ನವದೆಹಲಿ: 2022 ರ ಡಿ.4ರಂದು ನಡೆದಿದ್ದ ದೆಹಲಿ ಪಾಲಿಕೆ ಚುನಾವಣೆಯ 250 ಸ್ಥಾನಗಳಲ್ಲಿ 134 ಸ್ಥಾನಗಳನ್ನು ಗೆಲ್ಲುವ ಮೂಲಕ ಆಮ್ ಆದ್ಮಿ ಪಾರ್ಟಿ ಬಿಜೆಪಿ ಪಾಳಯವನ್ನು ನಡುಗಿಸಿತ್ತು. ಆದರೆ ಇದೀಗ ಈ ಕಿಚ್ಚು ಮೇಯರ್ ಚುನಾವಣೆಗೂ ತಟ್ಟಿದೆ.
ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಮತ್ತು ದೆಹಲಿ ಲೆಫ್ಟಿನಂಟ್ ಗವರ್ನರ್ ವಿ.ಕೆ ಸಕ್ಸೇನಾ ನಡುವಿನ ಭಾರೀ ಕೆಸರೆರಚಾಟದಿಂದಾಗಿ ಎರಡು ಬಾರಿ ಮುಂದೂಡಲ್ಪಟ್ಟಿದ್ದ ದೆಹಲಿ ಪಾಲಿಕೆ ಮೇಯರ್ ಚುನಾವಣೆ ಫೆ.6 ಕ್ಕೆ ನಡೆಯಲಿದೆ. ಈ ಮಧ್ಯೆ ಬಿಜೆಪಿ- ಆಪ್ ನಾಯಕರ ವಾಕ್ಸಮರ ಜೋರಾಗಿದ್ದು ಈಗ ಸ್ವತಃ ಕೇಜ್ರೀವಾಲ್ ಅವರೇ ರಣಾಂಗಣಕ್ಕೆ ಇಳಿದಿದ್ಧಾರೆ. ಹೊಸ ಬೆಳವಣಿಗೆಯೊಂದರಲ್ಲಿ ಮುಖ್ಯಮಂತ್ರಿ ಕೇಜ್ರೀವಾಲ್ ಅವರು ಆಪ್ ಕೌನ್ಸಿಲರ್‌ಗಳನ್ನು ಬುಟ್ಟಿಗೆ ಹಾಕಿಕೊಳ್ಳಲು ಬಿಜೆಪಿಗೆ ಸಾಧ್ಯವಿಲ್ಲ ಅನ್ನುವ ಮೂಲಕ ಬಿಜೆಪಿಗೆ ನೇರ ವಾಗ್ದಾಳಿ ನಡೆಸಿದ್ದಾರೆ.
ಬಿಜೆಪಿ ಗದ್ದಲವೆಬ್ಬಿಸುವ ಮೂಲಕ ಮೇಯರ್ ಚುನಾವಣೆ ಮಾಡಲು ಬಿಟ್ಟಿರಲಿಲ್ಲ ಎಂದು ದೆಹಲಿ ಸಿಎಂ ಕಿಡಿಕಾರಿದ್ದಾರೆ. ನಾವು ಚುನಾವಣೆಯನ್ನು ಮಾಡಬೇಕಾಗಿದೆ. ಆದರೆ ಬಿಜೆಪಿ ನಾಯಕರು ಗದ್ದಲಗಳನ್ನು ಮಾಡುವುದರೊಂದಿಗೆ ಚುನಾವಣೆಗೆ ಅಡ್ಡಿಪಡಿಸಿದ್ರು. ಈಗ ಬಿಜೆಪಿ ಬೇರೆ ದಾರಿಯಿಲ್ಲದೆ ಅವರ ಸೋಲನ್ನು ಒಪ್ಪಬೇಕಾಗಿದೆ ಅಂತ ಕೇಜ್ರಿವಾಲ್ ಹೇಳಿದ್ದಾರೆ.
ಆಪರೇಷನ್ ಕಮಲವನ್ನು ಟೀಕಿಸಿದ ಕೇಜ್ರಿವಾಲ್, ಬಿಜೆಪಿಯವರು ಮಾರುವುದು ಮತ್ತು ಕೊಳ್ಳುವುದರಲ್ಲಿ ಎತ್ತಿದ ಕೈ. ಆದ್ರೆ ನಮ್ಮ ಅಭ್ಯರ್ಥಿಗಳನ್ನು ಕೊಳ್ಳುವುದಕ್ಕೆ ಅವರಿಗೆ ಸಾಧ್ಯವಾಗದೇ ಹತಾಶರಾಗಿ ಗದ್ದಲವೆಬ್ಬಿಸುತ್ತಿದ್ದಾರೆ ಎಂದರು. ಈ ನಡುವೆ ಫೆ.6 ರಂದು ಮೇಯರ್ ಚುನಾವಣೆ ನಡೆಸುತ್ತಿರುವುದು ಬಿಜೆಪಿ ಪಿತೂರಿಯ ಭಾಗವಾಗಿದೆ ಎಂದು ದೆಹಲಿ ಉಪಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಆರೋಪಿಸಿದ್ದಾರೆ.
ದೆಹಲಿಯ ಜನ ಬಿಜೆಪಿಯ ಆಡಳಿತದಿಂದ ಹತಾಶರಾಗಿದ್ದಾರೆ. ಜನ ಕೇಜ್ರಿವಾಲ್‌ರನ್ನು ನಂಬಿ ಆಪ್ ಪಕ್ಷಕ್ಕೆ ಮತ ಹಾಕಿದ್ಧಾರೆ. 15 ವರ್ಷಗಳ ಬಳಿಕ ಬಿಜೆಪಿಯನ್ನು ಬಿಜೆಪಿಯ ಕಾರ್ಯಕರ್ತರೇ ಸೋಲಿಸಿದ್ದಾರೆ. ಆದರೂ ಈಗ ಬಿಜೆಪಿಯವರೇ ಮೇಯರ್ ಚುನಾವಣೆಯಲ್ಲಿ ಭಾರೀ ಪಿತೂರಿ ನಡೆಸುತ್ತಿದ್ದಾರೆ . ಭಾರತೀಯ ಜನತಾ ಪಾರ್ಟಿ ಪ್ರಜಾಪ್ರಭುತ್ವದ ಮೇಲೆ ನಂಬಿಕೆಯಿಟ್ಟು ಫೆ.6 ರ ಮೇಯರ್ ಚುನಾವಣೆಯಲ್ಲಿ ಭಾಗಿಯಾಗುವ ನಂಬಿಕೆಯಿದೆ ಎಂದು ಮನೀಷ್ ಸಿಸೋಡಿಯಾ ಹೇಳಿದ್ದಾರೆ.