಳಿಲ್ಲ. ಅವರ ಪರ ಪ್ರಚಾರವನ್ನೂ ಮಾಡಿಲ್ಲ. ಉದಯವಾಣಿ ಸಂದರ್ಶನ: ಸಾಮಗ ಶೇಷಾದ್ರಿ