ನವದೆಹಲಿ: ಮುಂಬರುವ ವಿಧಾನಸಭೆ ಚುನಾವಣೆಗೆ ರಾಜಕೀಯ ಪಕ್ಷಗಳು ತಯಾರಿ ನಡೆಸುತ್ತಿರುವ ಮಧ್ಯೆಯೇ ಆಮ್ ಆದ್ಮಿ ಪಕ್ಷದ ರಾಷ್ಟ್ರೀಯ ಸಂಚಾಲಕ ಮತ್ತು ದೆಹಲಿಯ ಮಾಜಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರು ಮಂಗಳವಾರ(ಡಿ.10) ರಾಜ್ಯದ ಜನತೆಗೆ ಚುನಾವಣಾ ಭರವಸೆಯನ್ನು ನೀಡಿದ್ದಾರೆ.
ದೆಹಲಿಯ ಆಟೋ ಚಾಲಕರಿಗೆ ರೂ 10 ಲಕ್ಷ ವಿಮಾ ಪಾಲಿಸಿ ಸೇರಿದಂತೆ ಹಲವು ಕಲ್ಯಾಣ ಕ್ರಮಗಳನ್ನು ಘೋಷಿಸಿದರು. ಕೊಂಡ್ಲಿ ಕ್ಷೇತ್ರದ ಆಟೋ ಚಾಲಕ ನವನೀತ್ ಅವರ ನಿವಾಸಕ್ಕೆ ಕೇಜ್ರಿವಾಲ್ ಭೇಟಿ ನೀಡಿ ಚಾಲಕನ ಕುಟುಂಬದೊಂದಿಗೆ ಊಟ ಸವಿದ ಅವರು ಬಳಿಕ ರಿಕ್ಷಾ ಚಾಲಕರಿಗೆ ಹತ್ತು ಲಕ್ಷ ವಿಮೆ, ಹಾಗೆ ರಿಕ್ಷಾ ಚಾಲಕರ ಹೆಣ್ಮಕ್ಕಳ ಮದುವೆಗೆ ಒಂದು ಲಕ್ಷ ರೂಪಾಯಿ ನೆರವು ನೀಡುವ ಭರವಸೆಯನ್ನು ನೀಡಿದ್ದಾರೆ.
ಅಷ್ಟು ಮಾತ್ರವಲ್ಲದೆ ಸಮವಸ್ತ್ರಕ್ಕಾಗಿ ವರ್ಷಕ್ಕೆ ಎರಡು ಬಾರಿ 2,500 ರೂಗಳನ್ನು ನೇರವಾಗಿ ಅವರ ಖಾತೆಗೆ ಜಮಾ ಮಾಡಲಾಗುತ್ತದೆ ಎಂದು ಹೇಳಿದ ಅವರು ರಿಕ್ಷಾ ಚಾಲಕರ ಮಕ್ಕಳಿಗೆ ಉಚಿತ ಕೋಚಿಂಗ್ ನೀಡುವ ವ್ಯವಸ್ಥೆಯನ್ನು ಜಾರಿಗೊಳಿಸುವುದಾಗಿ ಹೇಳಿದ್ದಾರೆ.
ಅಲ್ಲದೆ ಈ ಹಿಂದೆ ಇದ್ದ ಪೂಚೊ ಆಪ್ ಗೆ ಮತ್ತೆ ಚಾಲನೆ ನೀಡುವ ಭರವಸೆಯನ್ನು ನೀಡಿದ್ದಾರೆ. ಸದ್ಯ ದೆಹಲಿ ವಿಧಾನ ಸಭೆಗೆ ದಿನಾಂಕ ಇನ್ನೂ ಘೋಷಣೆಯಾಗದಿದ್ದರೂ ರಾಜಕೀಯ ಪಕ್ಷಗಳು ಚುನಾವಣಾ ಪೂರ್ವ ತಯಾರಿಯನ್ನು ಭರದಿಂದ ನಡೆಸುತ್ತಿದೆ.
ಇದನ್ನೂ ಓದಿ: Belagavi: ಪಂಚಮಸಾಲಿ ಸಮುದಾಯದ ಮೀಸಲಾತಿ ಹೋರಾಟಕ್ಕೆ ನಮ್ಮ ವಿರೋಧ ಇಲ್ಲ: ಸಿಎಂ