ಬೆಂಗಳೂರು: ಹಾಡುಹಗಲೇ ನಡು ರಸ್ತೆಯಲ್ಲಿ ಐಟಿಸಿ ಕಂಪನಿ ಉದ್ಯೋಗಿಯನ್ನು ಭೀಕರವಾಗಿ ಹತ್ಯೆಗೈದಿರುವ ಘಟನೆ ಪುಲಕೇಶಿನಗರ ಠಾಣೆ ವ್ಯಾಪ್ತಿಯಲ್ಲಿ ಬುಧವಾರ ಬೆಳಗ್ಗೆ ನಡೆದಿದೆ.
ಕಾಕ್ಸ್‌ಟೌನ್‌ನ ದೊಡ್ಡಕುಂಟೆ ನಿವಾಸಿ ಅಜಿತ್(35) ಕೊಲೆ ಯಾದ ಉದ್ಯೋಗಿ.
ಹಣಕಾಸಿನ ವ್ಯವಹಾರವೇ ಕೃತ್ಯಕ್ಕೆ ಕಾರಣ ಎಂಬುದು ಮೇಲ್ನೋಟಕ್ಕೆ ಗೊತ್ತಾಗಿದೆ. ಈ ಸಂಬಂಧ ಕೆಲ ಅನುಮಾನಾಸ್ಪದ ವ್ಯಕ್ತಿಗಳ ವಿಚಾರಣೆ ನಡೆಯುತ್ತಿದೆ. ಬುಧವಾರ ಮುಂಜಾನೆ ಕೆಲಸ ಮುಗಿಸಿಕೊಂಡು ಮನೆ ಬಳಿ ಬಂದಾಗ ನಾಲ್ಕೈದು ಮಂದಿ ಹಂತಕರು ಮಾರಕಾಸ್ತ್ರಗಳಿಂದ ಭೀಕರವಾಗಿ ಹತ್ಯೆಗೈದಿದ್ದಾರೆ ಎಂದು ಪೊಲೀಸರು ಹೇಳಿದರು.
ತಮಿಳುನಾಡು ಮೂಲದ ಅಜಿತ್ ಪೋಷಕರು ಹತ್ತಾರು ವರ್ಷಗಳ ಹಿಂದೆಯೇ ಬೆಂಗಳೂರಿಗೆ ಬಂದಿದ್ದು, ಕಾಕ್ಸ್ ಟೌನ್‌ನಲ್ಲಿ ವಾಸವಾಗಿದ್ದರು. 18 ವರ್ಷಗಳ ಹಿಂದೆಯೇ ಅಜಿತ್‌ನ ತಂದೆ 2ನೇ ಮದುವೆಯಾಗಿದ್ದಾರೆ. ಅದರಿಂದ ಬೇಸರಗೊಂಡಿದ್ದ ಅಜಿತ್ ಮನೆ ಬಿಟ್ಟು ಬಂದು, ಇದುವರೆಗೂ ಮನೆಗೆ ಹೋಗಿಲ್ಲ. ಅಂದಿನಿಂದ ದೊಡ್ಡಕುಂಟೆಯಲ್ಲಿರುವ ಟೆಂಟ್‌ಹೌಸ್‌ವೊಂದರಲ್ಲಿ ಸಣ್ಣ- ಪುಟ್ಟ ಕೆಲಸ ಮಾಡಿಕೊಂಡು, ಅಲ್ಲಿಯೇ ವಾಸ ವಾಗಿದ್ದ. ಜತೆಗೆ ವಿದ್ಯಾಭ್ಯಾಸ ಮಾಡಿಕೊಂಡಿದ್ದ. ಈ ಹಿನ್ನೆಲೆಯಲ್ಲಿ ಒಂದು ವರ್ಷದಿಂದ ಐಟಿಸಿ ಕಂಪನಿಯಲ್ಲಿ ಕೆಲಸ ಸಿಕ್ಕಿತ್ತು ಎಂಬುದು ತನಿಖೆಯಲ್ಲಿ ಬೆಳಕಿಗೆ ಬಂದಿದೆ ಎಂದು ಪೊಲೀಸರು ಹೇಳಿದರು.
ಸಾರ್ವಜನಿಕವಾಗಿ ಹತ್ಯೆ: ಮಂಗಳವಾರ ರಾತ್ರಿ ಪಾಳಿಯ ಕೆಲಸಕ್ಕೆ ಹೋಗಿದ್ದ ಅಜಿತ್, ಬುಧವಾರ ಬೆಳಗ್ಗೆ 7 ಗಂಟೆ ಸುಮಾರಿಗೆ ಕೆಲಸ ಮುಗಿಸಿಕೊಂಡು ಟೆಂಟ್ ಹೌಸ್ ಬಳಿ ಬಂದು, ಬಾಗಿಲ ಬೀಗ ತೆಗೆಯಲು ಮುಂದಾಗಿದ್ದಾನೆ. ಅದೇ ವೇಳೆಗೆ ನಾಲ್ಕೈದು ಮಂದಿ ಹಂತಕರು, ಮಾರಕಾಸ್ತ್ರಗಳಿಂದ ಆತನ ಮೇಲೆ ಮನಸೋ ಇಚ್ಛೆ ಆತನ ತಲೆ, ಕೈ, ಕಾಲುಗಳ ಮೇಲೆ ಭೀಕರವಾಗಿ ಹಲ್ಲೆ ನಡೆಸಿದ್ದಾರೆ. ಪರಿಣಾಮ ಆತ ತೀವ್ರ ರಕ್ತಸ್ರಾವದಿಂದ ಸ್ಥಳದಲ್ಲೇ ಮೃತಪಟ್ಟಿದ್ದಾನೆ ಎಂದು ಪೊಲೀಸರು ಹೇಳಿದರು.
ಸ್ಥಳಕ್ಕೆ ಪೂರ್ವವಿಭಾಗದ ಡಿಸಿಪಿ ಡಿ.ದೇವರಾಜ್, ಪುಲಕೇಶಿನಗರ ಎಸಿಪಿ ಗೀತಾ ಹಾಗೂ ಇತರೆ ಅಧಿಕಾರಿಗಳು ಭೇಟಿ ನೀಡಿ ಪರಿಶೀಲಿಸಿದರು.
ಬಡ್ಡಿ ವ್ಯವಹಾರಕ್ಕೆ ಹತ್ಯೆ?: ಮೀನಕುಂಟೆ ಬಳಿ ಇರುವ ಐಟಿಸಿ ಬ್ರ್ಯಾಂಚ್ ಕಂಪನಿಯಲ್ಲಿ ಅಜಿತ್ ಕೆಲಸ ಮಾಡಿಕೊಂಡಿದ್ದ. ಇದರೊಂದಿಗೆ ಕೆಲ ತಿಂಗಳ ಹಿಂದೆ ಮೀಟರ್ ಬಡ್ಡಿ ದಂಧೆಕೋರರ ಬಳಿ ಲಕ್ಷಾಂತರ ರೂ. ಸಾಲ ಪಡೆದುಕೊಂಡಿದ್ದ. ಆದರೆ, ಸರಿಯಾಗಿ ಬಡ್ಡಿ ಹಾಗೂ ಅಸಲು ಪಾವತಿ ಮಾಡಿಲ್ಲ ಎಂದು ಹೇಳಲಾಗಿದೆ. ಈ ಮಧ್ಯೆ ರಮೇಶ್ ಎಂಬವರ ಜತೆ ಹಣಕಾಸಿನ ವಿಚಾರಕ್ಕೆ 15 ದಿನಗಳ ಹಿಂದಷ್ಟೇ ಜಗಳ ನಡೆದಿತ್ತು ಎಂಬುದು ಗೊತ್ತಾಗಿದೆ.
ಆದರಿಂದ ರಮೇಶ್‌ನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗಿದೆ. ಆದರೆ, ಅಜಿತ್ ಸ್ನೇಹಿತರು, ಆತನಿಗೆ ಯಾವುದೇ ಹಣದ ಸಮಸ್ಯೆ ಇರಲಿಲ್ಲ. ಹೀಗಾಗಿ ಬಡ್ಡಿಗೆ ಹಣ ಪಡೆಯಲು ಸಾಧ್ಯವೇ ಇಲ್ಲ ಎಂದು ಹೇಳಿದ್ದಾರೆ. ಆದರಿಂದ ಕೌಟುಂಬಿಕ ಮತ್ತು ಹಣಕಾಸಿನ ವ್ಯವಹಾರ ಎರಡು ಆಯಾಮಗಳಲ್ಲಿ ತನಿಖೆ ನಡೆಯುತ್ತಿದೆ ಎಂದು ಪೊಲೀಸರು ಹೇಳಿದರು.