Advertisement

Bengaluru:ಪತ್ನಿಯನ್ನು “ಹೀಗೆ ಕೊಂದೆ’ ಎಂದು ಫೇಸ್‌ಬುಕ್‌ನಲ್ಲಿ ಲೈವ್‌ ಮಾಡಿದ ಕ್ರೂರ ಪತಿ!

01:01 PM Aug 03, 2024 | Team Udayavani |

ಬೆಂಗಳೂರು: ಕೌಟುಂಬಿಕ ವಿಚಾರಕ್ಕೆ ತವರು ಮನೆಯಲ್ಲಿದ್ದ ಪತ್ನಿಗೆ ಪತಿಯೇ ಚಾಕುವಿನಿಂದ ಹತ್ತಾರು ಭಾರೀ ಇರಿದು ಭೀಕರವಾಗಿ ಹತ್ಯೆಗೈದಿರುವ ಘಟನೆ ಚಾಮರಾಜಪೇಟೆ ಠಾಣೆ ವ್ಯಾಪ್ತಿಯಲ್ಲಿ ಶುಕ್ರವಾರ ಬೆಳಗ್ಗೆ ನಡೆದಿದ್ದು, ಆರೋಪಿ ಪತಿ ತನ್ನ ವಿಕೃತಿಯನ್ನು ಫೇಸ್‌ಬುಕ್‌ ಲೈವ್‌ ಮಾಡಿ, ಯಾವ ರೀತಿ ಹತ್ಯೆ ಮಾಡಿದ್ದೇನೆ ಎಂದು ಬಹಿರಂಗ ಪಡಿಸಿದ್ದಾನೆ.

Advertisement

ಚಾಮರಾಜಪೇಟೆಯ ಎಂ.ಡಿ.ಬ್ಲಾಕ್‌ ನಿವಾಸಿ ಸೈಯಿದಾ ಫಾಜೀಲ್‌ ಫಾತೀಮಾ(34) ಕೊಲೆಯಾದ ಮಹಿಳೆ.

ಕೃತ್ಯ ಎಸಗಿದ ಈಕೆಯ ಪತಿ ತಬ್ರೇಜ್‌ ಪಾಷಾ(37) ಎಂಬಾತ ತಲೆಮರೆಸಿಕೊಂಡಿದ್ದು, ಆತನ ಪತ್ತೆಗಾಗಿ 2 ವಿಶೇಷ ತಂಡ ರಚಿಸಲಾಗಿದೆ ಎಂದು ಪೊಲೀಸರು ಹೇಳಿದರು.

ಸಿದ್ದಾಪುರದ ಸೋಮೇಶ್ವರ ನಗರ ನಿವಾಸಿ ತಬ್ರೇಜ್‌ ಪಾಷಾ ಮತ್ತು ಸೈಯಿದಾ ಫಾಜೀಲ್‌ ಫಾತೀಮಾ 9 ವರ್ಷಗಳ ಹಿಂದೆ ಮದುವೆಯಾಗಿದ್ದು, ದಂಪತಿಗೆ ಇಬ್ಬರು ಮಕ್ಕಳು ಇದ್ದಾರೆ. ಈ ಮಧ್ಯೆ ಕೌಟುಂಬಿಕ ವಿಚಾರವಾಗಿ ಇಬ್ಬರು ದೂರವಾಗಿ ಪ್ರತ್ಯೇಕವಾಗಿ ವಾಸವಾಗಿದ್ದಾರೆ.

ಸೈಯಿದಾ ಎಂ.ಡಿ.ಬ್ಲಾಕ್‌ನಲ್ಲಿ ತವರು ಮನೆಯಲ್ಲಿ ವಾಸವಾಗಿದ್ದರೆ, ಆರೋಪಿ ಸಿದ್ದಾಪುರದಲ್ಲಿ ತನ್ನ ಪೋಷಕರ ಜತೆ ವಾಸವಾಗಿದ್ದ. ಜೀವನ ನಿರ್ವಹಣೆಗಾಗಿ ಸೈಯಿದಾ ಶಾಲೆಯೊಂದರಲ್ಲಿ ಶಿಕ್ಷಕಿಯಾಗಿ ಕೆಲಸ ಮಾಡುತ್ತಿದ್ದರು ಎಂದು ಪೊಲೀಸರು ಹೇಳಿದರು.

Advertisement

ಶುಕ್ರವಾರ ಬೆಳಗ್ಗೆ 9 ಗಂಟೆ ಸುಮಾರಿಗೆ ಪತ್ನಿ ಸೈಯಿದಾ ತವರು ಮನೆಗೆ ಬಂದ ಆರೋಪಿ, ಆಕೆಗೆ ತನ್ನೊಂದಿಗೆ ಮನೆಗೆ ಬರುವಂತೆ ಕೇಳಿದ್ದಾನೆ. ಆದರೆ, ಆಕೆ ನಿರಾಕರಿಸಿದ್ದಾಳೆ. ಅದರಿಂದ ಕೋಪಗೊಂಡ ಆರೋಪಿ ತಾನೂ ತಂದಿದ್ದ ಚಾಕುವಿನಿಂದ ಆಕೆಯ ಹೊಟ್ಟೆ, ತಲೆ, ಕೈ, ಕಾಲು ಹಾಗೂ ದೇಹದ ಇತರೆ ಭಾಗಗಳ ಮೇಲೆ ಹತ್ತಾರು ಬಾರಿ ಇರಿದು ಹತ್ಯೆಗೈದಿದ್ದಾನೆ. ಈ ವೇಳೆ ಸೈಯಿದಾ ಫಾಜೀಲ್‌ ಫಾತೀಮಾ ಅವರ ವಿಶೇಷ ಚೇತನ ತಾಯಿ ಇದ್ದರು. ಆಕೆಯ ಸಹೋದರ ಕಾರ್ಯನಿಮಿತ್ತ ಹೊರಗಡೆ ಹೋಗಿದ್ದ. ಈ ವೇಳೆಯೇ ದುರ್ಘ‌ಟನೆ ನಡೆದಿದೆ ಎಂದು ಪೊಲೀಸರು ಮಾಹಿತಿ ನೀಡಿದರು.

ಪತ್ನಿಯನ್ನು ಭೀಕರವಾಗಿ ಹತ್ಯೆಗೈದ ಬಳಿಕ ಆರೋಪಿ, ತಾನೂ ಪತ್ನಿಗೆ ಯಾವ ರೀತಿ ನಿಂದಿಸಿದಿದ್ದೇನೆ. ಹಾಗೆಯೇ ಯಾವ ರೀತಿ ಹತ್ಯೆಗೈದಿದ್ದೇನೆ ಎಂದು ಫೇಸ್‌ ಬುಕ್‌ ಲೈವ್‌ ಮಾಡಿದ್ದಾನೆ. ಆದರೆ, ಅದನ್ನು ಫೇಸ್‌ ಬುಕ್‌ನಲ್ಲಿ ಪ್ರೈವೇಟ್‌ ಮಾಡಿ ಚಾಕು ಹಿಡಿದುಕೊಂಡೇ ಹೊರ ಹೋಗಿದ್ದಾನೆ. ಈತನ ಹಿನ್ನೆಲೆ ಪರಿಶೀಲಿಸಿದಾಗ 2016ರಲ್ಲಿ ಕಾಟನ್‌ಪೇಟೆ ಠಾಣೆ ಪೊಲೀಸರು ಆತನನ್ನು ಸರ ಕಳ್ಳತನ ಪ್ರಕರಣದಲ್ಲಿ ಬಂಧಿಸಿದ್ದರು.

ಆಗಿದ್ದೇನು?

 9 ವರ್ಷ ಹಿಂದೆ ವಿವಾಹವಾಗಿದ್ದ ಫಾತೀಮಾ, ಷಾಪಾ

 ಕೌಟುಂಬಿಕ ವಿಚಾರ: ಇಬ್ಬರೂ ಪ್ರತ್ಯೇಕ ವಾಸ

 ಶಾಲೆಯೊಂದರಲ್ಲಿ ಶಿಕ್ಷಕಿಯಾಗಿದ್ದ ಫಾತೀಮಾ

 ಇಬ್ಬರಿಂದಲೂ ವಿಚ್ಛೇದನಕ್ಕೆ ಅರ್ಜಿ ಸಲ್ಲಿಕೆ

 ಧರ್ಮಗುರುಗಳ ರಾಜಿಯಿಂದ ಅರ್ಜಿ ವಾಪಸ್‌

 ಫಾತೀಮಾಳ ಮನೆಗೆ ಬಂದು ತನ್ನ ಜತೆ ಬರುವಂತೆ ಪತಿ ಒತ್ತಾಯ

 ನಿರಾಕರಿಸಿದ್ದಕ್ಕೆ ಪತ್ನಿಗೆ ಇರಿದು ಹತ್ಯೆ

 ಚಾಮರಾಜಪೇಟೆಯಲ್ಲಿ ಘಟನೆ

Advertisement

Udayavani is now on Telegram. Click here to join our channel and stay updated with the latest news.

Next