Advertisement
ಬೇಗೂರು ಗ್ರಾಮ ಹೋಬಳಿ ಕೇಂದ್ರವಾಗಿದ್ದು, ಸುತ್ತಲ 45 ಗ್ರಾಮಗಳ ಜನರು ಮೈಸೂರು, ಗುಂಡ್ಲುಪೇಟೆಗೆ ತೆರಳಲು ಸಾರಿಗೆ ಬಸ್ ನಿಲ್ದಾಣಕ್ಕೆ ಆಗಮಿಸುತ್ತಾರೆ. ಜೊತೆಗೆ ಕಬ್ಬಹಳ್ಳಿ, ನಿಟ್ರೆ, ಕುಲಗಾಣ, ಯಡೆಯಾಲ, ಹೊರೆಯಾಲ, ಕೋಟೆಕೆರೆ, ಗರಗನಹಳ್ಳಿ, ಸೋಮಹಳ್ಳಿ, ತಗ್ಗಲೂರು, ರಾಘವಾಪುರ ಸೇರಿದಂತೆ ಇನ್ನಿತರ ಹಲವು ಗ್ರಾಮಸ್ಥರು ಕೂಡ ಪಟ್ಟಣಕ್ಕೆ ಹೋಗಲು ಕೊಂಡಿಯಾಗಿ ಬೇಗೂರು ಬಸ್ ನಿಲ್ದಾಣವನ್ನೇ ಅವಲಂಭಿಸಿದ್ದಾರೆ. ಹೀಗಿ ದ್ದರೂ ಕೂಡ ನಿಲ್ದಾಣಕ್ಕೆ ಸಮರ್ಪಕವಾಗಿ ಸೌಲಭ್ಯ ಕಲ್ಪಿಸುವಲ್ಲಿ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ವಿಫಲ ರಾಗಿದ್ದಾರೆ.
Related Articles
Advertisement
ನಿಲುಗಡೆ ಮಾಡದೆ ತೆರಳುವ ಬಸ್‌ಗಳು: ಗುಂಡ್ಲುಪೇಟೆ ಹಾಗು ಮೈಸೂರು ಕಡೆಗೆ ತೆರಳುವ ಬಸ್‌ಗಳು ಎಕ್ಸ್ ಪ್ರಸ್ ನೆಪದಲ್ಲಿ ಬೇಗೂರು ಬಸ್ ನಿಲ್ದಾಣದ ಒಳಗೆ ಬಾರದೆ ತೆರಳುತ್ತಿದ್ದು, ಕೆಲವು ಬಸ್‌ಗಳು ಹೆದ್ದಾರಿಯಲ್ಲಿಯೇ ಜನರನ್ನು ಇಳಿಸಿ ಹೋಗುತ್ತಿವೆ. ಇದರಿಂದ ಬಸ್ ಗಾಗಿ ಜನರು ಗಂಟೆಗಟ್ಟಲೇ ಕಾಯುವಂತಾಗಿದೆ.
ದ್ವಿಚಕ್ರ ವಾಹನ ನಿಲುಗಡೆಯಿಲ್ಲ: ದೂರದ ಊರು ಗಳಿಗೆ ತೆರಳುವ ಗ್ರಾಮೀಣ ಪ್ರದೇಶದ ಜನರು ಬೈಕ್ ನಲ್ಲಿ ಬೇಗೂರು ಬಸ್ ನಿಲ್ದಾಣಕ್ಕೆ ಬಂದರೆ ವಾಹನ ನಿಲುಗಡೆಗೆ ಅವಕಾಶವಿಲ್ಲದ ಕಾರಣ ಅಕ್ಕಪಕ್ಕ ಅಂಗಡಿ, ಹೋಟೆಲ್ ಸೇರಿದಂತೆ ಪರಿಚಯಸ್ಥರ ಮನೆಗಳಲ್ಲಿ ನಿಲ್ಲಿಸಿ ತೆರಳುವಂತಾಗಿದೆ.
ಕೆಟ್ಟು ನಿಂತ ಕುಡಿಯುವ ನೀರಿನ ಘಟಕ:
ನಿಲ್ದಾಣದಲ್ಲಿರುವ ಶುದ್ಧ ಕುಡಿಯುವ ನೀರಿವ ಘಟಕ ಕೆಟ್ಟು ನಿಂತು ತಿಂಗಳೇ ಕಳೆದಿದೆ. ಹೀಗಿದ್ದರೂ ಕೂಡ ಸಂಬಂಧಪಟ್ಟ ಅಧಿಕಾರಿಗಳು ದುರಸ್ತಿ ಪಡಿಸುವ ಗೋಜಿಗೆ ಹೋಗದ ಕಾರಣ ಪ್ರಯಾಣಿಕರಿಗೆ ಕುಡಿಯುವ ನೀರಿನ ಸಮಸ್ಯೆ ತಲೆ ತೋರಿದೆ. ಕೆಲವರು ಹಣ ಕೊಟ್ಟು ಬಾಟಲಿ ನೀರು ಕುಡಿಯುವಂತಾಗಿದೆ.
ಕೂರಲು ಆಸನಗಳೇ ಇಲ್ಲ :
ಮೈಸೂರು, ಗುಂಡ್ಲುಪೇಟೆ, ಯಡಿಯಾಲ, ಎಚ್.ಡಿ.ಕೋಟೆ ಕಡೆಗೆ ತೆರಳಲು ಪ್ರಯಾಣಿಕರು ಬಸ್ ನಿಲ್ದಾಣಕ್ಕೆ ಬಂದರೆ ಕೂರಲು ಸೂಕ್ತ ಆಸನಗಳ ವ್ಯವಸ್ಥೆ ಇಲ್ಲದ ಕಾರಣ ಮರದ ನೆರಳಿನಲ್ಲಿ ಆಶ್ರಯ ಪಡೆಯುವ ಅನಿವಾರ್ಯತೆ ಎದುರಾಗಿದೆ. ಅಧಿಕ ಮಂದಿ ಆಗಮಿಸುವ ಸಂದರ್ಭದಲ್ಲಿ ವಿಧಿಯಿಲ್ಲದೆ ಬಿಸಿಲಿನಲ್ಲೆ ನಿಂತು ಬಸ್ ಗಾಗಿ ಕಾಯುವಂತಾಗಿದೆ.
ಬೇಗೂರು ಬಸ್ ನಿಲ್ದಾಣದಿಂದ ಮೈಸೂರಿಗೆ ತೆರಳುವ ಪ್ರತಿ ಬಸ್‌ಗಳು ಕೂಡ ಗುಂಡ್ಲುಪೇಟೆಯಿಂದ ಹೆಚ್ಚು ಪ್ರಯಾಣಿಕರನ್ನು ತುಂಬಿಕೊಂಡು ಬರುತ್ತಿವೆ. ಇದರಿಂದ ನಮಗೆ ಬಸ್‌ನಲ್ಲಿ ಸೀಟ್ ಸಿಗದೆ ನಿಂತುಕೊಂಡೆ ಪ್ರಯಾಣ ಮಾಡಬೇಕಾಗಿದೆ. ಆದ್ದರಿಂದ ಬೇಗೂರಿನಿಂದಲೇ ಮೈಸೂರು, ನಂಜನಗೂಡಿಗೆ ಪ್ರತ್ಯೇಕ ಬಸ್ ವ್ಯವಸ್ಥೆ ಕಲ್ಪಿಸಬೇಕು. -ಶಂಕರನಾಯಕ, ಕೋಟೆಕೆರೆ
ಬೇಗೂರು ನಿಲ್ದಾಣದಲ್ಲಿ ಮೂಲ ಸೌಲಭ್ಯಗಳಿಲ್ಲದೆ ಪ್ರಯಾಣಿಕರಿಗೆ ತೊಂದರೆ ಉಂಟಾಗಿದೆ. ಸಂಬಂಧಪಟ್ಟ ಅಧಿಕಾರಿಗಳು ಇತ್ತ ಗಮನ ಹರಿಸಿ ಸೌಕರ್ಯ ನೀಡಬೇಕು. ಇಲ್ಲದಿದ್ದರೆ ಬಸ್‌ಗಳನ್ನು ತಡೆದು ಹೋರಾಟ ನಡೆಸಲಾಗುವುದು. -ರಿಯಾಜ್ ಪಾಷಾ, ಕರವೇ, ಜಿಲ್ಲಾ ಪ್ರಧಾನ ಕಾರ್ಯದರ್ಶಿ
ಕೂಡಲೇ ಬೇಗೂರು ಬಸ್ ನಿಲ್ದಾಣಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ, ಕುಡಿಯುವ ನೀರು, ಆಸನಗಳ ವ್ಯವಸ್ಥೆ, ಶೌಚಾಲಯ ಸೇರಿದಂತೆ ಇನ್ನಿತರ ಸಮಸ್ಯೆಗಳನ್ನು ಬಗೆ ಹರಿಸಲು ಕ್ರಮ ವಹಿಸಲಾಗುವುದು.-ತ್ಯಾಗರಾಜು, ಡಿಪೋ ವ್ಯವಸ್ಥಾಪಕ, ಗುಂಡ್ಲುಪೇಟೆ
-ಬಸವರಾಜು ಎಸ್.ಹಂಗಳ