ನವದೆಹಲಿ: ”ಬಿಜೆಪಿ ಅಧ್ಯಕ್ಷ ಜೆ.ಪಿ.ನಡ್ಡಾ ಅವರು ಪೂರ್ವಾಂಚಲಿಗಳನ್ನು ರೋಹಿಂಗ್ಯಾಗಳು ಮತ್ತು ಬಾಂಗ್ಲಾದೇಶಿಗಳೊಂದಿಗೆ ಸಮೀಕರಿಸಿದ್ದಾರೆ, ಮುಂಬರುವ ವಿಧಾನಸಭಾ ಚುನಾವಣೆಗೆ ಮುನ್ನ ದೆಹಲಿಯಲ್ಲಿ ಅವರ ಮತಗಳನ್ನು ಅಳಿಸಿಹಾಕಿದ್ದಾರೆ” ಎಂದು ಆಮ್ ಆದ್ಮಿ ಪಕ್ಷದ ನಾಯಕ ಅರವಿಂದ್ ಕೇಜ್ರಿವಾಲ್ ಶುಕ್ರವಾರ(ಡಿ20) ಆರೋಪ ಮಾಡಿದ್ದಾರೆ.
ಫೆಬ್ರವರಿಯಲ್ಲಿ ನಡೆಯಲಿರುವ ದೆಹಲಿ ವಿಧಾನಸಭಾ ಚುನಾವಣೆಗೆ ತನ್ನ ಮುಖ್ಯಮಂತ್ರಿಯ ಮುಖವನ್ನು ಘೋಷಿಸದಿದ್ದಕ್ಕಾಗಿ ಬಿಜೆಪಿಯನ್ನು ಲೇವಡಿ ಮಾಡಿದ ಕೇಜ್ರಿವಾಲ್, ”ಬಿಜೆಪಿ ವರನಿಲ್ಲದ ಮದುವೆಯ ಪಾರ್ಟಿ. ಅವರು ಸಿಎಂ ಮುಖವನ್ನು ಹೇಳಬೇಕು. ಅದನ್ನು ತಿಳಿದುಕೊಳ್ಳುವುದು ಜನರ ಹಕ್ಕು” ಎಂದರು.
ಎಎಪಿ ಕಾರ್ಯಕರ್ತರು ದೆಹಲಿಯಾದ್ಯಂತ ಮನೆ ಮನೆಗೆ ತೆರಳಿ ಬಿಜೆಪಿಯ ಪಿತೂರಿ”ಯ ಬಗ್ಗೆ ಪೂರ್ವಾಂಚಲಿ ಜನರಿಗೆ ತಿಳಿಸಲಿದ್ದಾರೆ ಎಂದರು.
ಆಮ್ ಆದ್ಮಿ ಪಕ್ಷದ ರಾಜ್ಯಸಭಾ ಸಂಸದ ಮತ್ತು ಪೂರ್ವಾಂಚಲಿ ಸಮುದಾಯದ ನಾಯಕ ಸಂಜಯ್ ಸಿಂಗ್ ಮಾತನಾಡಿ “ಯೋಜಿತ ಪಿತೂರಿಯನ್ನು ಬಹಿರಂಗಪಡಿಸಲು ನಗರದ ಪೂರ್ವಾಂಚಲಿ ಪ್ರಾಬಲ್ಯವಿರುವ ಪ್ರದೇಶಗಳಲ್ಲಿ ‘ರಾತ್ರಿ ಪ್ರವಾಸ ಮಾಡಿ ತಂಗಲಿದ್ದೇವೆ” ಎಂದು ಹೇಳಿದರು.
ದೆಹಲಿಯ ಮತಗಳ ಅಳಿಸುವಿಕೆಯ ವಿಷಯವನ್ನು ಈ ವಾರದ ಆರಂಭದಲ್ಲಿ ಸಿಂಗ್ ಅವರು ಸಂಸತ್ತಿನಲ್ಲಿ ಪ್ರಸ್ತಾಪಿಸಿದ್ದರು.ಬಾಂಗ್ಲಾದೇಶೀಯರು ಮತ್ತು ರೊಹಿಂಗ್ಯಾಗಳ ಹೆಸರುಗಳನ್ನು ಮತದಾರರ ಪಟ್ಟಿಯಿಂದ ತೆಗೆದುಹಾಕಲಾಗುತ್ತಿದೆ ಎಂದು ನಡ್ಡಾ ಹೇಳಿದ್ದು, ಸಂವಿಧಾನದಲ್ಲಿ ನಿಗದಿಪಡಿಸಿದ ಪ್ರಕ್ರಿಯೆಯ ನಂತರ ಎಎಪಿ ಅವರ ಮತಗಳಿಂದ ಗೆಲ್ಲುತ್ತಿದೆಯೇ ಎಂದು ಪ್ರಶ್ನಿಸಿದ್ದರು.