ಜೌನ್‌ಪುರ (ಉತ್ತರಪ್ರದೇಶ): ಬೆಂಗಳೂರಿನಲ್ಲಿ ಟೆಕಿ ಅತುಲ್ ಸುಭಾಷ್ ಅವರ ಆತ್ಮಹ*ತ್ಯೆ ಪ್ರಕರಣ ದೇಶಾದ್ಯಂತ ಸದ್ದು ಮಾಡುತ್ತಿದ್ದು, ತನಿಖೆಯ ಭಾಗವಾಗಿ ಬೆಂಗಳೂರು ನಗರ ಪೊಲೀಸರು ಶುಕ್ರವಾರ(ಡಿ13) ಅವರ ಪತ್ನಿ ನಿಕಿತಾ ಸಿಂಘಾನಿಯಾಗೆ ಸಮನ್ಸ್ ಜಾರಿ ಮಾಡಿದ್ದು, ಮೂರು ದಿನಗಳೊಳಗೆ ಹಾಜರಾಗುವಂತೆ ಸೂಚಿಸಿದ್ದಾರೆ.
ಸಬ್ ಇನ್ಸ್‌ಪೆಕ್ಟರ್ ಸಂಜೀತ್ ಕುಮಾರ್ ನೇತೃತ್ವದ ನಾಲ್ವರ ಬೆಂಗಳೂರು ನಗರ ಪೊಲೀಸರ ತಂಡವು ಉತ್ತರ ಪ್ರದೇಶ ಜಿಲ್ಲೆಯ ಖೋವಾ ಮಂಡಿ ಪ್ರದೇಶದಲ್ಲಿರುವ ಸಿಂಘಾನಿಯಾಳ ನಿವಾಸಕ್ಕೆ ಬೆಳಗ್ಗೆ 11 ಗಂಟೆ ಸುಮಾರಿಗೆ ತೆರಳಿ ಸಮನ್ಸ್‌ಗಾಗಿ ನೋಟಿಸ್ ಅಂಟಿಸಿದೆ.
ನಗರ ಸರ್ಕಲ್ ಆಫೀಸರ್ ಆಯುಷ್ ಶ್ರೀವಾಸ್ತವ ಅವರ ಪ್ರಕಾರ, ಬೆಂಗಳೂರು ನಗರ ಪೊಲೀಸ್ ನೋಟಿಸ್‌ನಲ್ಲಿ “ನಿಕಿತಾ ಸಿಂಘಾನಿಯಾ ತನ್ನ ಪತಿ ಅತುಲ್ ಸುಭಾಷ್ ಸಾವಿನ ಸುತ್ತಲಿನ ಸನ್ನಿವೇಶಗಳಿಗೆ ಸಂಬಂಧಿಸಿದಂತೆ ವಿಚಾರಣೆಗಾಗಿ ಬೆಂಗಳೂರಿನ ಮಾರತ್ತಹಳ್ಳಿ ಪೊಲೀಸ್ ಠಾಣೆಯ ತನಿಖಾಧಿಕಾರಿಯ ಮುಂದೆ ಮೂರು ದಿನಗಳೊಳಗೆ ಹಾಜರಾಗುವಂತೆ ಸೂಚಿಸಲಾಗಿದೆ
” ನೋಟಿಸ್, ಕೇವಲ ಸಿಂಘಾನಿಯಾಳನ್ನು ಮಾತ್ರ ಉದ್ದೇಶಿಸಿ ನೀಡಲಾಗಿದ್ದು, ಎಫ್‌ಐಆರ್‌ನಲ್ಲಿ ಹೆಸರಿರುವ ಆಕೆಯ ತಾಯಿ ನಿಶಾ ಸಿಂಘಾನಿಯಾ, ಚಿಕ್ಕಪ್ಪ ಸುಶೀಲ್ ಸಿಂಘಾನಿಯಾ ಮತ್ತು ಸಹೋದರ ಅನುರಾಗ್ ಸಿಂಘಾನಿಯಾ ಸೇರಿದಂತೆ ಇತರ ಆರೋಪಿ ಕುಟುಂಬ ಸದಸ್ಯರನ್ನು ನೋಟಿಸ್ ಉಲ್ಲೇಖಿಸಿಲ್ಲ.
34 ರ ಹರೆಯದ ಟೆಕಿ ಸುಭಾಷ್ ಡಿಸೆಂಬರ್ 9 ರಂದು ಬೆಂಗಳೂರಿನಲ್ಲಿ ಆತ್ಮಹ*ತ್ಯೆ ಮಾಡಿಕೊಂಡಿದ್ದರು. ಡೇತ್ ನೋಟ್ ನಲ್ಲಿ ಪತ್ನಿ ಮತ್ತು ಆಕೆಯ ಕುಟುಂಬದವರ ಕಿರುಕುಳದಿಂದ ಆತ್ಮಹ*ತ್ಯೆ ಮಾಡಿಳ್ಳುತ್ತಿದ್ದೇನೆ ಎಂದು ಹಲವು ಪುಟಗಳ ನೋಟ್ ನಲ್ಲಿ ಉಲ್ಲೇಖಿಸಿದ್ದರು. ಸಿಂಘಾನಿಯಾ ಮತ್ತು ಆಕೆಯ ಕುಟುಂಬ ಸದಸ್ಯರ ವಿರುದ್ಧ ಆತ್ಮಹ*ತ್ಯೆಗೆ ಪ್ರಚೋದನೆ ಪ್ರಕರಣ ದಾಖಲಿಸಿ ಪೊಲೀಸರು ತನಿಖೆ ನಡೆಸುತ್ತಿದೆ.
ಈ ಪ್ರಕರಣ ದೇಶಾದ್ಯಂತ ಸುದ್ದಿ ಮಾಡುತ್ತಿದ್ದು,ಕೌಟುಂಬಿಕ ಕಾನೂನು ದುರುಪಯೋಗ ಮಾಡಿಕೊಂಡು ಸುಭಾಷ್ ಅವರ ಜೀವನ ಅಂತ್ಯಕ್ಕೆ ಕಾರಣವಾಗಿದ್ದಾರೆ ಎಂದು ಆಕ್ರೋಶ ಹೊರ ಹಾಕಿ ಜನರು ಬೀದಿಗಿಳಿದು ಪ್ರತಿಭಟನೆ ನಡೆಸಿದ್ದಾರೆ.