ಯಳಂದೂರು: ಕಲ್ಲುಮುಳ್ಳಿನಿಂದ ಕೂಡಿದ ರಸ್ತೆ, ಕಿತ್ತು ಹೋಗಿರುವ ಮನೆಗಳು, ವಿದ್ಯುತ್ ಸಂಪರ್ಕ ಇಲ್ಲ, ಕೆಟ್ಟು ನಿಂತಿರುವ ಸೋಲಾರ್ ದೀಪಗಳು, ಕಾಡು ಪ್ರಾಣಿಗಳ ಉಪಟಳ, ಇದರ ನಡುವೆ ಬಿತ್ತಿ ಬೆಳೆದು ತಿನ್ನಬೇಕಾದ ಪರಿಸ್ಥಿತಿ, ರೋಗ ಬಂದರೆ ಬಟ್ಟೆಗೆ ಹಗ್ಗ ಕಟ್ಟಿಕೊಂಡು ಮುಖ್ಯರಸ್ತೆಗೆ ಸಾಗಬೇಕಾದ ಅನಿವಾರ್ಯತೆ.
ಇದು, ಯಾವುದೋ ಕಾಲದ ಕತೆಯಲ್ಲಿ ಬರುವ ದೃಶ್ಯಗಳಲ್ಲ, ಚಾಮರಾಜನಗರ ಜಿಲ್ಲೆಯ ಪ್ರಸಿದ್ಧ ಪ್ರವಾಸಿ ಕ್ಷೇತ್ರ ಯಳಂದೂರು ತಾಲೂಕಿನ ಬಿಳಿಗಿರಿರಂಗನಬೆಟ್ಟದ ಪುರಾಣಿಪೋಡಿನ ನೈಜ ಸ್ಥಿತಿ. ಈ ಗ್ರಾಮದಲ್ಲಿ 180ಕ್ಕೂ ಹೆಚ್ಚು ಸೋಲಿಗ ಕುಟುಂಬಗಳು ವಾಸ ಮಾಡುತ್ತಿದ್ದು, ಮೂಲ ಸೌಲಭ್ಯ ಇಲ್ಲದೇ, ಪರದಾಡುವಂತಾಗಿದೆ.
ಕಲ್ಲು ಮಣ್ಣಿನ ರಸ್ತೆ: ಬೆಟ್ಟಕ್ಕೆ ಯಳಂದೂರು ಮಾರ್ಗವಾಗಿ ತೆರಳುವ ರಸ್ತೆಯ ಬಳಿಯ ಚೈನ್ ಗೇಟ್‌ನಿಂದ ಹೋಗಬೇಕು. ಈ ರಸ್ತೆ ಕಚ್ಚಾ ಆಗಿದೆ. ಮಳೆಯಿಂದ ಕಲ್ಲುಮಣ್ಣು ಮೇಲೆದ್ದು ಜನರೂ ಓಡಾಡಲು ಆಗದಂತಹ ಪರಿಸ್ಥಿತಿ ಇದೆ. ಅಲ್ಲದೆ, ಈ ಪೋಡಿನಲ್ಲಿ ಮನೆಗಳೆಲ್ಲ ಶಿಥಿಲವಾಗಿವೆ. ಮಳೆ, ಗಾಳಿ, ಬಿಸಿಲಿನಲ್ಲೇ ಜೀವನ ಸಾಗಿಸುವ ಸ್ಥಿತಿ ಇದೆ. ಕುಡಿಯುವ ನೀರಿನ ಕೈಪಂಪುಗಳು ಇಲ್ಲಿದ್ದು, ಇದರಲ್ಲಿ ಕೆಲವು ಕೆಟ್ಟು ನಿಂತಿವೆ. ದೂರದ ಹಳ್ಳದ ನೀರು ತುಂಬಿಸಿಕೊಳ್ಳುವ ಪರಿಸ್ಥಿತಿ ಇದೆ.
ಅನಾರೋಗ್ಯಕ್ಕೆ ತುತ್ತಾದರೆ ಬೊಂಬೇ ಗಟ್ಟಿ: ಇಲ್ಲಿಗೆ ವಿದ್ಯುತ್ ಸಂಪರ್ಕವೇ ಇಲ್ಲ. ಸೋಲಾರ್ ವಿದ್ಯುತ್ ದೀಪ ಅಳವಡಿಸಲಾಗಿದೆ. ಇದು ಆಗಾಗ ಕೆಟ್ಟು ನಿಲ್ಲುವುದರಿಂದ ರಾತ್ರಿ ವೇಳೆಯಲ್ಲಿ ಭಯದಲ್ಲೇ ಕಾಲ ಕಳೆಯುವ ಪರಿಸ್ಥಿತಿ ಇದೆ. ಗರ್ಭಿಣಿಯರು, ಇತರರು ಅನಾರೋಗ್ಯಕ್ಕೆ ತುತ್ತಾದರೆ ಬೊಂಬಿಗೆ ಬೆಡ್‌ಶೀಟ್ ಕಟ್ಟಿಕೊಂಡು ಇದರಲ್ಲಿ ಕುಳ್ಳಿರಿಸಿ ಕೊಂಡು ಹೊತ್ತುಕೊಂಡು ಕಿ.ಮೀ. ನಡದೇ ಸಾಗುವ ಸ್ಥಿತಿ ಇದೆ. ಅರಣ್ಯ ಪೋಡಿನ ಸುತ್ತ ಸೋಲಾರ್ ಬೇಲಿ ಇಲ್ಲದ ಕಾರಣ,
ಕಾಡುಪ್ರಾಣಿಗಳು ಆಗಾಗ ದಾಳಿ ನಡೆಸುತ್ತವೆ.
ಬೆಳೆದ ಅಲ್ಪಸ್ವಲ್ಪ ಬೆಳೆ ಹಾಳು ಮಾಡುತ್ತಿವೆ. ಈ ಬಗ್ಗೆ ಜನಪ್ರತಿನಿಧಿಗಳು, ಸಂಬಂಧಪಟ್ಟ ಅಧಿಕಾರಿಗಳು ನೀಡಿದ ಭರವಸೆ ಹುಸಿಯಾಗಿದೆ ಎಂದು ಸ್ಥಳೀಯರಾದ ನಂಜಮ್ಮ, ರಂಗಮ್ಮ, ಸಿದ್ದಮ್ಮ, ತಂಟ್ರಿನಂಜೇಗೌಡ ಅನೇಕರ ದೂರಾಗಿದೆ.
ಇಲ್ಲಿಗೆ ಕಚ್ಚಾ ರಸ್ತೆ ನಿರ್ಮಿಸಲು ಅರಣ್ಯ ಇಲಾಖೆಗೆ ಅನುಮತಿಗಾಗಿ ಪತ್ರ ಬರೆಯಲಾಗಿದೆ. ಆದರೆ, ಇನ್ನೂ ಅನುಮತಿ ಸಿಕ್ಕಿಲ್ಲ. ಇಲ್ಲಿರುವ ಸೋಲಿಗ ಕುಟುಂಬಗಳು ಒದೆ ಕಡೆ ವಾಸವಾಗಿಲ್ಲ. ಅಲ್ಲಲ್ಲಿ ಗುಂಪಾಗಿದ್ದಾರೆ. ಕುಡಿಯುವ ನೀರಿಗಾಗಿ ಕೈಪಂಪುಗಳ ವ್ಯವಸ್ಥೆ ಮಾಡಲಾಗಿದೆ. ಅದು ಕೆಟ್ಟು ಹೋಗಿದ್ದು ದುರಸ್ತಿಗೆ ಕ್ರಮ ಕೈಗೊಳ್ಳಲಾಗುವುದು.
●ಮಂಜುಳಾ, ಜಿಲ್ಲಾ ಪರಿಶಿಷ್ಟ ವರ್ಗಗಳ ಕಲ್ಯಾಣ ಅಧಿಕಾರಿ
ರಸ್ತೆ ನಿರ್ಮಾಣಕ್ಕೆ ಅರಣ್ಯ ಇಲಾಖೆ ಅನುಮತಿ ನೀಡಿದರೆ ನರೇಗಾ, ಗ್ರಾಪಂನ ಇತರೆ ಅನುದಾನ ಬಳಸಿಕೊಂಡು ರಸ್ತೆ ನಿರ್ಮಿಸಲು ಕ್ರಮ ವಹಿಸಲಾಗುವುದು.
●ಸ್ವಾಮಿ, ಪಿಡಿಒ, ಬಿಳಿಗಿರಿರಂಗನಬೆಟ್ಟ
● ಫೈರೋಜ್‌ಖಾನ್