Advertisement

ರಾಜ್ಯದಲ್ಲಿ ವಾಣಿಜ್ಯ ವಿಭಾಗದ ಸೀಟಿಗೆ ಭಾರೀ ಬೇಡಿಕೆ

11:11 AM May 16, 2017 | Team Udayavani |

ಬೆಂಗಳೂರು: ಉನ್ನತ ವ್ಯಾಸಂಗ ಎಂದರೆ ಸೈನ್ಸ್‌ ಎಂದು ಮುಗಿಬೀಳುತ್ತಿದ್ದ ವಿದ್ಯಾರ್ಥಿ ಸಮುದಾಯದ ಇದೀಗ
“ಕಾಮರ್ಸ್‌ ಕಡೆ’ ಚಿತ್ತ ಹರಿಸಿದ್ದು ಟ್ರೆಂಡ್‌ ಬದಲಾಗಿದೆ. ಈ ವರ್ಷದ ಎಸ್ಸೆಸ್ಸೆಲ್ಸಿ, ಪಿಯುಸಿ ಫ‌ಲಿತಾಂಶ ಪ್ರಕಟವಾದ
ದಿನದಿಂದಲೇ ರಾಜ್ಯದ ಪ್ರತಿಷ್ಠಿತ ಪಿಯುಸಿ ಹಾಗೂ ಪದವಿ ಕಾಲೇಜುಗಳಲ್ಲಿ ವಾಣಿಜ್ಯ ವಿಭಾಗದ ಸೀಟಿಗೆ ಬೇಡಿಕೆ
ನಿರೀಕ್ಷೆಗಿಂತಲೂ ಹೆಚ್ಚಾಗಿದೆ. ಈಗಾಗಲೇ ಪ್ರವೇಶ ಪ್ರಕ್ರಿಯೆ ಚುರುಕುಗೊಂಡಿದ್ದು, ವಿಜ್ಞಾನ ಮತ್ತು ಕಲಾ ವಿಭಾಗಕ್ಕೆ ಹೋಲಿಸಿದರೆ ವಾಣಿಜ್ಯ ವಿಭಾಗದ ಸೀಟಿಗೆ ಅತಿ ಹೆಚ್ಚು ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಿದ್ದಾರೆ. ಸರ್ಕಾರಿ ಹಾಗೂ
ಅನುದಾನಿತ ಪಿಯುಸಿ, ಪದವಿ ಕಾಲೇಜಿನಲ್ಲೂ 2017-18ನೇ ಸಾಲಿಗೆ ವಿದ್ಯಾರ್ಥಿಗಳ ದಾಖಲಾತಿಗೆ ಅರ್ಜಿ ವಿತರಣೆ
ಆರಂಭವಾಗಿದ್ದು, ಪ್ರತಿಷ್ಠಿತ ಪಿಯು ಹಾಗೂ ಪದವಿ ಕಾಲೇಜಿನ ಆಡಳಿತ ಮಂಡಳಿಗಳು ತಾವಾಗಿಯೇ ಕಟ್‌ಆಪ್‌ ಮಾಕ್‌
Õì ನಿಗದಿಪಡಿಸಿಕೊಂಡಿವೆ. ಎಸ್ಸೆಸ್ಸೆಲ್ಸಿ ಹಾಗೂ ಪಿಯುಸಿಯಲ್ಲಿ ಶೇ.95ಕ್ಕಿಂತ ಅಧಿಕ ಅಂಕ ಪಡೆದಿರುವ ವಿದ್ಯಾರ್ಥಿಗಳಿಗೆ
ಸುಲಭದಲ್ಲಿ ಸೀಟು ಸಿಗುತ್ತಿದೆ. ಶೇ.90ರಿಂದ 95ರಷ್ಟು ಅಂಕ ಪಡೆದ ವಿದ್ಯಾರ್ಥಿಗಳು ಪ್ರತಿಷ್ಠಿತ ಕಾಲೇಜಿನಲ್ಲಿ ತಮ್ಮ ಇಚ್ಛೆಯ ವಿಭಾಗ ಸೇರಲು ಪರದಾಡುತ್ತಿದ್ದಾರೆ. ಪ್ರಮುಖ ಕಾಲೇಜುಗಳಲ್ಲಿ ಪ್ರವೇಶ ಅರ್ಜಿಗೆ ವಿದ್ಯಾರ್ಥಿಗಳು ಮುಗಿಬೀಳುತ್ತಿದ್ದಾರೆ.

Advertisement

ಕೆಲವೊಂದು ಕಾಲೇಜುಗಳು ಆನ್‌ಲೈನ್‌ ಮೂಲಕವೇ ಅರ್ಜಿ ಹಂಚಿಕೆ ಮಾಡುತ್ತಿದ್ದು, ಶೇ.95ಕ್ಕಿಂತ ಅಧಿಕ ಅಂಕದ ವಿದ್ಯಾರ್ಥಿಗಳ ಅರ್ಜಿಯನ್ನು ಆದ್ಯತೆ ಮೇರೆಗೆ ಕ್ರೋಢೀಕರಿಸುತ್ತಿದ್ದಾರೆ. ವಾಣಿಜ್ಯ ವಿಭಾಗಕ್ಕೆ ಬಹು ಬೇಡಿಕೆ: ಪ್ರತಿಷ್ಠಿತ ಕಾಲೇಜುಗಳಲ್ಲಿ ವಾಣಿಜ್ಯ ವಿಭಾಗಕ್ಕೆ 1500 ಕ್ಕೂ ಅಧಿಕ ಅರ್ಜಿ ಬಂದರೆ ವಿಜ್ಞಾನ ಕೋರ್ಸ್‌ಗೆ 250 ಅರ್ಜಿ ಸ್ವೀಕೃತವಾದರೆ, ಕಲಾ ವಿಭಾಗದ ಅರ್ಜಿ 100 ದಾಟುತ್ತಿಲ್ಲ. ವಾಣಿಜ್ಯ ವಿಭಾಗದ ಪಿಯುಸಿ ಹಾಗೂ ಪದವಿ ಕೋರ್ಸ್‌ಗೆ ನಿರೀಕ್ಷೆಗೂ ಮೀರಿದ ಬೇಡಿಕೆ ಉಂಟಾಗಿರುವುದರಿಂದ ವಿಜ್ಞಾನ ಹಾಗೂ ಕಲಾ ವಿಭಾಗದ ಸೀಟು ಭರ್ತಿಯಾಗುವುದೇ
ಕಷ್ಟ ಎಂಬ ಸ್ಥಿತಿ ನಿರ್ಮಾಣವಾಗುತ್ತಿದೆ.

ಬೇಡಿಕೆ ಹೆಚ್ಚಲು ಕಾರಣ: ಸಾಫ್ಟ್ವೇರ್‌, ಫಾರ್ಮಸಿ ಸಂಸ್ಥೆಗಳು ಸೇರಿದಂತೆ ಬ್ಯಾಂಕಿಂಗ್‌ ಕ್ಷೇತ್ರ, ಹಣಕಾಸು ಸಂಸ್ಥೆಗಳಲ್ಲಿ ಬಿಕಾಂ, ಎಂಕಾಂ, ಬಿಬಿಎಂ, ಎಂಬಿಎ ಪದವೀಧರರಿಗೆ ಸುಲಭವಾಗಿ ಉದ್ಯೋಗ ಸಿಗುತ್ತದೆ. ಹಾಗೆಯೇ ವಾಣಿಜ್ಯ ಕೋರ್ಸ್‌ಗಳಲ್ಲೂ ಕಂಪ್ಯೂಟರ್‌ ಅಪ್ಲಿಕೇಷನ್‌ ವಿಭಾಗ ಇರುವುದರಿಂದ ಎಂಜಿನಿಯರ್‌ಗಳ ಬಹುತೇಕ ಕೆಲಸವನ್ನು ವಾಣಿಜ್ಯ ಪದವಿ ಪಡೆದವರೇ ಮಾಡಬಲ್ಲರಾಗಿರುತ್ತಾರೆ. ಇದು ಸಂಸ್ಥೆಗಳ ಮೇಲಿನ ಆರ್ಥಿಕ ಹೊರೆ ಇಳಿಸಲು ಕಾರಣವಾಗಿದೆ.

ಕಲಿಕಾ ವಾತಾವರಣದ ಹಿನ್ನೆಲೆಯಲ್ಲಿ ಮೊದಲು ಕಲಾ ವಿಭಾಗಕ್ಕೆ ಬೇಡಿಕೆ ಹೆಚ್ಚಿತ್ತು. ನಂತರ ವಿಜ್ಞಾನ ವಿಭಾಗಕ್ಕೆ ಬೇಡಿಕೆ
ಹೆಚ್ಚಾಯಿತು. ಈಗ ವಾಣಿಜ್ಯ ವಿಭಾಗಕ್ಕೆ ವಿದ್ಯಾರ್ಥಿಗಳು ಆಸಕ್ತಿ ತೋರಿಸುತ್ತಿದ್ದಾರೆ. ಮುಂದೆ ಮತ್ತೆ ವಿಜ್ಞಾನ ಅಥವಾ ಕಲಾ ವಿಭಾಗಕ್ಕೆ ಬೇಡಿಕೆ ಹೆಚ್ಚಬಹುದು. ವಾಣಿಜ್ಯ ವಿಭಾಗದ ಪಠ್ಯಕ್ರಮದಲ್ಲಾದ ಬದಲಾವಣೆ ಮತ್ತು ಹೊಸ ಕೋರ್ಸ್‌ಗಳ ಸೇರ್ಪಡೆಯಿಂದ ವಿದ್ಯಾರ್ಥಿಗಳ ಆಸಕ್ತಿ ಇತ್ತ ವಾಲಿದೆ. ವಾಣಿಜ್ಯ ವಿಭಾಗದಲ್ಲಿ ಪದವಿ ಮಾಡಿದವರಿಗೆ
ಬೇಗ ಉದ್ಯೋಗವೂ ಸಿಗುತ್ತಿದೆ.
– ಡಾ.ಕೆ.ಇ.ರಾಧಾಕೃಷ್ಣ ಶಿಕ್ಷಣ ತಜ್ಞ

Advertisement

Udayavani is now on Telegram. Click here to join our channel and stay updated with the latest news.

Next