ಸರಾಯ್ಕೆಲಾ: ವಿಧಾನಸಭೆ ಚುನಾವಣೆಯಲ್ಲಿ ಗೆದ್ದು ಝಾರ್ಖಂಡ್ನಲ್ಲಿ ಬಿಜೆಪಿ ಸರಕಾರ ರಚನೆ ಮಾಡಿದರೆ, ರಾಜ್ಯದಲ್ಲಿರುವ ನುಸುಳುಕೋರರನ್ನು ಗುರುತಿಸಿ ಹೊರದಬ್ಬಲು ಸಮಿತಿಯನ್ನು ರಚನೆ ಮಾಡಲಿದೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಸೋಮವಾರ ಭರವಸೆ ನೀಡಿದ್ದಾರೆ.
ಝಾರ್ಖಂಡ್ ಮೊದಲ ಹಂತದ ಚುನಾವಣೆಗೆ ಬಹಿರಂಗ ಪ್ರಚಾರದ ಕೊನೆಯ ದಿನ ಸರಾಯ್ಕೆಲಾದಲ್ಲಿ ನಡೆದ ಚುನಾವಣ ರ್ಯಾಲಿಯಲ್ಲಿ ಮಾತನಾಡಿದ ಅವರು, ನುಸುಳುಕೋರರ ವಶದಲ್ಲಿರುವ ಭೂಮಿಯನ್ನು ಮರಳಿ ಪಡೆಯಲು ಕ್ರಮ ವಹಿಸಲಾಗುವುದು ಎಂದೂ ಹೇಳಿದ್ದಾರೆ.
“ಝಾರ್ಖಂಡ್ನಲ್ಲಿ ಬುಡಕಟ್ಟು ಸಮುದಾಯ ದವರ ಜಸನಂಖ್ಯೆ ಕಡಿಮೆಯಾಗುತ್ತಿದೆ. ನುಸುಳು ಕೋರರು ಇಲ್ಲಿನ ಬುಡಕಟ್ಟು ಜನಾಂಗದ ಮಹಿಳೆಯರನ್ನು ಮದುವೆ ಯಾಗಿ, ಕೃಷಿ ಭೂಮಿ ಯನ್ನು ಖರೀದಿಸುತ್ತಿದ್ದಾರೆ. ಬುಡಕಟ್ಟು ಮಹಿಳೆಯ ರನ್ನು ಮದುವೆಯಾಗಿರುವ ನುಸುಳುಕೋರರಿಗೆ ಭೂಮಿ ಸಿಗದಂತೆ ಮಾಡಲು ಕಾನೂನು ಜಾರಿ ಮಾಡುತ್ತೇವೆ’ ಎಂದು ಅಮಿತ್ ಶಾ ಅವರು ಭರವಸೆ ನೀಡಿದರು.
ಇದೇ ವೇಳೆ, ಝಾರ್ಖಂಡ್ ಮುಕ್ತಿ ಮೋರ್ಚಾ(ಜೆಎಂಎಂ) ವಿರುದ್ಧ ವಾಗ್ಧಾಳಿ ನಡೆಸಿದ ಶಾ, “ನುಸುಳುಕೋರರ ವಿಷಯ ಎತ್ತಿದ ಕಾರಣ ಚಂಪಯ್ ಸೊರೇನ್ ಅವರಿಗೆ ಅವಮಾನ ಮಾಡಲಾ ಯಿತು. ಮಾತ್ರವಲ್ಲದೇ ಮುಖ್ಯಮಂತ್ರಿ ಸ್ಥಾನ ತೊರೆಯುವಂತೆ ಅವರ ಮೇಲೆ ಒತ್ತಡ ಹೇರಲಾಯಿತು ಎಂದು ದೂರಿದರು. ಝಾರ್ಖಂಡ್ನಲ್ಲಿ ನ.13 ಹಾಗೂ 20ರಂದು ಮತದಾನ ನಡೆಯಲಿದೆ.
ಬಹಿರಂಗ ಪ್ರಚಾರ ಅಂತ್ಯ: ನಾಳೆ ಮತದಾನ
ಝಾರ್ಖಂಡ್ನಲ್ಲಿ ನಡೆಯುವ ಮೊದಲ ಹಂತದ ಮತದಾನಕ್ಕೆ ಬಹಿರಂಗ ಪ್ರಚಾರ ಸೋಮವಾರ ಅಂತ್ಯಗೊಂಡಿದೆ. ಮಂಗಳವಾರ ಮನೆ ಮನೆಗೆ ತೆರಳಿ ಪ್ರಚಾರ ಮಾಡುವುದಕ್ಕಷ್ಟೇ ಅವಕಾಶವಿದೆ. ನ.13ರಂದು ಮೊದಲ ಹಂತದ ಮತದಾನ ನಡೆಯಲಿದ್ದು, ನ.20ರಂದು 2ನೇ ಹಂತದ ಮತದಾನ ನಡೆಯಲಿದೆ. ನ.23ರಂದು ಫಲಿತಾಂಶ ಪ್ರಕಟವಾಗಲಿದೆ.