Advertisement

Bengaluru: ನಗರದಲ್ಲಿ 10 ದಿನ ಬಳಿಕ 2 ತಾಸಿಗೂ ಹೆಚ್ಚು ಮಳೆ

12:34 PM Aug 30, 2024 | Team Udayavani |

ಬೆಂಗಳೂರು: ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತದಿಂದಾಗಿ ಬೆಂಗಳೂರಿನಲ್ಲಿ ಗುರುವಾರ ಮಧ್ಯಾಹ್ನ ಸುಮಾರು 2 ತಾಸುಗಳ ಕಾಲ ನಿರಂತರವಾಗಿ ಮಳೆ ಸುರಿದಿದೆ. ಒಟ್ಟು 2.6 ಸೆಂ.ಮೀ. ಮಳೆಯಾಗಿದೆ.

Advertisement

ಮಳೆ ಸುರಿದ ಅವಧಿ ಕಡಿಮೆಯಿದ್ದರೂ ಹೆಚ್ಚಿನ ಪ್ರಮಾಣದಲ್ಲಿ ಮಳೆ ಸುರಿದಿದೆ. ಕಳೆದ 10 ದಿನಗಳ ಬಳಿಕ ಬೆಂಗಳೂರಿನಲ್ಲಿ ಇಷ್ಟೊಂದು ಪ್ರಮಾಣದಲ್ಲಿ ಮಳೆಯಾಗಿರಲಿಲ್ಲ. ಪೂರ್ವ ಬಂಗಾಲ ಉಪಸಾಗರದಲ್ಲಿ ಸರ್ಕ್ನೂಲೇಶನ್‌ 5.8 ಕಿ.ಮೀ ಮೀಟರ್‌ ಎತ್ತರದಲ್ಲಿದ್ದು, ಗುರುವಾರ ವಾಯುಭಾರ ಕುಸಿತವಾಗಿದೆ.

ಇದರ ಪ್ರಭಾವದಿಂದ ವ್ಯಾಪಕವಾಗಿ ಮಳೆಯಾಗಿದೆ. ಕೋರಮಂಗಲ, ರಾಜರಾಜೇಶ್ವರಿ ನಗರ, ಮೆಜೆ ಸ್ಟಿಕ್‌, ಕೆ.ಆರ್‌. ಸರ್ಕಲ್‌, ವಿಧಾನಸೌಧ, ಎಂ.ಎಸ್‌. ರಾಮಯ್ಯ ಆಸ್ಪತ್ರೆ, ವಿಲ್ಸನ್‌ ಗಾರ್ಡನ್‌, ಕಾರ್ಪೊರೇ ಷನ್‌ ಸೇರಿದಂತೆ ಇನ್ನೂ ಹಲವು ಪ್ರದೇಶಗಳಲ್ಲಿ ಮಧ್ಯಾಹ್ನ ಮಳೆ ಸುರಿಯಿತು.

ಶಾಲೆಗಳ ಸಮಯ ಮುಗಿಯುವಾಗ ಮಳೆ ಸುರಿಯಲು ಆರಂಭಿಸಿದ ಕಾರಣ ಮಕ್ಕಳು ಮನೆಗಳಿಗೆ ಹೋಗಲು ಪರದಾಡುವ ಸ್ಥಿತಿ ನಗರದಲ್ಲಿ ನಿರ್ಮಾಣವಾಯಿತು. ರಸ್ತೆಯ ಮೇಲೆ ಕೆಲಕಾಲ ನೀರು ನಿಂತ ಹಿನ್ನೆಲೆಯಲ್ಲಿ ಹಲವು ಕಡೆಗಳಲ್ಲಿ ನಿಧಾನಗತಿಯ ಸಂಚಾರ ದಟ್ಟಣೆ ಉಂಟಾಗಿತ್ತು. ಇನ್ನೂ ಕೆಲವು ಕಡೆಗಳಲ್ಲಿ ಮಳೆಯಿಂದ ರಕ್ಷಣೆ ಪಡೆಯಲು ಜನರು ಫ್ಲೈಓವರ್‌ ಕೆಳಗೆ ಆಶ್ರಯ ಪಡೆದರು.

ವಿಲ್ಸನ್‌ ಗಾರ್ಡ್‌ನ್‌ನ ಸಿದ್ದಯ್ಯ ರಸ್ತೆಯಲ್ಲಿ ಮಳೆ ನೀರು ನಿಂತ ಪರಿಣಾಮ ಟ್ರಾಫಿಕ್‌ ಜಾಮ್‌ ಉಂಟಾಗಿ ಬಸ್‌ಗಳು ನಿಧನವಾಗಿ ಸಾಗಿದವು. ಮತ್ತೂಂದೆಡೆ ನೀರು ನಿಂತ ಸ್ಥಳದಲ್ಲಿ ಗುಂಡಿ ಕಾಣದೇ ದ್ವಿಚಕ್ರ ವಾಹನ ಸವಾರರು ಪರದಾಡುವಂತಾಗಿದೆ. ಚರಂಡಿ ಸ್ವತ್ಛಗೊಳಿಸದ ಹಿನ್ನೆಲೆಯಲ್ಲಿ ರಸ್ತೆ ಮೇಲೆ ನೀರು ನಿಂತುಕೊಂಡಿತ್ತು. ರಸ್ತೆಯ ಮೇಲಿದ್ದ ಮಳೆ ನೀರು ತೆರವಾದ ಮೇಲೆ ಸಹಜ ಸ್ಥಿತಿಯತ್ತ ಸಂಚಾರ ಮರಳಿತು.

Advertisement

ಧರೆಗುರಳಿದ ಮರಗಳು:

ಭಾರೀ ಮಳೆಯ ಹಿನ್ನೆಲೆಯಲ್ಲಿ ಕೋರಮಂಗಲದ 3ನೇ ಬ್ಲಾಕ್‌ನ 2 ಎ ಕ್ರಾಸ್‌ನಲ್ಲಿ ಮರಧರೆಗೆ ಉರುಳಿಸಿದೆ. ಹಾಗೆಯೇ ಎಂ.ಎಸ್‌. ರಾಮಯ್ಯ ಗೇಟ್‌ ಬಳಿಯ ಮತ್ತಿಕೆರೆ ಸಾಗುವ ರಸ್ತೆಯಲ್ಲಿ ಮರ ಬಿದ್ದಿದೆ. ರಾಜರಾಜೇಶ್ವರಿ ನಗರ ಐಡಿಎಲ್‌ ಸರ್ಕಲ್‌ ಬಳಿಯ ಕೆಂಚನಹಳ್ಳಿಯಲ್ಲಿ ಮರ ನೆಲಕ್ಕುರಳಿದೆ ಎಂದು ಬಿಬಿಎಂಪಿಯ ಸಹಾಯವಾಣಿ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಆದರೆ ಯಾವುದೇ ಅಪಾಯ ಸಂಭವಿಸಿಲ್ಲ. ಸ್ಥಳಕ್ಕೆ ಭೇಟಿ ನೀಡಿದ ಪಾಲಿಕೆ ಅಧಿಕಾರಿಗಳು ಮರ ತೆರವು ಕಾರ್ಯಾಚರಣೆ ನಡೆಸಿದ್ದಾರೆ ಎಂದು ತಿಳಿಸಿದ್ದಾರೆ.

ಪುಲಕೇಶಿ ನಗರದಲ್ಲಿ 2.8 ಸೆಂ.ಮೀ. ಮಳೆ

ಪುಲಕೇಶಿನಗರ 2.8 ಸೆಂ.ಮೀ., ವಿ.ವಿ.ಪುರ 2.2, ಕೋರಮಂಗಲ 2.2, ಪೀಣ್ಯ 2.1, ಚಾಮರಾಜಪೇಟೆ 2.4, ಕಾಟನ್‌ಪೇಟೆ 2, ಮಹದೇವಪುರದಲ್ಲಿ 1.5, ಚುಂಚನಗುಪ್ಪೆ 1.5, ಆರ್‌.ಆರ್‌.ನಗರ 1.4, ಎಚ್‌ ಎಸ್‌ಆರ್‌ 1.8, ನಂದಿನಿ ಲೇಔಟ್‌ 1.4, ಬಸವೇಶ್ವರನಗರ 1.8, ನಾಯಂಡಹಳ್ಳಿ 1.5, ವಿದ್ಯಾಪೀಠ 1.2, ಬಿಟಿಎಂ ಲೇಔಟ್‌ 1.2, ಕೋಡಿಗೆಹಳ್ಳಿ 1.1 ಸೆಂ.ಮೀ ಮಳೆಯಾಗಿದೆ.

ನಗರದಲ್ಲಿ ಇನ್ನೂ 3 ದಿನ ಮಳೆ ಸಾಧ್ಯತೆ

ಪೂರ್ವ ಬಂಗಾಲ ಉಪಸಾಗರದಲ್ಲಿ ವಾಯುಭಾರ ಕುಸಿತ ಉಂಟಾದ ಪರಿಣಾಮ ಬೆಂಗಳೂರಿನಲ್ಲಿ ಮುಂದಿನ 3 ದಿನಗಳ ಕಾಲ ಇದೇ ಮಾದರಿಯಲ್ಲಿ ಮಳೆ ಮುಂದುವರೆಯುವ ಸಾಧ್ಯತೆಗಳಿವೆ ಎಂದು ಭಾರತೀಯ ಹವಾಮಾನ ಇಲಾಖೆಯ ಬೆಂಗಳೂರು ವಿಭಾಗದ ನಿರ್ದೇಶಕ ಸಿ.ಎಸ್‌.ಪಾಟೀಲ್‌ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next