Advertisement

ಬೆಟ್ಟಂಪಾಡಿ ಕಾಲೇಜು: ವಿದ್ಯಾರ್ಥಿಗಳು ಹೆಚ್ಚು, ಸಮಸ್ಯೆಗಳೂ ಜಾಸ್ತಿ!

11:38 AM Aug 15, 2018 | |

ನಿಡ್ಪಳ್ಳಿ: ಪುತ್ತೂರು ತಾಲೂಕಿನ ಬೆಟ್ಟಂಪಾಡಿ ಸರಕಾರಿ ಪದವಿಪೂರ್ವ ಕಾಲೇಜು ಗ್ರಾಮೀಣ ಮಟ್ಟದಲ್ಲಿ ಅತ್ಯಂತ ಹೆಚ್ಚು ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿರುವ ಏಕೈಕ ಸರಕಾರಿ ವಿದ್ಯಾಸಂಸ್ಥೆಯಾಗಿದೆ. ಕರ್ನಾಟಕ  - ಕೇರಳ ಗಡಿ ಪ್ರದೇಶದಲ್ಲಿರುವ ಈ ವಿದ್ಯಾಸಂಸ್ಥೆ ಐದು ಗ್ರಾಮಗಳ ಬಡ ವಿದ್ಯಾರ್ಥಿಗಳ ಶಿಕ್ಷಣಕ್ಕೆ ಆಸರೆಯಾಗಿದೆ. ಇಲ್ಲಿನ ಶೈಕ್ಷಣಿಕ ಗುಣಮಟ್ಟದಿಂದಾಗಿ ಹೊರ ರಾಜ್ಯದ ವಿದ್ಯಾರ್ಥಿಗಳೂ ವಿದ್ಯಾರ್ಜನೆಗೆ ಬರುತ್ತಿದ್ದಾರೆ.

Advertisement

ಕಳೆದ ಶೈಕ್ಷಣಿಕ ವರ್ಷದ ವಾಣಿಜ್ಯ ವಿಭಾಗದಲ್ಲಿ ಇಲ್ಲಿನ ವಿದ್ಯಾರ್ಥಿನಿ ಆಯಿಷಾ ಜಿಲ್ಲಾ ಮಟ್ಟದಲ್ಲಿ ತೃತೀಯ ಸ್ಥಾನ ಗಳಿಸಿ, ಗಮನಾರ್ಹ ಸಾಧನೆ ಮಾಡಿದ್ದಾರೆ. ಬೇರೆ ಸರಕಾರಿ ಶಾಲೆ – ಕಾಲೇಜುಗಳಲ್ಲಿ ವಿದ್ಯಾರ್ಥಿಗಳ ಸಂಖ್ಯೆ ಇಳಿಮುಖವಾಗುತ್ತಿದ್ದು, ಇಲ್ಲಿ ಮಾತ್ರ ತೃಪ್ತಿಕರವಾಗಿದೆ.

ಕಲೆ, ವಾಣಿಜ್ಯ, ವಿಜ್ಞಾನ ವಿಭಾಗದಲ್ಲಿ ಒಟ್ಟು 247 ವಿದ್ಯಾರ್ಥಿಗಳಿದ್ದು, ಇಲ್ಲಿಯ ಗುಣಮಟ್ಟದ ಶಿಕ್ಷಣಕ್ಕೆ ಈ ಸಂಖ್ಯೆಯೇ ಪುಷ್ಟಿ ನೀಡುವಂತಿದೆ. ಪ್ರತೀ ವರ್ಷ ಸರಾಸರಿ ಶೇ. 90 ಫಲಿತಾಂಶ ಪಡೆಯುತ್ತಿರುವ ಈ ಸಂಸ್ಥೆ ಶೈಕ್ಷಣಿಕವಾಗಿ ಮಂಚೂಣಿಯಲ್ಲಿದ್ದರೂ ಕೆಲವು ಮೂಲಸೌಕರ್ಯಗಳಿಂದ ವಂಚಿತವಾಗಿದ್ದು ವಿಪರ್ಯಾಸವೇ ಸರಿ.

ಶೌಚಾಲಯದ ಕೊರತೆ
ಸ್ವಚ್ಛ ಭಾರತದ ಪರಿಕಲ್ಪನೆಯನ್ನು ಸಾಕಾರಗೊಳಿಸಬೇಕಾದ ಈ ಸಮಯದಲ್ಲಿ ಇಲ್ಲಿನ ಹುಡುಗರಿಗೆ ಶೌಚಾಲಯವೇ ಇಲ್ಲ. ಸುಮಾರು 85 ಬಾಲಕರಿಗೆ ಬಯಲೇ ಶೌಚಾಲಯವಾದರೆ ಸುಮಾರು 162 ವಿದ್ಯಾರ್ಥಿನಿಯರಿಗೆ ಎರಡು ಶೌಚಾಲಯ ಕೊಠಡಿಗಳಷ್ಟೇ ಇವೆ. ಈ ಬಗ್ಗೆ ಜನಪ್ರತಿನಿಧಿಗಳಿಗೆ ಹಲವು ಮನವಿಗಳನ್ನು ಸಲ್ಲಿಸಿದರೂ ಸರಿಯಾಗಿ ಸ್ಪಂದಿಸಿಲ್ಲ ಎಂದು ಹಿರಿಯ ಉಪನ್ಯಾಸಕರು ಹಾಗೂ ವಿದ್ಯಾರ್ಥಿಗಳು ಬೇಸರ ವ್ಯಕ್ತಪಡಿಸುತ್ತಾರೆ.

ನಬಾರ್ಡ್‌ ಕೊಠಡಿ ಕೆಲಸ ಬಾಕಿ
ಶೌಚಾಲಯದ ಕೊರತೆಯನ್ನು ನೀಗಿಸಲು ಮಾಡಿದ ಮನವಿಗೆ ಸ್ಪಂದಿಸಿ ನಬಾರ್ಡ್‌ ವತಿಯಿಂದ 2003ರಲ್ಲಿ ಸಂಸ್ಥೆಗೆ ಎರಡು ತರಗತಿ ಕೊಠಡಿ ಹಾಗೂ ಶೌಚಾಲಯ ಕೊಠಡಿಯು ಮಂಜೂರಾಗಿ ತ್ತು. ಆನಂತರ ಕಾಮಗಾರಿಯನ್ನೂ ಆರಂಭಿಸಲಾಗಿತ್ತು. ಆದರೆ ಶೌಚಾಲಯ ಕೊಠಡಿ ಕಾಮಗಾರಿ ಕೇವಲ ಗೋಡೆಯವರೆಗೆ ನಡೆದು ಅರ್ಧದಲ್ಲಿ ನಿಂತಿದೆ. ತರಗತಿ ಕೊಠಡಿ ಅಡಿಪಾಯ ಆಗಿದ್ದು, ಅದೂ ಬಾಕಿಯಾಗಿದೆ. ಮುಂದೆ ಈ ಬಗ್ಗೆ ಜನಪ್ರತಿನಿಗಳು, ಸಂಘ-ಸಂಸ್ಥೆಗಳು, ದಾನಿಗಳು ಸಹಕಾರ ನೀಡಿದರೆ 22 ವರ್ಷಗಳ ಬೇಡಿಕೆ ಕೈಗೂಡಲಿದೆ ಎನ್ನುವುದು ಇಲ್ಲಿನ ವಿದ್ಯಾರ್ಥಿಗಳ ಹಾಗೂ ಹೆತ್ತವರ ನಿರೀಕ್ಷೆಯಾಗಿದೆ.

Advertisement

ಅಂಗವಿಕಲರಿಗೂ ಸಮಸ್ಯೆ
ಪ್ರತಿ ಶಾಲೆಯಲ್ಲಿಯೂ ವಿಶೇಷ ಶೌಚಾಲಯ ಇರಬೇಕು ಎಂಬ ನಿಯಮ ಇದೆ. ಆದರೆ ಇಲ್ಲಿ ಅದೂ ಇಲ್ಲ. ಕಾಲೇಜಿನಲ್ಲಿ ಮೂವರು ಅಂಗವಿಕಲರಿದ್ದು, ವಿಶೇಷ ಶೌಚಾಲಯ ಇಲ್ಲದೆ ಅವರಿಗೆ ಬಹಳ ತೊಂದರೆಯಾಗಿದೆ. ಈ ಬಗ್ಗೆಯೂ ವಿಶೇಷ ಗಮನ ಹರಿಸಬೇಕಾಗಿದೆ.

ತುರ್ತಾಗಿ ವ್ಯವಸ್ಥೆ ಆಗಲಿ
ನಾನು ಇಲ್ಲಿಯ ಪ್ರಾಂಶುಪಾಲನಾಗಿ ಇತ್ತೀಚೆಗೆ ಅಧಿಕಾರ ವಹಿಸಿಕೊಂಡಿದ್ದೇನೆ. ತುರ್ತು ವ್ಯವಸ್ಥೆಗಾಗಿ ಎಂಆರ್‌ ಪಿಎಲ್‌ ಗೂ ಮನವಿ ಮಾಡಲಾಗಿದೆ. ನಾನು ಬರುವುದಕ್ಕಿಂತ ಮುಂದೆ ಜಿ.ಪಂ. ಅಧ್ಯಕ್ಷರಿಗೂ ಮನವಿ ಸಲ್ಲಿಸಿದ್ದಾರೆ. ಶೌಚಾಲಯ ತುರ್ತಾಗಿ ಆಗಲೆಬೇಕು.
– ಗೋಪಾಲ ಗೌಡ
ಪ್ರಾಂಶುಪಾಲರು, ಬೆಟ್ಟಂಪಾಡಿ ಪಿ.ಯು. ಕಾಲೇಜು

ಶೌಚಾಲಯ ನಿರ್ಮಾಣ: ಯತ್ನ
ಕಾಲೇಜಿನಲ್ಲಿ ಶೌಚಾಲಯದ ಕೊರತೆ ಇರುವುದು ನನ್ನ ಗಮನಕ್ಕೆ ಬಂದಿದ್ದು, ಈ ಬಗ್ಗೆ ಶಾಸಕರ ಜತೆಗೆ ಚರ್ಚಿಸುತ್ತೇನೆ. ಎಂಆರ್‌ ಪಿಎಲ್‌ ಸಂಸ್ಥೆ ನೆರವು ನೀಡುತ್ತಿದ್ದು, ಅಲ್ಲಿನ ಅಧಿಕಾರಿಗಳೊಂದಿಗೆ ಮಾತನಾಡಿ, ಆದಷ್ಟು ಬೇಗ ಸಮಸ್ಯೆ ಪರಿಹರಿಸಲು ಪ್ರಯತ್ನಿಸಲಾಗುವುದು.
– ಮೀನಾಕ್ಷಿ ಶಾಂತಿಗೋಡು
ಜಿ.ಪಂ. ಅಧ್ಯಕ್ಷರು

Advertisement

Udayavani is now on Telegram. Click here to join our channel and stay updated with the latest news.

Next