ಬೆಂಗಳೂರು: ಇತ್ತೀಚೆಗೆ ಬೆಂಗಳೂರಿನ ಸಿಸಿಬಿ ಹಾಗೂ ಭಯೋತ್ಪಾದಕ ನಿಗ್ರಹ ದಳದ (ಎಟಿಎಸ್) ಅಧಿಕಾರಿಗಳಿಗೆ ಸಿಕ್ಕಿ ಬಿದ್ದಿದ್ದ ತಮಿಳುನಾಡಿನ ಚೆನ್ನೈ ಮೂಲದ ನಕ್ಸಲ್ ಅನಿರುದ್ಧ ಪ್ರೇಯಸಿಗೆ ಸಿಸಿಬಿ ಪೊಲೀಸರು ನೋಟಿಸ್ ನೀಡಿ ವಿಚಾರಣೆಗೆ ಹಾಜರಾಗುವಂತೆ ಸೂಚಿಸಿದ್ದಾರೆ.
ತಮಿಳುನಾಡಿನ ಚೆನ್ನೈ ಮೂಲದ ಅನಿರುದ್ಧ್ ರಾಜನ್ (35) ಸಿಪಿಐ (ಮಾವೋ ವಾದಿ) ಸಂಘಟನೆ ಯಲ್ಲಿ ಸಕ್ರಿಯವಾಗಿದ್ದು ಕೆಲ ದಿನಗಳ ಹಿಂದೆ ಬೆಂಗಳೂರಿನಲ್ಲಿರುವ ಪ್ರೇಯಸಿಯನ್ನು ಕಾಣಲು ಬಂದಿದ್ದ. ಆಗ ಎಟಿಸಿ ಹಾಗೂ ಸಿಸಿಬಿ ಪೊಲೀಸರು ಜಂಟಿಯಾಗಿ ಕಾರ್ಯಾಚರಣೆ ನಡೆಸಿ ಆತನನ್ನು ಬಂಧಿಸಿದ್ದರು.
ವಿಚಾರಣೆ ವೇಳೆ ಆತ ಪ್ರೇಯಸಿಯನ್ನು ನೋಡಲು ಬಂದಿರುವುದಾಗಿ ಬಾಯ್ಬಿಟ್ಟಿದ್ದ. ಹೀಗಾಗಿ ಆತನ ಪ್ರೇಯಸಿಗೆ ಸಿಸಿಬಿ ಪೊಲೀಸರು ನೋಟಿಸ್ ಮೂಲಕ ಬುಲಾವ್ ನೀಡಿದ್ದಾರೆ. ಆಕೆ ಕೊಡುವ ಹೇಳಿಕೆ ಆಧರಿಸಿ ತನಿಖೆ ಮುಂದುವರಿಸಿಲು ಸಿಸಿಬಿ ಪೊಲೀಸರು ಮುಂದಾಗಿದ್ದಾರೆ.
ಅನಿರುದ್ಧ ನಕ್ಸಲೈಟ್ ಎನ್ನುವ ಸಂಗತಿ ಗೊತ್ತಿದ್ದರೂ ಆತನನ್ನು ಪ್ರೇಯಸಿ ಪ್ರೀತಿಸುತ್ತಿದ್ದಳಾ, ಆತ ನಕ್ಸಲ್ ಅನ್ನೋದೇ ಆಕೆಗೆ ಗೊತ್ತಿರಲಿಲ್ಲವೇ, ಎಷ್ಟು ಸಮಯಗಳಿಂದ ಇಬ್ಬರಿಗೂ ಪರಿಚಯವಿದೆ, ಏನು ಕೆಲಸ ಮಾಡುತ್ತಿದ್ದ ಎಂಬಿತ್ಯಾದಿ ವಿಚಾರಕ್ಕೆ ಸಂಬಂಧಿಸಿದಂತೆ ಅನಿರುದ್ಧ್ ಪ್ರೇಯಸಿಯಿಂದ ಮಾಹಿತಿ ಕಲೆ ಹಾಕಲು ಸಿಸಿಬಿ ಮುಂದಾಗಿದೆ.
ಇತ್ತೀಚೆಗೆ ತನ್ನ ಗೆಳತಿ ನೋಡುವ ಸಲುವಾಗಿ ಬೆಂಗಳೂರಿನ ಇಂದಿರಾನಗರದಲ್ಲಿರುವ ಸ್ನೇಹಿತನ ಮನೆಯಲ್ಲಿ ಆಶ್ರಯ ಪಡೆದಿದ್ದ. ಗೆಳತಿಯನ್ನು ಭೇಟಿಯಾಗಿ ತನ್ನ ಊರಾದ ಚೆನ್ನೈಗೆ ತೆರಳುವ ಉದ್ದೇಶದಿಂದ ಮೆಜೆಸ್ಟಿಕ್ ಬಳಿಯ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣಕ್ಕೆ ಬಂದಿದ್ದ. ಈ ವೇಳೆ ಈತನ ಬಗ್ಗೆ ಮಾಹಿತಿ ತಿಳಿದ ಎಟಿಎಸ್ ಟೀಂ ಬಸ್ ನಿಲ್ದಾಣದಲ್ಲೇ ಆತನನ್ನ ಬಂಧಿಸಿತ್ತು. ಅನಿರುದ್ಧ ಬಳಿಯಿದ್ದ ನಕಲಿ ಆಧಾರ್ ಕಾರ್ಡ್, 2 ಪೆನ್ ಡ್ರೈವ್, ಟ್ಯಾಬ್ ಮತ್ತು ಸಂಘಟನೆಯ ಲೆಟರ್‌ಗಳನ್ನು ಸಿಸಿಬಿ ಜಪ್ತಿ ಮಾಡಿಕೊಂಡಿದೆ.
ಸಿ.ಎ. ಪರೀಕ್ಷೆ ಬರೆದಿದ್ದ ನಕ್ಸಲ್ ಅನಿರುದ್ಧ್
ಅನಿರುದ್ಧ್ ಬಳಿ 2 ಪ್ರೇಮಪತ್ರ, ಆತನ ಮೊಬೈಲ್ ನಲ್ಲಿ ಪ್ರೇಯಸಿ ಜೊತೆಗಿನ ಲವ್ ಚಾಟ್‌ಗಳು ತನಿಖೆ ವೇಳೆ ಸಿಕ್ಕಿವೆ. ಅನಿರುದ್ಧ್ ಚಾರ್ಟೆಡ್ ಅಕೌಂಟೆಂಟ್ (ಸಿ.ಎ)ವ್ಯಾಸಂಗ ಮಾಡಿ ಅದರಲ್ಲಿ ನಪಾಸಾಗಿದ್ದ. ನಂತರ ನಕ್ಸಲ್ ಸಂಘಟನೆಗಳ ಜೊತೆಗೆ ಒಡನಾಟ ಹೊಂದಿದ್ದ ಎನ್ನಲಾಗಿದೆ. ಇನ್ನು ನಕ್ಸಲ್ ಸಂಘಟನೆ ಬಲಪಡಿಸಲು ದೇಣಿಗೆ ಸಂಗ್ರಹಿಸುವುದು, ಹಣ ಕ್ರೋಢೀಕರಣ ಮಾಡುತ್ತಿದ್ದ. ನಂತರ ಆ ದುಡ್ಡನ್ನು ನಕ್ಸಲ್ ಸಂಘಟನೆಗಳಿಗೆ ಹಂಚಿಕೆ ಮಾಡುವ ಕೆಲಸ ಮಾಡುತ್ತಿದ್ದ. ಅನಿರುದ್ಧ್ ಹಲವಾರು ವರ್ಷಗಳಿಂದ ಹರಿಯಾಣದಲ್ಲಿ ನೆಲೆಸಿದ್ದ. ಅಲ್ಲಿ ಭೂಗತವಾಗಿ ಕಾನೂನು ಬಾಹಿರ ಚಟುವಟಿಕೆಗಳಲ್ಲಿ ತೊಡಗಿದ್ದ. ಕಳೆದ 4-5 ವರ್ಷಗಳಿಂದ ಉತ್ತರ ಭಾರತದ ಕಡೆ ಹೆಚ್ಚು ಸಕ್ರಿಯವಾಗಿರುವ ನಕ್ಸಲ್ ಗುಂಪಿನ ಜೊತೆ ಗುರುತಿಸಿಕೊಂಡಿದ್ದ ಎಂದು ತಿಳಿದು ಬಂದಿದೆ.