ಈಗಲೂ ಪ್ರಧಾನಮಂತ್ರಿ ನರೇಂದ್ರ ಮೋದಿ ಮತ್ತು ಅಮಿತ್ ಶಾ ಜೋಡಿಯೇ ಚುನಾವಣೆ ಗೆಲ್ಲಿಸಿಕೊಡಬೇಕಾದ ಪರಿಸ್ಥಿತಿಯನ್ನು ಬಿಜೆಪಿ ಸೃಷ್ಟಿಸಿಕೊಳ್ಳುತ್ತಿದೆ.
ತ್ರಿಪುರದ ಐತಿಹಾಸಿಕ ಗೆಲುವಿನ ಸಿಹಿಯನ್ನು ಚಪ್ಪರಿಸುತ್ತಿರುವಾಗಲೇ ಉತ್ತರ ಪ್ರದೇಶದ ಉಪಚುನಾವಣೆಯ ಕಹಿಯನ್ನು ಉಣ್ಣಬೇಕಾದ ಪರಿಸ್ಥಿತಿ ಬಿಜೆಪಿಗೆ ಎದುರಾಗಿದೆ. ಅದರಲ್ಲೂ ಬಿಜೆಪಿಯ ಫಯರ್‌ಬ್ರ್ಯಾಂಡ್ ಲೀಡರ್ ಎಂಬ ಖ್ಯಾತಿಯಿರುವ ಮುಖ್ಯಮಂತ್ರಿ ಆದಿತ್ಯನಾಥ್ ಯೋಗಿಯ ತವರು ಕ್ಷೇತ್ರವಾಗಿರುವ ಗೋರಖಪುರ ಮತ್ತು ಉಪಮುಖ್ಯಮಂತ್ರಿ ಕೇಶವ ಪ್ರಸಾದ್ ಮೌರ್ಯ ಪ್ರತಿನಿಧಿಸುತ್ತಿದ್ದ ಫೂಲ್‌ಪುರ ಲೋಕಸಭಾ ಕ್ಷೇತ್ರ ಗಳಲ್ಲೇ ಆಗಿರುವ ಮುಖಭಂಗವನ್ನು ಮರೆಯಲು ಬಿಜೆಪಿಗೆ ಬಹುಕಾಲ ಬೇಕಾಗಬಹುದು. ಅತ್ತ ಬಿಹಾರದಲ್ಲೂ ಬಿಜೆಪಿ-ಜೆಡಿಯು ಮೈತ್ರಿ ಕೂಟದ ನಿರ್ವಹಣೆಯೂ ಕಳಪೆಯಾಗಿದೆ. ಹಿಂದಿ ಬೆಲ್ಟ್ ಎಂದು ಕರೆಯಲಾಗುವ ಉತ್ತರ ಭಾರತದಲ್ಲಿ ರಾಜಕೀಯವಾಗಿ ಈ ಎರಡು ರಾಜ್ಯಗಳು ಬಹಳ ಮಹತ್ವ ಪಡೆದುಕೊಂಡಿವೆ. ಇಡೀ ದೇಶದ ರಾಜಕೀಯ ಭವಿಷ್ಯವನ್ನು ನಿರ್ಧರಿಸುವ ಕೀಲಿಕೈ ಇರುವುದು ಹಿಂದಿಬೆಲ್ಟ್ನ ನಾಲ್ಕೈದು ರಾಜ್ಯಗಳಲ್ಲಿ. ಈ ರಾಜ್ಯಗಳಲ್ಲೇ ಉಪಚುನಾವಣೆಗಳಲ್ಲಿ ಬಿಜೆಪಿ ಸೋಲುತ್ತಿರುವುದು ಮುಂದಿನ ರಾಜಕೀಯದ ದಿಕ್ಸೂಚಿಯೆಂದೇ ಹೇಳಲಾಗುತ್ತಿದೆ.
ಕಾಂಗ್ರೆಸ್ ಹೊರತುಪಡಿಸಿ ಹಾವು ಮುಂಗುಸಿಯಂತಿದ್ದ ಎಸ್‌ಪಿ ಮತ್ತು ಬಿಎಸ್‌ಪಿ ಹಾಗೂ ಉಳಿದೆಲ್ಲ ಪಕ್ಷಗಳು ಒಂದಾದ ಕಾರಣ ಗೋರಖಪುರ ಹಾಗೂ ಫೂಲ್‌ಪುರದಲ್ಲಿ ಬಿಜೆಪಿ ಸೋಲುಂಡಿದೆ ಎನ್ನುವುದು ನಿಜ. ಜತೆಗೆ ಈಸಲ ಗೋರಖನಾಥ ಮಠದ ಅಭ್ಯರ್ಥಿ ಬದಲಾಗಿ ಹೊರಗಿನವರೊಬ್ಬರು ಸ್ಪರ್ಧಿಸಿದ್ದರು, ಪ್ರಚಾರಕ್ಕೆ ರಾಷ್ಟ್ರೀಯ ನಾಯಕ ರ್ಯಾರೂ ಬಂದಿರಲಿಲ್ಲ ಎನ್ನುವ ಕಾರಣಗಳೆಲ್ಲ ಇವೆ. ಒಂದು ವರ್ಷದ ಹಿಂದೆಯಷ್ಟೇ ನಡೆದ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ 403ರ ಪೈಕಿ 312 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿತ್ತು. ಈ ಅಭೂತಪೂರ್ವ ಗೆಲುವನ್ನು ಮೆಲುಕಾಡುತ್ತಿರುವಾ ಗಲೇ ಜನಪ್ರಿಯತೆ ಕುಸಿಯಿತೇ? ಬಿಜೆಪಿಯ ಮತ್ತು ಸ್ವತಃ ಯೋಗಿಯ ಅತಿಯಾದ ಆತ್ಮವಿಶ್ವಾಸವೇ ಸೋಲಿಗೆ ಮುಖ್ಯ ಕಾರಣ ಎಂದರೆ ತಪ್ಪಾಗಲಾರದು. ಈ ಮಾತನ್ನು ಸ್ವತಃ ಯೋಗಿಯೇ ಹೇಳಿಕೊಂಡಿದ್ದಾರೆ. ಪ್ರಸ್ತುತ ಬಿಜೆಪಿಯಲ್ಲಿ ನರೇಂದ್ರ ಮೋದಿ ಮತ್ತು ಅಮಿತ್ ಶಾ ಬಳಿಕ ಮೂರನೇ ಜನಪ್ರಿಯ ನಾಯಕ ಯೋಗಿ. ಕರ್ನಾಟಕವೂ ಸೇರಿದಂತೆ ವಿವಿಧ ರಾಜ್ಯಗಳ ಚುನಾವಣೆ ಪ್ರಚಾರಕ್ಕೆ ಯೋಗಿ ಹೋಗುತ್ತಿದ್ದಾರೆ. ಕೆಲವರು ಆಗಲೇ ಅವರನ್ನು ಮುಂದಿನ ಪ್ರಧಾನಿ ಎಂದು ಬಿಂಬಿಸಿಯಾಗಿದೆ. ಆದರೆ ತಾನು ಐದು ಅವಧಿಗೆ ಪ್ರತಿನಿಧಿಸಿದ ಕ್ಷೇತ್ರವನ್ನು ಉಳಿಸಿಕೊಳ್ಳಲು ಸಾಧ್ಯವಾಗದ ಕಳಂಕ ಅವರ ನಾಗಾಲೋಟಕ್ಕೆ ಬ್ರೇಕ್ ಹಾಕಿದಂತಾಗಿದೆ.
ಉತ್ತರ ಪ್ರದೇಶದ ಎರಡು ಲೋಕಸಭಾ ಕ್ಷೇತ್ರಗಳನ್ನು ಕಳೆದು ಕೊಳ್ಳುವುದರೊಂದಿಗೆ ಲೋಕಸಭೆಯಲ್ಲಿ ಬಿಜೆಪಿಯ ಸಂಖ್ಯಾಬಲ 273ಕ್ಕೆ ಇಳಿದಿದೆ. 2014ರ ಸಾರ್ವತ್ರಿಕ ಚುನಾವಣೆಯಲ್ಲಿ ಬಿಜೆಪಿಯೊಂದೇ 282 ಸೀಟುಗಳಲ್ಲಿ ಗೆದ್ದು ಸರಳ ಬಹುಮತ ಪಡೆದುಕೊಂಡಿತ್ತು. ಕಳೆದ ಆರು ತಿಂಗಳಲ್ಲಿ ನಡೆದ ಉಪಚುನಾವಣೆಗಳಲ್ಲಿ ಆರು ಕ್ಷೇತ್ರಗಳನ್ನು ಬಿಜೆಪಿ ಕಳೆದುಕೊಂಡಂತಾಗಿದೆ. ಇನ್ನೂ ಮೂರು ಕ್ಷೇತ್ರಗಳಿಗೆ ಉಪಚುನಾವಣೆ ನಡೆಯಲಿದ್ದು, ಈ ಪೈಕಿ ಎರಡು ಕ್ಷೇತ್ರಗಳು ಮಹಾರಾಷ್ಟ್ರದಲ್ಲಿವೆ. ಈ ಕ್ಷೇತ್ರಗಳ ಫಲಿತಾಂಶದಿಂದ 2019ರ ರಾಜಕೀಯ ಗತಿಯನ್ನು ಸ್ಪಷ್ಟವಾಗಿ ಗುರುತಿಸಬಹುದು. ಲಾಲೂ ಯಾದವ್ ಜೈಲಿನಲ್ಲಿದ್ದರೂ ಅರಾರಿಯ ಲೋಕಸಭಾ ಕ್ಷೇತ್ರವನ್ನು ಉಳಿಸಿಕೊಳ್ಳುವಲ್ಲಿ ಆರ್‌ಜೆಡಿ ಸಫಲವಾಗಿದೆ. ಅಂತೆಯೇ ಉಳಿದೆರಡು ವಿಧಾನಸಭೆ ಕ್ಷೇತ್ರಗಳಲ್ಲಿ ಬಿಜೆಪಿ ಮತ್ತು ಆರ್‌ಜೆಡಿ ತಲಾ 1 ಕ್ಷೇತ್ರಗಳನ್ನು ಗೆದ್ದುಕೊಂಡಿವೆ. ಅಧಿಕಾರದಲ್ಲಿದ್ದು ಲೋಕಸಭಾ ಕ್ಷೇತ್ರದಲ್ಲಿ ಗೆಲ್ಲಲಾಗದೆ ಹೋದದ್ದು ಬಿಜೆಪಿಗಿಂತ ಹೆಚ್ಚಾಗಿ ಮುಖ್ಯಮಂತ್ರಿ ನಿತೀಶ್‌ಕುಮಾರ್‌ಗೆ ಆಗಿರುವ ಹಿನ್ನಡೆ. ಕಳೆದ ವರ್ಷ ಮಹಾಘಟಬಂಧನ್ ಸಖ್ಯ ಮುರಿದು ಎನ್‌ಡಿಎ ತೆಕ್ಕೆಗೆ ಸೇರಿದ ನಿರ್ಧಾರ ಕೈಕೊಟ್ಟಿತೇ ಎನ್ನುವುದನ್ನು ಅವರು ಆತ್ಮಾವಲೋಕನ ಮಾಡಿಕೊಳ್ಳಬೇಕು.
ಉಪಚುನಾವಣೆಗಳ ಫಲಿತಾಂಶದ ಬಳಿಕ ವಿಪಕ್ಷಗಳಲ್ಲಿ ಎಲ್ಲರೂ ಒಟ್ಟಾದರೆ ಬಿಜೆಪಿಯನ್ನು ಸೋಲಿಸುವುದು ಕಷ್ಟವಲ್ಲ ಎಂಬ ನಂಬಿಕೆ ಹುಟ್ಟಿರುವುದು ಸುಳ್ಳಲ್ಲ. ಫಲಿತಾಂಶ ಪ್ರಕಟವಾದ ದಿನವೇ ಕಾಂಗ್ರೆಸ್ ಮಾಜಿ ಅಧ್ಯಕ್ಷ ಸೋನಿಯಾ ಗಾಂಧಿ ತನ್ನ ಮನೆಯಲ್ಲಿ ವಿಪಕ್ಷ ನಾಯಕರಿಗೆ ಔತಣಕೂಟ ನೀಡಿರುವುದು ಈ ಹಿನ್ನೆಲೆಯಲ್ಲಿ ಮಹತ್ವದ ನಡೆ. 17 ಪಕ್ಷಗಳ ನಾಯಕರು ಔತಣಕೂಟದಲ್ಲಿ ಭಾಗವಹಿಸಿದ್ದಾರೆ. ಹೀಗೆ ಮತ್ತೂಮ್ಮೆ ಯುಪಿಎಯನ್ನು ಬಲಿಷ್ಠಗೊಳಿಸುವ ಮೂಲಕ ಸೋನಿಯಾ ಹೋರಾಟಕ್ಕೆ ಅಣಿಯಾಗುತ್ತಿದ್ದಾರೆ. ಇದೇ ವೇಳೆ ಬಿಜೆಪಿ ತನ್ನ ತಪ್ಪುಗಳಿಂದ ಇನ್ನೂ ಪಾಠ ಕಲಿತಂತೆ ಕಾಣಿಸುವುದಿಲ್ಲ. ಈಗಲೂ ಮೋದಿ ಮತ್ತು ಅಮಿತ್ ಶಾ ಜೋಡಿಯೇ ಚುನಾವಣೆ ಗೆಲ್ಲಿಸಿಕೊಡಬೇಕಾದ ಪರಿಸ್ಥಿತಿಯನ್ನು ಪಕ್ಷ ಸೃಷ್ಟಿಸಿಕೊಳ್ಳುತ್ತಿದೆ. ಇದು ಪಕ್ಷದಲ್ಲಿ ಈ ಜೋಡಿಯ ಏಕಸ್ವಾಮ್ಯವನ್ನು ಇನ್ನಷ್ಟು ಬಲಪಡಿಸುತ್ತಿದೆ. ಪ್ರಾದೇಶಿಕವಾಗಿ ನಾಯಕರನ್ನು ಬೆಳೆಸುವ ಉತ್ಸಾಹವನ್ನು ಪಕ್ಷ ಕಳೆದುಕೊಂಡಿರುವಂತೆ ಕಾಣಿಸುತ್ತದೆ. ಉಪಚುನಾವಣೆ ಫಲಿತಾಂಶ ಬಿಜೆಪಿಗೆ ಎಚ್ಚರಿಕೆಯ ಸಂದೇಶ ನೀಡಿರುವುದು ನಿಜ. ಹಾಗೆಂದು ಕಾಂಗ್ರೆಸ್ ಸಂಭ್ರಮಿಸುತ್ತಿರುವುದರಲ್ಲಿ ಯಾವುದೇ ಅರ್ಥವಿಲ್ಲ. ಏಕೆಂದರೆ ಉತ್ತರ ಪ್ರದೇಶದ ಎರಡೂ ಕ್ಷೇತ್ರಗಳಲ್ಲಿ ಅದು ಠೇವಣಿ ಕಳೆದುಕೊಂಡಿದೆ.