Advertisement

Bengaluru Rameshwaram Cafe ಸ್ಫೋಟದ ಆರೋಪಿ ಶೀಘ್ರ ಬಂಧನ: ಪರಂ

11:56 PM Mar 03, 2024 | Team Udayavani |

ಬೆಂಗಳೂರು: ರಾಮೇಶ್ವರಂ ಕೆಫೆ ಬಾಂಬ್‌ ಸ್ಫೋಟ ಪ್ರಕರಣದ ಆರೋಪಿ ಕುರಿತು ಕೆಲವು ಮಾಹಿತಿ ಸಿಕ್ಕಿದ್ದು, ಆತನನ್ನು ಶೀಘ್ರದಲ್ಲೇ ಬಂಧಿಸಲಾಗುವುದು ಎಂದು ಗೃಹ ಸಚಿವ ಡಾ| ಜಿ.ಪರಮೇಶ್ವರ್‌ ಹೇಳಿದ್ದಾರೆ.

Advertisement

ಬೆಂಗಳೂರು ನಗರ ಪೊಲೀಸ್‌ ಆಯುಕ್ತರ ಕಚೇರಿಯಲ್ಲಿ ರವಿವಾರ ಹಿರಿಯ ಪೊಲೀಸ್‌ ಅಧಿಕಾರಿಗಳ ಸಭೆ ನಡೆಸಿದ ಬಳಿಕ ಮಾಧ್ಯಮ ಗಳಿಗೆ ಪ್ರತಿಕ್ರಿಯೆ ನೀಡಿದ ಅವರು, ಶಂಕಿತ ವ್ಯಕ್ತಿ ಕೆಫೆಗೆ ಬಂದಿದ್ದು, ಬ್ಯಾಗ್‌ ಇರಿಸಿರುವುದು ಸಿಸಿ ಕೆಮರಾದಲ್ಲಿ ಸೆರೆಯಾ ಗಿದೆ. ದುಷ್ಕರ್ಮಿಯ ಪತ್ತೆಗೆ ಪೊಲೀಸರ ಹಲವು ತಂಡ ರಚಿಸಲಾಗಿದ್ದು, ಎಲ್ಲ ಆಯಾಮಗಳಲ್ಲೂ ತನಿಖೆ ಮಾಡಲಾಗುತ್ತಿದೆ. ಪೊಲೀಸರು ಆದಷ್ಟು ಶೀಘ್ರ ದುಷ್ಕರ್ಮಿಯನ್ನು ಬಂಧಿಸಲಿದ್ದಾರೆ. ರಾಜ್ಯ ಪೊಲೀಸ್‌ ಇಲಾಖೆ ಜತೆಗೆ ಎನ್‌ಐಎ, ಎನ್‌ಎಸ್‌ಜಿ ಕೂಡ ಅವರದೇ ರೀತಿಯಲ್ಲಿ ತನಿಖೆ ನಡೆಸುತ್ತಿದೆ. ಪರಸ್ಪರ ಸಹಕಾರದಿಂದ ಆದಷ್ಟು ಶೀಘ್ರದಲ್ಲಿ ಪ್ರಕರಣವನ್ನು ಭೇದಿಸಲಾಗುವುದು ಎಂದರು.

ಈಗಲೇ ಎಲ್ಲ ಮಾಹಿತಿ ಬಹಿರಂಗ ಸಾಧ್ಯವಿಲ್ಲ
ದುಷ್ಕರ್ಮಿ ತಲೆಗೆ ಟೊಪ್ಪಿ ಧರಿಸಿರುವುದು, ಕನ್ನಡಕ ಧರಿಸುವುದು, ಚಲನ ವಲನ ಸೆರೆಯಾಗಿದೆ. ಕೃತಕ ಬುದ್ಧಿಮತ್ತೆ(ಎಐ) ಬಳಸಿಕೊಂಡು ತಾಂತ್ರಿಕವಾಗಿ ಆತನ ಮುಖಚಹರೆ ಪತ್ತೆಹಚ್ಚುವ ಕೆಲಸ ಮಾಡಲಿದ್ದಾರೆ. ಆ ವ್ಯಕ್ತಿ ಯಾರು? ಯಾವ ಸಂಘಟನೆಗೆ ಸೇರಿದವನು ಎಂಬುದು ಸಹಿತ ಕೆಲವು ವೈಯಕ್ತಿಕ ಮಾಹಿತಿಯನ್ನು ತನಿಖೆ ಹಂತದಲ್ಲಿ ಹೇಳಲು ಸಾಧ್ಯವಿಲ್ಲ. ಎಲ್ಲ ಮಾಹಿತಿ ನೀಡಿದರೆ ತನಿಖೆಗೆ ತೊಂದರೆಯಾಗುತ್ತದೆ ಎಂದು ಪ್ರಶ್ನೆಯೊಂದಕ್ಕೆ ಗೃಹ ಸಚಿವರು ಪ್ರತಿಕ್ರಿಯಿಸಿದರು.

ಕುಕ್ಕರ್‌ ಬಾಂಬ್‌ ಸ್ಫೋಟಕ್ಕೆ ಸಾಮ್ಯತೆ ಇದೆ
ಮಂಗಳೂರಿನ ಕುಕ್ಕರ್‌ ಬಾಂಬ್‌ ಸ್ಫೋಟಕ್ಕೂ ಇದಕ್ಕೂ ತಾಂತ್ರಿಕವಾಗಿ ಕೆಲ ವಸ್ತುಗಳಲ್ಲಿ ಸಾಮ್ಯತೆ ಕಂಡು ಬಂದಿದೆ. ಬಾಂಬ್‌ ತಯಾರಿಸಲು ಬಳಸಿರುವ ಬ್ಯಾಟರಿ, ಟೈಮರ್‌ಗಳಲ್ಲಿ ಸಾಮ್ಯತೆ ಇದೆ. ಆದರೆ ಅವರೇ ಈ ಕೃತ್ಯ ಮಾಡಿದ್ದಾರೆ ಎನ್ನ‌ಲು ಸಾಧ್ಯವಿಲ್ಲ. ಇಂದು ಅಥವಾ ನಾಳೆ ಬಂಧಿಸುತ್ತೇವೆ ಎಂದು ಸಮಯ ನಿಗದಿ ಮಾಡಲೂ ಸಾಧ್ಯವಿಲ್ಲ. ದುಷ್ಕರ್ಮಿ ಬಗ್ಗೆ ತಾಂತ್ರಿಕ ಮಾಹಿತಿ ಇದೆ ಎಂದರು.

ಸಭೆಯಲ್ಲಿ ರಾಜ್ಯ ಪೊಲೀಸ್‌ ಮಹಾನಿರ್ದೇಶಕ ಅಲೋಕ್‌ ಮೋಹನ್‌, ನಗರ ಪೊಲೀಸ್‌ ಆಯುಕ್ತ ಬಿ.ದಯಾನಂದ್‌, ಹಿರಿಯ ಅಧಿಕಾರಿಗಳಿದ್ದರು.

Advertisement

ಪಾಕಿಸ್ಥಾನ ಪರ ಘೋಷಣೆ: ವರದಿ ಬಂದಿಲ್ಲ
ವಿಧಾನಸೌಧದಲ್ಲಿ ಪಾಕಿಸ್ಥಾನದ ಪರ ಘೋಷಣೆ ಕೂಗಿದ ಪ್ರಕರಣ ಸಂಬಂಧ ಇನ್ನೂ ವಿಧಿವಿಜ್ಞಾನ ಪ್ರಯೋಗಾಲಯ ವರದಿ ಬಂದಿಲ್ಲ. ವರದಿ ಬಂದು ಅದರಲ್ಲಿ ಆರೋಪ ಸಾಬೀತಾದರೆ ತತ್‌ಕ್ಷಣ ಕ್ರಮ ಕೈಗೊಳ್ಳಲಾಗುವುದು. ವರದಿ ಬಳಿಕ ಯಾವುದೇ ಮುಲಾಜಿಲ್ಲದೆ ಯಾವುದೇ ಒತ್ತಡಕ್ಕೆ ಮಣಿಯದೆ ಕ್ರಮ ಕೈಗೊಳ್ಳುತ್ತೇವೆ. ಸದನದಲ್ಲೂ ಇದನ್ನೇ ಹೇಳಿದ್ದೇನೆ ಎಂದು ಪರಮೇಶ್ವರ್‌ ಹೇಳಿದರು. ಸರಕಾರಕ್ಕೆ ಎಫ್ಎಸ್‌ಎಲ್‌ ವರದಿ ಕೈಸೇರಿದೆ ಎಂಬ ಬಿಜೆಪಿ ಆರೋಪಕ್ಕೆ ಪ್ರತಿಕ್ರಿಯಿಸಿ, ಎಫ್ಎಸ್‌ಎಲ್‌ಗೆ 2-3 ವರದಿ ಕೊಡಿ ಎಂದು ಹೇಳಲು ಸಾಧ್ಯವಿಲ್ಲ. ಒಮ್ಮೆ ಪೂರ್ಣ ವರದಿ ಬಂದ ಬಳಿಕ ನಾವು ಕ್ರಮ ಕೈಗೊಳ್ಳುತ್ತೇವೆ. ಬಿಜೆಪಿಗರು ಆರೋಪ ಮಾಡುತ್ತಾರೆ. ಅದಕ್ಕೆ ನಾವು ಉತ್ತರ ನೀಡುತ್ತೇವೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next