Advertisement
ಮಣಿಪಾಲದ ಜಿಲ್ಲಾಧಿಕಾರಿ ಕಚೇರಿ ಸಂಕೀರ್ಣದಲ್ಲಿ ಮತ್ತು ಉಡುಪಿ ತಾಲೂಕು ಕಚೇರಿಯಲ್ಲಿ ಅಕ್ಕ ಕೆಫೆ ಆರಂಭಕ್ಕೆ ಜಿಲ್ಲಾ ಪಂಚಾಯಿತಿಯಿಂದ ಒಟ್ಟು 30 ಲಕ್ಷ ರೂ. ವೆಚ್ಚದ ಪ್ರಸ್ತಾವನೆ ಸಲ್ಲಿಸಲಾಗಿದೆ. ಇದಕ್ಕೆ ಮಂಜೂರಾತಿ ಸಿಕ್ಕಿದ ಬಳಿಕ ಅದನ್ನು ಜಿಲ್ಲೆಯ ಇತರ ಭಾಗಗಳಿಗೂ ವಿಸ್ತರಿಸುವ ಚಿಂತನೆ ಇದೆ.2024-25ರ ಬಜೆಟ್‌ನಲ್ಲಿ ಸಿಎಂ ಸಿದ್ದರಾಮಯ್ಯ ಅವರು ಮಹಿಳಾ ಸ್ತ್ರೀ ಶಕ್ತಿ ಗುಂಪಿನ ಮಹಿಳೆಯರ ಮೂಲಕ ರಾಜ್ಯದ 50 ಕಡೆ ಅಕ್ಕ ಕೆಫೆ ಆರಂಭಿಸಲು 7.50 ಕೋ.ರೂ. ಕಾಯ್ದಿರಿಸಿದ್ದರು. ಬೇಡಿಕೆಗೆ ಅನುಸಾರ ಹಂತಹಂತವಾಗಿ 25 ಕೋ.ರೂ.ಗೆ ಹೆಚ್ಚಿಸಲಾಗಿದೆ.
ಉಡುಪಿಯಲ್ಲಿ ಅಕ್ಕ ಕೆಫೆ ತೆರೆಯುವ ಬಗ್ಗೆ ಸ್ತ್ರೀಶಕ್ತಿ ಸಂಘಗಳಿಂದ ಬೇಡಿಕೆ ಬಂದಿದೆ. ಆರಂಭದಲ್ಲಿ ಎರಡು ಕಡೆ ಸ್ಥಳ ಗುರುತಿಸಿ, ಸರಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದ್ದೇವೆ. ನಗರ ವ್ಯಾಪ್ತಿಯಲ್ಲಿ ಪ್ರಾಯೋಗಿಕವಾಗಿ 2 ಕಡೆ ತೆರೆದು ಬಳಿಕ ಗ್ರಾಮೀಣಕ್ಕೆ ವಿಸ್ತರಣೆ ಬಗ್ಗೆ ಚಿಂತನೆ ನಡೆಸಲಾಗುವುದು ಎಂದು ಉಡುಪಿ ಜಿಪಂ ಸಿಇಒ ಪ್ರತೀಕ್ ಬಾಯಲ್ ಹೇಳಿದ್ದಾರೆ.
Related Articles
Advertisement
ಸದ್ಯ ಬೆಂಗಳೂರಲ್ಲಿ ಮಾತ್ರ ಇದೆಅಕ್ಕ ಕೆಫೆ ಪರಿಕಲ್ಪನೆ ಸದ್ಯ ಬೆಂಗಳೂರಿನಲ್ಲಿ ಮಾತ್ರ ಅನುಷ್ಠಾನಗೊಂಡಿದೆ. ದುಡಿಯುವ ಮಹಿಳೆಯರ ಕೈಗಳಿಗೆ ಕೆಲಸ ನೀಡಿ, ಕಡಿಮೆ ದರದಲ್ಲಿ ಶುಚಿ-ರುಚಿಯಾದ ಊಟ-ಉಪಹಾರ ನೀಡುವ ಯೋಜನೆಯನ್ನು ರಾಜ್ಯದ ಇತರ ಜಿಲ್ಲೆಗಳಿಗೆ ವಿಸ್ತರಿಸಲಾಗುತ್ತಿದ್ದು, ಉಡುಪಿಗೆ ಅವಕಾಶ ಸಿಗುವ ಸಾಧ್ಯತೆ ಇದೆ. ವಿಶೇಷತೆ ಏನು?
– ಸರಕಾರಿ ಕಚೇರಿಗಳ ಆವರಣದಲ್ಲಿ ಮಹಿಳೆಯರ ನೇತೃತ್ವದಲ್ಲಿ ತೆರೆಯುವ ಕ್ಯಾಂಟೀನ್ ಇದು.
– ಬೃಹತ್ ಕಂಪೆನಿಗಳ ಮಳಿಗೆಯಂತೆ ಅಕ್ಕ ಕೆಫೆಗೂ ಏಕ ರೂಪದ ಲೋಗೋ, ವಿನ್ಯಾಸ, ಬಣ್ಣ ನಿಗದಿಯಾಗಿದೆ.
– ಜೀವನೋಪಾಯ ಇಲಾಖೆ ನಗರ ಭಾಗದಲ್ಲಿ 8ರಿಂದ 15 ಲಕ್ಷ ರೂ. ಹಾಗೂ ಗ್ರಾಮೀಣ ಭಾಗದಲ್ಲಿ 8 ಲಕ್ಷ ರೂ. ವೆಚ್ಚದಲ್ಲಿ ಅಕ್ಕ ಕೆಫೆ ನಿರ್ಮಿಸಿ ಹಸ್ತಾಂತರ ಮಾಡುತ್ತದೆ.
– ಕೆಫೆಯು ಬೆಳಗ್ಗೆ 9ರಿಂದ ರಾತ್ರಿ 9ರ ವರೆಗೆ ಕಾರ್ಯನಿರ್ವಹಿಸಲಿದೆ.
– ಉಪಾಹಾರಗಳ ಬೆಲೆಯು 25 ರೂ.ನಿಂದ 75ರ ವರೆಗೆ ಇರಬಹುದು. ಊಟಕ್ಕೆ 40 ರೂ. ಇರಲಿದೆ.
– ಸರಕಾರಿ ಕಚೇರಿ ಸಿಬಂದಿ, ಅಲ್ಲಿಗೆ ಬರುವವರಿಗೆ ಇದು ಅನುಕೂಲ ಮಾಡಿಕೊಡಲಿದೆ.
– ಸರಕಾರಿ ಕಾರ್ಯಕ್ರಮಗಳಿಗೆ ಬೇಕಾದ ಊಟ, ಉಪಾಹಾರಗಳನ್ನು ಕೂಡ ಇಲ್ಲಿಂದಲೇ ಪೂರೈಸಬಹುದು. -ಬಾಲಕೃಷ್ಣ ಭೀಮಗುಳಿ